ನಾಗರಿಕರಿಂದ ಮೇಯರ್‌ಗೆ ದೂರು: ಅಧಿಕಾರಿಗಳಿಗೆ ತರಾಟೆ

Team Udayavani, Jun 26, 2019, 3:07 AM IST

ಬೆಂಗಳೂರು: ಮೇಯರ್‌ ಗಂಗಾಂಬಿಕೆ ಮಂಗಳವಾರ ನಗರದ ವಿವಿಧೆಡೆ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ನಡೆಸುವ ವೇಳೆ ಸಾರ್ವಜನಿಕರು ದೂರುಗಳ ಮಳೆಗೈದರು.

ಮೈಸೂರು ರಸ್ತೆ ಗಾಳಿ ಆಂಜನೇಯ ದೇವಸ್ಥಾನದ ಸಮೀಪದ ನಿವಾಸಿಗಳು ರಾಜಕಾಲುವೆ ಮತ್ತು ಒಳಚರಂಡಿ ನೀರು ಮನೆಗಳಿಗೆ ನುಗ್ಗುತ್ತಿರುವುದರ ಬಗ್ಗೆ ಖುದ್ದು ಮೇಯರ್‌ ಅವರನ್ನು ಕರೆದುಕೊಂಡು ಹೋಗಿ ತೋರಿಸಿದ ಪ್ರಸಂಗವೂ ನಡೆಯಿತು. ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಸುತ್ತಮುತ್ತಲಿನ ಕಳಪೆ ಕಾಮಗಾರಿಯನ್ನು ಪರಿಶೀಲಿಸಿ ಮೇಯರ್‌ ಗುತ್ತಿಗೆದಾರರನ್ನು ಕೂಡಲೇ ಬದಲಾಯಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜುಲೈತಿಂಗಳಲ್ಲಿ ಕಾಮಗಾರಿ ಪೂರ್ಣ: ನಗರದ ಹೊಸಕೆರೆಹಳ್ಳಿಯ ಮುತ್ತುರಾಜ ಜಂಕ್ಷನ್‌ ಬಳಿ ನಿರ್ಮಾಣವಾಗುತ್ತಿರುವ ಕೇಳಸೇತುವೆ ಕಾಮಗಾರಿ ಮತ್ತು ಮೈಸೂರು ರಸ್ತೆ ಗಾಳಿ ಆಂಜನೇಯ ದೇವಸ್ಥಾನದ ಸಮೀಪ ನಿರ್ಮಾಣವಾಗುತ್ತಿರುವ ವೈಟ್‌ಟಾಪಿಂಗ್‌ ರಸ್ತೆಯ ಕಾಮಗಾರಿ ಪರಿಶೀಲನೆಯನ್ನು ಮೇಯರ್‌ ಮಂಗಳವಾರ ನಡೆಸಿದರು. ಮುತ್ತುರಾಜ್‌ ಜಂಕ್ಷನ್‌ ಬಳಿ ನಿರ್ಮಾಣವಾಗುತ್ತಿರುವ ಕೇಳಸೇತುವೆ ಕಾಮಗಾರಿಯನ್ನು ಪರಿಶೀಲಿಸಿ, ಕಾಮಗಾರಿ ಬಹುತೇಕ ಮುಗಿದಿದ್ದು, ಜುಲೈ ತಿಂಗಳ ಅಂತ್ಯದ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಮೈಸೂರು ರಸ್ತೆಯಲ್ಲಿ ವೈಟ್‌ ಟಾಪಿಂಗ್‌ ಕಾಮಗಾರಿ ಪರಿಶೀಲನೆ ವೇಳೆ ಸಾರ್ವಜನಿಕರು, ಇಲ್ಲಿ ವೈಟ್‌ಟಾಪಿಂಗ್‌ ಕಾಮಗಾರಿ ನಡೆಸುತ್ತಿರುವುದರಿಂದ ನಿತ್ಯವೂ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಪಾದಚಾರಿ ಮಾರ್ಗಗಳು ಸರ್ಮಪಕವಾಗಿಲ್ಲ, ಒಳಚರಂಡಿಯ ಸ್ಲಾಬ್‌ಗಳನ್ನು (ಕಾಂಕ್ರೀಟ್‌ ಹೊದಿಕೆ) ಸರ್ಮಪಕವಾಗಿ ಅಳವಡಿಸಿಲ್ಲ ಹಾಗೂ ಸ್ಯಾಟಲೈಟ್‌ ಬಸ್‌ ನಿಲ್ದಾಣದ ಬಳಿ ನಿರ್ಮಾಣವಾಗಬೇಕಿದ್ದ ಸ್ಕೈವಾಕ್‌ ಬಾಪೂಜಿನಗರ ರಸ್ತೆ ಮಾರ್ಗದಲ್ಲಿ ನಿರ್ಮಾಣ ಮಾಡಲು ಗುದ್ದಲಿ ಪೂಜೆ ಮಾಡಿದ್ದಾರೆ ಇದರಿಂದ ಇಲ್ಲಿನ ಜನರಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿದ ಮೇಯರ್‌, ಶೀಘ್ರವೇ ವೈಟ್‌ ಟಾಪಿಂಗ್‌ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸ್ಕೈವಾಕ್‌ ನಿರ್ಮಾಣ ಮಾಡುವ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗವುದು. ಮನೆಗಳಿಗೆ ಕೊಳಚೆ ನೀರು ಬರದಿರುವಂತೆ ತಡೆಯಲು ಚರಂಡಿ ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಲಾಗವುದು ಎಂದು ಭರವಸೆ ನೀಡಿದರು.

