ಸಂತೇಲಿ ಭಾವ ಬಣ್ಣಗಳ ಬೆರಗು


Team Udayavani, Jan 7, 2019, 6:57 AM IST

santeli.jpg

ಬೆಂಗಳೂರು: ಮಂದ ಬೆಳಕು, ಚುಮು ಚುಮು ಚಳಿ ನಡುವೆ ರಸ್ತೆ ಇಕ್ಕೆಲಗಳಲ್ಲೆಲ್ಲಾ ಬಣ್ಣ ಬಣ್ಣದ ಚಿತ್ತಾರಗಳು ಅರಳಿ ನಿಂತಿದ್ದವು. ಸೂರ್ಯನ ರಶ್ಮಿ ಇಳೆಗೆ ಸೋಂಕುವ ಮುನ್ನವೇ ಕಾಮನಬಿಲ್ಲಿನ ಬಣ್ಣವನ್ನು ಮೆತ್ತಿಕೊಂಡು ನಿಂತಿದ್ದ ಕುಮಾರಕೃಪ ರಸ್ತೆ, ಕಲಾರಾಧಕರಿಗೆ ತರಾವರಿ ಕಥೆ ಹೇಳಲು ಸಿದ್ಧವಾಗಿತ್ತು.

ಕೆಲವು ಚಿತ್ರಗಳು ಗ್ರಾಮೀಣ ಸೊಗಡನ್ನು ಬಿಚ್ಚಿಟ್ಟರೆ, ಇನ್ನೂ ಕೆಲವು ಹಂಪಿ, ಅಜಂತ-ಎಲ್ಲೋರ ಸೇರಿದಂತೆ ಐತಿಹಾಸಿಕ ಮತ್ತು ಸಂಪ್ರದಾಯಿಕ ಕಥೆಗಳನ್ನು ತೆರೆದಿಟ್ಟವು. ಕಲಾಕೃತಿಗಳ ಬಣ್ಣಗಳ ಬಿನ್ನಾಣ ಮತ್ತು ವಿದೇಶಿಯರ ಆಗಮನದಿಂದಾಗಿ ರಸ್ತೆಗಳು ರಾಜ ಕಳೆಯಿಂದ ಬೀಗಿದರೆ, ಅತ್ತ ಕಲಾರಸಿಕರು ಬೆಳಗ್ಗೆಯಿಂದ ರಾತ್ರಿವರೆಗೂ “ಭಾವ ಬಣ್ಣಗಳ ಮೆರವಣಿ’ಗೆಯಲ್ಲಿ ತೇಲಿದರು.

ಭಾನುವಾರ ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ನಡೆದ ಕರ್ನಾಟಕ ಚಿತ್ರಕಲಾ ಪರಿಷತ್ತಿನ 16ನೇ ಚಿತ್ರಸಂತೆ, ದೇಶಿಯ ಹಿರಿಯ ಮತ್ತು ಕಿರಿಯರ ಕಲಾವಿದರ “ಮಹಾ ಸಂಗಮ’ವಾಗಿತ್ತು. ಕಣ್ಣಾಯಿಸಿದಷ್ಟು ದೂರವೂ ಜನ ಜಂಗುಳಿ ಇತ್ತು. ರಸ್ತೆಯುದ್ದಕ್ಕೂ ಕಲಾಕೃತಿಗಳ ಭಾವ-ಬಿಂಬಗಳೇ ಸಂವಾದ ನಡೆಸುತ್ತಿದ್ದರೆ, ಕಲಾ ಪ್ರೇಮಿಗಳು ಮತ್ತು ಕಲಾ ಪೋಷಕರು ಕಲೆಯನ್ನು ಮನದುಂಬಿ ಆಸ್ವಾದಿಸಿದರು.

