ಸ್ನೇಹಿತನ ಕೊಂದು ಹೂತಿದ್ದವನ ಸೆರೆ

Team Udayavani, Aug 1, 2019, 3:09 AM IST

ಬೆಂಗಳೂರು: ಅನೈತಿಕ ಸಂಬಂಧದ ವಿಚಾರವಾಗಿ ಸ್ನೇಹಿತನನ್ನು ಕೊಲೆಗೈದು ಕೆಲಸಕ್ಕಿದ್ದ ಮನೆಯ ಹಿತ್ತಲಿನಲ್ಲಿ ಶವ ಹೂತು ಹಾಕಿದ್ದ ಭದ್ರತಾ ಸಿಬ್ಬಂದಿಯೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ. ಮೃತನ ಚಪ್ಪಲಿ ಕೊಟ್ಟ ಸುಳಿವಿನ ಆಧಾರದ ಮೇಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಸವನಗುಡಿ ನಿವಾಸಿ ಮುನಿವೆಂಕಟಪ್ಪ (60) ಬಂಧಿತ. ಆರೋಪಿಯು ಜೂನ್‌ 25ರಂದು ಕನಕನಪಾಳ್ಯ ನಿವಾಸಿ ಕೃಷ್ಣಪ್ಪ (55) ಎಂಬವರನ್ನು ಕಬ್ಬಿಣದ ಹಾರೆಯಿಂದ ಹೊಡೆದು ಕೊಲೆಗೈದಿದ್ದ. ತನಿಖೆ ವೇಳೆ ಆರೋಪಿಯ ಮೇಲೆ ಅನುಮಾನಗೊಂಡು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಹಿಳೆಯೊಬ್ಬಳ ಜತೆಗಿನ ಅನೈತಿಕ ಸಂಬಂಧದ ವಿಚಾರಕ್ಕೆ ಕೊಲೆಗೈದಿರುವುದು ಬಯಲಾಗಿದೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮತ್ತೂಬ್ಬ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಆಂಧ್ರಪ್ರದೇಶದ ಕುಪ್ಪಂ ಜಿಲ್ಲೆಯ ಮುನಿವೆಂಕಟಪ್ಪ ಹಲವು ವರ್ಷಗಳ ಹಿಂದೆಯೇ ಕುಟುಂಬ ಸಮೇತ ಬೆಂಗಳೂರಿಗೆ ಬಂದಿದ್ದು, ಬಸವನಗುಡಿಯಲ್ಲಿರುವ ಕೃಷ್ಣರಾವ್‌ ಪಾರ್ಕ್‌ ರಸ್ತೆಯಲ್ಲಿರುವ ಉದ್ಯಮಿ ದ್ವಾರಕನಾಥ್‌ ಎಂಬವರ ಮನೆಯಲ್ಲಿ ತೋಟಗಾರಿಕೆ ಹಾಗೂ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡಿಕೊಂಡು ಅಲ್ಲೇ ಇರುವ ಶೆಡ್‌ನ‌ಲ್ಲಿ ವಾಸವಾಗಿದ್ದ.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕೃಷ್ಣಪ್ಪ ಕೂಡ ಬಹಳ ವರ್ಷಗಳ ಹಿಂದೆಯೇ ನಗರಕ್ಕೆ ಬಂದಿದ್ದು, ಕುಟುಂಬ ಸಮೇತ ಕನಕನಪಾಳ್ಯದಲ್ಲಿ ವಾಸವಾಗಿದ್ದರು. ಬಸವನಗುಡಿಯಲ್ಲಿರುವ ಶ್ರೀಮಂತ ವ್ಯಕ್ತಿಗಳ ಮನೆಗಳಲ್ಲಿ ಕಾರು ತೊಳೆಯುವುದು ಹಾಗೂ ತೋಟಗಾರಿಕೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಒಂದೇ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರಿಂದ ಪ್ರತಿನಿತ್ಯ ಮುನಿವೆಂಕಟಪ್ಪನನ್ನು ಕೃಷ್ಣಪ್ಪ ಭೇಟಿಯಾಗುತ್ತಿದ್ದ. ಜತೆಗೆ ಇಬ್ಬರೂ ದೂರದ ಸಂಬಂಧಿಗಳಾಗಿದ್ದರು.

