ಚೀನಾ ಜತೆ ಸ್ಪರ್ಧೆ ಕೈಗಾರಿಕಾ ಯೋಜನೆಗೆ ಸಂಪುಟ ಒಪ್ಪಿಗೆ
Team Udayavani, Sep 7, 2018, 6:00 AM IST
ಬೆಂಗಳೂರು: ಕೈಗಾರಿಕಾ ವಲಯದಲ್ಲಿ ಉತ್ಪಾದನಾ ಸಾಮರ್ಥ್ಯ ವೃದ್ಧಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಜೆಟ್‌ನಲ್ಲಿ ಘೋಷಿಸಿದ್ದ “ಚೀನಾ ದೇಶದೊಂದಿಗೆ ಸರ್ಕಾರಾತ್ಮಕ ಸ್ಪರ್ಧೆ’ ಯೋಜನೆಯಡಿ ರಾಜ್ಯದ ವಿವಿಧೆಡೆ ಒಂಬತ್ತು ಕೈಗಾರಿಕಾ ಕ್ಲಸ್ಟರ್‌ಗಳನ್ನು ಸ್ಥಾಪಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ಅನುಮೋದನೆ ನೀಡಲಾಗಿದ್ದು, ಸೌರಶಕ್ತಿ, ವಸ್ತುಗಳು, ಎಲೆಕ್ಟ್ರಿಕ್ ಲೈಟಿಂಗ್ ವಸ್ತುಗಳು, ಸ್ನಾನಗೃಹ ವಸ್ತುಗಳು, ಎಲೆಕ್ಟ್ರಿಕ್ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ ಆಟಿಕೆಗಳ ಉತ್ಪಾದನಾ ಕ್ಲಸ್ಟರ್‌ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.
ಈ ಯೋಜನೆಯಡಿ ಕರ್ನಾಟಕದ ಯಶಸ್ವಿ ಉದ್ಯಮಿಗಳ ನೇತೃತ್ವದಲ್ಲಿ ಕಲಬುರ್ಗಿ ಜಿಲ್ಲೆಯಲ್ಲಿ ಸೋಲಾರ್ ವಿದ್ಯುತ್ತಿಗೆ ಸಂಬಂಧಿಸಿದ ಉತ್ಪನ್ನಗಳು, ಚಿತ್ರದುರ್ಗ ಜಿಲ್ಲೆಯಲ್ಲಿ ಗೃಹೋಪಯೋಗಿ ಎಲ್‌ಇಡಿ ಲೈಟ್ ಉದ್ಯಮ, ಕೊಪ್ಪಳ ಜಿಲ್ಲೆಯಲ್ಲಿ ಎಲೆಕ್ಟ್ರಾನಿಕ್ ಆಟಿಕೆ ಉದ್ಯಮ, ಮೈಸೂರು ಜಿಲ್ಲೆಯಲ್ಲಿ ಡಿಜಿಟಲ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಐಸಿಬಿ ಚಿಪ್ ಉದ್ಯಮ, ಬಳ್ಳಾರಿಯಲ್ಲಿ ವಸ್ತ್ರ ಉದ್ಯಮ, ಚಿಕ್ಕಬಳ್ಳಾಪುರದಲ್ಲಿ ಮೊಬೈಲ್ ಫೋನ್ ಬಿಡಿ ಭಾಗಗಳ ಘಟಕ, ತುಮಕೂರಿನಲ್ಲಿ ನ್ಪೋರ್ಟ್ಸ್ ಮತ್ತು ಫಿಟ್‌ನೆಸ್ ವಸ್ತುಗಳ ತಯಾರಿಕಾ ಘಟಕ ಸೇರಿದಂತೆ ಹಾಸನ, ತುಮಕೂರು, ಬೀದರ್‌ಗಳಲ್ಲಿ ಒಟ್ಟು ಒಂಬತ್ತು ಕೈಗಾರಿಕಾ ಕ್ಲಸ್ಟರ್‌ಗಳನ್ನು ಸ್ಥಾಪಿಸಲಾಗುತ್ತದೆ.