ನಾಡಿನ ಕಲಾ ಪರಂಪರೆ ಜತೆಗೆ ಅನ್ಯ ರಾಜ್ಯಗಳ ಕಲೆ ಮತ್ತು ಸಂಸ್ಕೃತಿಯ ಪ್ರದರ್ಶನದ ಮೂಲಕ ಭಾವೈಕ್ಯತೆ ಸಂಕೇತ ಮತ್ತು ರಾಷ್ಟ್ರೀಯ ಹಬ್ಬದ ವಾತಾವರಣ ನಿರ್ಮಾಣ ಮಾಡಿಕೊಟ್ಟ ಚಿತ್ರ ಸಂತೆಯಲ್ಲಿ ಕರ್ನಾಟಕ, ಗೋವಾ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಒರಿಸ್ಸಾ, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶ ಸೇರಿ 16 ರಾಜ್ಯಗಳ 1,450ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದರು.

ಸಾಂಪ್ರದಾಯಿಕ ಮೈಸೂರು ಚಿತ್ರಕಲಾ ಶೈಲಿ, ತಂಜಾವೂರು, ರಾಜಸ್ಥಾನಿ, ಮಧುಬನಿಯ ಶೈಲಿ, ತೈಲ ಮತ್ತು ಜಲವರ್ಣಗಳ ಕಲಾಕೃತಿಗಳ ಜತೆಗೆ, ಅಕ್ರಿಲಿಕ್‌, ಕೊಲಾಜ್‌, ಲಿಥೋಗ್ರಾಫ್ ಮೊದಲಾದ ಪ್ರಕಾರಗಳ ಕಲಾಕೃತಿಗಳು ಪ್ರದರ್ಶನಕ್ಕಿದ್ದವು. ಪೆನ್ಸಿಲ್‌ಗ‌ಳಿಂದ ಸ್ಥಳದಲ್ಲೇ ಭಾವಚಿತ್ರ ಬಿಡಿಸುವ ಕಲಾವಿದರು ಮತ್ತು ದಾರಿ ಮಧ್ಯೆ ಅಲ್ಲಿಲ್ಲಿ ಇರಿಸಲಾಗಿದ್ದ ಬುದ್ಧನ ಕಲಾಕೃತಿಗಳು ಮನಸೆಳೆದವು.

ಅನ್ನದಾತರ ಆತ್ಮಹತ್ಯೆ ಮತ್ತು ಹೆಣ್ಣು ಮಕ್ಕಳ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಕುರಿತಾದ ಕಲಾಕೃತಿಗಳು, ವಿಶೇಷ ಚೇತನರ ಕಲ್ಪನೆಯಲ್ಲಿ ಅರಳಿದ ಚಿತ್ರಗಳು, ಪ್ರಧಾನಿ ನರೇಂದ್ರ ಮೋದಿ ಅವರ ಎಂಟು ಮುಖದ ಕಲಾಕೃತಿ, ಮಹಾತ್ಮಗಾಂಧಿ ವೇಷ ತೊಟ್ಟ ವ್ಯಕ್ತಿ, ಬಿದಿರಿನಿಂದ ನಿರ್ಮಾಣ ಮಾಡಿದ್ದ ಗಾಂಧಿ ಕುಟೀರ ಹಾಗೂ ಗಾಂಧೀಜಿ ಕನ್ನಡಕ ಈ ಸಲದ ಚಿತ್ರಸಂತೆಯ ವಿಶೇಷತೆಗಳಾಗಿದ್ದವು.

12 ಲಕ್ಷ ರೂ.ಮೌಲ್ಯದ ಕಲಾಕೃತಿ: ಭಾನುವಾರದ ಚಿತ್ರಸಂತೆಯಲ್ಲಿ ದೇಶದ ಹೆಸರಾಂತ ಕಲಾವಿದರ ಲಕ್ಷಾಂತರ ರೂ. ಮೌಲ್ಯದ ಅಪರೂಪದ ಮತ್ತು ವಿಶಿಷ್ಟ ಕಲಾಕೃತಿಗಳು ಗಮನ ಸೆಳೆದವು. ನೆರೆಯ ತಮಿಳುನಾಡಿನ ಕಲಾವಿದ ಗೋಕುಲಂ ಅವರು ರಚಿಸಿದ 12 ಲಕ್ಷ ರೂ.ಮೌಲ್ಯದ ಕಲಾಕೃತಿಗೆ ಕಲಾರಸಿಕರು ಮನಸೋತರು.

