ಮುದ್ದೆ ಕೋಲಿಂದ ಥಳಿಸಿ ಅಪ್ಪನ ಕೊಂದ

Team Udayavani, Aug 22, 2019, 3:08 AM IST

ಬೆಂಗಳೂರು: ಇತ್ತೀಚೆಗೆ ಅಪ್ರಾಪ್ತ ವಯಸ್ಸಿನ ಪುತ್ರಿಯೊಬ್ಬಳು ತನ್ನ ಪ್ರಿಯಕರನ ಜತೆ ಸೇರಿ ತಂದೆಯನ್ನು ಭೀಕರವಾಗಿ ಕೊಲೆಮಾಡಿದ ಘಟನೆಯ ನೆನಪು ಮಾಸುವ ಮುನ್ನವೇ, ಇಲ್ಲೊಬ್ಬ ಯುವಕ ಮುದ್ದೆ ಹಿಟ್ಟು ಕೂಡಿಸುವ ಕೋಲಿನಿಂದ ಥಳಿಸಿ ತನ್ನ ತಂದೆಯನ್ನೇ ಹತ್ಯೆಗೈದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತಂದೆಯನ್ನು ಕೊಲೆಗೈದ 20 ದಿನಗಳ ಬಳಿಕ ಪುತ್ರ ಹಾಗೂ ಹತ್ಯೆಗೆ ಸಹಕಾರ ನೀಡಿದ ಆತನ ತಾಯಿಯನ್ನು ಬಂಧಿಸಲಾಗಿದೆ. ಜು.29ರಂದು ರಾತ್ರಿ ಶಾಂತಿಪುರದ ಸುಬ್ರಮಣಿ (68) ಎಂಬವರ ಕೊಲೆ ನಡೆದಿತ್ತು. ಈ ಕೊಲೆ ಆರೋಪ ಪ್ರಕರಣದಲ್ಲಿ ಸುಬ್ರಮಣಿ ಅವರ ಪುತ್ರ ಮಂಜುನಾಥ್‌ (28) ಹಾಗೂ ಮೃತರ ಪತ್ನಿ ಮುನಿಯಮ್ಮ (60) ಜೈಲು ಪಾಲಾಗಿದ್ದಾರೆ.

ತಂದೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ಮಂಜುನಾಥ್‌ ಪೊಲೀಸರಿಗೆ ದೂರು ನೀಡಿದ್ದ. ಆದರೆ, ಸುಬ್ರಮಣಿ ಮೃತದೇಹದ ಮರಣೋತ್ತರ ಪರೀಕ್ಷೆ ವರದಿ, ಕೊಲೆ ನಡೆದಿದೆ ಎಂಬ ರಹಸ್ಯ ಬಯಲೆಗೆಳೆದಿತ್ತು. ಈ ಬೆನ್ನಲ್ಲೇ ತನಿಖೆ ಚುರುಕುಗೊಳಿಸಿದ ಪರಪ್ಪನ ಅಗ್ರಹಾರ ಠಾಣೆಯ ಇನ್ಸ್‌ಪೆಕ್ಟರ್‌ ಎಚ್‌.ಎಲ್‌.ನಂದೀಶ್‌ ನೇತೃತ್ವದ ತಂಡ, ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ತನಿಖೆ ಮುಂದುವರಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮದ್ಯಪಾನ, ಅನಾರೋಗ್ಯದ ಕಥೆ: ಜುಲೈ 30ರಂದು ಠಾಣೆಗೆ ತೆರಳಿದ್ದ ಮಂಜುನಾಥ್‌, ಮದ್ಯಪಾನದ ಚಟಕ್ಕೆ ದಾಸನಾಗಿದ್ದ ತಂದೆ ಸುಬ್ರಮಣಿ, ರಕ್ತದೊತ್ತಡ (ಬಿ.ಪಿ) ಸಮಸ್ಯೆಯಿಂದ ಬಳಲುತ್ತಿದ್ದರು. ಹೊಟ್ಟೆ ಉರಿ ಎಂದು ಹೇಳಿದ್ದರಿಂದ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫ‌ಲಿಸದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದರು. ತಂದೆಯ ಸಾವಿನ ಬಗ್ಗೆ ಯಾವುದೇ ಅನುಮಾನವಿಲ್ಲ. ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹ ನೀಡಬೇಕು ಎಂದು ಕೋರಿ ದೂರು ನೀಡಿದ್ದ.

ಹೀಗಾಗಿ ಪೊಲೀಸರು ಆರಂಭದಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು. ಈ ನಡುವೆ ಆ.19ರಂದು ಸುಬ್ರಮಣಿ ಮೃತದೇಹದ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ಆತನ ದೇಹದ ತುಂಬ ಬಲವಾಗಿ ಗುದ್ದಿದ ಗಾಯಗಳಾಗಿದ್ದರಿಂದ ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿತ್ತು. ಮರಣೋತ್ತರ ವರದಿ ಆಧರಿಸಿ ತನಿಖೆ ಚುರುಕುಗೊಳಿಸಿದ ತನಿಖಾ ತಂಡ, ಸುಬ್ರಮಣಿ ಅವರ ಪುತ್ರ ಮಂಜುನಾಥ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ತಂದೆಯನ್ನು ಕೊಲೆಗೈದ ವಿಚಾರ ಬಾಯ್ಬಿಟ್ಟಿದ್ದಾನೆ ಎಂದು ಹಿರಿಯ ಅಧಿಕಾರಿ ಹೇಳಿದರು.

