ಕೊಡಗಿನಲ್ಲಿ ಪರಿಹಾರ ಕಾರ್ಯ ಚುರುಕು: ಸಿಎಂ ಕುಮಾರಸ್ವಾಮಿ 

Team Udayavani, Aug 22, 2018, 6:00 AM IST

ಬೆಂಗಳೂರು: “ಮಳೆ ಮತ್ತು ಪ್ರವಾಹದಿಂದ ಕಂಗೆಟ್ಟಿದ್ದ ಕೊಡಗಿನಲ್ಲಿ ಮಳೆ ಪ್ರಮಾಣ ಕಡಿಮೆ ಯಾಗಿದ್ದು, ಪರಿಹಾರ ಕಾರ್ಯಗಳು ಚುರುಕಿನಿಂದ ನಡೆಯುತ್ತಿದೆ. ಪ್ರತಿ ಹಳ್ಳಿಗೆ ವಾರಕ್ಕಾಗುವಷ್ಟು ಆಹಾರ ಸೇರಿದಂತೆ ಇತರೆ ಅಗತ್ಯ ಸಾಮಗ್ರಿಗಳನ್ನು ಕಳುಹಿಸಲಾಗಿದೆ’ ಎಂದು ಮುಖ್ಯಮಂತ್ರಿ ಎಚ್‌ .ಡಿ.ಕುಮಾರಸ್ವಾಮಿ ಹೇಳಿದರು.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಕೊಡಗು ಜಿಲ್ಲೆಯ ಪರಿಸ್ಥಿತಿ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಂತ್ರಸ್ತರ ರಕ್ಷಣೆ ಮತ್ತು ಪರಿಹಾರ ಕಾರ್ಯದ ಜತೆಗೆ ರೋಗ ಹರಡದಂತೆಯೂ ಕ್ರಮ ಕೈಗೊಳ್ಳಲಾಗುತ್ತಿದೆ. ಜತೆಗೆ ಖಾಲಿಯಾಗಿರುವ ಮನೆಗಳಲ್ಲಿ ಕಳ್ಳತನವಾಗುತ್ತಿರುವ ಬಗ್ಗೆ ಬಂದಿರುವ ಮಾಹಿತಿ ಆಧರಿಸಿ ಎಲ್ಲಾ ಮನೆಗಳಿಗೂ ಗೃಹ ರಕ್ಷಕ ದಳದ ಸಿಬ್ಬಂದಿಯ ರಕ್ಷಣೆ ಒದಗಿಸಲಾಗುತ್ತಿದೆ  ಎಂದರು.

ಪರಿಹಾರ ಕಾರ್ಯಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕೈಗೊಳ್ಳುವ ಉದ್ದೇಶದಿಂದ ಮತ್ತೂಬ್ಬ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಜಗದೀಶ್‌ ಎಂಬುವರನ್ನು ನೇಮಿಸಲಾಗಿದೆ. ಅಲ್ಲದೆ, ಒಂದು ವಾರದಿಂದ ವಿದ್ಯುತ್‌ ಇಲ್ಲದೆ ಪರದಾಡುತ್ತಿದ್ದ ಪ್ರದೇಶಗಳಲ್ಲಿ ವಿದ್ಯುತ್‌ ಸಂಪರ್ಕವನ್ನೂ ಕಲ್ಪಿಸಲಾಗಿದೆ. ಮಳೆ ಕಡಿಮೆಯಾಗಿರುವುದರಿಂದ ನಾಲ್ಕೈದು ದಿನಗಳಲ್ಲಿ ತಾತ್ಕಾಲಿಕ ಶೆಡ್‌ ನಿರ್ಮಾಣ ಕಾರ್ಯವೂ ನಡೆಯಲಿದೆ ಎಂದು ಮಾಹಿತಿ ನೀಡಿದರು. 

ಸಂತ್ರಸ್ತರಿಗೆ ಆಹಾರ ಸೇರಿದಂತೆ ಸಾಕಷ್ಟು ಅಗತ್ಯ ವಸ್ತುಗಳು ಕೊಡಗು ಜಿಲ್ಲೆಗೆ ಪೂರೈಕೆಯಾಗಿದ್ದು, ಇದನ್ನು ಸರ್ಕಾರಿ ವಾಹನದಲ್ಲೇ ಪ್ರತಿ ಹಳ್ಳಿ ಅಥವಾ ಪಂಚಾಯ್ತಿಗೆ ಪೂರೈಸಲಾಗಿದೆ. ಅದರಲ್ಲೂ ಸಂಪರ್ಕ ಕಳೆದುಕೊಂಡು ಆತಂಕದಲ್ಲಿರುವ ಹಳ್ಳಿಗಳಿಗೆ ಒಂದು ವಾರಕ್ಕೆ ಬೇಕಾಗುವಷ್ಟು ಆಹಾರ ಒದಗಿಸಲಾಗಿದೆ. ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ತಾವೇ ಖುದ್ದಾಗಿ ನಿರಂತರ ಸಂಪರ್ಕದಲ್ಲಿದ್ದು, ಸಣ್ಣಪುಟ್ಟ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸುವಂತೆ ಸೂಚಿಸಲಾಗುತ್ತಿದೆ ಎಂದು ತಿಳಿಸಿದರು.

