ಬಾರ್‌ಕೋಡ್‌ ಬೆನ್ನತ್ತಿ ಹಂತಕನ ಬಂಧನ!

Team Udayavani, Aug 24, 2019, 3:10 AM IST

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಡೆಗೋಡೆ ಸಮೀಪ ಜು.31ರಂದು ಮುಂಜಾನೆ ನಡೆದಿದ್ದ ಮಹಿಳೆಯ ಕೊಲೆ ಪ್ರಕರಣ ಭೇದಿಸಲು ಬಾಗಲೂರು ಠಾಣೆ ಪೊಲೀಸರಿಗೆ ನೆರವಾಗಿದ್ದು ಒಂದು ವಾಚ್‌, ಉಂಗುರ, ಜೀನ್ಸ್‌ ಪ್ಯಾಂಟ್‌ ಮೇಲಿದ್ದ ಬಾರ್‌ಕೋಡ್‌! ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ ಬಾಗಲೂರು ಠಾಣೆ ಇನ್ಸ್‌ಪೆಕ್ಟರ್‌ ಬಿ.ರಾಮಮೂರ್ತಿ ನೇತೃತ್ವದ ತಂಡ, ಮೊದಲಿಗೆ ಮೃತ ಮಹಿಳೆಯ ಗುರುತು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದ್ದಾಗ, ಆಕೆ ಕೈಗೆ ಕಟ್ಟಿಕೊಂಡಿದ್ದ ಟೈಟಾನ್‌ ವಾಚ್‌, ಧರಿಸಿದ್ದ ಜೀನ್ಸ್‌ಪ್ಯಾಂಟ್‌ ಆಕೆ ಯಾರು ಎಂಬ ಸುಳಿವು ಕೊಟ್ಟಿದ್ದವು.

ಈ ಎರಡೂ ಪ್ರಮುಖ ಸುಳಿವುಗಳನ್ನು ಆಧರಿಸಿ ತನಿಖೆ ಚುರುಕುಗೊಳಿಸಿದಾಗ ಕೊಲೆಯಾದ ಮಹಿಳೆ ಕೊಲ್ಕತ್ತಾ ಮೂಲದ ಪೂಜಾ ಸಿಂಗ್‌ ದೇ (30) ಎಂಬುದು ಖಚಿತವಾಗಿದೆ. ಬಳಿಕ ಆಕೆಯ ಫೋನ್‌, ಇಮೇಲ್‌ ಐಡಿ ವಿವರ ಪರಿಶೀಲಿಸಿದಾಗ ಆಕೆಯನ್ನು ಕೊಲೆಗೈದಿದ್ದು ಕ್ಯಾಬ್‌ ಚಾಲಕ ಎಚ್‌.ಎಂ ನಾಗೇಶ್‌ (22) ಎಂಬುದು ಬಯಲಾಗಿದೆ. ಬಳಿಕ ಬೆಂಗಳೂರಿನಲ್ಲಿ ಏನೂ ಗೊತ್ತಿಲ್ಲದವನಂತೆ ಕ್ಯಾಬ್‌ ಓಡಿಸಿಕೊಂಡಿದ್ದ ಆರೋಪಿ ನಾಗೇಶ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ಕೊಲೆ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾನೆ. ಏರ್‌ಪೋರ್ಟ್‌ ಪ್ರಯಾಣದ ವೇಳೆ ಮಹಿಳೆಯನ್ನು ದಿಕ್ಕುತಪ್ಪಿಸಿ ಕೊಲೆ ಮಾಡಿದ ಪ್ರಕರಣದಲ್ಲಿ ಕ್ಯಾಬ್‌ ಚಾಲಕನ ಪಾತ್ರದ ಬಗ್ಗೆ ಆ.21ರಂದು “ಅಪಹರಿಸಿ ಯುವತಿ ಕೊಲೆ?’ ಎಂಬ ಶೀರ್ಷಿಕೆಯಡಿ “ಉದಯವಾಣಿ’ ವಿಶೇಷ ವರದಿ ಪ್ರಕಟಿಸಿತ್ತು.

