ರಕ್ಷಣೆ ಕೋರಿ ರಸ್ತೆಗಿಳಿದ ವೈದ್ಯರು

Team Udayavani, Jun 18, 2019, 3:09 AM IST

ಬೆಂಗಳೂರು: ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸೋಮವಾರ ದೇಶಾದ್ಯಂತ ನಡೆಸಿದ ಮುಷ್ಕರದ ಬಿಸಿ ಬೆಂಗಳೂರಿನಗೂ ತಟ್ಟಿದ್ದು, ನಗರದ ಕೆಲ ಸರ್ಕಾರಿ ಆಸ್ಪತ್ರೆಗಳು ಸೇರಿ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳು ಚಿಕಿತ್ಸೆಗೆ ಪರದಾಡಿದರು.

ಒಂದೆಡೆ ಮುಷ್ಕರದ ಮಾಹಿತಿ ಇಲ್ಲದೆ ದೂರದೂರಿನಿಂದ ಬಂದು ಹೊರರೋಗಿಗಳ ಘಟಕದ ಚೀಟಿಗಾಗಿ ಸಾಲಿನಲ್ಲಿ ನಿಂತ ರೋಗಿಗಳು, ಚೀಟಿ ಸಿಕ್ಕರೂ ವಿಭಾಗಗಳಲ್ಲಿ “ವೈದ್ಯರಿಲ್ಲ ನಾಳೆ ಬನ್ನಿ’ ಎಂಬ ಫ‌ಲಕ. ಮತ್ತೂಂದೆಡೆ ಹಣೆ, ಕೈ, ಕಾಲಿಗೆ ಬ್ಯಾಂಡೇಜ್‌ ಕಟ್ಟಿಕೊಂಡು ಮೊದಲು ನಮಗೆ ರಕ್ಷಣೆ ನೀಡಿ ಎಂದು ಘೋಷಣೆ ಕೂಗುತ್ತಿರುವ ವೈದ್ಯರು.

ಇದು ಬೆಂಗಳೂರಿನ ವಿಕ್ಟೋರಿಯಾ, ಬೌರಿಂಗ್‌ ಮತ್ತು ಲೇಡಿ ಕರ್ಜನ್‌, ವಾಣಿವಿಲಾಸ, ನಿಮ್ಹಾನ್ಸ್‌ ಸೇರಿದಂತೆ ಎಲ್ಲಾ ಖಾಸಗಿ ಆಸ್ಪತ್ರೆಗಳ ಮುಂದೆ ಸೋಮವಾರ ಕಂಡು ಬಂದ ದೃಶ್ಯಗಳು. ಕೋಲ್ಕತಾದಲ್ಲಿ ಇತ್ತೀಚೆಗೆ ನಡೆದ ವೈದ್ಯ ಪರಿಭಾ ಮುಖರ್ಜಿ ಅವರ ಮೇಲಿನ ಹಲ್ಲೆ ಖಂಡಿಸಿ ಐಎಂಎ ಸೋಮವಾರ ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿತ್ತು.

ಇದಕ್ಕೆ ನಗರದ ಕೆಲ ಸರ್ಕಾರಿ ಹಾಗೂ ಎಲ್ಲಾ ಖಾಸಗಿ ಆಸ್ಪತ್ರೆಗಳು ಸಂಪೂರ್ಣ ಬೆಂಬಲ ಸೂಚಿಸಿ, ಒಪಿಡಿ ಸೇವೆ ಸಂಪೂರ್ಣ ಸ್ಥಗಿತಗೊಳಿಸಿದ್ದವು. ವಿಕ್ಟೋರಿಯಾ, ನಿಮ್ಹಾನ್ಸ್‌, ಬೌರಿಂಗ್‌ ಮತ್ತು ಲೇಡಿ ಕರ್ಜನ್‌, ಕಿದ್ವಾಯಿ ಗಂಥಿ ಸಂಸ್ಥೆ, ಕಿಮ್ಸ್‌, ರಾಮಯ್ಯ ಆಸ್ಪತ್ರೆ ಸೇರಿದಂತೆ ನೂರಾರು ಖಾಸಗಿ ಆಸ್ಪತ್ರೆಗಳ ವೈದ್ಯರು ಆಸ್ಪತ್ರೆಗಳ ಮುಂಭಾಗ ಕಾನೂನು ಬಲ ನೀಡಿ, ವೈದ್ಯರನ್ನು ರಕ್ಷಿಸುವಂತೆ ಪ್ರತಿಭಟನೆ ನಡೆಸಿದರು.