ಭಾರೀ ಮಳೆ ಮತ್ತು ಪ್ರವಾಹದಿಂದ ಕುಶಾಲನಗರ ಭಾಗದಲ್ಲಿ 8 ಅಡಿ ನೀರು ನಿಂತಿತ್ತು. ಬೆಂಗಳೂರು ಮತ್ತು ಮೈಸೂರಿನಿಂದ ಕಾರ್ಮಿಕರು ತೆರಳಿ ಸೋಮ ವಾರ ಸಂಜೆಯೊಳಗೆ ನೀರನ್ನು ಹೊರಹಾಕಿದ್ದಾರೆ. ಅಲ್ಲದೆ, ಆ ಪ್ರದೇಶವನ್ನು ಸ್ವಚ್ಛಗೊಳಿಸಿ ರಾತ್ರಿಯೇ ರೋಗ ಹರಡದಂತೆ ಕ್ರಿಮಿನಾಶಕಗಳನ್ನು ಸಿಂಪಡಿಸಿದ್ದಾರೆ ಎಂದು ಹೇಳಿದರು.

ಸರ್ಕಾರದಿಂದಲೇ ಪಠ್ಯ, ನೋಟ್‌ ಪುಸ್ತಕ: ಪ್ರವಾಹದಿಂದ ತಮ್ಮ ಪುಸ್ತಕಗಳನ್ನು ಕಳೆದುಕೊಂಡಿರುವ ಶಾಲಾ ಮಕ್ಕಳಿಗೆ ಸರ್ಕಾರದ ವತಿಯಿಂದಲೇ ಪಠ್ಯ ಮತ್ತು ನೋಟ್‌ ಪುಸ್ತಕಗಳನ್ನು ಒದಗಿಸಲಾಗುವುದು. ಅಲ್ಲದೆ, ಮಳೆಯಿಂದಾಗಿ 20 ದಿನಕ್ಕೂ ಹೆಚ್ಚು ಕಾಲ ಶಾಲೆಗಳು ನಡೆಯದ ಕಾರಣ ಮಕ್ಕಳಿಗೆ ವಿಶೇಷ ತರಬೇತಿ ನೀಡಲು ನಿರ್ಧರಿಸಲಾಗಿದ್ದು, ಅದಕ್ಕಾಗಿ ಶೀಘ್ರ ದಿನಾಂಕ ನಿಗದಿಪಡಿಸಲಾಗುವುದು ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದರು.

155 ಕೋಟಿ ರೂ. ಬಿಡುಗಡೆ: ಮಳೆಹಾನಿ ಪರಿಹಾರ ಕಾರ್ಯಗಳಿಗಾಗಿ ಕರಾವಳಿ ಮತ್ತು ಮಲೆನಾಡು ಭಾಗದ ಜಿಲ್ಲೆಗಳಿಗೆ 200 ಕೋಟಿ ರೂ.
ಒದಗಿಸುವುದಾಗಿ ಈ ಹಿಂದೆ ಹೇಳಿದಂತೆ ಈಗಾಗಲೇ 155 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕೊಡಗಿಗೆ 30 ಕೋಟಿ ರೂ., ಹಾಸನ,
ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ತಲಾ 25 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅಗತ್ಯಕ್ಕೆ ತಕ್ಕಂತೆ ಕೊಡಗಿಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ಮಳೆಹಾನಿ ಸಂತ್ರಸ್ತರಿಗಾಗಿ ಸಂಘಟನೆಗಳ ಹೆಸರಿನಲ್ಲಿ ನಿಧಿ ಸಂಗ್ರಹಕ್ಕೆ ಪ್ರೋತ್ಸಾಹ ನೀಡಬೇಡಿ. ಇದು ದುರುಪಯೋಗವಾಗುವ ಸಾಧ್ಯತೆ ಇದೆ. ನೆರವು ನೀಡುವ ಮನೋಭಾವ ಇದ್ದವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಬ್ಯಾಂಕ್‌ ಖಾತೆ ಮೂಲಕವಾಗಲಿ, ಚೆಕ್‌, ಡಿಡಿಗಳ ಮೂಲಕವಾಗಲೀ ಕೊಡ ಬಹುದು. ಯಾವುದೇ ಕಾರಣಕ್ಕೂ ನಗದು ನೀಡುವುದು ಬೇಡ. 
ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