ಲೋಕ ಚುನಾವಣೆಗೂ 1/3 ಸೀಟು ಹಂಚಿಕೆ
Team Udayavani, Jan 2, 2019, 12:54 AM IST
ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್‌ಗೆ ಮೂರನೇ ಒಂದು ಭಾಗ ಸಚಿವ ಸ್ಥಾನ ಹಂಚಿಕೆ ಮಾಡಲಾಗಿದ್ದು, ಮುಂದಿನ ಲೋಕಸಭೆ ಚುನಾವಣೆಗೂ ಇದೇ ಸೂತ್ರ ಅನ್ವಯವಾಗಲಿ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ಈ ಸೂತ್ರ ಅನ್ವಯವಾದಲ್ಲಿ ಜೆಡಿಎಸ್‌ಗೆ 10 ರಿಂದ 11 ಕ್ಷೇತ್ರ ಸಿಗಬಹುದು ಎಂದು ತಿಳಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇದೇ ತಿಂಗಳಲ್ಲಿ ಸೀಟು ಹಂಚಿಕೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿ ದರು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವಾಗ ಯಾವುದೇ ಷರತ್ತು ಇಲ್ಲ ಎಂದಿದ್ದರು. ಆ ನಂತರ ಕಾಂಗ್ರೆಸ್‌ನವರು ಷರತ್ತು ವಿಧಿಸಿದರು. ಎಲ್ಲದಕ್ಕೂ ಮೂರನೇ ಒಂದು ಭಾಗ ಎನ್ನುತ್ತಿದ್ದಾರೆ. ನಮಗೆ 10 ರಿಂದ 11 ಲೋಕಸಭೆ ಕ್ಷೇತ್ರ ಸಿಗಬಹುದು. ಆದರೆ, ಜಗಳ ತೆಗೆಯೋ ಅವಶ್ಯಕತೆ ಇಲ್ಲ. ನಾವು ಸಹಕರಿಸುತ್ತಿದ್ದೇವೆ. ರಾಜ್ಯ ನಾಯಕರೊಂದಿಗೆ ಚರ್ಚೆ ಬಳಿಕ ಸೀಟು ಹಂಚಿಕೆ ಸ್ಪಷ್ಟವಾಗಲಿದೆ. ಇಂಥದ್ದೇ ಕ್ಷೇತ್ರಗಳು ಬೇಕು ಎಂಬ ಬೇಡಿಕೆ ಇಟ್ಟಿಲ್ಲ ಎಂದು ದೇವೇಗೌಡರು ಹೇಳಿದ್ದಾರೆ.
ಪ್ರಧಾನಿಗೆ ತಿರುಗೇಟು: ರಾಜ್ಯದಲ್ಲಿ ರೈತರ ಸಾಲ ಮನ್ನಾ ಕುರಿತು ಪ್ರಧಾನಿ ಮೋದಿ ಅವರು ಮಾಹಿತಿ ಇಲ್ಲದೆ ಮಾತನಾಡಿದ್ದಾರೆ. ಕರ್ನಾಟಕದಲ್ಲಿ 800 ಅಲ್ಲ, 60 ಸಾವಿರ ರೈತರ ಸಾಲ ಮನ್ನಾ ಆಗಿದೆ. ರಾಜ್ಯದಲ್ಲಿ ಒಟ್ಟು 2.2 ಲಕ್ಷ ರೈತರು ಸಾಲಮನ್ನಾದ ಲಾಭ
ಪಡೆಯಲಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲ ರೈತರ ಸಾಲ ಮನ್ನಾ ಆಗಲಿದೆ ಎಂದು ತಿಳಿಸಿದರು. ಗುರುವಾರ ಬೆಂಗಳೂರಿನಲ್ಲಿ ಜೆಡಿಎಸ್ ನಾಯಕರ ಸಭೆ ಕರೆಯಲಾಗಿದೆ. ಅಲ್ಲಿ ನಿಗಮ -ಮಂಡಳಿ ನೇಮಕ ಕುರಿತು ಚರ್ಚೆ ಮಾಡಲಿದ್ದೇವೆ. ಜೆಡಿಎಸ್ ರಾಜ್ಯಾಧ್ಯಕ್ಷ
ಎಚ್.ವಿಶ್ವನಾಥ್ ರಾಜೀನಾಮೆ ಊಹಾಪೋಹ ಎಂದು ಹೇಳಿದರು.
ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಸಿನಿಮಾ ಮಾಡಲು ಅವಕಾಶ ಕೊಟ್ಟವರು ಯಾರು? ಹತ್ತು ವರ್ಷ ಪ್ರಧಾನಿಯಾಗಿ ಆಡಳಿತ
ನಡೆಸಿದವರು ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಹೇಗಾಗುತ್ತಾರೆ? ನಾನಾದರೆ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಎಂದು ಹೇಳಬಹುದು.
ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