ದುಡುಕುವ ಮುನ್ನ 104 ಡಯಲ್‌ ಮಾಡಿ…

Team Udayavani, Sep 10, 2019, 3:09 AM IST

ಬೆಂಗಳೂರು: ಮಾನಸಿಕ ಒತ್ತಡ, ಅನಾರೋಗ್ಯ, ಅವಮಾನ, ವಂಚನೆ, ಖಿನ್ನತೆ, ಆರ್ಥಿಕ ಸ್ಥಿತಿಗತಿ… ಹೀಗೆ ಆತ್ಮಹತ್ಯೆಗೆ ಹತ್ತು ಹಲವು ಕಾರಣಗಳಿವೆ. ಆದರೆ, ಜೀವನವನ್ನೇ ಕೊನೆಗಾಣಿಸಿಕೊಳ್ಳುವ ದುಡುಕಿನ ನಿರ್ಧಾರ ತೆಗೆದುಕೊಳ್ಳುವ ಮುನ್ನ ಒಂದೇ ಒಂದು ಕ್ಷಣ ಯೋಚಿಸಿ ನಿಮ್ಮ ಮೊಬೈಲ್‌ನಲ್ಲಿ “104′ ಡಯಲ್‌ ಮಾಡಿದರೆ ನಿಮ್ಮ ನಿರ್ಧಾರ ಖಂಡಿತ ಬದಲಾಗುತ್ತದೆ.

ಯಾವುದೋ ಕೆಟ್ಟ ಘಳಿಗೆಯಲ್ಲಿ ಜೀವ ಕಳೆದುಕೊಳ್ಳುವ ನಿರ್ಧಾರಕ್ಕೆ ಬಂದ ಸಾವಿರಾರು ಮಂದಿ ಕ್ಷಣ ಕಾಲ ತಡೆದು “ಆರೋಗ್ಯವಾಣಿ’ಗೆ ಕರೆ ಮಾಡಿ, ಆಪ್ತ ಸಮಾಲೋಚನೆ ಪಡೆದು, ಸಾವಿನ ಆಲೋಚನೆಯಿಂದ ಹೊರಬಂದು ಸವಾಲು ಎದುರಿಸುವ ದಿಟ್ಟತನ ಪ್ರದರ್ಶಿಸಿದ್ದಾರೆ. ಕಳೆದ 3 ವರ್ಷಗಳಲ್ಲಿ ಆರೋಗ್ಯವಾಣಿ ಸಿಬ್ಬಂದಿ 1,174 ಮಂದಿಗೆ ಯಶಸ್ವಿ ಆಪ್ತ ಸಮಾಲೋಚನೆ ನಡೆಸುವ ಮೂಲಕ ಅವರನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ.

(ಎನ್‌ಸಿಆರ್‌ಬಿ) ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ ಲಕ್ಷಕ್ಕೂ ಹೆಚ್ಚು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅತಿ ಹೆಚ್ಚು ಆತ್ಮಹತ್ಯೆಗಳು ವರದಿಗಾಗುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಹೆಚ್ಚಾಗುತ್ತಿರುವ ಈ ಆತ್ಮಹತ್ಯೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಆರೋಗ್ಯ ಇಲಾಖೆ “ಆರೋಗ್ಯವಾಣಿ 104′ ಸಹಾಯವಾಣಿ ಆರಂಭಿಸಿದೆ.