ನಾಪತ್ತೆ ಕೇಸ್‌ ದಾಖಲು: ಮೃತ ಪೂಜಾ ಅವರ ಕೈಯಲ್ಲಿ ವಾಚ್‌ ಹಾಗೂ ಉಂಗುರ, ಅವರು ಧರಿಸಿದ್ದ ಜೀಲಸ್‌ 21 ಬ್ರಾಂಡ್‌ ಜೀನ್ಸ್‌ನ ಬಾರ್‌ಕೋಡ್‌ ಇತ್ತು. ಜತೆಗೆ, ಅವರ ಉಂಗುರ ಬಹುತೇಕ ಉತ್ತರ ಭಾರತೀಯರು ಧರಿಸುವ ಮಾದರಿಯಲ್ಲಿದ್ದವು. ಇದೇ ಅನುಮಾನದೊಂದಿಗೆ ಜೀನ್ಸ್‌ಪ್ಯಾಂಟ್‌ನ‌ ಬಾರ್‌ಕೋಡ್‌ ಆಧಾರದಲ್ಲಿ ಖರೀದಿ ಎಲ್ಲಿ ನಡೆದಿದೆ ಎಂದು ಪರಿಶೀಲನೆ ನಡೆಸಿದಾಗ, ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಅವುಗಳ ಖರೀದಿ ನಡೆದಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಯಿತು. ಹೀಗಾಗಿ ಮೃತ ಯುವತಿ ಅಲ್ಲಿನವರೇ ಇರಬಹುದು ಎಂದು ಒಂದು ವಿಶೇಷ ತಂಡ ಕೋಲ್ಕತಾಗೆ ತೆರಳಿ, ಸ್ಥಳೀಯ ಪೊಲೀಸ್‌ ಠಾಣೆಗಳಲ್ಲಿ ವಿಚಾರಿಸಿದಾಗ, ನ್ಯೂ ಟೌನ್‌ ಪೊಲೀಸ್‌ ಠಾಣೆಯಲ್ಲಿ ಪೂಜಾ ಕುಟುಂಬಸ್ಥರು ನಾಪತ್ತೆ ದೂರು ದಾಖಲಿಸಿರುವುದು ಗೊತ್ತಾಯಿತು.

ಮೃತಳ ಫೋಟೋ ಹಾಗೂ ಆಕೆಯ ನಿಜವಾದ ಫೊಟೋ ತಾಳೆ ನೋಡಿದಾಗ ಹೊಂದಿಕೆಯಾಗುತ್ತಿತ್ತು. ಈ ಬಗ್ಗೆ ಆಕೆಯ ಕುಟುಂಬಸ್ಥರಿಗೆ ವಿಚಾರ ತಿಳಿಸಿ ಇಲ್ಲಿಗೆ ಕರೆತಂದು ಮೃತದೇಹ, ಆಕೆ ವಾಚ್‌, ಉಂಗುರು ತೋರಿಸಿ, ಕುತ್ತಿಗೆ ಭಾಗದಲ್ಲಿದ್ದ ಟ್ಯಾಟೂ ಬಗ್ಗೆ ಹೇಳಿದಾಗ ಮೃತಪಟ್ಟವಳು ಪೂಜಾ ಎಂಬುದು ಖಾತ್ರಿಯಾಗಿತ್ತು. ಬಳಿಕ ಆಕೆ ಬಳಸುತ್ತಿದ್ದ ಮೊಬೈಲ್‌ ನಂಬರ್‌ ಪರಿಶೀಲನೆಗೊಳಪಡಿಸಿ, ಇ ಮೇಲ್‌ ಚೆಕ್‌ ಮಾಡಿದಾಗ ಆಕೆ ಕ್ಯಾಬ್‌ ಬುಕ್‌ ಮಾಡಿರುವುದು, ಕೊಲೆಯಾದ ಸ್ಥಳದ ಲೊಕೇಶನ್‌ ಖಾತ್ರಿಯಾಯಿತು.