ಗುತ್ತಿಗೆದಾರರನ್ನು ಬದಲಿಸಿ: ಗಾಳಿ ಆಂಜನೇಯಸ್ವಾಮಿ ರಸ್ತೆಯ ಪಾದಚಾರಿ ಮಾರ್ಗದ ಚರಂಡಿ ಕಾಮಗಾರಿ ಬಗ್ಗೆ ಮೇಯರ್‌ಗೆ ದೂರಿತ್ತ ಸಾರ್ವಜನಿಕರು, ಚರಂಡಿ ಮೇಲೆ ಅಳವಡಿಸಿರುವ ಸ್ಲಾಬ್‌ಗಳು ಕಳೆಪೆಯಿಂದ ಕೂಡಿದೆ ಎಂದರು. ಅಲ್ಲಲ್ಲಿ ಸ್ಲಾಬ್‌ಗಳನ್ನು ಅಳವಡಿಸದೇ ಇರವುದನ್ನು ಕಂಡ ಮೇಯರ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಈಗಿರುವ ಗುತ್ತಿಗೆದಾರರನ್ನು ಬದಲಿಸಿ ಬೇರೆಯವರಿಗೆ ಗುತ್ತಿಗೆ ನೀಡಿ ಎಂದು ತಾಕೀತು ಮಾಡಿದರು.

ಕಲ್ಲು ಬಂಡೆಯಿಂದ ಕಾಮಗಾರಿ ವಿಳಂಬ: ನಗರದ ಹೊಸಕೆರೆಹಳ್ಳಿಯ ಮುತ್ತುರಾಜ ಜಂಕ್ಷನ್‌ ಬಳಿ ನಿರ್ಮಾಣವಾಗುತ್ತಿರುವ ಕೇಳಸೇತುವೆ ಕಾಮಗಾರಿ ವಿಳಂಬವಾಗುತ್ತಿದ್ದ ಹಿನ್ನೆಲೆ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಔಟರ್‌ರಿಂಗ್‌ ರಸ್ತೆಯಲ್ಲಾಗುತ್ತಿದ್ದ ಸಂಚಾರ ದಟ್ಟಣೆ ನಿವಾರಣೆ ಮಾಡುವ ಉದ್ದೇಶದಿಂದ ಮುತ್ತುರಾಜ ಜಂಕ್ಷನ್‌ ಬಳಿ 18.72 ಕೋಟಿ ರೂ. ವೆಚ್ಚದಲ್ಲಿ ಕೆಳ ಸೇತುವೆ ನಿರ್ಮಾಣ ಮಾಡಲು 2015 ಸೆಪ್ಟೆಂಬರ್‌ನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಆದರೆ, ಆ ಜಾಗದಲ್ಲಿ ಕಲ್ಲುಬಂಡೆಯಿದ್ದ ಪರಿಣಾಮ ತೆರವು ಮಾಡುವುದು ತಡವಾಯಿತು ಜುಲೈ ತಿಂಗಳ ಅಂತ್ಯದೊಳಗಾಗಿ ಕಾಮಗಾರಿ ಪೂರ್ಣಗೊಳ್ಳಿದೆ ಎಂದು ತಿಳಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