ಮೆಜೆಸ್ಟಿಕ್‌ ಸುತ್ತ ಸಿಸಿ ಕ್ಯಾಮೆರಾ ಕಣ್ಗಾವಲು

Team Udayavani, May 15, 2019, 3:08 AM IST

ಬೆಂಗಳೂರು: ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟ ಹಾಗೂ ನಗರದ ಮೆಟ್ರೋ ನಿಲ್ದಾಣದಲ್ಲಿ ಇಬ್ಬರು ವ್ಯಕ್ತಿಗಳು ಶಂಕಾಸ್ಪದ ವರ್ತನೆ ತೋರಿದ ಪ್ರಕರಣಗಳಿಂದ ಎಚ್ಚೆತ್ತುಕೊಂಡಿರುವ ಪಶ್ಚಿಮ ವಲಯ ಪೊಲೀಸರು, ಮೆಜೆಸ್ಟಿಕ್‌ ಸುತ್ತಮುತ್ತಲ ಪ್ರದೇಶಗಳಲ್ಲಿನ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಪ್ರಸ್ತುತ ಇರುವ ಭದ್ರತೆ ಹಾಗೂ ಹೆಚ್ಚಿನ ಭದ್ರತೆಯ ಕ್ರಮಗಳ ಕುರಿತು ನಗರ ಪೊಲೀಸ್‌ ಆಯುಕ್ತ ಟಿ.ಸುನಿಲ್‌ಕಮಾರ್‌ ಅವರಿಗೆ ಲಿಖೀತ ರೂಪದಲ್ಲಿ ವರದಿ ನೀಡಿದ್ದಾರೆ.

ಚಿಕ್ಕಪೇಟೆ ಉಪ ವಿಭಾಗದ ಉಪ್ಪಾರಪೇಟೆ, ಸಿಟಿ ಮಾರುಕಟ್ಟೆ, ಕಲಾಸಿಪಾಳ್ಯ, ಕಾಟನ್‌ಪೇಟೆ, ಚಾಮರಾಜಪೇಟೆ ಹಾಗೂ ಕೆಎಸ್‌ಆರ್‌ಟಿಸಿ ಹೊರ ಠಾಣೆಯ ವ್ಯಾಪ್ತಿಗೆ ಬರುವ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ ನಿಲ್ದಾಣಗಳು, ಮೆಟ್ರೋ ನಿಲ್ದಾಣಗಳು, ರೈಲು ನಿಲ್ದಾಣ, ಸಿಟಿ ಮಾರುಕಟ್ಟೆ, ಮಸೀದಿ, ಚರ್ಚ್‌ಗಳು, ಮಾಲ್‌ಗ‌ಳು ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರಸ್ತುತ ಅಳವಡಿಸಿರುವ ಸಿಸಿಕ್ಯಾಮೆರಾಗಳ ಕಾರ್ಯಕ್ಷಮತೆ ಹಾಗೂ ಇತರೆ ಭದ್ರತೆ ಕುರಿತು ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸಲಾಗಿದೆ.

100 ಕ್ಯಾಮೆರಾಗೆ ಬೇಡಿಕೆ: ಪರಿಶೀಲನೆ ವೇಳೆ ಐದು ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿರುವ ಶೇ.45ರಿಂದ50ರಷ್ಟು ಸಿಸಿ ಕ್ಯಾಮೆರಾಗಳ ಕಾರ್ಯಕ್ಷಮೆತೆ ಬಹುತೇಕ ಕ್ಷೀಣಿಸಿದೆ ಎಂಬುದು ತಿಳಿದು ಬಂದಿದ್ದು, ಆದಷ್ಟು ಬೇಗ ಆ ಸ್ಥಳಗಳಲ್ಲಿ ಪರ್ಯಾಯ ಸಿಸಿ ಕ್ಯಾಮೆರಾಗಳು ಹಾಗೂ ಇತರೆ ನಿಗದಿತ ಸ್ಥಳದಲ್ಲಿ ಹೆಚ್ಚುವರಿಯಾಗಿ ಸುಮಾರು 100ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಸೂಚನೆ ನೀಡಬೇಕು ಹಾಗೂ ಇತರೆ ಭದ್ರತೆ ವಿಚಾರವಾಗಿಯೂ ಮನವಿಯಲ್ಲಿ ತಿಳಿಸಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.

ಈ ಕುರಿತು ಪ್ರತಿಕ್ರಿಯಿಸಿದ ಪಶ್ಚಿಮ ವಲಯ ಡಿಸಿಪಿ ರವಿ ಡಿ. ಚೆನ್ನಣ್ಣನವರ್‌, ಸಹಾಯಕ ಪೊಲೀಸ್‌ ಆಯುಕ್ತ ಎನ್‌.ಆರ್‌. ಮಹಾಂತರೆಡ್ಡಿ ನೇತೃತ್ವದಲ್ಲಿ ಚಿಕ್ಕಪೇಟೆ ಉಪ ವಿಭಾಗದಲ್ಲಿನ ಐದು ಠಾಣಾ ವ್ಯಾಪ್ತಿಗಳಲ್ಲಿನ ಸಾರ್ವಜನಿಕ ಸ್ಥಳಗಳ ಭದ್ರತೆ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, ಈ ಪ್ರದೇಶದಲ್ಲಿರುವ ಎಷ್ಟು ಸಿಸಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿವೆ,

