ಫೆ.14ಕ್ಕೆ ಬಾಯ್ಫ್ರೆಂಡ್ ಜತೆ ಕಾಲೇಜಿಗೆ ಬರಬೇಕು!
Team Udayavani, Jan 14, 2017, 3:45 AM IST
ಬೆಂಗಳೂರು: “ಫೆ.14ರೊಳಗೆ ಪ್ರತಿಯೊಬ್ಬ ವಿದ್ಯಾರ್ಥಿನಿಯೂ ಒಬ್ಬ ಬಾಯ್ಫ್ರೆಂಡ್ ಹೊಂದಿರಬೇಕು. ಅಂದು ಬಾಯ್ಫ್ರೆಂಡ್ ಜತೆಯೇ ಕ್ಯಾಂಪಸ್ಗೆ ಬರಬೇಕು. ಭದ್ರತೆ ದೃಷ್ಟಿಯಿಂದ ಇದು ಕಡ್ಡಾಯ. ಬಾಯ್ಫ್ರೆಂಡ್ ಇಲ್ಲದಿದ್ದರೆ ಕ್ಯಾಂಪಸ್ಗೆ ಪ್ರವೇಶ ನೀಡಲಾಗುವುದಿಲ್ಲ.’
– ಮೈಸೂರು ರಸ್ತೆಯ ಆರ್.ವಿ. ಎಂಜಿನಿಯರಿಂಗ್ ಕಾಲೇಜಿನ ಹೆಸರಲ್ಲಿ ಇಂತಹ ಸೂಚನೆಯುಳ್ಳ ನಕಲಿ ಸುತ್ತೋಲೆಯೊಂದು ವಾಟ್ಸ್ಆ್ಯಪ್ನಲ್ಲಿ ಹರಿದಾಡಿ ಭಾರೀ ಸುದ್ದಿ ಮಾಡಿದೆ.
ಈ ಸುತ್ತೋಲೆಯನ್ನು ಕಂಡ ಕಾಲೇಜಿನ ವಿದ್ಯಾರ್ಥಿನಿಯರು ಬೆಚ್ಚಿಬಿದ್ದಿದ್ದು, ತಕ್ಷಣ ಕಾಲೇಜಿನ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದಾರೆ. ಬಳಿಕ ಅದು ನಕಲಿ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಈ ಸುತ್ತೋಲೆ ಸಂಬಂಧ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಎನ್. ಸುಬ್ರಮಣ್ಯ ಅವರು, ನಮ್ಮ ಕಾಲೇಜಿನ ಹೆಸರಲ್ಲಿ ವಾಟ್ಸ್ಆ್ಯಪ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುತ್ತೋಲೆ ನಕಲಿ. ಈ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಪಷ್ಟಪಡಿಸಿದ್ದೇವೆ. ಅಲ್ಲದೆ, ಇಂತಹ ವಿವಾದಾತ್ಮಕ ಸುತ್ತೋಲೆ ಸೃಷ್ಟಿಸಿ ಕಾಲೇಜಿನ ಹೆಸರಲ್ಲಿ ಹರಿಬಿಟ್ಟಿರುವವರು ಯಾರು ಎಂಬುದನ್ನು ಪತ್ತೆ ಹಚ್ಚುವಂತೆ “ಸೈಬರ್ ಕ್ರೈಂ’ ಪೊಲೀಸರಿಗೆ ದೂರು ನೀಡಿರುವುದಾಗಿ ಹೇಳಿದ್ದಾರೆ.