ವಿದ್ಯುತ್‌ ಅವಘಡ ಮರುಕಳಿಸದಂತೆ ಎಚ್ಚರಿಕೆ

Team Udayavani, Feb 28, 2019, 5:00 AM IST

ಬೆಂಗಳೂರು: ವಿದ್ಯುತ್‌ ತಂತಿ ತಗುಲಿ ಬಾಲಕ ಸಾವಿಗೀಡಾಗಿರುವ ಘಟನೆ ಮರುಕಳಿಸದಂತೆ ಪಾಲಿಕೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಪಕ್ಷಾತೀತವಾಗಿ ಪಾಲಿಕೆ ಸದಸ್ಯರು ಆಗ್ರಹಿಸಿದರು.

ಕೌನ್ಸಿಲ್‌ ಸಭೆ ಆರಂಭವಾಗುತ್ತಿದ್ದಂತೆ ಮಾತನಾಡಿದ ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜೀದ್‌, ಸೋಮವಾರ ಬಾಣಸವಾಡಿಯ ರಾಜ್‌ಕುಮಾರ್‌ ಪಾರ್ಕ್‌ನಲ್ಲಿ ವಿದ್ಯುತ್‌ ತಂತಿ ತಗುಲಿ ಬಾಲಕ ಮೃತಪಟ್ಟ ಘಟನೆ ನಡೆದಿದೆ. ಈ ಹಿಂದೆ ಬಿಡಿಎ ಉದ್ಯಾನ ನಿರ್ವಹಣೆ ಮಾಡುತ್ತಿತ್ತು. ಆಗ
ಸ್ಥಳೀಯ ಶಾಸಕರು ಅನುದಾನ ನೀಡಿ ಉದ್ಯಾನ ಅಭಿವೃದ್ಧಿಗೆ ಸೂಚಿಸಿದ್ದರು. ಆದರೆ, ಅಭಿವೃದ್ಧಿ ಕಾಮಗಾರಿ ಸೂಕ್ತ ರೀತಿಯಲ್ಲಾಗುತ್ತಿಲ್ಲ ಎಂಬ ಕಾರಣಕ್ಕೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದರು. ನಂತರ ಪಾಲಿಕೆ ಉದ್ಯಾನದಲ್ಲಿ ಕಾಮಗಾರಿ ಕೈಗೊಂಡಿದೆ. ಈ ಘಟನೆಗೆ ಬಿಡಿಎ, ಬಿಬಿಎಂಪಿ ವಿದ್ಯುತ್‌ ನಿರ್ವಹಣಾ ಅಧಿಕಾರಿಗಳು ಕಾರಣವಾಗಿದ್ದು, ಈಗ ತಮ್ಮದೇನೂ ತಪ್ಪಿಲ್ಲ ಎನ್ನುವ ಮೂಲಕ ಎಲ್ಲರೂ ಜಾರಿಕೊಳ್ಳುತ್ತಿದ್ದಾರೆ. ಈ ಕುರಿತು ಮುಖ್ಯ ಇಂಜಿನಿಯರ್‌ ಹಂತದಲ್ಲಿ ತನಿಖೆ ಮಾಡಿ, ತಪ್ಪಿತಸ್ತರಿಗೆ ಶಿಕ್ಷೆ ವಿಧಿಸಬೇಕು ಆಗ್ರಹಿಸಿದರು.

ಬಾಣಸವಾಡಿ ವಾರ್ಡ್‌ ಸದಸ್ಯ ಕೋದಂಡ ರೆಡ್ಡಿ ಮಾತನಾಡಿ, ಘಟನೆ ನಡೆದ ಸಂದರ್ಭದಲ್ಲಿ ಉದ್ಯಾನಕ್ಕೆ ಮೇಯರ್‌ ಭೇಟಿ ನೀಡುತ್ತಾರೆ ಎಂದು ಅಧಿಕಾರಿಗಳಿಗೆ ಗೊತ್ತಿತ್ತು. ಆದ್ದರೂ, ಈ ಕುರಿತು ನನಗೆ ಮಾಹಿತಿ ನೀಡಿಲ್ಲ. ಇಲ್ಲಿ ಸದಸ್ಯರ ಹಕ್ಕಿಗೆ ಚ್ಯುತಿಯಾಗಿದೆ ಎಂದು ಬೇಸರ ವ್ಯಕ್ತಪಡೆಸಿದರು. ಇದಕ್ಕೆ ದನಿಗೂಡಿಸಿದ ವಿಪಕ್ಷ ಸದಸ್ಯರು, ಮಾಹಿತಿ ನೀಡದ ಅಧಿಕಾರಿಗೆ ನೋಟಿಸ್‌ ಜಾರಿ ಮಾಡಬೇಕು ಎಂದು ಪಟ್ಟು ಹಿಡಿದರು. ಅಧಿಕಾರಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡುವಂತೆ ಬೆಂಗಳೂರು ಪೂರ್ವ ವಲಯ ಜಂಟಿ ಆಯುಕ್ತರಿಗೆ ಮೇಯರ್‌ ಆದೇಶಿಸಿದರು. ಮೃತ ಬಾಲಕ ಉದಯಕುಮಾರ್‌ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಿಸಬೇಕು ಹಾಗೂ ಈ ಕೂಡಲೇ ಮಗುವಿನ ಪೋಷಕರಿಗೆ ಹಣ ತಲುಪಿಸಲಬೇಕು ಎಂದು ಸದಸ್ಯರಲ್ಲರೂ ಒತ್ತಾಹಿಸಿದರು.