ಇನ್ನು ಸೋಮವಾರದ ಮುಷ್ಕರದಲ್ಲಿ ರಾಜ್ಯದ 75 ಸಾವಿರ ವೈದ್ಯ ಸಿಬ್ಬಂದಿ ಸೇರಿದಂತೆ ನಗರದ 20 ಸಾವಿರಕ್ಕೂ ಹೆಚ್ಚು ವೈದ್ಯ ಸಿಬ್ಬಂದಿ, ವೈದ್ಯಕೀಯ ಸ್ನಾತಕ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಚಾಮರಾಜಪೇಟೆಯ ಭಾರತೀಯ ವೈದ್ಯಕೀಯ ಸಂಘದ ಕಚೇರಿ ಮುಂದೆ ಬೆಳಗ್ಗೆ ಸಂಘದ ರಾಜ್ಯ ಘಟಕದ ಪದಾಧಿಕಾರಿಗಳು ಹಾಗೂ ಸಾವಿರಾರು ವೈದ್ಯರು ಪ್ರತಿಭಟನೆ ನಡೆಸಿದರು. ಈ ವೇಳೆ ಟಿಪ್ಪುಸುಲ್ತಾನ್‌ ಅರಮನೆ ರಸ್ತೆಯಲ್ಲಿ ವಾಹನ ಸಂಚಾರ ಕೆಲಕಾಲ ವ್ಯತ್ಯಯವಾಗಿತ್ತು.

ಮಧ್ಯಾಹ್ನ 3 ಗಂಟೆಗೆ ವಿವಿಧ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು, ಐಎಂಎ, ಪಾನಾ ಸದಸ್ಯ ವೈದ್ಯರು ಭಾಗವಹಿಸಿ ಎರಡು ಗಂಟೆ ಕಾಲ ಪ್ರತಿಭಟನೆ ನಡೆಸಿದರು. “ನಾವು ವೈದ್ಯರು, ದೇವರಲ್ಲ, ವೈದ್ಯರಿಗೆ ರಕ್ಷಣೆ ನೀಡಿ. ವೈದ್ಯರ ಮೇಲಿನ ಹಲ್ಲೆಗೆ ಕಠಿಣ ಶಿಕ್ಷೆ ವಿಧಿಸಿ. ವೈದ್ಯರಿಗೆ ಕಾನೂನು ಬಲ ನೀಡಿ. ಹಲ್ಲೆಗಳು ಹೆಚ್ಚಾಗುತ್ತಿವೆ, ಚಿಕಿತ್ಸೆ ನೀಡುವ ವೈದ್ಯರೇ ಚಿಕಿತ್ಸೆಗೊಳಗಾಗುತ್ತಿದ್ದಾರೆ’ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.

ಆದೇಶ ಪಾಲಿಸದ ಸರ್ಕಾರಿ ಆಸ್ಪತ್ರೆಗಳು: ದೇಶಾದ್ಯಂತ ಭಾರತೀಯ ವೈದ್ಯಕೀಯ ಸಂಘ ಕರೆಕೊಟ್ಟಿದ್ದ ಮುಷ್ಕರದಲ್ಲಿ ಸಾಂಕೇತಿಕವಾಗಿ ಭಾಗವಹಿಸಿ, ರೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ಎಲ್ಲರೂ ಕರ್ತವ್ಯ ನಿರ್ವಹಿಸಬೇಕು ಎಂದು ಆರೋಗ್ಯ ಇಲಾಖೆ ಹಾಗೂ ಆರೋಗ್ಯ ಸಚಿವರು ಮನವಿ ಮಾಡಿದ್ದರೂ ಬೆಂಗಳೂರು ವೈದ್ಯಕೀಯ ಕಾಲೇಜು ಸಮುಚ್ಛಯದ ಕೆ.ಆರ್‌.ಮಾರುಕಟ್ಟೆ ಬಳಿಯ ವಿಕ್ಟೋರಿಯಾ, ವಾಣಿವಿಲಾಸ ಹಾಗೂ ಶಿವಾಜಿನಗರದ ಬೌರಿಂಗ್‌ ಆಸ್ಪತ್ರೆಗಳ ವೈದ್ಯರು ಪ್ರತಿಭಟನೆಗೆ ಬೆಂಬಲಿಸಿದ್ದರಿಂದ, ಹೊರರೋಗಿಗಳ ಘಟಕಗಳಲ್ಲಿ ಚಿಕಿತ್ಸೆ ಸಿಗದೇ ದೂರದ ಊರುಗಳಿಂದ ಬಂದಿದ್ದ ಸಾವಿರಾರು ರೋಗಿಗಳು ಚಿಕಿತ್ಸೆ ಸಿಗದೇ ಪರದಾಡಿದರು.