ವರ್ಷದಲ್ಲಿ 70 ಸಾವಿರ ಕರೆ: ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಒಂದು ವರ್ಷದಲ್ಲಿ ಆರೋಗ್ಯ ಸಹಾಯವಾಣಿಗೆ 70 ಸಾವಿರಕ್ಕೂ ಹೆಚ್ಚು ಕರೆಗಳಿ ಬಂದಿವೆ. ಈ ಪೈಕಿ ಶೇ.10 ಮಂದಿ ಆತ್ಮಹತ್ಯೆಗೆ ನಿರ್ಧರಿಸಿ ಕರೆ ಮಾಡಿದ್ದರು. ಇವರಲ್ಲಿ ಶೇ.70 ಮಂದಿಯ ವಯಸ್ಸು 15-24 ವರ್ಷ ಎಂಬುದು ಆಘಾತಕಾರಿ ಅಂಶ. ಇನ್ನು ಆತ್ಮಹತ್ಯೆಗೆ ಅವರು ನೀಡಿದ ಕಾರಣಗಳ ಪೈಕಿ “ಪ್ರೇಮ ವೈಫ‌ಲ್ಯ’ ಹಾಗೂ “ವೃತ್ತಿ ಮಾರ್ಗದರ್ಶನದ ಕೊರತೆ’ ಮೊದಲೆರಡು ಸ್ಥಾನದಲ್ಲಿವೆ.

ಇನ್ನೊಂದೆಡೆ ಮಾನಸಿಕ ಖಿನ್ನತೆಗೆ ಸಂಬಂಧಿಸಿದಂತೆ “ಆರೋಗ್ಯವಾಣಿ 104’ಕ್ಕೆ ನಿತ್ಯ 200ಕ್ಕೂ ಹೆಚ್ಚು ಕರೆ ಬರುತ್ತವೆ. ಮಾನಸಿಕ ಖಿನ್ನತೆ ಹಾಗೂ ಆತ್ಮಹತ್ಯೆ ಪ್ರವೃತ್ತಿ ಹತೋಟಿಯ ಆಪ್ತ ಸಮಾಲೋಚನೆಗಾಗಿ 20 ಪರಿಣಿತರ ತಂಡವಿದ್ದು, ಈ ರೀತಿಯ ಕರೆಗಳನ್ನು ನೇರವಾಗಿ ಈ ತಂಡಕ್ಕೆ ವರ್ಗಾವಣೆಯಾಗುತ್ತವೆ. ಕರೆ ಮಾಡಿದವರ ಜತೆ ಅತ್ಯಂತ ಆಪ್ತವಾಗಿ ಮಾತಿಗಿಳಿಯುವ ಸಿಬ್ಬಂದಿ, ಅವರ ಸಮಸ್ಯೆ ಆಲಿಸಿ, ಸಲಹೆಗಳನ್ನು ನೀಡುವ ಮೂಲಕ ಅವರು ಆತ್ಮಹತ್ಯೆ ನಿರ್ಧಾರ ಕೈಬಿಡುವಂತೆ ಮಾಡುತ್ತಾರೆ.

10 ನಿಮಿಷದಿಂದ 3 ಗಂಟೆ ಮಾತು: ಆರೋಗ್ಯವಾಣಿಯಲ್ಲಿ ಕನಿಷ್ಠ 10 ನಿಮಿಷದಿಂದ ಗರಿಷ್ಠ 3 ಗಂಟೆವರೆಗೂ ಸಮಾಲೋಚನೆ ನಡೆಸಿದ ದಾಖಲೆಗಳಿವೆ. ಒಮ್ಮೆ ಸಮಾಲೋಚನೆ ನಡೆಸಿದ ವ್ಯಕ್ತಿ ಮೇಲೆ ಕನಿಷ್ಠ ಮೂರು ತಿಂಗಳವರೆಗೂ ನಿಗಾ ವಹಿಸಿ, ಆಗಾಗ ಕರೆ ಮಾಡಿ ಮಾತನಾಡಿಸುತ್ತೇವೆ ಎನ್ನುತ್ತಾರೆ ಆರೋಗ್ಯವಾಣಿ ಅಧಿಕಾರಿಗಳು.