ಸಂಪುಟ ಸಭೆ ಬಳಿಕ ಈ ಕುರಿತು ವಿವರ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ, ಇದಕ್ಕೆ ಪೂರಕವಾಗಿ ವಿಷನ್ ಗ್ರೂಪ್ ರಚಿಸಲು ಮತ್ತು ಸಂಬಂಧಿಸಿದ ಉದ್ಯಮಗಳಿಗೆ ಬೇಕಾದ ಕೌಶಲ್ಯಭರಿತ ನೌಕರರನ್ನು ಸೃಷ್ಟಿಸುವ ಉದ್ದೇಶದಿಂದ 500 ಕೋಟಿ ರೂ. ವೆಚ್ಚದಲ್ಲಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ಕೂಡ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದರು.
ಎಲೆಕ್ಟ್ರಾನಿಕ್ಸ್ ಹಾರ್ಡ್‌ವೇರ್ ಉದ್ಯಮಕ್ಕೆ ಆದ್ಯತೆ:
ಇದಲ್ಲದೆ ಮಾಹಿತಿ ತಂತ್ರಜ್ಞಾನದ ಮಾದರಿಯಲ್ಲಿ ಎಲೆಕ್ಟ್ರಾನಿಕ್ಸ್ ಹಾರ್ಡ್‌ವೇರ್ ಕ್ಷೇತ್ರವನ್ನೂ ಅಭಿವೃದ್ಧಿಗೆ ತರಲು ಆ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಇಂಡಿಯನ್ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿ ಕಂಡಕ್ಟರ್ ಅಸೋಸಿಯೇಷನ್ ಜತೆ ಒಪ್ಪಂದ ಮಾಡಿಕೊಂಡು 51 ಕೋಟಿ ರೂ. ವೆಚ್ಚದಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಐದು ವರ್ಷದ ಅವಧಿಗೆ ಸರ್ಕಾರದಿಂದ 21.53 ಕೋಟಿ ರೂ. ಮಂಜೂರು ಮಾಡಲು ಸಮ್ಮತಿಸಲಾಗಿದೆ. ಉಳಿದ ಮೊತ್ತವನ್ನು ಇಂಡಿಯನ್ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿ ಕಂಡಕ್ಟರ್ ಅಸೋಸಿಯೇಷನ್ ಭರಿಸುತ್ತದೆ. ಈ ರೀತಿಯ ಕ್ರಮ ದೇಶದಲ್ಲೇ ಪ್ರಥಮ ಎಂದರು.
ಜತೆಗೆ ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಚಳ್ಳಕೆರೆ, ಹಾವೇರಿ, ಮಡಿಕೇರಿ, ಗೌರಿಬಿದನೂರು ಮತ್ತು ಹುಮ್ನಾಬಾದ್‌ಗಳಲ್ಲಿ ಸರ್ಕಾರಿ ಟೂಲ್ಸ್ ಆ್ಯಂಡ್ ಟ್ರೈನಿಂಗ್ ಸೆಂಟರ್‌ಗಳನ್ನು 49.35 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಿಸಲು ಕೂಡ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಸಂಪುಟದ ಇತರೆ ಪ್ರಮುಖ ನಿರ್ಧಾರಗಳು
– ರಾಷ್ಟ್ರೀಯ ಉತ್ಛತಮ ಶಿಕ್ಷಣ ಅಭಿಯಾನದಡಿ ಉನ್ನತ ಶಿಕ್ಷಣ ಇಲಾಖೆ ಆಶ್ರಯದಲ್ಲಿ 24 ಕೋಟಿ ರೂ. ವೆಚ್ಚದಲ್ಲಿ ರಾಜ್ಯದ ನಾನಾ ಕಡೆ ಕಾಲೇಜು ಕಟ್ಟಡಗಳ ಅಭಿವೃದ್ಧಿ.
– ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ 24 ಕೋಟಿ ರೂ. ವೆಚ್ಚದಲ್ಲಿ ಮಾದರಿ ಪದವಿ ಕಾಲೇಜುಗಳ ಸ್ಥಾಪನೆ.
– ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಸಂಖ್ಯೆ ಹೆಚ್ಚಾಗಿರುವ ಹಾವೇರಿ, ಚಿತ್ರದುರ್ಗ, ಕೋಲಾರ, ಚಾಮರಾಜನಗರ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಆ ಸಮುದಾಯದವರಿಗೆ 267.19 ಕೋಟಿ ರೂ. ವೆಚ್ಚದಲ್ಲಿ ವಸತಿ ಸಹಿತ ಪದವಿ ಕಾಲೇಜುಗಳ ಸ್ಥಾಪನೆ.
– ಹಾಸನ ಜಿಲ್ಲೆ ಹೊಳೇನರಸೀಪುರ ತಾಲೂಕು ಹರದನಹಳ್ಳಿಯಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ವಸತಿ ಸಹಿತ ಮಹಿಳಾ ಪದವಿಪೂರ್ವ ಕಾಲೇಜು ನಿರ್ಮಾಣ.
– ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ 27 ಕೋಟಿ ರೂ. ವೆಚ್ಚದಲ್ಲಿ ಇನ್‌ಸ್ಟಾಂಟ್ ಸಿಟಿ ಸ್ಕ್ಯಾನರ್ ಮತ್ತು ಬೋನ್‌ಮ್ಯಾರೋ ಟ್ರಾನ್ಸ್‌ಪ್ಲಾಂಟ್ ಘಟಕ ಸ್ಥಾಪನೆ.
– ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕೆಎಸ್ ಆ್ಯಂಡ್ ಡಿಎಲ್ ಮೂಲಕ 17.83 ಕೋಟಿ ರೂ. ವೆಚ್ಚದಲ್ಲಿ ನೈರ್ಮಲ್ಯ ಕಿಟ್ ವಿತರಣೆ.
– ಹಾಸನ ಮತ್ತು ಕಾರವಾರದ ಸರ್ಕಾರಿ ವೈದ್ಯ ಕಾಲೇಜುಗಳಲ್ಲಿ ತಲಾ 18.25 ಕೋಟಿ ರೂ. ವೆಚ್ಚದಲ್ಲಿ ಕ್ಯಾನ್ಸರ್ ಕೇರ್ ಘಟಕ ಸ್ಥಾಪನೆ.
– ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಮತ್ತು ಯಳಂದೂರು ತಾಲೂಕುಗಳ 64 ಹಳ್ಳಿಗಳಿಗೆ 113.60 ಕೋಟಿ ರೂ. ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ.
– ರಾಯಚೂರು ಜಿಲ್ಲೆ ಲಿಂಗಸ್ಗೂರು ತಾಲೂಕಿನ 10 ಗ್ರಾಮಗಳಿಗೆ 25.52 ಕೋಟಿ ರೂ. ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ.
– ಚನ್ನಪಟ್ಟಣ, ರಾಮನಗರ ಕೇಂದ್ರಗಳು ಮತ್ತು ಸುತ್ತಲಿನ 8 ಹಳ್ಳಿಗಳಿಗೆ ನೆಟ್ಕಲ್ ಜಲಾಶಯದಿಂದ ನೀರು ಪೂರೈಸಲು 456 ಕೋಟಿ ರೂ. ವೆಚ್ಚದ ಯೋಜನೆ ಅನುಷ್ಠಾನ.