ಬೌರಿಂಗ್‌ನಲ್ಲಿ ಒಂದೆಡೆ ಒಪಿಡಿ ಕಾರ್ಡ್‌ ಕೊಡುತ್ತಿದ್ದು, ಮತ್ತೂಂದೆಡೆ ವೈದ್ಯರು ಪ್ರತಿಭಟನೆ ಮಾಡುತ್ತಿದ್ದೇವೆ ನಾಳೆ ಬನ್ನಿ ಎಂದು ಮನವಿ ಮಾಡಿದ್ದರಿಂದ, “ಮತ್ತೆ ನಾಳೆ ಬಂದು ಒಪಿಡಿ ಸೀಲ್‌ ಹಾಕಿಸಿಕೊಂಡು ಬರಬೇಕು,’ ಎಂದು ರೋಗಿಗಳು ಹಾಗೂ ಅವರ ಸಂಬಂಧಿಕರು ಬೇಸರ ವ್ಯಕ್ತಪಡಿಸಿದರು. ಇದೇ ಪರಿಸ್ಥಿತಿ ವಿಕ್ಟೋರಿಯಾ, ವಾಣಿವಿಲಾಸದಲ್ಲೂ ಇತ್ತು. ಈ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕೇಳಿದರೆ ಆ ಆಸ್ಪತ್ರೆಗಳು ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುತ್ತವೆ ಎಂದು ಉತ್ತರಿಸಿದರು. ಇನ್ನು ಈ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವ್ಯತ್ಯಯಕ್ಕೆ ವೈದ್ಯಕೀಯ ಶಿಕ್ಷಣ ಇಲಾಖೆ ಬೇಜವಾಬ್ದಾರಿಯೇ ಕಾರಣ ಎಂದು ಕೆಲವರು ಬೇಸರ ವ್ಯಕ್ತಪಡಿಸಿದರು.

ನಿಮ್ಹಾನ್ಸ್ ವೈದ್ಯರು ಫ‌ಲಕಗಳನ್ನು ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸಿದ ಪರಿಣಾಮ ಹೊರರೋಗಿಗಳ ವಿಭಾಗದ ಬಳಿ ರೋಗಿಗಳು ಕಾಯುವಂತಾಗಿತ್ತು. ಮೆರವಣಿಗೆ ಹಿನ್ನೆಲೆ ವಾಹನ ಓಡಾಟಕ್ಕೆ ಸಮಸ್ಯೆಯುಂಟಾಗಿತ್ತು. ಇನ್ನು ನಿಮ್ಹಾನ್ಸ್ ವೈದ್ಯರು ಮುಷ್ಕರ ನಡೆಸುವ ಬಗ್ಗೆ ನಿರ್ದೇಶಕರಿಗೆ ಮಾಹಿತಿ ನೀಡಿರಲಿಲ್ಲ. ಸಾಂಕೇತಿಕ ಪ್ರತಿಭಟನೆ ಮಾಡಿ ಕರ್ತವ್ಯಕ್ಕೆ ಬರುವಂತೆ ವೈದ್ಯರಿಗೆ ಆಸ್ಪತ್ರೆಯ ನಿರ್ದೇಶಕ ಗಂಗಾಧರ್‌ ಮನವಿ ಮಾಡಿಡರು.

