ಪುಸ್ತಕದಲ್ಲಿ ಹಾಜರ್‌, ಕಲಾಪಕ್ಕೆ ಚಕ್ಕರ್‌

Team Udayavani, Jun 10, 2017, 10:22 AM IST

ಬೆಂಗಳೂರು: ಪುಸ್ತಕದಲ್ಲಿ ‘ಇದ್ದವರು’ ಕಲಾಪದಲ್ಲಿ ‘ಕಾಣಿಸುವುದೇ’ ಇಲ್ಲ! ಇದೊಂದು ಕಣ್ಣಾಮುಚ್ಚಾಲೆ ಆಟ. ಬಂದವರು ಎಲ್ಲಿ ಹೋಗುತ್ತಾರೆಂಬುದು ಯಾರಿಗೂ ಗೊತ್ತಾಗುತ್ತಲೂ ಇಲ್ಲ! ಇದು ಸದ್ಯ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದ ‘ಹಾಜರಾತಿ’ ಸ್ಥಿತಿ. ಸೋಮವಾರ ಶುರುವಾದ ಈ ಮುಂಗಾರು ಅಧಿವೇಶನದಲ್ಲಿ ಪುಸ್ತಕದ ‘ಹಾಜರಾತಿ’ಗೂ ಕಲಾಪದಲ್ಲಿನ ‘ಹಾಜರಾತಿ’ಗೂ ದೊಡ್ಡ ಅಜಗಜಾಂತರವೇ ಇದೆ. ಸೋಮವಾರದಿಂದ ಶುಕ್ರವಾರದವರೆಗೆ ನಡೆದ ಐದು ದಿನಗಳ ಅಧಿವೇಶನದ ಕಲಾಪದಲ್ಲಿ ಕೇವಲ 25ರಿಂದ 60 ಸದಸ್ಯರು ಪಾಲ್ಗೊಂಡಿದ್ದರೆ, ಹಾಜರಿ ಪುಸ್ತಕದಲ್ಲಿ ಮಾತ್ರ 119ರಿಂದ 171 ಸದಸ್ಯರು ಸಹಿ ಹಾಕಿದ್ದಾರೆ.ಅಂದರೆ ಪುಸ್ತಕದಲ್ಲಿ ಸಹಿ ಹಾಕಿದ ಶೇ. 60ಕ್ಕಿಂತಲೂ ಹೆಚ್ಚು ಶಾಸಕರು ಕಲಾಪದಲ್ಲಿ ಸಕ್ರಿಯರಾಗಿ ಭಾಗವಹಿಸಿಲ್ಲ!

ಎಂಇಎಸ್‌ ಶಾಸಕರಾದ ಸಂಭಾಜಿ ಪಾಟೀಲ್‌, ಅರವಿಂದ ಪಾಟೀಲ್‌, ಬೇಲೂರು ಶಾಸಕ ರುದ್ರೇಶ ಗೌಡ ಈ ಅಧಿವೇಶನದಲ್ಲಿ ಒಂದು ದಿನವೂ ಕಲಾಪಕ್ಕೆ ಹಾಜರಾಗಿಲ್ಲ. ಮಾಜಿ ಸಚಿವ ಅಂಬರೀಶ್‌ ಕೇವಲ ಒಂದು ದಿನ ಕಂಡರೆ, ಜೆಡಿಎಸ್‌ ನಾಯಕ ಕುಮಾರ ಸ್ವಾಮಿ 2 ದಿನ ಹಾಜರಾಗಿದ್ದರು. ಬಿಜೆಪಿ ನಾಯಕ ಆರ್‌. ಅಶೋಕ್‌ ಸದನಕ್ಕೆ ಹಾಜರಾಗಿದ್ದರೂ ಹೆಚ್ಚಿನ ಸಮಯ ತನ್ನ ಪುತ್ರನ ಮದುವೆ ಕಾರ್ಡ್‌ ವಿತರಿಸುವುದರಲ್ಲಿಯೇ ಕಳೆದರು. ವಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌, ಸುರೇಶ್‌ ಕುಮಾರ್‌, ಸಿ.ಟಿ. ರವಿ, ಜೀವರಾಜ್‌, ಕೆ.ಜಿ. ಬೋಪಯ್ಯ, ಎಚ್‌.ಕೆ. ಕುಮಾರಸ್ವಾಮಿ, ವೈಎಸ್‌ವಿ ದತ್ತಾ, ಶಿವಲಿಂಗೇ ಗೌಡ, ಕೆ.ಶಿವಮೂರ್ತಿ ನಾಯಕ್‌, ನರೇಂದ್ರ ಸ್ವಾಮಿ, ಬಿ.ಆರ್‌. ಯಾವಗಲ್‌, ಶಿವಾನಂದ ಪಾಟೀಲ್‌, ನಾರಾಯಣ ಸ್ವಾಮಿ ಪ್ರತಿದಿನದ ಕಲಾಪಕ್ಕೆ ಹಾಜರಿದ್ದರು. ಅಧಿವೇಶನಕ್ಕೆ ಬಂದವರೆಲ್ಲರೂ ಪೂರ್ಣ ದಿನ ಕಲಾಪದಲ್ಲಿ ಕುಳಿತಿದ್ದರೇ ಎಂಬ ವಿಚಾರಕ್ಕೆ ಬಂದರೆ ಅಲ್ಲೂ ಅಚ್ಚರಿ ಕಾದಿದೆ. ಹೆಚ್ಚಿನ ಶಾಸಕರು ತಮಗೆ ಸಂಬಂಧಪಟ್ಟ ವಿಷಯಗಳಿಗೆ ಮಾತ್ರ ಸೀಮಿತವಾಗಿ ಕಲಾಪದ‌ಲ್ಲಿ ಭಾಗ ವಹಿಸಿದ್ದರು. ಉಳಿದ ಸದಸ್ಯರಿಗೆ ಸಂಬಂಧಿಸಿದ ಕಲಾಪದಲ್ಲಿ ಹೆಚ್ಚಿನ ಸದಸ್ಯರು ಗೈರಾಗಿದ್ದರು.

