ಸಿಎಂ ಮನೆ ಮುಂದೆ ಧರಣಿ: ದೇವೇಗೌಡ ಎಚ್ಚರಿಕೆ
Team Udayavani, Mar 5, 2017, 3:45 AM IST
ಬೆಂಗಳೂರು: ಇತ್ತ ಹಾಸನದಲ್ಲಿ ಜಿಲ್ಲಾ ಅಧಿಕಾರಿಗಳು ಮಾಜಿ ಪ್ರಧಾನಿ, ಮುಖ್ಯಮಂತ್ರಿ ಮಾತಿಗೂ ಬೆಲೆ ನೀಡುವುದಿಲ್ಲ. ಅತ್ತ ಕರಾವಳಿಯಲ್ಲಿ ಆರ್ಎಸ್ಎಸ್ ಕೈಗೆ ಕಾನೂನು ಸುವ್ಯವಸ್ಥೆ ನೀಡಲಾಗಿದೆ. ಇದೇನಾ ರಾಜ್ಯದ ಆಡಳಿತ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನಪ್ರತಿನಿಧಿಗಳ ಬಗ್ಗೆ ಅಧಿಕಾರಿಗಳಿಗೆ ಗೌರವವೇ ಇಲ್ಲ. ಮಾಜಿ ಪ್ರಧಾನಿ ಸ್ಥಳಕ್ಕೆ ಭೇಟಿ ನೀಡಿ ಮನವಿ ಮಾಡಿದರೂ ಕ್ರಮ ಕೈಗೊಳ್ಳುವುದಿಲ್ಲ ಇದು ಹಾಸನ ಕಥೆಯಾದರೆ, ಇನ್ನು ಕರಾವಳಿ ಭಾಗದಲ್ಲಿ ಕೇರಳದ ಮುಖ್ಯಮಂತ್ರಿ ವಿಜಯನ್ ಆಗಮನ ಸಂದರ್ಭದಲ್ಲಿ ನಡೆದ ವಿದ್ಯಮಾನಗಳನ್ನು ನೋಡಿದರೆ ಯಾರು ಇಲ್ಲಿ ಅಧಿಕಾರ ನಡೆಸುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಗಚಿ ಜಲಾಶಯದಿಂದ ಹಾಸನಕ್ಕೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಆವಿಯಾಗಿ ಹೋಗುವ ನೀರು ಬಿಟ್ಟು ಜೂನ್ 30 ರವರೆಗೂ ಪೂರೈಕೆ ಮಾಡುವಷ್ಟು ನೀರಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಆದರೆ, ಯಾರೋ ಅಡ್ಡಿ ಮಾಡಿದರು ಎಂದು ಇದೀಗ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ. ಅಧಿಕಾರಿಗಳು ನಾವೇನು ಮಾಡಲಾಗದು ಎಂದು ಕೈ ಚೆಲ್ಲಿದ್ದಾರೆ. ಯಾರ ಬಳಿ ನ್ಯಾಯ ಕೇಳಬೇಕು ಎಂದು ಪ್ರಶ್ನಿಸಿದರು.
ಯಗಚಿ ಜಲಾಶಯ ನಿರ್ಮಾಣದ ಉದ್ದೇಶ ಯಗಚಿ ಭಾಗದ 40 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಕೃಷಿಗೆ ನೀರು ಒದಗಿಸುವುದು ಹಾಗೂ ಹಾಸನ, ಬೇಲೂರುಗೆ ಕುಡಿಯುವ ನೀರು ಪೂರೈಕೆ ಮಾಡುವುದಾಗಿತ್ತು. ಆದರೆ, ಬರದಿಂದ ಸಂಕಷ್ಟ ಇದೆ ನಿಜ. ಆದರೆ, ಹಾಸನದವರಿಗೆ ಮಾತ್ರ ಶಿಕ್ಷೆ ಕೊಟ್ಟರೆ ಹೇಗೆ ಎಂದರು.