ಕೊಲೆಗೆ ಸಹಕರಿಸಿದ ಸುಬ್ರಮಣಿ ಅವರ ಪತ್ನಿ ಮುನಿಯಮ್ಮ ಅವರನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ದೊಣ್ಣೆಯನ್ನು ವಶಪಡಿಸಿಕೊಳ್ಳಲಾಗಿದೆ. ನಿತ್ಯವೂ ಮನೆಗೆ ಕುಡಿದು ಬರುತ್ತಿದ್ದ ಸುಬ್ರಮಣಿ ತಮ್ಮೊಂದಿಗೆ ಜಗಳ ಮಾಡುತ್ತಿದ್ದರು. ಇದರಿಂದ ಬೇಸತ್ತು ಕೊಲೆ ಮಾಡಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.

ದೊಣ್ಣೆಯಿಂದ ಹೊಡೆದು ಹತ್ಯೆ: ಸುಬ್ರಮಣಿ ಕುಡಿತಕ್ಕೆ ದಾಸನಾಗಿದ್ದು ಮನೆಯಲ್ಲಿ ಯಾವಾಗಲೂ ಜಗಳ ಮಾಡುತ್ತಿದ್ದರು. ಜು.29ರಂದು ರಾತ್ರಿ ಕಂಠಪೂರ್ತಿ ಮದ್ಯ ಸೇವಿಸಿದ್ದ ಸುಬ್ರಮಣಿ, ಮನೆಗೆ ಬಂದು ಗಲಾಟೆ ಮಾಡುತ್ತಿದ್ದು, ಜಗಳ ವಿಕೋಪಕ್ಕೆ ತಿರುಗಿತ್ತು. ಈ ವೇಳೆ ಮಂಜುನಾಥ್‌, ಮುದ್ದೆ ಮಾಡುವ ದೊಣ್ಣೆಯಿಂದ ತಂದೆ ಎದೆ, ಹೊಟ್ಟೆ ಇನ್ನಿತರೆಡೆ ಬಲವಾಗಿ ಹೊಡೆದಿದ್ದರಿಂದ ಸುಬ್ರಮಣಿ ಮೃತಪಟ್ಟಿದ್ದರು.

ತಂದೆ ಮೃತಪಟ್ಟಿರುವ ವಿಚಾರ ಗೊತ್ತಿದ್ದರೂ ಆರೋಪಿ ಮಂಜುನಾಥ್‌, ಮಾರನೇ ದಿನ ಸುಬ್ರಮಣಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದ. ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದರು. ಪೊಲೀಸರ ದಿಕ್ಕು ತಪ್ಪಿಸುವ ಸಲುವಾಗಿ ತಂದೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ಸುಳ್ಳು ದೂರು ನೀಡಿದ್ದ ಎಂದು ಅಧಿಕಾರಿ ಮಾಹಿತಿ ನೀಡಿದರು.

* ಮಂಜುನಾಥ ಲಘುಮೇನಹಳ್ಳಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ನೋ ಪಾರ್ಕಿಂಗ್‌ ಸ್ಥಳದಲ್ಲಿ ನಿಂತಿದ್ದ ಬೈಕ್‌ ಅನ್ನು ಟೋಯಿಂಗ್‌ ಮಾಡಿದ್ದಕ್ಕೆ, ಟೋಯಿಂಗ್‌ ವಾಹನ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ,...

  • ಬೆಂಗಳೂರು: ಪಾಲಿಕೆ ವ್ಯಾಪ್ತಿಯ ಕೆ.ಆರ್‌.ಪುರಂ, ಮಹಾಲಕ್ಷ್ಮೀ ಲೇಔಟ್‌, ಯಶವಂತಪುರ ಹಾಗೂ ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಅ.21ರಂದು ನಡೆಯಲಿದ್ದು,...

  • ಬೆಂಗಳೂರು: ಅನರ್ಹ ಶಾಸಕರ ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಏಕಾಂಗಿ ಸ್ಪರ್ಧೆಗೆ ಸಿದ್ಧತೆ ಮಾಡಿಕೊಂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ...

  • ಬೆಂಗಳೂರು: ಹೈಕೋರ್ಟ್‌ ಕಟ್ಟಡ ಸ್ಫೋಟ ಮಾಡುವುದಾಗಿ ದೆಹಲಿ ಮೂಲದ ವ್ಯಕ್ತಿಯೋರ್ವನಿಂದ ಹೈಕೋರ್ಟ್‌ ರಿಜಿಸ್ಟ್ರಾರ್‌ಗೆ ಪತ್ರ ಬರೆದಿದ್ದು ಆತಂಕ ಸೃಷ್ಟಿಸಿದೆ....

  • ಬೆಂಗಳೂರು: "ಹಿಂದೆ ರಂಗ ಕ್ಷೇತ್ರದಲ್ಲಿ ಭಾಗವತರಿಗೆ ಭಾರೀ ಗೌರವ, ಮನ್ನಣೆಯಿತ್ತು. ಆ ಗೌರವ ಪಡೆಯಲು ನಾನು ಮೂಡಲಪಾಯ ಯಕ್ಷಗಾನ ಕ್ಷೇತ್ರದ ಭಾಗವತನಾದೆ,' ಎಂದು ಹಿರಿಯ...

ಹೊಸ ಸೇರ್ಪಡೆ