ಕೋಟೆ ಸೂರೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ!
Team Udayavani, Sep 17, 2018, 6:05 AM IST
ಬೆಂಗಳೂರು: ಕೋಟೆ ಸೂರೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ ಎಂಬ ಗಾದೆ ಬ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸರ್ಕಾರಿ ಅಧಿಕಾರಿಗಳು, ನೌಕರರ ಬಗ್ಗೆ ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸಿ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುವ ಪ್ರಕರಣಕ್ಕೆ ಅನ್ವಯವಾಗುತ್ತದೆ.
ಹೌದು, ಸರ್ಕಾರಿ ಅಧಿಕಾರಿಗಳು, ನೌಕರರ ವಿರುದ್ಧ ಲೋಕಾಯುಕ್ತ ಸಂಸ್ಥೆಯ ಶಿಫಾರಸು ಆಧರಿಸಿ ಶಿಸ್ತು ಕ್ರಮ ಕೈಗೊಳ್ಳುವ ವಿಚಾರದಲ್ಲಿ ಇದುವರೆಗೆ ಆಗುತ್ತಿದ್ದ ಲೋಪ ಸರಿಪಡಿಸಲು ಆ ಸಂಸ್ಥೆ ಹಲ್ಲಿಲ್ಲದ ಹಾವಾದ ಬಳಿಕ ಸರ್ಕಾರ ಮುಂದಾಗಿದೆ.
ಭ್ರಷ್ಟಾಚಾರ, ಕರ್ತವ್ಯ ಲೋಪ, ಅಧಿಕಾರ ದುರುಪಯೋಗ ಮತ್ತಿತರೆ ವಿಚಾರಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಸಂಸ್ಥೆ ಸರ್ಕಾರಿ ಅಧಿಕಾರಿಗಳು ಅಥವಾ ನೌಕರರ ವಿರುದ್ಧ ತನಗೆ ಬಂದ ದೂರುಗಳನ್ನು ಆಧರಿಸಿ ತನಿಖೆ ನಡೆಸಿ ಅವರು ತಪ್ಪಿತಸ್ಥರು ಎಂದು ಕಂಡುಬಂದಲ್ಲಿ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುತ್ತಿತ್ತು. ಆದರೆ, ಬಹುತೇಕ ಪ್ರಕರಣಗಳಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಆಗುತ್ತಿರಲಿಲ್ಲ.
ಇದಕ್ಕೆ ಕಾರಣ ಸಕ್ಷಮ ಪ್ರಾಧಿಕಾರ ಮಾಡುತ್ತಿದ್ದ ಯಡವಟ್ಟು. ಯಾವ ಅಧಿಕಾರಿ ಅಥವಾ ನೌಕರನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಸಂಸ್ಥೆ ಸಕ್ಷಮ ಪ್ರಾಧಿಕಾರಕ್ಕೆ ಶಿಫಾರಸು ಮಾಡುತ್ತಿತ್ತೋ ಆ ಸಕ್ಷಮ ಪ್ರಾಧಿಕಾರ ಆರೋಪಿತ ವ್ಯಕ್ತಿಗೆ ಈ ಶಿಫಾರಸು ಕಳುಹಿಸಿಕೊಟ್ಟು ಅವರಿಂದ ಲಿಖೀತ ಹೇಳಿಕೆ ಪಡೆದು ಮುಂದಿನ ಕ್ರಮ ಜರುಗಿಸುತ್ತಿತ್ತು.
ಸಹಜವಾಗಿಯೇ ತಪ್ಪಿತಸ್ಥ ಅಧಿಕಾರಿ ತಾನು ತಪ್ಪಿತಸ್ಥನಲ್ಲ ಎಂದು ಹೇಳುತ್ತಿದ್ದರು. ಅದರಂತೆ ಅವರ ವಿರುದ್ಧ ಶಿಸ್ತು ಕ್ರಮ ಕೈಬಿಡಲಾಗುತ್ತಿತ್ತು. ಲೋಕಾಯುಕ್ತ ಕಾಯ್ದೆಯಲ್ಲಿ ಇದಕ್ಕೆ ಅವಕಾಶ ಇಲ್ಲದೇ ಇದ್ದರೂ ಇದುವರೆಗೆ ನಿಯಮ ಉಲ್ಲಂ ಸಿಯೇ ಶಿಸ್ತು ಕ್ರಮದ ಪ್ರಕ್ರಿಯೆ ನಡೆದಿದೆ.