ಅನೈತಿಕ ಸಂಬಂಧ: ಈ ನಡುವೆ ಕೃಷ್ಣಪ್ಪ, ತನ್ನ ದೂರದ ಸಂಬಂಧಿ ಮಹಿಳೆ ಒಬ್ಬಳ ಜತೆ ಅನೈತಿಕ ಸಂಬಂಧ ಹೊಂದಿದ್ದರು. ಅದೇ ಮಹಿಳೆ ಜತೆ ಮುನಿವೆಂಕಟಪ್ಪ ಸಹ ಆತ್ಮೀಯತೆ ಹೊಂದಲು ಮುಂದಾಗಿದ್ದು, ಆಕೆ ಜತೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಪದೇ ಪದೆ ಜಗಳವಾಗುತ್ತಿತ್ತು. ಜೂನ್‌ 25ರಂದು ಮುಂಜಾನೆ ಏಳು ಗಂಟೆ ಸುಮಾರಿಗೆ ಕೃಷ್ಣಪ್ಪ, ಆರೋಪಿ ಕೆಲಸ ಮಾಡುವ ಮನೆ ಬಳಿ ಬಂದಿದ್ದಾರೆ.

ಆಗ ಇಬ್ಬರ ನಡುವೆ ಮಹಿಳೆ ವಿಚಾರವಾಗಿ ಜಗಳವಾಗಿದೆ. ಈ ವೇಳೆ ಕೋಪಗೊಂಡ ಆರೋಪಿ, ಕಾಫಿ ಕುಡಿಯುತ್ತಿದ್ದ ಕೃಷ್ಣಪ್ಪನ ತಲೆಗೆ ಕಬ್ಬಿಣದ ಹಾರೆಯಿಂದ ಬಲವಾಗಿ ಹೊಡೆದು ಕೊಲೆಗೈದಿದ್ದಾನೆ. ಘಟನೆ ವೇಳೆ ಮನೆ ಮಾಲೀಕರು ವಾಯು ವಿಹಾರಕ್ಕೆ ಹೋಗಿದ್ದು, ಅವರಿಗೆ ಯಾವುದೇ ಮಾಹಿತಿ ಇರಲಿಲ್ಲ.

ಕೊಲೆಗೈದ ಆರೋಪಿ ತನ್ನ ಸ್ನೇಹಿತನ ಜತೆ ಸೇರಿ ಮೃತ ದೇಹವನ್ನು ಪ್ಲಾಸ್ಟಿಕ್‌ ಚೀಲದಲ್ಲಿ ಹಾಕಿ ಮನೆಯ ಹಿಂಭಾಗಕ್ಕೆ ಎಳೆದೊಯ್ದಿದ್ದಾನೆ. ಕಸ ಹಾಕಲು ತೆಗೆಯಲಾಗಿದ್ದ ಗುಂಡಿಯೊಳಗೆ ಶವ ಹಾಕಿ ಮಣ್ಣು ಮುಚ್ಚಿದ್ದಾನೆ. ನಂತರ ಯಾರಿಗೂ ಅನುಮಾನ ಬಾರದಂತೆ ಎಂದಿನಂತೆ ಕೆಲಸ ಮಾಡಿಕೊಂಡಿದ್ದ. ಕೃಷ್ಣಪ್ಪ ಒಂದರೆಡು ದಿನಗಳಾದರೂ ಮನೆಗೆ ಬಾರದಿದ್ದರಿಂದ ಆತಂಕಗೊಂಡ ಅವರ ಕುಟುಂಬ ಸದಸ್ಯರು, ಒಮ್ಮೆ ಆರೋಪಿಯನ್ನು ವಿಚಾರಿಸಿದ್ದಾರೆ.

ಆದರೆ, ಆತನ ಬಹಳ ದಿನಗಳಿಂದ ತನ್ನ ಮನೆ ಬಳಿಯೇ ಬಂದಿಲ್ಲ ಎಂದು ಆರೋಪಿ ಹೇಳಿದ್ದ. ನಂತರ ಕುಟುಂಬ ಸದಸ್ಯರು ಬಸವನಗುಡಿ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ತನಿಖೆ ನಡೆಸಿದ ಪೊಲೀಸರು, ಕೃಷ್ಮಪ್ಪ ಅವರ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರನ್ನು ಕರೆಸಿ ವಿಚಾರಣೆ ನಡೆಸಿದ್ದರು.