ಎಷ್ಟು ಹಾಳಾಗಿವೆ, ನಿಲ್ದಾಣಗಳಲ್ಲಿರುವ ಅನಧಿಕೃತ ಪ್ರವೇಶ ದ್ವಾರಗಳ ನಿರ್ಬಂಧ ಹಾಗೂ ಇತರೆ ಭದ್ರತೆ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದ್ದು, ಈ ಸಂಬಂಧ ನಗರ ಪೊಲೀಸ್‌ ಆಯುಕ್ತರಿಗೆ ಲಿಖೀತ ಮಾಹಿತಿ ನೀಡಿದ್ದೇವೆ. ಇದೇ ವೇಳೆ ಹೆಚ್ಚುವರಿ ಸಿಸಿ ಕ್ಯಾಮೆರಾ ಹಾಗೂ ಇತರೆ ಭದ್ರತೆಗೆ ಕ್ರಮಕೈಗೊಳ್ಳಲು ಮನವಿ ಕೂಡ ಮಾಡಿದ್ದೇವೆ ಎಂದು ವಿವರಿಸಿದರು.

ತೀವ್ರತೆ ಹೆಚ್ಚಿಸಿದ ಘಟನೆಗಳು: ಶ್ರೀಲಂಕಾದ ಕೊಲಂಬೋದಲ್ಲಿ ಸರಣಿ ಸ್ಫೋಟ ನಡೆಯುತ್ತಿದ್ದಂತೆ ದೇಶಾದ್ಯಂತ ಹೈ ಅಲರ್ಟ್‌ ಘೋಷಣೆ ಮಾಡಲಾಗಿತ್ತು. ಈ ಸಂದರ್ಭದಲ್ಲಿಯೇ ಮೆಜೆಸ್ಟಿಕ್‌ ಸುತ್ತಮುತ್ತ ಹೆಚ್ಚಿನ ಭದ್ರತೆ ಬಗ್ಗೆ ಸಭೆ ಕೂಡ ನಡೆಸಲಾಗಿತ್ತು. ಈ ಮಧ್ಯೆ ಮೆಟ್ರೋ ನಿಲ್ದಾಣದಲ್ಲಿ ನಡೆದ ಘಟನೆಯಿಂದ ಭದ್ರತೆ ವಿಚಾರ ಇನ್ನಷ್ಟು ತೀವ್ರತೆ ಪಡೆದುಕೊಂಡಿತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸಾಜಿದ್‌ ಖಾನ್‌ ಶಹನಾಯಿ ವಾದಕ: ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದ ನಡೆ ತೋರಿ ಪೊಲೀಸರಿಗೆ ಸಿಕ್ಕಿಬಿದ್ದ ರಾಜಸ್ಥಾನದ ಜುನ್‌ಜುನು ಜಿಲ್ಲೆಯ ಸಾಜಿದ್‌ ಖಾನ್‌, ಕೂಲಿ ಕಾರ್ಮಿಕ ಹಾಗೂ ಶಹನಾಯಿ ವಾದಕ ಎಂಬುದು ಪೊಲೀಸರ ತನಿಖೆ ವೇಳೆ ಪತ್ತೆಯಾಗಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿದ ಡಿಸಿಪಿ ರವಿ ಡಿ. ಚೆನ್ನಣ್ಣನವರ್‌, ರಾಜಸ್ತಾನದ ಜುನ್‌ಜುನು ಜಿಲ್ಲೆಯ ನಿರಾಧುಂಗ್‌ ಗ್ರಾಮಕ್ಕೆ ನಗರ ಪೊಲೀಸರ ತಂಡ ತೆರೆಳಿ ಆತನ ಪೂರ್ವಾಪರ ಪರಿಶೀಲನೆ ನಡೆಸಿದೆ. ಅಲ್ಲದೆ, ಆತ ವಿವಾಹ ಸಮಾರಂಭಗಳಲ್ಲಿ ಶಹನಾಯಿ ಬಾರಿಸುತ್ತಿದ್ದ. ಜತೆ ಕೂಲಿ ಕಾರ್ಮಿಕ ಕೂಡ. ಆತ ವಾಸಿಸುವ ಗ್ರಾಮದಲ್ಲಿ ಶೇ.80 ಮಂದಿ ಸೈನಿಕರು ಹಾಗೂ ಶಿಕ್ಷಕರಿದ್ದಾರೆ. ಆತನ ಪತ್ನಿ ಗೃಹಿಣಿಯಾಗಿದ್ದಾರೆ ಎಂದು ಹೇಳಿದರು.

ರಾಜಸ್ತಾನದ ಯಾವುದೇ ಪೊಲೀಸ್‌ ಠಾಣೆಯಲ್ಲಿ ಸಾಜಿದ್‌ ಖಾನ್‌ ವಿರುದ್ಧ ಅಪರಾಧ ಪ್ರಕರಣಗಳು ದಾಖಲಾಗಿಲ್ಲ. ಮೂರು ವರ್ಷಗಳಿಂದ ನಗರದಲ್ಲಿ ವಾಸವಾಗಿರುವ ರಾಜಸ್ತಾನ ಮೂಲದ ಅಬ್ದುಲ್‌ ಎಂಬುವರ ಸಹಾಯದಿಂದ ರಂಜಾನ್‌ ಸಂದರ್ಭದಲ್ಲಿ ಬೆಂಗಳೂರಿಗೆ ಬಂದು ಸಾಜಿದ್‌ ಭಿಕ್ಷಾಟನೆ (ದಾನ ಪಡೆಯುವುದು) ಮಾಡುತ್ತಿದ್ದರು. ಅಲ್ಲದೆ, ಸಾಜಿದ್‌ ಖಾನ್‌ನ ಕೆಲ ಸಂಬಂಧಿಕರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ ಎಂದು ಮಾಹಿತಿ ನೀಡಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