ಮಹಿಳೆಗೆ ವಂಚಿಸಿದ ಜ್ಯೋತಿಷಿ ಬಂಧನ
Team Udayavani, Sep 4, 2018, 12:19 PM IST
ಬೆಂಗಳೂರು: ವಿಧಾನಸೌಧದಲ್ಲಿ ಟೈಪಿಸ್ಟ್ ಕೆಲಸ ಕೊಡಿಸುವುದಾಗಿ ಮಹಿಳೆಯೊಬ್ಬರಿಂದ 5 ಲಕ್ಷ ರೂ. ಪಡೆದು ವಂಚಿಸಿದ್ದ ಜ್ಯೋತಿಷಿಯೊಬ್ಬ ಇದೀಗ ಜೈಲು ಸೇರಿದ್ದಾನೆ. ಗಣೇಶ್ ರಾಜನ್ (28) ಬಂಧನಕ್ಕೆ ಒಳಗಾದ ವಂಚಕ ಜ್ಯೋತಿಷಿ. ಕೆಲಸ ಸಿಗುವ ಭರವಸೆಯಿಂದ ಹಣ ನೀಡಿ ಮೋಸ ಹೋಗಿದ್ದ ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿ ಗಣೇಶ್ ರಾಜನ್‌ನನ್ನು ಬಂಧಿಸಲಾಗಿದೆ ಎಂದು ಜ್ಞಾನಭಾರತಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ಅಂಗವಿಕಲನಾಗಿರುವ ಗಣೇಶ್ ರಾಜನ್, ಮುನೇಶ್ವರ ಬ್ಲಾಕ್‌ನಲ್ಲಿ ಜ್ಯೋತಿಷ್ಯ ಕೇಂದ್ರ ಇಟ್ಟುಕೊಂಡಿದ್ದ. ಮೂರು ವರ್ಷಗಳ ಹಿಂದೆ ದೂರುದಾರ ಮಹಿಳೆ, ಜ್ಯೋತಿಷ್ಯ ಕೇಳಲು ಕೇಂದ್ರಕ್ಕೆ ತೆರಳಿದಾಗ ತನಗೆ ಬಹಳಷ್ಟು ರಾಜಕಾರಣಿಗಳ ಪರಿಚಯವಿದೆ. 5 ಲಕ್ಷ ರೂ. ಕೊಟ್ಟರೆ ವಿಧಾನಸೌಧದಲ್ಲಿ ಟೈಪಿಸ್ಟ್ ಕೆಲಸ ಕೊಡಿಸುತ್ತೇನೆ ಎಂದು ಗಣೇಶ್‌ರಾಜನ್ ಸುಳ್ಳು ಹೇಳಿದ್ದ. ಇದನ್ನು ನಂಬಿದ ಮಹಿಳೆ, ಹಂತ ಹಂತವಾಗಿ 5 ಲಕ್ಷ ರೂ. ನೀಡಿದ್ದರು.
ಆದರೆ ಕೆಲಸ ಕೊಡಿಸದೇ ವಂಚಿಸಿದ ಗಣೇಶ್ ರಾಜನ್, ಜ್ಯೋತಿಷ್ಯ ಕೇಂದ್ರವನ್ನು ಭುವನೇಶ್ವರ ನಗರಕ್ಕೆ ಸ್ಥಳಾಂತರಿಸಿದ್ದ. ಕೆಲ ತಿಂಗಳ ಹಿಂದೆ ದೂರುದಾರ ಮಹಿಳೆ ಭುವನೇಶ್ವರನಗರಕ್ಕೆ ತೆರಳಿ ಹಣ ವಾಪಾಸ್ ಕೇಳಿದಾಗ, ಆಕೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಣ ನೀಡುವುದಿಲ್ಲ ಎಂದಿದ್ದ. ಜತೆಗೆ ಪ್ರಾಣಬೆದರಿಕೆ ಹಾಕಿದ್ದ. ಈ ಬಗ್ಗೆ ಮಹಿಳೆ ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.