ಚಿತ್ರೀಕರಣ ವೇಳೆ ಸಿಲಿಂಡರ್‌ ಸ್ಫೋಟ: ತಾಯಿ, ಮಗಳು ಸಾವು

Team Udayavani, Mar 30, 2019, 2:26 PM IST

ಬೆಂಗಳೂರು: “ರಣಂ’ ಕನ್ನಡ ಸಿನಿಮಾದ ಸಾಹಸ ದೃಶ್ಯ ಚಿತ್ರೀಕರಣದ ವೇಳೆ ಕಂಪ್ರೈಸ್ಸಡ್‌ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡು ತಾಯಿ ಹಾಗೂ ಮಗಳು ಸ್ಥಳದಲ್ಲೇ ಮೃತಪಟ್ಟು, ಮಗುವೊಂದು ಗಂಭೀರವಾಗಿ ಗಾಯಗೊಂಡ ಘಟನೆ ಬಾಗಲೂರಿನಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಕಟ್ಟಿಗೆಹಳ್ಳಿಯ ನಿವಾಸಿ ಸುಮೈರಾ ಬಾನು (28) ಅವರ ಮಗಳು ಆಯೆರಾ ಬಾನು (7) ಮೃತರು. ಸುಮೈರಾ ಅವರ ಪುತ್ರ ಜೈನ್‌ಬ (4) ಗಂಭಿರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಫೋಟದ ವೇಳೇ ಸಿಲಿಂಡರ್‌ನ ಕ್ಯಾಪ್‌ನ ಚೂರುಗಳು ಸಿಡಿದು, ಚಿತ್ರೀಕರಣ ವೀಕ್ಷಿಸುತ್ತಿದ್ದವರಿಗೆ ತಗುಲಿದ ಪರಿಣಾಮ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸಾಹಸ ದೃಶ್ಯದ ಚಿತ್ರೀಕರಣ ನಡೆಸಲು ಸಕ್ಷಮ ಪ್ರಾಧಿಕಾರಗಳಿಂದ ಚಿತ್ರತಂಡ ಅನುಮತಿ ಪಡೆದಿರಲಿಲ್ಲ. ಜತೆಗೆ, ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಳ್ಳದೇ ಇರುವುದು ದುರಂತಕ್ಕೆ ಕಾರಣ ಎನ್ನಲಾಗಿದೆ. ದುರ್ಘ‌ಟನೆ ನಡೆದ ಬಳಿಕ ಚಿತ್ರತಂಡ ಸ್ಥಳದಿಂದ ಪರಾರಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದು, ಚಿತ್ರತಂಡದ ಬೇಜವಾಬ್ದಾರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸುಮೈರಾ ಅವರ ಪತಿ ತಬ್ರೇಜ್‌ಖಾನ್‌ ನೀಡಿರುವ ದೂರಿನ ಅನ್ವಯ “ರಣಂ’ ಚಿತ್ರದ ಸಾಹಸ ನಿರ್ದೇಶಕರು ಹಾಗೂ ಮತ್ತಿತರರ ವಿರುದ್ಧ ಬಾಗಲೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ “ಉದಯವಾಣಿ’ಗೆ ತಿಳಿಸಿದರು.

ಐವತ್ತು ಅಡಿ ದೂರವಿದ್ದವರಿಗೆ ಬಡಿದ ಕಂಪ್ರೈಸರ್‌!: ಕಟ್ಟಿಗೆಹಳ್ಳಿಯ ಬಾಬಾನಗರದ ನಿವಾಸಿಯಾಗಿರುವ ತಬ್ರೇಜ್‌ಖಾನ್‌, ಸ್ವಂತ ಕಾರುಗಳನ್ನು ಬಾಡಿಗೆಗೆ ಕೊಡುತ್ತಾರೆ. ಈ ನಡುವೆ ಸೂಲಿಬೆಲೆಯ ಸಂಬಂಧಿಕರ ಮನೆಗೆ ಬಿಟ್ಟು ಬರುವ ಉದ್ದೇಶದಿಂದ ಶುಕ್ರವಾರ ಮಧ್ಯಾಹ್ನ 2.30ರ ಸುಮಾರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದರು.