1250 ಉದ್ಯಾನಗಳ ತಪಾಸಣೆಗೆ ಸೂಚನೆ ವಿದ್ಯುತ್‌ ತಗುಲಿ ಬಾಲಕ ಮೃತಪಟ್ಟ ಘಟನೆ ಕುರಿತು ಮಾತನಾಡಿದ ಪಾಲಿಕೆ ಆಯುಕ್ತ ಮಂಜುನಾಥ್‌ ಪ್ರಸಾದ್‌, ಮೊದಲು ಬಿಡಿಎ ಅಧೀನದಲ್ಲಿದ್ದ ಪಾರ್ಕ್‌ ನಂತರ ಬಿಬಿಎಂಪಿಗೆ ಬಂದಿದ್ದು, ಉಳಿದ ಕಾಮಗಾರಿ ನಡೆಸಲು ಟೆಂಡರ್‌ ನೀಡಲಾಗಿತ್ತು. ಟೆಂಡರ್‌ ಪಡೆದ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು.

ನಗರದ 1,250 ಉದ್ಯಾನಗಳನ್ನು ತಪಾಸಣೆ ಮಾಡಿ ತುರ್ತು ಕಾಮಗಾರಿ ಕೈಗೊಳ್ಳಲು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜತೆಗೆ ನಗರದ 9,000 ಬೀದಿ ದೀಪಗಳು ದುರಸ್ತಿಗೆ ಬಂದಿದ್ದು, ಒಂದು ವಾರದೊಳಗೆ ಅವುಗಳ ರಿಪೇರಿಗೆ ಆದೇಶ ನೀಡಲಾಗಿದೆ ಎಂದು ತಿಳಿಸಿದರು.

ಬಜೆಟ್‌ ಅನುಷ್ಠಾನ ಕಷ್ಟ: ಆಯುಕ್ತ ಬಜೆಟ್‌ ಗಾತ್ರ ಹೆಚ್ಚಾಗಿರುವ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಆಯುಕ್ತರು, ಈ ಬಾರಿ ಬಜೆಟ್‌ ಗಾತ್ರ ಏಳರಿಂದ ಎಂಟು ಸಾವಿರ ಕೋಟಿ ರೂ. ಎಂದು ನಿರೀಕ್ಷಿಸಿದ್ದೆವು. ಆದರೆ, 12 ಸಾವಿರ ಕೋಟಿ ರೂ. ತಲುಪಿದೆ. ಪಾಲಿಕೆ ಆದಾಯವೇ ಏಳು ಸಾವಿರ ಕೋಟಿ ರೂ. ಇರುವಾಗ ಈ ಬಜೆಟ್‌ ಅನುಷ್ಠಾನ ಕಷ್ಟವಾಗಬಹುದು. ಹೀಗಾಗಿ, ಬಜೆಟ್‌ ಕುರಿತ ಅನುಮೋದನೆ ಕಡತ ನನ್ನ ಬಳಿ ಬಂದಾಗ ರಾಜ್ಯ ಸರ್ಕಾರಕ್ಕೆ ಅಗತ್ಯ ತಿದ್ದುಪಡಿಗೆ ಶಿಫಾರಸ್ಸು ಮಾಡುವೆ ಎಂದರು.

ವಾಯುಸೇನೆಗೆ ಪಾಲಿಕೆ ನಮನ ಪುಲ್ವಾಮ ಉಗ್ರರ ದಾಳಿಗೆ ಪ್ರತಿದಾಳಿ ನಡೆಸಿ 350ಕ್ಕೂ ಹೆಚ್ಚು ಉಗ್ರರನ್ನು ಸಂಹಾರ ಮಾಡಿದ ಭಾರತೀಯ ವಾಯುಸೇನೆಗೆ ಪಾಲಿಕೆಯ ಎಲ್ಲಾ ಸದಸ್ಯರು ಕೌನ್ಸಿಲ್‌ ಸಭೆಯಲ್ಲಿ ಪಕ್ಷಾತೀತವಾಗಿ ವಂದಿಸಿದರು. ಈ ವೇಳೆ “ಜೈ ಜವಾನ್‌’ ಘೋಷಣೆ ಕೂಗಿ ಸೈನಿಕರ ಶೌರ್ಯ ಪ್ರಶಂಸಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