ಮಧುರೈನ ವೆಂಕಟೇಶ್ವರ ದೇವಸ್ಥಾನದ ಎದುರು ಗ್ರಾಮೀಣ ಪ್ರದೇಶದ ಪುಟ್ಟ ಕಂದಮ್ಮ, ವ್ಯಾಪಾಯಿಯೊಬ್ಬ ಹಿಡಿದು ನಿಂತಿರುವ ಬಣ್ಣ ಬಣ್ಣದ ಆಟಿಕೆಗಳನ್ನೇ ದಿಟ್ಟಿಸಿ ನೋಡುತ್ತಿದ್ದ ದೃಶ್ಯಕ್ಕೆ ಗೋಕುಲಂ ಅವರು ತಮ್ಮ ಕುಂಚದ ಮೂಲಕ ಅತ್ಯಂತ ಆಕರ್ಷಕ ರೂಪ ನೀಡಿದ್ದಾರೆ.

ವೈಟ್‌ಫೀಲ್ಡ್‌ ನಿವಾಸಿ ಮೋಹಿತ್‌ ಅವರು ಕೂಡ 2.5 ಲಕ್ಷ ರೂ.ಮೌಲ್ಯದ ಕಲಾಕೃತಿಗಳನ್ನು ಮಾರಾಟಕ್ಕಿಟ್ಟಿದ್ದರು. ಮೈಸೂರಿನ ಕಲಾವಿದ ದುಂಡು, ಮಹಾದೇವ ಶೆಟ್ಟಿ, ಹಾಸನದ ವೆಂಕಟೇಶ್‌ ಸೇರಿದಂತೆ ಕರ್ನಾಟಕದ ಹಲವು ಕಲಾವಿದರ ಕೃತಿಗಳಿಗೆ ಕಲಾರಸಿಕರು ಮನಸೋತರು.

“ಮೋದಿ ಸಂದೇಶದ ಕಲಾಕೃತಿ’: ಈ ಬಾರಿಯ ಚಿತ್ರಸಂತೆಯಲ್ಲಿ ವಿಶೇಷವಾಗಿ ಗಮನ ಸೆಳೆದಿದ್ದು, ವಿಜಯಪುರ ಜಿಲ್ಲೆ ಸಿಂಧಗಿ ತಾಲೂಕಿನ ಅಲಳ್ಳಿ ಗ್ರಾಮದ ಯುವ ಕಲಾವಿದ ಸೋಮಶೇಖರ ಸಂಗಯ್ಯ ಹಿರೇಮಠ್ ಅವರು ರಚಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಸಂದೇಶ ಸಾರುವ ಕಲಾಕೃತಿ.

ನರೇಂದ್ರ ಮೋದಿ ಅವರ ನೋಟು ಅಮಾನ್ಯ ಕ್ರಮವನ್ನು ಪ್ರತಿಬಿಂಬಿಸುವುದು ಆ ಚಿತ್ರದ ವಿಶೇಷತೆ. ಜತೆಗೆ ಒಂದೇ ಕಲಾಕೃತಿಯಲ್ಲಿ ಪ್ರಧಾನಿ ಮೋದಿ ಅವರ ಎಂಟು ಮುಖಗಳನ್ನು ವಿಭಿನ್ನ ರೀತಿಯಲ್ಲಿ ಚಿತ್ರಿಸಿರುವ ಸೋಮಶೇಖರ್‌, ಭಾರತದಿಂದ ವಿದೇಶಕ್ಕೆ ವಲಸೆ ಹೋಗುವವರನ್ನು ಮೋದಿ ತಡೆಹಿಯುತ್ತಿದ್ದಾರೆ ಎಂಬ ಸಂದೇಶ ಸಾರುವುದನ್ನು ತಮ್ಮ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ.

ಈ ಬಗ್ಗೆ “ಉದಯವಾಣಿ’ ಜತೆ ಮಾತನಾಡಿದ ಸೋಮಶೇಖರ್‌, “ಆಡಳಿತ ವ್ಯವಸ್ಥೆಯಲ್ಲಿ ಹಲವು ಸುಧಾರಣೆಯನ್ನು ಪ್ರಧಾನಿ ನರೇಂದ್ರ ಮೋದಿ ತಂದಿದ್ದಾರೆ. ಹೀಗಾಗಿ ಅವರ ವಿಭಿನ್ನ ಆಲೋಚನೆ, ಕಾರ್ಯಗಳನ್ನು ಕಲಾಕೃತಿಯಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದೇನೆ,’ ಎಂದು ತಿಳಿಸಿದರು. 