ಮಾರ್ಗ ಮಧ್ಯೆ 3.40ರ ಸುಮಾರಿಗೆ ಬಾಗಲೂರಿನ ಶೆಲ್‌ ಕಂಪನಿ ಮುಂಭಾಗದ ರಸ್ತೆಯಲ್ಲಿ “ರಣಂ’ ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಇದನ್ನು ವೀಕ್ಷಿಸಲು ನೂರಾರು ಮಂದಿ ಸೇರಿದ್ದರು. ಜತೆಗೆ, ರಸ್ತೆಯಲ್ಲಿ ವಾಹನಗಳು ಕೂಡ ಹೋಗಲು ಆಗುತ್ತಿರಲಿಲ್ಲ.

ಹೀಗಾಗಿ ತಬ್ರೇಜ್‌ಖಾನ್‌ ಕೂಡ ಚಿತ್ರತಂಡದ ಬಸ್‌ ಸಮೀಪ ನಿಂತುಕೊಳ್ಳುವಂತೆ ಪತ್ನಿ ಹಾಗೂ ಮಕ್ಳಳಿಗೆ ತಿಳಿಸಿ ಸ್ವಲ್ಪ ದೂರದಲ್ಲಿ ಬೈಕ್‌ ನಿಲ್ಲಿಸಿ ಬರಲು ಹೋಗಿದ್ದಾರೆ. ಇದೇ ಸಂಧರ್ಭದಲ್ಲಿ ಕಾರು ಬ್ಲಾಸ್ಟಿಂಗ್‌ ಸೀನ್‌ಗಾಗಿ, ಚಿತ್ರತಂಡದ ಸದಸ್ಯರು ಗ್ಯಾಸ್‌ ಕಂಪ್ರೈಸರ್‌ನಿಂದ ಸಿಲಿಂಡರ್‌ಗೆ ಗ್ಯಾಸ್‌ ತುಂಬಿಸುತ್ತಿದ್ದಾರೆ. ಈ ವೇಳೆ ಗ್ಯಾಸ್‌ ಕಂಪ್ರೈಸರ್‌ ಆಚಾನಕ್‌ ಆಗಿ ಸಿಡಿದು, ಸುಮಾರು 50 ಅಡಿ ದೂರದಲ್ಲಿ ನಿಂತಿದ್ದ ಸುಮೈರಾ ಮತ್ತು ಮಕ್ಕಳಿಗೆ ತಗುಲಿದೆ.

ಅದರ ಹೊಡೆತದ ರಭಸಕ್ಕೆ ಸುಮೈರಾ ಹಾಗೂ ಅಯೆರಾ ಸ್ಥಳದಲ್ಲೇ ಮೃತಪಟ್ಟಿದ್ದು, ಜೈನ್‌ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಚಿತ್ರೀಕರಣ ವೀಕ್ಷಿಸಲು ನೆರೆದಿದ್ದ ನೂರಾರು ಮಂದಿ, ಈ ಭೀಕರ ಘಟನೆ ಕಂಡು ಭಯದಿಂದ ದಿಕ್ಕಾಪಾಲಾಗಿ ಓಡಿದ್ದಾರೆ. ಚಿತ್ರತಂಡ ಕೂಡ ಕೆಲವೇ ನಿಮಿಷಗಳಲ್ಲಿ ಶೂಟಿಂಗ್‌ ಪರಿಕರಗಳನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದೆ.

