ರಾಜ್ಯಪಾಲರ ಪ್ರವೇಶಕ್ಕೆ ಬಿಜೆಪಿ ಆಗ್ರಹ

Team Udayavani, Jul 9, 2019, 3:07 AM IST

ಬೆಂಗಳೂರು: ಮೈತ್ರಿ ಸರ್ಕಾರಕ್ಕೆ ಸಂಖ್ಯಾ ಬಲ ಕುಸಿಯುತ್ತಿದ್ದಂತೆ ಬಿಜೆಪಿ ನಾಯಕರಲ್ಲಿ ಆಶಾ ಭಾವನೆ ಮೂಡಿದ್ದು, ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿ ಮಂಗಳವಾರ ಪ್ರತಿಭಟನೆ ನಡೆಸಲು ಮುಂದಾಗಿದೆ. ಜತೆಗೆ ರಾಜ್ಯಪಾಲರೂ ಮಧ್ಯ ಪ್ರವೇಶಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಡ ಹೇರಲಾರಂಭಿಸಿದೆ.

ನಗರದ ಡಾಲರ್ ಕಾಲೋನಿಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ನಿವಾಸಕ್ಕೆ ಸೋಮವಾರವೂ ಹಲವು ನಾಯಕರು ನಿರಂತರವಾಗಿ ಭೇಟಿಯಾಗಿ ಚರ್ಚೆ ನಡೆಸಿದರು. ಪ್ರಸಕ್ತ ರಾಜಕೀಯ ಬೆಳವಣಿಗೆ ಆಧರಿಸಿ ಪಕ್ಷ ಇಡಬೇಕಾದ ಹೆಜ್ಜೆಗಳ ಬಗ್ಗೆಯೂ ಸಮಾಲೋಚನೆ ನಡೆಸಿದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಮಾತನಾಡಿ, ರಾಜ್ಯ ರಾಜಕೀಯ ವಿದ್ಯಮಾನಗಳು ದಿನ ಕಳೆದಂತೆ ತೀವ್ರ ಸ್ವರೂಪ ಪಡೆಯುತ್ತಿದ್ದು, ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದೆ. ಶಾಸಕರನ್ನು ಸರಿಯಾಗಿ ನಡೆಸಿಕೊಳ್ಳಲಾಗದೆ ಅನಗತ್ಯವಾಗಿ ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಮೈತ್ರಿ ಪಕ್ಷಗಳು ಮಾಡುತ್ತಿವೆ. ಆಡಳಿತ ಪಕ್ಷದ ಶಾಸಕರ ಕ್ಷೇತ್ರಗಳು ಅಭಿವೃದ್ಧಿಯಾಗಿಲ್ಲ. ನೈತಿಕತೆ ಇದ್ದರೆ ಕುಮಾರಸ್ವಾಮಿ ಅವರು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.

ಮುಖ್ಯಮಂತ್ರಿಗಳು ರಾಜೀನಾಮೆ ನೀಡದಿದ್ದರೆ ರಾಜ್ಯಪಾಲರು ಮಧ್ಯಪ್ರವೇಶಿಸಿ ಸರ್ಕಾರವನ್ನು ವಜಾಗೊಳಿಸಬೇಕು. ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ನಾವು ಯಾರನ್ನೂ ಅಪಹರಣ ಮಾಡಿಲ್ಲ. ಸಚಿವ ಡಿ.ಕೆ.ಶಿವಕುಮಾರ್‌ ಸುಳ್ಳು ಹೇಳುವ ವ್ಯಕ್ತಿ. ಪಕ್ಷೇತರ ಶಾಸಕ ನಾಗೇಶ್‌ರಿಗೆ ಶಿವಕುಮಾರ್‌ ಕರೆ ಮಾಡಿರುವ ಬಗ್ಗೆ ತನಿಖೆಯಾಗಬೇಕು.

ಡಿ.ಕೆ.ಶಿವಕುಮಾರ್‌ ಅವರ ಪರಿಸ್ಥಿತಿ “ಕೈಯಲ್ಲಿ ಆಗದವನು ಮೈಯೆಲ್ಲಾ ಪರಚಿಕೊಂಡನಂತೆ’ ಎಂಬಂತಾಗಿದೆ. ನಾಗೇಶ್‌ ಅವರು ಖುದ್ದಾಗಿ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ. ಅವರು ನಮ್ಮೊಂದಿಗಿದ್ದಾರೆ. ಈಗ ನಾಗೇಶ್‌ ಅವರನ್ನು ಹೆದರಿಸುವವರಿದ್ದರೆ ಅದು ಡಿ.ಕೆ.ಶಿವಕುಮಾರ್‌ ಮಾತ್ರ ಎಂದು ಆರೋಪಿಸಿದರು.