ವೈದ್ಯರ ತರಾಟೆಗೆ ತೆಗೆದುಕೊಂಡ ರೋಗಿಗಳು: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಒಪಿಡಿ ಸೇವೆ ಇಲ್ಲ ಎಂದು ತಿಳಿದ ಕೆಲ ರೋಗಿಗಳು ಆಸ್ಪತ್ರೆ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು. ಪ್ರತಿಭಟನಾನಿರತ ವೈದ್ಯರ ಬಳಿ ತೆರಳಿದ ರೋಗಿಯೊಬ್ಬರು, “ಇದು ಸರ್ಕಾರಿ ಆಸ್ಪತ್ರೆ. ಬಂದ್‌ ಮಾಡುವುದಿಲ್ಲ ಎಂದು ಬಂದಿದ್ದೇವೆ. ಒಪಿಡಿ ಕಾರ್ಡ್‌ ನೀಡುತ್ತಿದ್ದೀರಿ, ಆದರೆ, ಆಸ್ಪತ್ರೆಯಲ್ಲಿ ಡಾಕ್ಟರ್‌ಗಳೇ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿರು. ಈ ವೇಳೆ ಪ್ರತಿಭಟನೆ ಉದ್ದೇಶವನ್ನು ವೈದ್ಯರು ಆ ರೋಗಿಗಳಿಗೆ ಮನವರಿಕೆ ಮಾಡಿಕೊಟ್ಟರು. ತುರ್ತು ಇದ್ದಲ್ಲಿ ಒಪಿಡಿಯಲ್ಲಿ ಚಿಕಿತ್ಸೆ ನೀಡುವ ಬಗ್ಗೆ ಭರವಸೆ ನೀಡಿದರು.

ನಮಗೆ ಕನಿಷ್ಠ ಸುರಕ್ಷತೆಯ ಕಾನೂನು ತನ್ನಿ: ವಿಕ್ಟೋರಿಯಾ ಆಸ್ಪತ್ರೆ ಬಳಿ ನಡೆದ ಪ್ರತಿಭಟನೆಯಲ್ಲಿ ವೈದ್ಯ ಡಾ.ನಿತೀನ್‌ ಮಾತನಾಡಿ, ಸರ್ಕಾರ ಪ್ರತಿಭಟನೆ ಮಾಡದಂತೆ ಸುತ್ತೋಲೆ ಕೊಟ್ಟಿದೆ. ಆದರೆ, ಇಂದು ನಮಗೆ ಭದ್ರತೆ ಅನಿವಾರ್ಯವಾಗಿದೆ. ನಾವು ಪ್ರತಿಭಟನೆ ಮಾಡುತ್ತಿಲ್ಲ, ನಮ್ಮ ಬೇಡಿಕೆ ಮಂಡಿಸುತ್ತಿದ್ದೇವೆ. ರಾಜಕೀಯ ನಾಯಕರ ರೀತಿ ನಾವೇನು ಟೋಲ್‌ ಫ್ರೀ ಅಥವಾ ಬೇರೆ ವ್ಯವಸ್ಥೆ ಕೇಳುತ್ತಿಲ್ಲ. ಕನಿಷ್ಠ ಸುರಕ್ಷತೆಯ ಕಾನೂನು ತನ್ನಿ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ವೈದ್ಯರ ಹಲ್ಲೆ ಅಣಕು ಪ್ರದರ್ಶನ: ಟೌನ್‌ಹಾಲ್‌ ಹಾಗೂ ವಿಕ್ಟೋರಿಯಾ ಆಸ್ಪತ್ರೆಗಳ ಮುಂದೆ ರೋಗಿಗಳ ಸಂಬಂಧಿಕರು ವೈದ್ಯರ ಮೇಲೆ ಹಲ್ಲೆ ನಡೆಸುವ ಕುರಿತು, ಪ್ರತಿಭಟನಾ ನಿರತರು ಅಣಕು ಪ್ರದರ್ಶನ ನೀಡಿದರು. ಮೊದಲು ಚಿಕಿತ್ಸೆಗೆ ರೋಗಿ ಬರುವುದು, ಆತ ಚಿಕಿತ್ಸೆ ಫ‌ಲಕಾರಿಯಾಗದೇ ಸಾವಿಗೀಡಾಗುವುದು. ಆ ಬಳಿಕೆ ರೋಗಿ ಸಂಬಂಧಿಕಗಳು ವೈದ್ಯರೊಡನೆ ಜಗಳ ಆರಂಭಿಸಿ ಹಲ್ಲೆ ಮಾಡುವುದು. ಈ ರೀತಿಯೇ ಪಶ್ಚಿಮ ಬಂಗಾಳದಲ್ಲಿ ನಡೆದ ಹಾಗೂ ಈ ಹಿಂದೆ ನಡೆದ ವೈದ್ಯರ ಹಲ್ಲೆ ಘಟನೆಗಳ ವಿವಿಧ ಮಾದರಿಗಳ ಅಣಕು ಪ್ರದರ್ಶನ ನೀಡಿದರು.