ಇದೀಗ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಕ್ರಮ ಕೈಗೊಳ್ಳುವ ಅವಕಾಶವನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ನೀಡಿ, ಲೋಕಾಯುಕ್ತ ಸಂಸ್ಥೆಯನ್ನು ಹಲ್ಲಿಲದ ಹಾವಾಗಿ ಮಾಡಿದ ಬಳಿಕ ಕೆಲವೇ ಪ್ರಕರಣಗಳು ಬಾಕಿ ಇದ್ದಾಗ ಎಚ್ಚೆತ್ತುಕೊಂಡಿರುವ ಸರ್ಕಾರ, ಶಿಸ್ತು ಕ್ರಮಕ್ಕೆ ಲೋಕಾಯುಕ್ತ ಸಂಸ್ಥೆ ಮಾಡಿದ ಶಿಫಾರಸನ್ನು ಆರೋಪಿತ ನೌಕರರಿಗೆ ಕಳುಹಿಸಿಕೊಟ್ಟು ಅವರಿಂದ ಹೇಳಿಕೆ ಪಡೆಯದೆ ತನ್ನ ಯುಕ್ತ ವಿವೇಚನೆ ಬಳಸಿ ಕ್ರಮ ಕೈಗೊಳ್ಳಬೇಕು ಎಂದು ಎಲ್ಲಾ ಇಲಾಖೆಗಳಿಗೆ ಸುತ್ತೋಲೆ ಹೊರಡಿಸಿದೆ.
ಎಸಿಬಿ ರಚನೆಯಾದ ಮೇಲೆ ಲೋಕಾಯುಕ್ತ ಸಂಸ್ಥೆಯಲ್ಲಿ ಅಧಿಕಾರಿಗಳ ವಿರುದ್ಧ ಯಾವುದೇ ಹೊಸ ಪ್ರಕರಣಗಳು ದಾಖಲಾಗುತ್ತಿಲ್ಲ. ಇದ್ದ ಪ್ರಕರಣಗಳಲ್ಲಿ ಬಹುತೇಕ ಇತ್ಯರ್ಥವಾಗಿ 60-65 ಪ್ರಕರಣಗಳು ಮಾತ್ರ ತನಿಖೆಗೆ ಬಾಕಿ ಉಳಿದಿದೆ. ಇದುವರೆಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಪ್ರಕ್ರಿಯೆ ನಿಯಮ ಬಾಹಿರವಾಗಿ ನಡೆಯುತ್ತಿದ್ದರೂ ಮೌನವಾಗಿದ್ದ ಸರ್ಕಾರ ಲೋಕಾಯುಕ್ತ ಸಂಸ್ಥೆ ಕೆಲಸವೇ ಇಲ್ಲದೆ ಕುಳಿತುಕೊಳ್ಳುವ ಸಮಯ ಬಂದ ವೇಳೆ ಎಚ್ಚೆತ್ತುಕೊಂಡು ಲೋಕಾಯುಕ್ತರ ಶಿಫಾರಸಿಗೆ ಶಕ್ತಿ ತುಂಬುವ ಕೆಲಸ ಮಾಡಿದೆ.
ಏನಿದು ಗೊಂದಲ?:
ಸರ್ಕಾರಿ ಅಧಿಕಾರಿಗಳು, ನೌಕರರ ವಿರುದ್ಧ ಬರುವ ಆರೋಪಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಅಥವಾ ಉಪಲೋಕಾಯುಕ್ತರು ಲೋಕಾಯುಕ್ತ ಕಾಯ್ದೆ 12(3)ರ ಅನ್ವಯ ತನಿಖೆ ನಡೆಸಿ ಆರೋಪ ಭಾಗಷಃ ಅಥವಾ ಪೂರ್ಣ ಸಾಬೀತಾಗಿದೆ ಎಂದು ಮನದಟ್ಟಾದಾಗ ಆ ಕುರಿತಂತೆ ಅಧಿಕಾರಿಗಳು, ನೌಕರರ ವಿರುದ್ಧ ಕ್ರಮಕ್ಕೆ ಸಂಬಂಧಿಸಿದ ಸಕ್ಷಮ ಪ್ರಾಧಿಕಾರಕ್ಕೆ ಶಿಫಾರಸು ಮಾಡುತ್ತದೆ. ಈ ಶಿಫಾರಸನ್ನು ಸಕ್ಷಮ ಪ್ರಾಧಿಕಾರವು ಕಾಯ್ದೆಯ ನಿಯಮ 12(4)ರ ಅನ್ವಯ ಪರಿಶೀಲಿಸಿ ಮೂರು ತಿಂಗಳೊಳಗೆ ಕ್ರಮ ಕೈಗೊಂಡಿರುವ ಕುರಿತ ವರದಿಯನ್ನು ಲೋಕಾಯುಕ್ತ ಅಥವಾ ಉಪಲೋಕಾಯುಕ್ತಕ್ಕೆ ಕಳುಹಿಸಿಕೊಡಬೇಕು.