ಟ್ವಿಟ್ಟರ್‌ನಲ್ಲಿ ಬಿಜೆಪಿಗೆ ಕಾಂಗ್ರೆಸ್‌ ಪ್ರಶ್ನೆ: ಶಾಸಕರ ರಾಜೀನಾಮೆ ಹಿಂದೆ ಬಿಜೆಪಿ ಪಾತ್ರವಿದೆ ಎಂದು ಆರೋಪಿಸುತ್ತಿರುವ ಕರ್ನಾಟಕ ಕಾಂಗ್ರೆಸ್‌, ಟ್ವಿಟ್ಟರ್‌ನಲ್ಲಿ ಒಂದಷ್ಟು ಛಾಯಾಚಿತ್ರಗಳನ್ನು ಪೋಸ್ಟ್‌ ಮಾಡಿ ಬಿಜೆಪಿಗೆ ಕೆಲ ಪ್ರಶ್ನೆಗಳನ್ನು ಕೇಳಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಆಪ್ತ ಸಹಾಯಕ ಸಂತೋಷ್‌, ಶಾಸಕರನ್ನು ಮುಂಬೈಗೆ ಕಳುಹಿಸುತ್ತಿರುವ ಚಿತ್ರ ಸೇರಿದಂತೆ ಮೂರು ಚಿತ್ರಗಳನ್ನು ಕರ್ನಾಟಕ ಕಾಂಗ್ರೆಸ್‌ ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿದೆ. ಜತೆಗೆ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರನನು ಉದ್ದೇಶಿಸಿ, “ಶಾಸಕರ ಖರೀದಿಗೆ ಎಷ್ಟು ಹಣ ಖರ್ಚು ಮಾಡಲಾಗಿದೆ?

ಮುಂಬೈಗೆ ಶಾಸಕರು ತೆರಳಲು ವಿಶೇಷ ವಿಮಾನ ವ್ಯವಸ್ಥೆ ಮಾಡಿದ್ದು ಯಾರು? ಮುಂಬೈನ ಹೋಟೆಲ್‌ನಲ್ಲಿ ಶಾಸಕರ ವಾಸ್ತವ್ಯ ವೆಚ್ಚ ಭರಿಸುತ್ತಿರುವವರು ಯಾರು? ಮಹಾರಾಷ್ಟ್ರ ಬಿಜೆಪಿ ನಾಯಕರು ಅವರನ್ನು ಏಕೆ ಭೇಟಿ ಮಾಡಬೇಕು?’ ಎಂಬ ಪ್ರಶ್ನೆಗಳನ್ನು ಕೇಳಿದ್ದಾರೆ. ಇದು ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ಧೋರಣೆಗೆ ಸಾಕ್ಷಿ ಎಂದು ಟ್ವೀಟ್‌ ಮಾಡಿದೆ.

ಬೆಂಗಳೂರು ಬಸ್‌ ಏರಿದ ಕರಾವಳಿ ಬಿಜೆಪಿ ಶಾಸಕರು: ರಾಜ್ಯದ ಸಮ್ಮಿಶ್ರ ಸರಕಾರ ಡೋಲಾಯಮಾನ ಪರಿಸ್ಥಿತಿಯಲ್ಲಿರುವಾಗ ಹೊಸ ಸರಕಾರ ರಚನೆಯ ಹುರುಪು ಹೊತ್ತು ಕರಾವಳಿಯ ಬಹುತೇಕ ಎಲ್ಲ ಬಿಜೆಪಿ ಶಾಸಕರು ಬೆಂಗಳೂರಿಗೆ ಸೋಮವಾರ ದೌಡಾಯಿಸಿದ್ದಾರೆ.

ಸೋಮವಾರ ಸಂಜೆ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಶಾಸಕರೆಲ್ಲರೂ ಪಾಲ್ಗೊಂಡಿದ್ದಾರೆ. ಹೊಸ ಸರಕಾರ ಬಿಜೆಪಿ ನೇತೃತ್ವದಲ್ಲಿ ರಚನೆಗೊಂಡರೆ ಕರಾವಳಿ ಜಿಲ್ಲೆಗಳಲ್ಲಿ ಅತ್ಯಧಿಕ ಶಾಸಕರನ್ನು ಬಿಜೆಪಿ ಹೊಂದಿರುವುದರಿಂದ ಎರಡೂ ಜಿಲ್ಲೆಗಳಿಗೆ ಕನಿಷ್ಠ ಇಬ್ಬರಿಗಾದರೂ ಸಚಿವ ಪದವಿ ಸಿಗುವ ಸಾಧ್ಯತೆ ಇದೆ. ಇದೂ ಕಾರ್ಯಕರ್ತರಿಗೆ, ಪಕ್ಷದ ಅಭಿಮಾನಿಗಳಿಗೆ ಹೊಸ ಆಶಾವಾದ ಹುಟ್ಟಿಸಿದೆ.