ಸರ್ಕಾರಿ ಆಸ್ಪತ್ರೆಯಲ್ಲಿ ಸಾಂಕೇತಿಕ ಪ್ರತಿಭಟನೆ: ಮುಷ್ಕರದ ಹಿನ್ನೆಲೆ ನಗರದ ಕಿದ್ವಾಯಿ ಗಂಥಿ ಸಂಸ್ಥೆ, ಕೆ.ಸಿ.ಜನರಲ್‌ ಆಸ್ಪತ್ರೆ, ಜಯನಗರ ಸರ್ಕಾರಿ ಆಸ್ಪತ್ರೆ ಸೇರಿದಂತೆ ಬಹುತೇಕ ಸರ್ಕಾರಿ ಆಸ್ಪತ್ರೆಗಳು, ಬಿಬಿಎಂಪಿ ಆಸ್ಪತ್ರೆಗಳಲ್ಲಿ ವೈದ್ಯರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಬಳಿಕ ಕಪ್ಪು ಬಟ್ಟೆ ಧರಿಸಿ ಸೇವೆಗೆ ಹಾಜರಾಗಿದ್ದರು. ಇನ್ನು ವಿಕ್ಟೋರಿಯಾ, ಬೌರಿಂಗ್‌ ಆಸ್ಪತ್ರೆಯಲ್ಲಿ ಒಪಿಡಿ ಸೇವೆ ಸಿಗದ ಕಾರಣ ಈ ಆಸ್ಪತ್ರೆಗಳ ಬಳಿ ರೋಗಿಗಳ ದಟ್ಟಣೆ ಹೆಚ್ಚಿತ್ತು.

ಮಗುವಿಗೆ ಎರಡೂವರೆ ತಿಂಗಳಾಗಿದ್ದು, ಚುಚ್ಚುಮದ್ದು ಹಾಕಿಸಲು ಬಂದಿದ್ದೇವೆ. ಅರ್ಧ ಗಂಟೆ ಸಾಲಲ್ಲಿ ನಿಂತು ಒಪಿಡಿ ಚೀಟಿ ತಂದೆವು. ಆದರೆ, ನಾಳೆ ಬನ್ನಿ ಹೇಳುತ್ತಿದ್ದಾರೆ. ಆ ಚುಚ್ಚು ಮದ್ದನ್ನು ವಾರದಲ್ಲಿ ಒಂದು ದಿನ ಮಾತ್ರ ಹಾಕುತ್ತಿದ್ದು, ಮುಂದಿನ ವಾರದವರೆಗೆ ಕಾಯಬೇಕಿದೆ.
-ನೂರ್‌ ಕೌಸರ್‌, ಬೌರಿಂಗ್‌ ಆಸ್ಪತ್ರೆಗೆ ಬಂದಿದ್ದ ಮಹಿಳೆ

ಗಂಟೆಗಟ್ಟಲೇ ಕಾದು ಒಪಿಡಿ ಚೀಟಿ ಪಡೆದಿದ್ದೇನೆ. ಆಸ್ಪತ್ರೆ ಒಳ ಹೋದರೆ ವೈದ್ಯರೇ ಇಲ್ಲ. ತುರ್ತು ಇದ್ದರೆ ತುರ್ತು ನಿಗಾ ಘಟಕ್ಕೆ ತೆರಳಿ ಎನ್ನುತ್ತಾರೆ. ಅಲ್ಲಿ ಹೋದರೆ ದೊಡ್ಡ ಸಾಲೇ ಇದೆ. ಇತ್ತ ಖಾಸಗಿ ಆಸ್ಪತ್ರೆಗಳ್ಲಲೂ ಸೇವೆ ಸಿಗದೆ ಸಾಷಕುr ಸಮಸ್ಯೆಯಾಗಿದೆ.
-ಆನಂದ, ವಿಕ್ಟೋರಿಯಾದಲ್ಲಿದ್ದ ರೋಗಿ