ಈ ಮಾಹಿತಿಗಳ ಆಧಾರದಲ್ಲಿ ಕ್ಯಾಬ್‌ ಚಾಲಕ ನಾಗೇಶ್‌ನನ್ನು ವಿಚಾರಣೆ ನಡೆಸಿದಾಗ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಮೃತ ಪೂಜಾ ಪತಿ ಸೌದಿಪ್‌ ದೇ ಅಲ್ಲಿಯೇ ಬಿಪಿಒ ಉದ್ಯೋಗಿ ಆಗಿದ್ದಾರೆ. ಒಬ್ಬ ಸಹೋದರ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ.ಪೂಜಾ ಈ ಹಿಂದೆಯೂ ಹಲವು ಬಾರಿ ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಕಾರ್ಯಕ್ರಮಗಳ ಆಯೋಜನೆ ಕಾರ್ಯನಿರ್ವಹಿಸಿದ್ದರು ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ಕೊಲೆಗೈದವನಿಗೆ ಸಿಕ್ಕಿದ್ದು ಬರೀ 500 ರೂ.!: ಪೂಜಾ ಅವರನ್ನು ಹಣ ಹಾಗೂ ಚಿನ್ನಾಭರಣ ದೋಚುವ ಸಲುವಾಗಿ ಕೊಲೆ ಮಾಡಿದ ಆರೋಪಿ ನಾಗೇಶ್‌ಗೆ ಸಿಕ್ಕಿದ್ದು ಬರೀ 500 ರೂ. ಮಾತ್ರ! ಕೊಲೆ ಮಾಡಿದ ಬಳಿಕ ಆರೋಪಿ ನಾಗೇಶ್‌ ಆಕೆಯ ಎರಡು ಬ್ಯಾಗ್‌ಗಗಳು, ಎರಡು ಫೋನ್‌ ದೋಚಿದ್ದ. ಆದರೆ, ಒಂದು ಬ್ಯಾಗ್‌ನಲ್ಲಿ ಬರೀ ಬಟ್ಟೆಗಳಿದ್ದವು. ಆ ಬ್ಯಾಗನ್ನು ಸಮೀಪದಲ್ಲಿರುವ ತ್ಯಾಜ್ಯ ವಿಲೇವಾರಿ ಮಾಡುವ ಸ್ಥಳದಲ್ಲಿ ಎಸೆದು ಹೋಗಿದ್ದ. ಮತ್ತೂಂದು ವ್ಯಾನಿಟಿ ಬ್ಯಾಗ್‌ನಲ್ಲಿ ಬರೀ 500 ರೂ. ನಗದು ಸಿಕ್ಕಿದೆ. ಉಳಿದಂತೆ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ಗಳಿದ್ದರೂ ಅವುಗಳನ್ನು ಬಳಸಲು ಬಂದಿಲ್ಲ.ಹೀಗಾಗಿ ಫೋನ್‌ಗಳು ಹಾಗೂ ವ್ಯಾನಿಟಿ ಬ್ಯಾಗ್‌ನನ್ನು ಕಾರಿನಲ್ಲಿಯೇ ಇಟ್ಟುಕೊಂಡಿದ್ದ.

ಕೊಲೆ ಮಾಡಿದ ಮಾರನೇ ದಿನವೇ ಓಲಾ ಸೇವೆಯನ್ನು ಸ್ಥಗಿತಗೊಳಿಸಿದ್ದ ನಾಗೇಶ್‌, ಊಬರ್‌ ಸೇವೆಯನ್ನು ಮಾತ್ರ ಬಳಸಿ ಕ್ಯಾಬ್‌ ಓಡಿಸುತ್ತಿದ್ದ. ಜತೆಗೆ, ಮನೆಯವರೆಲ್ಲರನ್ನೂ ಮಂಡ್ಯದ ದೇವಾಲಯಕ್ಕೆ ಕರೆದೊಯ್ದು ವಿಶೇಷ ಪೂಜೆ ಮಾಡಿಸಿಕೊಂಡು ಬಂದಿದ್ದ ಬಳಿಕ ಕ್ಯಾಬ್‌ ಓಡಿಸಿಕೊಂಡಿದ್ದ. ಆತನ ಪೋಷಕರಿಗೆ ನಾಗೇಶ್‌ ಕೊಲೆಮಾಡಿದ್ದಾನೆ ಎಂಬ ಸಣ್ಣ ಸುಳಿವು ಇರಲಿಲ್ಲ ಎಂದು ಹಿರಿಯ ಅಧಿಕಾರಿ ಹೇಳಿದರು. ಪ್ರಕರಣದ ತನಿಖೆಯಲ್ಲಿ ಈಶಾನ್ಯ ವಿಭಾಗದ ಡಿಸಿಪಿ ಡಾ. ಭೀಮಾಶಂಕರ ಎಸ್‌ ಗುಳೇದ್‌, ಸಂಪಿಗೆಹಳ್ಳಿ ಉಪವಿಭಾಗದ ಎಸಿಪಿ ಶಿವಕುಮಾರ್‌, ಬಾಗಲೂರು ಠಾಣೆಯ ಇನ್ಸ್‌ಪೆಕ್ಟರ್‌ ಬಿ. ರಾಮಮೂರ್ತಿ, ಪಿಎಸ್‌ಐಗಳಾದ ರಾಜುರೆಡ್ಡಿ ಬೆನ್ನೂರ್‌, ಕುಮಾರಿ ವಿಂದ್ಯಾ ಹಾಗೂ ಠಾಣೆಯ ಸಿಬ್ಬಂದಿ ಭಾಗಿಯಾಗಿದ್ದರು.