ಸದನದ ಒಳಗೆ ಬಂದವರಾರೂ ಪೂರ್ಣ ಸಮಯ ಕಲಾಪದ ಕಾರ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಶಾಸಕರಷ್ಟೇ ಅಲ್ಲ, ಸಚಿವರು ಕೂಡ ಸರಿಯಾಗಿ ಕಲಾಪಕ್ಕೆ ಹಾಜರಾಗಲಿಲ್ಲ. ಕಳೆದ ಐದು ದಿನಗಳಲ್ಲಿ ಕಲಾಪ ನಡೆಯುವ ಸಂದರ್ಭದಲ್ಲಿ ಬೇಡಿಕೆ ಮೇಲಿನ ಚರ್ಚೆಯಲ್ಲಿ ಸಂಬಂಧಪಟ್ಟ ಇಲಾಖೆಗಳ ಸಚಿವರು, ಅಧಿಕಾರಿಗಳು ಹಾಜರಿಲ್ಲದೆ ಸದನವನ್ನು ಮುಂದೂಡಿರುವ ಪ್ರಸಂಗವೂ ನಡೆದಿದೆ. ವಿಧಾನಸಭೆ ಅಧಿವೇಶನ ನಡೆಯುವ ಸಂದರ್ಭದಲ್ಲಿ ಯಾವುದೇ ಕಾರ್ಯಕ್ರಮ ಹಾಕಿಕೊಳ್ಳದಂತೆ ಸಚಿವರಿಗೆ ಮೊದಲೇ ಸೂಚನೆ ನೀಡಿದ್ದರೂ ಇಲಾಖಾ ಪೂರ್ವ ನಿಯೋಜಿತ ಕಾರ್ಯಕ್ರಮಗಳ ನೆಪ ಹೇಳಿ ಕಲಾಪದಿಂದ ದೂರ ಉಳಿಯುತ್ತಿದ್ದಾರೆ. ಕೇವಲ ಆಡಳಿತ ಪಕ್ಷದ ಸದಸ್ಯರಷ್ಟೇ ಅಲ್ಲ, ವಿಪಕ್ಷಗಳ ಸದಸ್ಯರೂ ಸರಿಯಾಗಿ ಕಲಾಪಕ್ಕೆ ಹಾಜರಾಗುತ್ತಿಲ್ಲ. 

ಇನ್ನೊಂದು ಮಹತ್ವದ ವಿಷಯವೇನೆಂದರೆ ಬಹುತೇಕ ಶಾಸಕರು ಅಧಿವೇಶನಕ್ಕೆ ಆಗಮಿಸಿ ದರೂ ವಿಧಾನಸಭೆಯ ಮೊಗಸಾಲೆಗೆ ಬಂದು ಸಹಿ ಹಾಕಿ ಕಲಾಪದಲ್ಲಿ ಪಾಲ್ಗೊಳ್ಳದೇ ಮೊಗಸಾಲೆಯಲ್ಲಿ ಕಾಲಹರಣ ಮಾಡುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದೆ. ಕೆಲವು ಸದಸ್ಯರು ಹಾಜರಾತಿ ಹಾಕಿ ಮತ್ತೆ ತಮ್ಮ ಖಾಸಗಿ ಕೆಲಸಗಳಿಗೆ ತೆರಳುವುದೂ ಕಂಡು ಬರುತ್ತಿದೆ.

ಈಗಾಗಲೇ ಸಚಿವರು ಮತ್ತು ಅಧಿಕಾರಿಗಳಿಗೆ ಕಡ್ಡಾಯ ಹಾಜರಾಗು ವಂತೆ ಪತ್ರ ಬರೆದಿದ್ದೇನೆ. ಅವರು ಸ್ಪಂದಿಸದಿದ್ದರೆ, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿಗೆ ಶಿಫಾರಸು ಮಾಡುತ್ತೇನೆ. ಅಂತಿಮವಾಗಿ ತೀರ್ಮಾನ ಕೈಗೊಳ್ಳುವ ಅಧಿಕಾರ ಮುಖ್ಯಮಂತ್ರಿಗಿದೆ. ಶಾಸಕರು ಜನಪ್ರತಿನಿಧಿಗಳಾಗಿರುವುದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಕಷ್ಟ. 
– ಕೆ.ಬಿ. ಕೋಳಿವಾಡ, ವಿಧಾನ ಸಭಾಧ್ಯಕ್ಷ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