ವೈದ್ಯರ ಮೇಲಿನ ಹಲ್ಲೆಯನ್ನು ಪೋಕ್ಸೊ ವ್ಯಾಪ್ತಿಗೆ ತಂದು ಹಲ್ಲೆ ಮಾಡಿದವರಿಗೆ ಜಾಮೀನು ಸಿಗದಂತೆ ಮಾಡಿದರೆ ಮಾತ್ರ ಇಂಥ ಘಟನೆ ತಡೆಯಬಹುದು. ಸರ್ಕಾರ ಈ ಕುರಿತು ಕ್ರಮಕ್ಕೆ ಮುಂದಾಗದಿದ್ದರೆ ಮುಂದಿನ ದಿನಗಳಲ್ಲಿ ತುರ್ತು ಚಿಕಿತ್ಸೆ ಸ್ಥಗಿತಗೊಳಿಸಿ ಪ್ರತಿಭಟಿಸಲಾಗುವುದು.
-ಡಾ.ಎಸ್‌.ಶ್ರೀನಿವಾಸ, ಐಎಂಎ ರಾಜ್ಯ ಕಾರ್ಯದರ್ಶಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಮುಂದಿನ ಐದು ವರ್ಷಗಳ ಕಾಲ ಹೊಸ ಅಪಾರ್ಟ್‌ಮೆಂಟ್‌ಗಳ ನಿರ್ಮಾಣ ಯೋಜನೆ ನಿಷೇಧಕ್ಕೆ ಸರ್ಕಾರ ಚಿಂತನೆ ನಡೆಸಿರುವ ಬೆನ್ನಲ್ಲೇ ನಿರ್ಮಾಣ ಹಂತದಲ್ಲಿರುವ...

  • ಬೆಂಗಳೂರು: ನಗರದಲ್ಲಿ ಪ್ಲಾಸ್ಟಿಕ್‌ ಬಳಸುವ ವ್ಯಾಪಾರಿಗಳ ಮೇಲೆ ದಂಡ ಪ್ರಯೋಗಿಸುವ ಅಸ್ತ್ರವನ್ನು ಬಿಬಿಎಂಪಿ ಮುಂದುವರಿಸಿದೆ. ಪ್ಲಾಸ್ಟಿಕ್‌ ಬಳಕೆಯ ನಿಷೇಧ...

  • ಬೆಂಗಳೂರು: ನಗರದ ಹಲವು ಭಾಗಗಳಲ್ಲಿ ಈಗಾಗಲೇ ಕಾಮಗಾರಿಗಳು ಸ್ಪರ್ಧೆಗೆ ಇಳಿದಂತೆ ಪ್ರಾರಂಭವಾಗಿವೆ. ಹೆಬ್ಬಾಳವನ್ನು (ಹೆಬ್ಬಾಳ ಜಂಕ್ಷನ್‌)ಕೇಂದ್ರೀಕರಿಸಿದಂತೆ...

  • ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣ ಸಂಬಂಧ ವಿಶೇಷ ಕಾರ್ಯಾಚರಣೆ ನಡೆಸಿದ ಎಸ್‌ಐಟಿ ಅಧಿಕಾರಿಗಳು ಸೋಮವಾರ ತಡರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ...

  • ಬೆಂಗಳೂರು: ರಾಜಧಾನಿಯ ಮಂದಿರ ಮಠಗಳನ್ನು ಸೇರಿದಂತೆ ವಿವಿಧೆಡೆ ಶ್ರದ್ಧಾ - ಭಕ್ತಿಯಿಂದ ಮಂಗಳವಾರ ಗುರುಪೂರ್ಣಿಮೆ ಆಚರಿಸಲಾಯಿತು. ನಗರದ ಎಲ್ಲಾ ಸಾಯಿ ಬಾಬಾ ದೇವಸ್ಥಾನಗಳಲ್ಲಿ,...

ಹೊಸ ಸೇರ್ಪಡೆ