“ಕರೆ ಮಾಡಿದ ಕೆಲವರು ನಾನೀಗ ರೈಲು ಹಳಿ ಹತ್ತಿರವಿದ್ದೇನೆ, ಕೆರೆ, ನದಿ ದಡದಲ್ಲಿ, ಸೇತುವೆ ಮೇಲೆ ನಿಂತಿದ್ದೇನೆ, ಸಾಯಲು ನಿರ್ಧರಿಸಿದ್ದೇನೆ ಎಂದು ಹೇಳುತ್ತಾರೆ. ಆ ವೇಳೆ ಅವರೊಟ್ಟಿಗೆ ಮಾತನಾಡುತ್ತಲೇ ಸ್ಥಳೀಯ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿ ಸ್ಥಳಕ್ಕೆ ಕಳುಹಿಸಿದ ಉದಾಹರಣೆಗಳಿವೆ’ ಎಂದು ಆರೋಗ್ಯ ವಾಣಿ ತಂಡದ ವ್ಯವಸ್ಥಾಪಕ ರಾಘವೇಂದ್ರ ಅಡೂರ್‌ ತಿಳಿಸಿದರು.

ಇಂದು “ವಿಶ್ವ ಆತ್ಮಹತ್ಯೆ ತಡೆ ದಿನ’: ವಿಶ್ವದಲ್ಲಿ ಪ್ರತಿ ವರ್ಷ 8 ಲಕ್ಷ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಎನ್‌ಸಿಆರ್‌ಬಿ ಪ್ರಕಾರ ಭಾರತದಲ್ಲಿ ಅತಿ ಹೆಚ್ಚು ಆತ್ಮಹತ್ಯೆಗಳು ನಡೆಯುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕ 4ನೇ ಸ್ಥಾನದಲ್ಲಿದೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಸೆಪ್ಟೆಂಬರ್‌ 10ರಂದು “ವಿಶ್ವ ಆತ್ಮಹತ್ಯೆ ತಡೆ ದಿನ’ ಆಚರಿಸುವ ಆರೋಗ್ಯ ಇಲಾಖೆ, ವಿವಿಧ ಜಾಗೃತಿ ಕಾರ್ಯಕ್ರಮ ನಡೆಸುತ್ತದೆ. ಸಾರ್ವಜನಿಕರು ರಾಜ್ಯದ ಯಾವುದೇ ಭಾಗದಿಂದ ಯಾವುದೇ ಶುಲ್ಕವಿಲ್ಲದೇ ತಮ್ಮ ದೂರವಾಣಿಯಿಂದ “104’ಕ್ಕೆ ಕರೆಮಾಡಿ ಆರೋಗ್ಯ ಸಂಬಂಧಿ ಮಾಹಿತಿ ಜತೆಗೆ “ಉಚಿತ ಆಪ್ತ ಸಮಾಲೋಚನೆ’ ಪಡೆಯಬಹುದು. 24*7 ಸೇವೆ ಲಭ್ಯವಿರುತ್ತದೆ.

ಮೂರು ವರ್ಷಗಳಿಂದ ಆತ್ಮಹತ್ಯೆ ಪ್ರವೃತ್ತಿ ಕರೆಗಳ ಸಂಖ್ಯೆ ಹೆಚ್ಚಾಗಿದೆ. ಯುವಜನರೇ ಹೆಚ್ಚು ಕರೆ ಮಾಡುತ್ತಿದ್ದು, ಆಪ್ತ ಸಮಾಲೋಚನೆ ಮೂಲಕ ಅವರನ್ನು ಆ ಮನಸ್ಥಿತಿಯಿಂದ ಹೊರ ತರುತ್ತಿದ್ದೇವೆ. ಆಪ್ತ ಸಮಾಲೋಚನೆ ಮೂಲಕ ಸಾವಿರಾರು ಜೀವ ಉಳಿಸಿದ ಹೆಮ್ಮೆ ಆರೋಗ್ಯವಾಣಿ ತಂಡಕ್ಕಿದೆ.
-ರಾಘವೇಂದ್ರ ಅಡೂರ್‌, ವ್ಯವಸ್ಥಾಪಕರು ಆರೋಗ್ಯವಾಣಿ

* ಜಯಪ್ರಕಾಶ್‌ ಬಿರಾದಾರ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