ಎಲಿವೇಟೆಡ್‌ ರಸ್ತೆಯಲ್ಲಿ ಬಸ್‌ಗಳಿಗೆ ಪ್ರತ್ಯೇಕ ಪಥ

Team Udayavani, May 15, 2019, 3:07 AM IST

ಬೆಂಗಳೂರು: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಎಲಿವೇಟೆಡ್‌ ಕಾರಿಡಾರ್‌ಗಳಲ್ಲಿ ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡಲು ಉದ್ದೇಶಿಸಿದ್ದು, ಬಸ್‌ ಸಂಚಾರಕ್ಕಾಗಿಯೇ ಪ್ರತ್ಯೇಕ ಪಥ ನಿರ್ಮಿಸಲು ನಿರ್ಧರಿಸಲಾಗಿದೆ.

ಎತ್ತರಿಸಿದ ಸೇತುವೆಗಳು ಖಾಸಗಿ ವಾಹನಗಳಿಗೆ ಉತ್ತೇಜನ ನೀಡುತ್ತವೆ ಎಂಬ ಆರೋಪ ಇದೆ. ಆದರೆ, ನಗರದಲ್ಲಿ ತಲೆಯೆತ್ತಲಿರುವ ಆರು ಎಲಿವೇಟೆಡ್‌ ಕಾರಿಡಾರ್‌ಗಳು ಸಾರ್ವಜನಿಕ ಸಾರಿಗೆಗಾಗಿ ಪ್ರತ್ಯೇಕ ಪಥವನ್ನು ಮೀಸಲಿಡಲಿವೆ ಎಂದು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್‌ಡಿಸಿಎಲ್‌) ತಿಳಿಸಿದೆ.

ಈ ಕುರಿತು ಮಾಹಿತಿ ನೀಡಿದ ಕೆಆರ್‌ಡಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಾದ ಬಿ.ಎಸ್‌. ಶಿವಕುಮಾರ್‌, “ಉದ್ದೇಶಿತ ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣಕ್ಕೆ ಸಂಬಂಧಿಸಿದ ಯೋಜನೆಯು ನಾಲ್ಕು ಹಂತಗಳಲ್ಲಿ ಅನುಷ್ಠಾನಕ್ಕೆ ಬರಲಿದೆ.

ಸಂಚಾರದಟ್ಟಣೆ ನಿವಾರಣೆ, ತಡೆರಹಿತ ಸಾರಿಗೆ ಹಾಗೂ ಪ್ರಯಾಣ ಸಮಯ ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗುತ್ತದೆ. ಇದರಲ್ಲಿ ಸಾರ್ವಜನಿಕ ಸಾರಿಗೆಗೆ ಪ್ರತ್ಯೇಕ ಪಥ ನಿರ್ಮಿಸಲಾಗುತ್ತಿದೆ’ ಎಂದರು.

3 ಕಿ.ಮೀ.ಗೊಂದು ನಿಲ್ದಾಣ; ಬೈಕ್‌ಗಳಿಗಿಲ್ಲ ಪ್ರವೇಶ: ಅಲ್ಲದೆ, ಪ್ರತಿ ಮೂರು ಕಿ.ಮೀ.ಗೆ ಒಂದರಂತೆ ಬಸ್‌ ನಿಲ್ದಾಣಗಳನ್ನು ಹೊಂದಿರುತ್ತವೆ. ಈ ಕಾರಿಡಾರ್‌ಗಳು ಸಮಯ ಉಳಿತಾಯದ ಜತೆಗೆ ಜೀವರಕ್ಷಕ ಕಾರಿಡಾರ್‌ಗಳಾಗಿ ನಿರ್ಮಾಣಗೊಳ್ಳುತ್ತವೆ.

ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಸಂಚಾರವನ್ನು ಇಲ್ಲಿ ನಿರ್ಬಂಧಿಸಲಾಗುವುದರಿಂದ ಅಪಘಾತಗಳ ಸಾಧ್ಯತೆ ಪ್ರಮಾಣ ಕಡಿಮೆ ಇರಲಿದೆ. ಕಡಿಮೆ ಸಿಗ್ನಲ್‌ಗ‌ಳು ಇರಲಿವೆ ಮತ್ತು ಅಡೆತಡೆಗಳು ಕಡಿಮೆ ಇರುವುದರಿಂದ ವಾಹನಗಳು ದಟ್ಟಣೆಯಲ್ಲಿ ನಿಲ್ಲುವುದು ಕಡಿಮೆಯಾಗುತ್ತದೆ. ಹಾಗೂ ಇದರಿಂದ ಬೆಂಗಳೂರು ನಗರದಲ್ಲಿ ವಾಯು ಮಾಲಿನ್ಯ ಕಡಿಮೆಯಾಗಲಿದೆ ಎಂದೂ ಅವರು ಸ್ಪಷ್ಟಪಡಿಸಿದರು.

“ನಾವು ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಎಲಿವೇಟೆಡ್‌ ಕಾರಿಡಾರ್‌ ಯೋಜನೆಯು ನಗರದ ಸಂಚಾರದಟ್ಟಣೆ ಸಮಸ್ಯೆಗೆ ಪ್ರಮುಖ ಪರಿಹಾರ ಆಗಲಿದೆ. ರೈಲು ಜಾಲ, “ನಮ್ಮ ಮೆಟ್ರೋ’ ಎರಡೂ ಹಂತಗಳು, ಮೇಲ್ಸೇತುವೆಗಳು, ಆರ್‌ಒಬಿಗಳು ಮತ್ತು ವರ್ತುಲ ರಸ್ತೆಗಳೊಂದಿಗೆ ಈ ಎಲಿವೇಟೆಡ್‌ ಕಾರಿಡಾರ್‌ ಕೂಡ ಬರುವುದರಿಂದ ಬೆಂಗಳೂರು ನಗರದ ಸಾರಿಗೆ ಸಮಸ್ಯೆಗಳನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರತಿ 2 ಮೀ.ಗೆ ಒಂದು ಕಾರು!: ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿ ಎರಡು ಮೀಟರ್‌ಗೊಂದು ಕಾರು ರಸ್ತೆಯಲ್ಲಿರುತ್ತದೆ! ಹೌದು, ಇದನ್ನು ಸ್ವತಃ ಕೆಆರ್‌ಡಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್‌. ಶಿವಕುಮಾರ್‌ ತಿಳಿಸಿದ್ದಾರೆ. ನಗರದ ಗಣನೀಯ ಪ್ರಮಾಣದ ಬೆಳವಣಿಗೆಯು ಹಲವಾರು ಸಮಸ್ಯೆಗಳನ್ನು ಸೃಷ್ಟಿಸಿದೆ. ಇದರಲ್ಲಿ ಸಾರಿಗೆ ಮೂಲಸೌಕರ್ಯ ಪ್ರಮುಖವಾದುದು.

ಪ್ರಸ್ತುತ ಪ್ರತಿ ಕಿ.ಮೀ. ರಸ್ತೆಯಲ್ಲಿ 500ಕ್ಕೂ ಹೆಚ್ಚು ಕಾರುಗಳನ್ನು ಇಲ್ಲಿ ಕಾಣಬಹುದು. ಇದರರ್ಥ ಪ್ರತಿ 2 ಮೀಟರ್‌ಗೆ ಒಂದು ಕಾರು ರಸ್ತೆಯಲ್ಲಿರುತ್ತದೆ. ಇದು ನಗರದ ರಸ್ತೆಗಳ ಪರಿಸ್ಥಿತಿ. ಟ್ರಾಫಿಕ್‌ ಸಮಸ್ಯೆ ದಿನದಿಂದ ದಿನಕ್ಕೆ ದೈತ್ಯವಾಗಿ ಬೆಳೆಯುತ್ತಿದ್ದು, ಪರಿಹಾರ ಸಂಕೀರ್ಣವಾಗುತ್ತಿದೆ ಎಂದು ಹೇಳಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