ಅಲ್ಲದೆ ಅವರ ಮೊಬೈಲ್‌ ಸಂಖ್ಯೆ ಹಾಗೂ ಕರೆಗಳ ವಿವರ ಪರಿಶೀಲಿಸಿದಾಗ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆ ಮೊಬೈಲ್‌ ನಂಬರ್‌ ಕೂಡ ಪತ್ತೆಯಾಗಿತ್ತು. ಜತೆಗೆ ಮೃತನ ಕುಟುಂಬ ಸದಸ್ಯರು ಸಹ ಆಕೆ ಬಗ್ಗೆ ಮಾಹಿತಿ ನೀಡಿದ್ದರು. ಸಂಶಯದ ಮೇರೆಗೆ ಆಕೆಯ ಮೊಬೈಲ್‌ ನೆಟ್‌ವರ್ಕ್‌ ಪರಿಶೀಲಿಸಿದಾಗ, ಮಹಿಳೆಯ ಜತೆ ಮುನಿವೆಂಕಟಪ್ಪ ಹೆಚ್ಚು ಮಾತುಕತೆ ನಡೆಸುತ್ತಿರುವುದು ಬೆಳಕಿಗೆ ಬಂದಿತ್ತು. ಆಗ ಆರೋಪಿಯನ್ನು ಕರೆದೊಯ್ದು ವಿಚಾರಣೆ ನಡೆಸಿದರೂ ಯಾವುದೇ ಸುಳಿವು ನೀಡಿರಲಿಲ್ಲ.

ಚಪ್ಪಲಿ ಕೊಟ್ಟ ಸುಳಿವು: ಆರೋಪಿ ಮೃತ ದೇಹವನ್ನು ಹೂತು ಹಾಕಿದ್ದ ಜಾಗಕ್ಕೆ ಪ್ರತಿನಿತ್ಯ ನೀರು ಹಾಕಿ ಮಣ್ಣು ಮುಚ್ಚುತ್ತಿದ್ದ. ಅದನ್ನು ಗಮನಿಸುತ್ತಿದ್ದ ಕೆಲಸದ ಮಹಿಳೆಯೊಬ್ಬರು, ಗಿಡ ಅಥವಾ ಮರ ಇಲ್ಲದ ಜಾಗಕ್ಕೆ ಯಾವ ಕಾರಣಕ್ಕೆ ನೀರು ಹಾಕುತ್ತಿದ್ದಾನೆ ಎಂದು ಅನುಮಾನಗೊಂಡಿದ್ದರು. ಈ ಮಧ್ಯೆ ಕೆಲ ದಿನಗಳ ಹಿಂದೆ ಮನೆ ಬಳಿ ಬಂದಿದ್ದ ಪೊಲೀಸರಿಗೆ ಈ ಮಾಹಿತಿ ನೀಡಿದ್ದರು.

ಬಳಿಕ ತನಿಖೆ ಚುರುಕುಗೊಳಿಸಿದ ಇನ್‌ಸ್ಪೆಕ್ಟರ್‌ ಕೆಂಪೇಗೌಡ ನೇತೃತ್ವದ ತಂಡ, ಭಾನುವಾರ ಆರೋಪಿಯ ಮನೆ ಬಳಿ ಹೋಗಿ ಪರಿಶೀಲಿಸಿದಾಗ ಕೃಷ್ಣಪ್ಪನ ಚಪ್ಪಲಿ ಪತ್ತೆಯಾಗಿತ್ತು. ಕೃಷ್ಣಪ್ಪ ಅವರ ಕುಟುಂಬ ಸದಸ್ಯರನ್ನು ಕರೆಸಿ ವಿಚಾರಿಸಿದಾಗ ಆ ಚಪ್ಪಲಿ ಅವರದ್ದೇ ಎಂದು ದೃಢಪಡಿಸಿದ್ದರು. ಆ ಬಗ್ಗೆ ಪ್ರಶ್ನಿಸಿದಾಗ ಚಪ್ಪಲಿ ತನ್ನ ಮನೆ ಬಳಿ ಹೇಗೆ ಬಂತು ಎಂದು ತನಗೆ ಗೊತ್ತಿಲ್ಲ ಎಂದು ಆರೋಪಿ ಹೇಳಿದ್ದ.

ಬಳಿಕ ಆರೋಪಿಯನ್ನು ತೀವ್ರವಾಗಿ ವಿಚಾರಣೆಗೆ ಒಳಪಡಿಸಿದಾಗ ಶವ ಹೂತು ಹಾಕಿದ್ದ ಜಾಗ ತೋರಿಸಿದ್ದ. ಮೃತ ದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸದ್ಯ ಮುನಿವೆಂಕಟಪ್ಪನನ್ನು ಬಂಧಿಸಲಾಗಿದ್ದು, ಮತ್ತೂಬ್ಬ ಆರೋಪಿಯ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