ಇತ್ತ ಕಣ್ಣೆದುರೇ ಪತ್ನಿ ಹಾಗೂ ಮಗಳನ್ನು ಕಳೆದುಕೊಂಡ ತಬ್ರೇಜ್‌ ಖಾನ್‌ ಹತ್ತಿರ ಓಡಿಬಂದು ಸಹಾಯಕ್ಕೆ ಅಂಗಲಾಚಿದ್ದಾರೆ. ಪರಿಚಯಸ್ಥರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಬಳಿಕ ಮೂವರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಸುಮೈರಾ ಹಾಗೂ ಆಯೆರಾ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಜೈನ್‌ಬಗೆ ಚಿಕಿತ್ಸೆ ಮುಂದುವರಿದಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಘಟನೆ ಹೇಗಾಯ್ತು?: ಕನಕಪುರ ಶ್ರೀನಿವಾಸ್‌ ನಿರ್ಮಾಣದ, ನಟರಾದ ಚಿರಂಜೀವಿ ಸರ್ಜಾ ಹಾಗೂ ಚೇತನ್‌ ಮುಖ್ಯಭೂಮಿಕೆಯಲ್ಲಿರುವ ತಮಿಳಿನ ವಿ.ಸಮುದ್ರ ನಿರ್ದೇಶಿಸುತ್ತಿರುವ “ರಣಂ’ ಚಿತ್ರದ ಸಾಹಸ ದೃಶ್ಯದಲ್ಲಿ ಕಾರುಗಳು, ಸ್ಫೋಟಗೊಂಡು ಮೇಲೆ ಹಾರುವ ದೃಶ್ಯದ ಚಿತ್ರೀಕರಣ ಅದಾಗಿತ್ತು. ಗ್ಯಾಸ್‌ ತುಂಬುವಾಗ ಸಿಲಿಂಡರ್‌ ಸ್ಫೋಟಗೊಂಡು, ಸುಮೈರಾ ಹಾಗೂ ಅಯೆರಾ ಮೇಲೆ ಬಿದ್ದಿದೆ. ಸ್ಫೋಟದ ರಭಸಕ್ಕೆ ಸುಮೈರಾ ದೇಹ ಛಿದ್ರವಾಗಿದ್ದು, ಬಾಲಕಿಯ ತಲೆಗೂ ಗಂಭೀರ ಪೆಟ್ಟಾಗಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಸಂಚಾರ ದಟ್ಟಣೆ ನಿರ್ವಹಣೆಯೇ ದೊಡ್ಡ ಸವಾಲಾಗಿರುವ ನಗರದಲ್ಲಿ ಸುಗಮ ಸಂಚಾರಕ್ಕೆ ನಾನಾ ಪ್ರಯೋಗಗಳು ನಡೆಯುತ್ತಿವೆ. ಇದರ ಮುಂದುವರಿದ ಭಾಗವಾಗಿ ಇತ್ತೀಚೆಗೆ...

  • ಬೆಂಗಳೂರು: ಉಪ ಚುನಾವಣೆ ಬಳಿಕ "ಇಂದಿರಾ ಕ್ಯಾಂಟೀನ್‌' ಹೆಸರು ಬದಲಾಯಿಸಿ "ಕೆಂಪೇಗೌಡ ಕ್ಯಾಂಟೀನ್‌' ಎಂದು ಮರು ನಾಮಕರಣ ಮಾಡುವುದಕ್ಕೆ ಬಿಬಿಎಂಪಿ ಆಡಳಿತ ಚಿಂತನೆ...

  • ಬೆಂಗಳೂರು: ಗರ್ಭಿಣಿಯರ ಆರೋಗ್ಯಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳಿಂದಾಗಿ ಹೆರಿಗೆ ಸಂದರ್ಭದಲ್ಲಿ ತಾಯಿಯ ಮರಣದ ಅನುಪಾತ...

  • ಬೆಂಗಳೂರು: ಸದಾ ಪೊಲೀಸ್‌ ಬೂಟುಗಳ ಸದ್ದು ಕೇಳಿ ಬರುತ್ತಿದ್ದ ಸ್ಥಳದಲ್ಲಿ ಮಕ್ಕಳ ಕಲರವ... ಖಾಕಿಯ ಭಯವಿಲ್ಲದೆ ನಾನಾ ವೇಷದಲ್ಲಿ ಕುಣಿದು ಕಪ್ಪಳಿಸಿದ ಮಕ್ಕಳು... ಪುಟಾಣಿ...

  • ಬೆಂಗಳೂರು: ಸಂಚಾರ ಪೊಲೀಸ್‌ ಅಧಿಕಾರಿಗಳು ನಿರ್ವಹಿಸಬೇಕಾದ ಪಿಡಿಎ ಯಂತ್ರ (ದಂಡ ವಿಧಿಸುವ ಯಂತ್ರ) ವನ್ನು ಟೋಯಿಂಗ್‌ ಸಿಬ್ಬಂದಿ ಇಟ್ಟುಕೊಂಡಿದ್ದು, ಅದನ್ನು ಪ್ರಶ್ನಿಸಿದ...

ಹೊಸ ಸೇರ್ಪಡೆ