ಶಾಸಕರ ರಾಜೀನಾಮೆ ಕುರಿತ ನಿರ್ಣಯವನ್ನು ಮಂಗಳವಾರಕ್ಕೆ ನಿಗದಿಪಡಿಸಲಾಗಿದೆ. ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕು. ಕಾಂಗ್ರೆಸ್‌ನವರು ರಿವರ್ಸ್‌ ಆಪರೇಷನ್‌ ಮಾಡುವುದಾಗಿ ಹೇಳಿರುವುದರಿಂದ ನಮ್ಮ ಪಕ್ಷ ನಮ್ಮೆಲ್ಲರನ್ನೂ ಒಟ್ಟಿಗೆ ಇರಲು ಸೂಚಿಸಬಹುದು. ಅದರಂತೆ ನಾವು ನಡೆದುಕೊಳ್ಳುತ್ತೇವೆ. ನಮ್ಮ ಕರಾವಳಿಯ ಎಲ್ಲ ಶಾಸಕರು ಒಟ್ಟಿಗೆ ಇದ್ದೇವೆ’ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್‌ “ಉದಯವಾಣಿ’ಗೆ ತಿಳಿಸಿದರು.

ಸ್ಪೀಕರ್‌ಗೆ ಕಾಂಗ್ರೆಸ್‌ ದೂರು?: ರಾಜೀನಾಮೆ ಸಲ್ಲಿಸಿರುವ ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದಯಡಿ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್‌ಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

ಸೋಮವಾರ ರಮೇಶ್‌ ಕುಮಾರ್‌ ಕಚೇರಿಯಲ್ಲಿ ಹಾಜರಿಲ್ಲದ ಕಾರಣ ಅವರ ಆಪ್ತ ಕಾಯದರ್ಶಿಗೆ ದೂರು ನೀಡಿದ್ದಾರೆ ಎನ್ನಲಾಗಿದ್ದು, ಇಬ್ಬರೂ ನಾಯಕರು ಸ್ಪೀಕರ್‌ ಕಚೇರಿಗೆ ತೆರಳದೇ ತಮ್ಮ ಆಪ್ತರ ಕೈಯಲ್ಲಿ ದೂರಿನ ಪ್ರತಿ ಕೊಟ್ಟು ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ. ತಮಿಳು ನಾಡಿನ ಪ್ರಕರಣದ ಆಧಾರದಲ್ಲಿ ರಾಜೀನಾಮೆ ಸಲ್ಲಿಸಿರುವ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಮನೆಯಲ್ಲಿ ಸಂಗ್ರಹಿಸಿಟ್ಟ ನೀರಿನಿಂದ ಡೆಂಘೀ ಸೋಂಕು ಉಂಟುಮಾಡುವ ಸೊಳ್ಳೆಗಳು ಹೆಚ್ಚಾಗುತ್ತಿವೆಯೇ? ಆಗಿದ್ದರೆ ಸಂಗ್ರಹಿಸಿಟ್ಟ ಆ ನೀರಿಗೆ ಎರಡು ಹನಿ...

  • ಬೆಂಗಳೂರು: ಪಾಲಿಕೆಯಿಂದ ಮಿಶ್ರ ತ್ಯಾಜ್ಯ ವಿಲೇವಾರಿಗೆ ಬಳಕೆಯಾಗಿ, ಕಲುಷಿತಗೊಂಡಿರುವ ಬೊಮ್ಮನಹಳ್ಳಿ ವಲಯದ ಬಿಂಗೀಪುರದ ಡಂಪಿಂಗ್‌ ಯಾರ್ಡ್‌, ಕ್ರಮೇಣ ಸಹಜಸ್ಥಿತಿಗೆ...

  • ಬೆಂಗಳೂರು: "ಒಂದು ರಸ್ತೆಯಲ್ಲಿ ಒಂದು ಕಡೆ ಮಾತ್ರ ಗಣಪತಿ ಪ್ರತಿಷ್ಠಾಪನೆ ಮಾಡುವಂತೆ ತಿಳಿಸಲು ಹೋದರೆ, ನಮ್ಮನ್ನೇ "ಹಿಂದೂ ವಿರೋಧಿಗಳು' ಎನ್ನುತ್ತಾರೆ' ಎಂದು ಮೇಯರ್‌...

  • ಬೆಂಗಳೂರು: ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಲು ಸಂಘಟನೆಗಳ ನಾಯಕರು ಸದಾ ಸಕ್ರಿಯವಾಗಿರಬೇಕು ಎಂದು ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಹೇಳಿದರು. ಶಾಸಕರ...

  • ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ, ಅನರ್ಹತೆಗೆ ಸಂಬಂಧಪಟ್ಟಂತೆ ಬುಧವಾರ ಸುಪ್ರೀಂ ಕೋರ್ಟ್‌ ಮಧ್ಯಂತರ ತೀರ್ಪು ನೀಡುತ್ತಿದ್ದಂತೆ ಕಾಂಗ್ರೆಸ್‌ ನಾಯಕರು, ಮುಖ್ಯಮಂತ್ರಿ...

ಹೊಸ ಸೇರ್ಪಡೆ