ನಿಯಮಾವಳಿಯಂತೆ ಲೋಕಾಯುಕ್ತರ ಶಿಫಾರಸಿನನ್ವಯ ಸಕ್ಷಮ ಪ್ರಾಧಿಕಾರವು ಕ್ರಮ ಕೈಗೊಳ್ಳುವಾಗ ತನ್ನ ವಿವೇಚನೆ ಬಳಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಆದರೆ, ಸಕ್ಷಮ ಪ್ರಾಧಿಕಾರವು ಈ ನಿಯಮ ಉಲ್ಲಂ ಸಿ ಲೋಕಾಯುಕ್ತರ ಶಿಫಾರಸನ್ನು ಆರೋಪಿತ ಅಧಿಕಾರಿ ಅಥವಾ ನೌಕರರಿಗೆ ಕಳುಹಿಸಿಕೊಟ್ಟು ಅದರ ಕುರಿತಂತೆ ಅವರಿಂದ ಲಿಖೀತ ಹೇಳಿಕೆಗಳನ್ನು ಪಡೆಯುತ್ತಿತ್ತು. ಬಳಿಕ ಈ ಲಿಖೀತ ಹೇಳಿಕೆ ಆಧರಿಸಿ ಕ್ರಮ ಕೈಗೊಳ್ಳುತ್ತಿತ್ತು.
ಇದೀಗ ಈ ಲೋಪವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಎಲ್ಲಾ ಇಲಾಖೆ ಮುಖ್ಯಸ್ಥರಿಗೆ ಸುತ್ತೋಲೆ ಕಳುಹಿಸಿ, ಶಿಸ್ತು ಕ್ರಮ ಕುರಿತಂತೆ ಲೋಕಾಯುಕ್ತರು ಮಾಡಿದ ಶಿಫಾರಸಿನ ಕುರಿತು ಸಕ್ಷಮ ಪ್ರಾಧಿಕಾರಿಗಳು ಕ್ರಮ ಕೈಗೊಳ್ಳುವಾಗ ಶಿಫಾರಸನ್ನು ಆರೋಪಿತ ನೌಕರರಿಗೆ ಕಳುಹಿಸಿಕೊಟ್ಟು ಅವರಿಂದ ಹೇಳಿಕೆ ಪಡೆಯಲು ಅವಕಾಶವಿಲ್ಲ. ಸಕ್ಷಮ ಪ್ರಾಧಿಕಾರವೇ ತನ್ನ ವಿವೇಚನೆ ಬಳಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರಸ್ ನಲ್ಲಿ ಮೂರು ಗುಂಪುಗಳ ನಡುವೆ ಗುದ್ದಾಟ ಹೊಸದೆನ್ನಲ್ಲ : ಡಿಸಿಎಂ ಗೋವಿಂದ ಕಾರಜೋಳ
ಅಸ್ನೋಟಿಕರ್, ಜಿ.ಟಿ. ಜೆಡಿಎಸ್ ಬಿಡುವುದಿಲ್ಲ: ದೇವೇಗೌಡ
ಎಚ್.ಕೆ.ಪಾಟೀಲರಿಂದ ಹತಾಶೆಯ ಅಪ್ರಬುದ್ಧ ಹೇಳಿಕೆ:ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್
ಮಾರ್ಚ್ 2ರಂದು ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ ಲೋಕಾರ್ಪಣೆ
ಡಿಸಿ ಕಚೇರಿ ಆವರಣದಲ್ಲೇ ಕ್ರಿಮಿನಾಶಕ ಸೇವಿಸಿದ ಖಾಸಗಿ ಶಾಲೆ ಮುಖ್ಯಸ್ಥ