ಕ್ಯಾಬ್‌ಗಳಲ್ಲಿ ಮಹಿಳೆಯರು ಎಷ್ಟು ಸೇಫ್?
ಪ್ರಕರಣ 1: 2005ರ ಡಿಸೆಂಬರ್‌ನಲ್ಲಿ ಬಿಪಿಓ ಉದ್ಯೋಗಿ ಪ್ರತಿಭಾ ಮೂರ್ತಿ ಅವರನ್ನು ಕ್ಯಾಬ್‌ ಚಾಲಕನೇ ಅಪಹರಿಸಿ ಅತ್ಯಾಚಾರ ಮಾಡಿ ಬರ್ಬರವಾಗಿ ಕೊಲೆ ಮಾಡಿದ್ದ. ಈ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಪ್ರಕರಣದ ಆರೋಪಿ ಕ್ಯಾಬ್‌ ಚಾಲಕ ಶಿವಕುಮಾರ್‌ಗೆ ಸೆಷನ್ಸ್‌ ಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಪ್ರಕರಣ 2: 2015ರಲ್ಲಿ ಬಿಪಿಓ ಉದ್ಯೋಗಿ ಉತ್ತರ ಭಾರತ ಮೂಲದ ಬಿಪಿಓ ಮಹಿಳಾ ಉದ್ಯೋಗಿಯನ್ನು ಅಪಹರಿಸಿದ್ದ ಟೆಂಪೋ ಚಾಲಕ ಹಾಗೂ ಕ್ಲೀನರ್‌ ಮೂರು ಗಂಟೆಗಳ ಕಾಲ ನಗರದಲ್ಲಿ ಸುತ್ತಾಡಿಸಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದರು.

ಪ್ರಕರಣ 3: 2018ರ ಜುಲೈನಲ್ಲಿ ಮುಂಬೈಗೆ ತೆರಳಲು ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದ ಖಾಸಗಿ ಕಂಪೆನಿ ಮಹಿಳಾ ಉದ್ಯೋಗಿಯನ್ನು ಕ್ಯಾಬ್‌ ಚಾಲಕ ಲೈಂಗಿಕ ಕಿರುಕುಳ ನೀಡಿ ಅಪಹರಿಸಲು ಯತ್ನಿಸಿದ್ದ. ಟೋಲ್‌ ಗೇಟ್‌ ಬಳಿ ಮಹಿಳೆ ಸಹಾಯಕ್ಕೆ ಕಿರುಚಿಕೊಳ್ಳುತ್ತವೇ ಎಚ್ಚೆತ್ತ ಆರೋಪಿ ಆಕೆಯನ್ನು ಕೆಳಗೆ ದಬ್ಬಿ ಪರಾರಿಯಾಗಿದ್ದ. ಈ ಸಂಬಂಧ ಮಹಿಳೆ ನೀಡಿದ ದೂರಿನ ಅನ್ವಯ ಚಿಕ್ಕಚಾಲ ಪೊಲೀಸರು ಕ್ಯಾಬ್‌ ಚಾಲಕ ಸುರೇಶ್‌ ಎಂಬಾತನನ್ನು ಬಂಧಿಸಿದ್ದರು.

ಇದೊಂದು ಅತ್ಯಂತ ದುರಂತ ಘಟನೆಯಾಗಿದೆ. ಮಹಿಳಾ ಪ್ರಯಾಣಿಕರಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಕೂಡಲೇ ಮುಂದಾಗಬೇಕು. ಬಿಬಿಎಂಪಿ ಕೂಡ ಈ ಬಗ್ಗೆ ಗಮನಹರಿಸಬೇಕು.
-ನಾಗಲಕ್ಷ್ಮೀ ಬಾಯಿ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