ಎಸ್‌.ಎಂ.ಕೃಷ್ಣರನ್ನುಭೇಟಿಯಾದ ಬಿಎಸ್‌ವೈ

Team Udayavani, Jan 3, 2019, 6:30 AM IST

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರನ್ನು ಬುಧವಾರ ಭೇಟಿಯಾದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದರು. ಸದಾಶಿವನಗರದ ನಿವಾಸಕ್ಕೆ ಯಡಿಯೂರಪ್ಪ ಅವರು ಆಗಮಿಸುತ್ತಿದ್ದಂತೆ ಹೊರಗೆ ಬಂದ ಎಸ್‌.ಎಂ.ಕೃಷ್ಣ ಅವರು ಹೂಗುತ್ಛ ನೀಡಿ ಆತ್ಮೀಯವಾಗಿ ಬರ ಮಾಡಿಕೊಂಡರು. ನಿನ್ನೆಯೇ ಬರಬೇಕಿತ್ತು, ಸಾಧ್ಯವಾಗಿರಲಿಲ್ಲ ತುಸು ತಡವಾಯಿತು ಎಂದು ಯಡಿಯೂರಪ್ಪ ಅವರು ಹೇಳಿದಾಗ, ಎಸ್‌.ಎಂ.ಕೃಷ್ಣ ಅವರು ನಗುತ್ತಲೇ ಪರವಾಗಿಲ್ಲ ಬಿಡಿ ಎಂದರು.

ಉಭಯ ನಾಯಕರು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ ಬಳಿಕ ಪ್ರತಿಕ್ರಿಯೆ ನೀಡಿದ ಎಸ್‌.ಎಂ.ಕೃಷ್ಣ , ಹೊಸ ವರ್ಷದ ಶುಭಾಶಯ ಕೋರಲು ತಮ್ಮ ನಿವಾಸಕ್ಕೆ ಬರುವುದಾಗಿ ಯಡಿಯೂರಪ್ಪ ಅವರಿಗೆ ದೂರವಾಣಿ ಕರೆ ಮಾಡಿದ್ದೆ. ಆದರೆ ತಾವೇ ಬರುವುದಾಗಿ ಹೇಳಿ ಅವರೇ ಬಂದಿದ್ದಾರೆ. ಲೋಕಸಭೆ ಚುನಾವಣೆ ಕುರಿತಂತೆ ಚರ್ಚಿಸಿದ್ದೇವೆ.

ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುವ ವಿಚಾರದ ಬಗ್ಗೆಯೂ ಯಡಿಯೂರಪ್ಪ ಅವರು ಪ್ರಸ್ತಾಪಿಸಿದ್ದಾರೆ. ನಾನು ಸಹ ಅದೇ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದೇನೆ ಎಂದು ಹೇಳಿದರು. 

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶವಿಲ್ಲ. ಸಚಿವ ಡಿ.ಕೆ. ಶಿವಕುಮಾರ್‌ ಅವರು ಹೊಸ ವರ್ಷದ ಶುಭಾಶಯ ಕೋರಲು ಆಗಮಿಸಿದ್ದರು. ಕಾಂಗ್ರೆಸ್‌ ಪಕ್ಷದಲ್ಲಿ ನನ್ನ ಬೆಂಬಲಿಗರು ಅಂತ ಏನೂ ಇಲ್ಲ. ನನಗೆ ಬಹಳ ಮಂದಿ ಪರಿಚಯಸ್ಥರಿದ್ದಾರೆ ಎಂದು ಹೇಳಿದರು.

ಪುತ್ರಿ ಶಾಂಭವಿ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಕುರಿತಾದ ಮಾತುಗಳ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಸ್‌.ಎಂ.ಕೃಷ್ಣ, ಈಗಷ್ಟೇ ಶಾಂಭವಿ ಹೆಸರನ್ನು ನಿಮ್ಮಿಂದ ಕೇಳುತ್ತಿದ್ದೇನೆ ಎಂದು ಹೇಳಿದರು. 

ಲೋಕಸಭಾ ಚುನಾವಣೆಗೆ ಎಸ್‌.ಎಂ.ಕೃಷ್ಣ ಅವರ ಸಹಕಾರದ ಬಗ್ಗೆ ಮಾತುಕತೆ ನಡೆಸಿದ್ದೇವೆ. ಎಲ್ಲೆಲ್ಲಿ ಸಹಕಾರ ಅಗತ್ಯವಿದೆ ಎಂಬುದನ್ನು ಹೇಳಲಾಗಿದ್ದು, ಪ್ರಚಾರದಲ್ಲಿ ಪಾಲ್ಗೊಳ್ಳಲು ಅವರೂ ಒಪ್ಪಿದ್ದಾರೆ. ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಅವರ ಸಹಕಾರದಿಂದಲೇ ಎರಡೂವರೆ ಲಕ್ಷ ಮತಗಳನ್ನು ಬಿಜೆಪಿ ಪಡೆದಿತ್ತು. ಮುಂದೆಯೂ ಅವರ ಸಹಕಾರ ಸಹಾಯವಾಗಲಿದೆ. 
 ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