ಅದಾನಿ ಗ್ರೂಪ್‌ಗೆ ರಾಜ್ಯದಲ್ಲೂ ಭೂಮಿ ಖರೀದಿಸಲು ಒಪ್ಪಿಗೆ
ಬೆಂಗಳೂರು: ಒಂದೆಡೆ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಉದ್ಯಮಿ ಗೌತಮ್ ಅದಾನಿಗೆ ಮಣೆ ಹಾಕುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದ್ದರೆ, ಇತ್ತ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅದಾನಿ ಗ್ರೂಪ್ಸ್‌ನ ವಾರ್ದಾ ಸೋಲಾರ್ ಲಿಮಿಟೆಡ್‌ಗೆ ಸೋಲಾರ್ ಘಟಕಗಳನ್ನು ಸ್ಥಾಪಿಸಲು ಉತ್ತರ ಕರ್ನಾಟಕದ ಮೂರು ಕಡೆ ರೈತರಿಂದ 601 ಎಕರೆ ಭೂಮಿಯನ್ನು ನೇರವಾಗಿ ಖರೀದಿಸಲು ಅನುಮತಿ ನೀಡಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ವಾರ್ದಾ ಸೋಲಾರ್ ಲಿಮಿಟೆಡ್‌ಗೆ ಸೋಲಾರ್ ಘಟಕಗಳನ್ನು ಸ್ಥಾಪಿಸಲು ರೈತರಿಂದ ನೇರವಾಗಿ ಭೂಮಿ ಖರೀದಿಸಲು ಒಪ್ಪಿಗೆ ನೀಡಲಾಗಿದೆ.
ಉತ್ತರ ಕರ್ನಾಟಕ ಭಾಗದ ಯಲಬುರ್ಗಾ ತಾಲೂಕಿನಲ್ಲಿ 44 ಎಕರೆ, ಔರಾದ್‌ನಲ್ಲಿ 282 ಎಕರೆ ಮತ್ತು ವಿಜಯಪುರದಲ್ಲಿ 275 ಎಕರೆ ಭೂಮಿಯನ್ನು ರೈತರಿಂದ ನೇರವಾಗಿ ಖರೀದಿಸಲು ಒಪ್ಪಿಗೆ ಸೂಚಿಸಲಾಗಿದೆ. ಇಲ್ಲಿ ತಲಾ 50 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಘಟಕಗಳನ್ನು ವಾರ್ದಾ ಸೋಲಾರ್ ಲಿಮಿಟೆಡ್ ಸ್ಥಾಪಿಸಲಿದೆ.
ಇದರ ಜತೆಗೆ ನಾಸವದತ್ತ ಸಿಮೆಂಟ್ಸ್‌ಗೆ ಸಿಮೆಂಟ್ ಘಟಕ ಸ್ಥಾಪಿಸಲು ಸೇಡಂ ತಾಲೂಕಿನಲ್ಲಿ 655 ಎಕರೆ ಭೂಮಿಯನ್ನು ರೈತರಿಂದ ನೇರವಾಗಿ ಖರೀದಿಸಲು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿಧಾನ ಪರಿಷತ್ ಚುನಾವಣೆ: ಏಳೂ ಅಭ್ಯರ್ಥಿಗಳು ಅವಿರೋಧ ಆಯ್ಕೆ
ನದಿಯಲ್ಲಿ ಬಿಎಂಡಬ್ಲ್ಯೂ ಕಾರು ಮುಳುಗಿಸಿದ ಮಾಲೀಕ: ವಿಚಾರಣೆಯಲ್ಲಿ ಅಚ್ಚರಿ ಮಾಹಿತಿ ಬಯಲು
ನೆಹರುಗೂ ಮೋದಿಗೂ ಆಕಾಶ ಭೂಮಿಗಿರುವ ಅಂತರ : ಸಿದ್ದರಾಮಯ್ಯ
ಬೆಂಗಳೂರು ಮೂಲ ಸೌಕರ್ಯ ನವೆಂಬರ್ ಹೊತ್ತಿಗೆ ಸರಿ ಪಡಿಸುತ್ತೇವೆ : ಸಿಎಂ
ದೇಶಕ್ಕೆ ಅಪಾಯವಿರುವುದು ಕುಟುಂಬವಾದಿ ಪಕ್ಷದಿಂದಲ್ಲ,ಬಿಜೆಪಿಯಂಥ ಕೋಮುವಾದಿ ಪಕ್ಷದಿಂದ:ಎಚ್ಡಿಕೆ