ಹೇಮಾವತಿಯಲ್ಲಿ 22 ಟಿಎಂಸಿ ನೀರು ಶೇಖರಿಸಿಕೊಂಡರೂ ರೈತರಿಗೆ ಬೆಳೆಗೆ ನೀರು ಕೊಡಲಿಲ್ಲ. ಯಗಚಿ ಮತ್ತು ಹೇಮಾವತಿ ಅಚ್ಚುಕಟ್ಟು ಪ್ರದೇಶದ ರೈತರು ಎಲ್ಲ ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಖ್ಯಮಂತ್ರಿಯವರು ಅರಸೀಕೆರೆಗೆ ಕಾರ್ಯಕ್ರಮಕ್ಕೆ ಬಂದಾಗಲೂ ವಿಷಯ ತಿಳಿಸಿದ್ದೇನೆ ಎಂದು ಹೇಳಿದರು.
ಇಡೀ ರಾಜ್ಯ ಬರದಿಂದ ಕೆಂಗೆಟ್ಟಿದೆ. ನಾನು ಆ ಡೈರಿ, ಈ ಡೈರಿ, ಮಿಲ್ಕ್ ಡೈರಿ ವಿಚಾರ ಪ್ರಸ್ತಾಪ ಮಾಡುವುದಿಲ್ಲ. ಈ ವಿಷಯದಲ್ಲಿ ರಾಜಕೀಯ ಸಹ ಮಾಡುವುದಿಲ್ಲ. ಮುಖ್ಯಮಂತ್ರಿಯವರ ಪರಿಸ್ಥಿತಿಯೂ ಗೊತ್ತಿದೆ. ಆದರೆ, ಯಾರಿಗೂ ಅನ್ಯಾಯವಾಗಬಾರದು. ಮುಖ್ಯಮಂತ್ರಿಯವರೇ ಈ ವಿಚಾರದಲ್ಲಿ ಗಂಭೀರ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಎಲ್ಲೆಡೆ ಕುಡಿಯವು ನೀರು ಮತ್ತು ಮೇವು ಪೂರೈಕೆಗೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.
ಸಿಎಂ ಮನೆ ಮುಂದೆ ಧರಣಿ ಕೂರ್ತೇನೆ
ಕೆಆರ್ಎಸ್. ಕಬಿನಿ, ಹಾರಂಗಿ ಜಲಾಶಯಗಳ ಅಚ್ಚುಕಟ್ಟು ರೈತರು ಅಲ್ಪಸ್ವಲ್ಪ ಬೆಳೆ ತೆಗೆದಿದ್ದಾರೆ. ಆದರೆ, ಹೇಮಾವತಿ ಮತ್ತು ಯಗಚಿ ಅಚ್ಚುಕಟ್ಟು ರೈತರಿಗೆ ನೀರೇ ಹರಿಸಿಲ್ಲ. ಹೀಗಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ ಭಾಗದ ರೈತರಿಗೆ ಬೆಳೆ ಪರಿಹಾರ ಘೋಷಿಸಲೇಬೇಕು. ಬೇರೆ ಭಾಗದ ರೈತರು ತೊಂದರೆಯಲ್ಲಿದ್ದರೂ ಅವರಿಗೂ ಪರಿಹಾರ ಕೊಡಬೇಕು. ಜತೆಗೆ ಹಾಸನಕ್ಕೆ ಯಗಚಿ ಜಲಾಶಯದಿಂದ ಕುಡಿಯುವ ನೀರು ಪೂರೈಕೆಗೆ ಯಾವುದೇ ಅಡೆತಡೆ ಉಂಟಾಗದಂತೆ ಅಧಿಕಾರಿಗಳಿಗೆ ತಾಕೀತು ಮಾಡಬೇಕು. ಇದು ಆಗದಿದ್ದರೆ ನಾನು ಮುಖ್ಯಮಂತ್ರಿ ಮನೆ ಮುಂದೆ ಧರಣಿ ಕೂರುತ್ತೇನೆ. ಹಾಗೆಂದು ನಾಳೆಯೇ ಆಗಬೇಕು ಎಂದಲ್ಲ, ಆದಷ್ಟು ಬೇಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಗಮನ ಹರಿಸಬೇಕು. ಅವರಿಗೆ ಪತ್ರವನ್ನೂ ಬರೆದಿದ್ದು ಸ್ವಂದಿಸುವ ವಿಶ್ವಾಸವಿದೆ. ಕಾದು ನೋಡುತ್ತೇನೆ.