ಜಾಗೃತಿಗಾಗಿ ಕಲಾಕೃತಿ ಪ್ರದರ್ಶನ: ಆಂಧ್ರಪ್ರದೇಶದ ಚಿತ್ರಕಲಾವಿದೆ ಜಯಶ್ರೀ ಅವರ ಸಾಮಾಜಿಕ ಕಳಕಳಿಯ ಕಲಾಕೃತಿಗಳು ಹಲವರ ಮೆಚ್ಚುಗೆಗೆ ಪಾತ್ರವಾದವು. ಬರದ ಹಿನ್ನೆಲೆಯಲ್ಲಿ ದೇಶದ ಅನ್ನದಾತ ನೇಣಿಗೆ ಶರಣಾಗುತ್ತಿದ್ದು, ಆತನನ್ನು ರಕ್ಷಿಸಿ ಎಂಬ ಸಂದೇಶ ಸಾರುವ ಚಿತ್ರಗಳನ್ನು ಚಿತ್ರ ಸಂತೆಯಲ್ಲಿ ಇರಿಸಿದ್ದರು.

ಅಲ್ಲದೆ, ಹೆಣ್ಣು ಮಕ್ಕಳ ಭ್ರೂಣ ಹತ್ಯೆ ತಡೆಗಟ್ಟುವ ಕುರಿತು ಜನರಲ್ಲಿ ಅರಿವು ಮೂಡಿಸುವ ಸಂಬಂಧ ಇರಿಸಲಾಗಿದ್ದ ಹಲವು ಕಲಾಕೃತಿಗಳು ಮನಮಿಡಿಯುವಂತಿದ್ದವು. “ನಾನು ಈ ಕಲಾಕೃತಿಗಳನ್ನು ಮಾರಾಟ ಮಾಡುವುದಿಲ್ಲ. ಜನರಿಗೆ ಆ ಬಗ್ಗೆ ತಿಳಿವಳಿಕೆ ನೀಡುವ ಉದ್ದೇಶದಿಂದ ಚಿತ್ರಸಂತೆಯಲ್ಲಿ ಭಾಗವಹಿಸಿದ್ದೇನೆ,’ ಎಂದು ಕಲಾವಿದೆ ಜಯಶ್ರೀ ಹೇಳಿದರು.

ಆಟ ನಿಲ್ಲಿಸಿದ ಗಾಲ್ಫ್ ಕ್ಲಬ್‌: ಭದ್ರತೆ ಸೇರಿದಂತೆ ಹಲವು ಕಾರಣಗಳಿಂದಾಗಿ ಕಳೆದ ಬಾರಿಯ ಚಿತ್ರಸಂತೆಗೆ ಮುಖ್ಯಮಂತ್ರಿಗಳ ಗೃಹ ಕಚೇರಿವರೆಗೆ ಅವಕಾಶ ನೀಡಿರಲಿಲ್ಲ. ಆದರೆ ಈ ಬಾರಿ ಸಿಎಂ ಗೃಹ ಕಚೇರಿ ಕೃಷ್ಣಾವರೆಗೂ ಚಿತ್ರಸಂತೆಗೆ ಅವಕಾಶ ನೀಡಲಾಗಿತ್ತು. ಜತಗೆ ಬೆಂಗಳೂರು ಗಾಲ್ಫ್ ಕ್ಲಬ್‌ ಆಡಳಿತ ಮಂಡಳಿ ಕೂಡ ಚಿತ್ರಸಂತೆಗೆ ತೊಂದರೆ ಆಗಬಾರದು ಎಂಬ ಕಾರಣದಿಂದಾಗಿ ಭಾನುವಾರದ ಮಟ್ಟಿಗೆ ಕ್ರೀಡಾ ಚಟುವಟಿಕೆಯನ್ನು ಸ್ಥಗಿತಗೊಳಿಸಿತ್ತು.

ನೂರಾರು ಕತೆ ಹೇಳಿದ ಚಿತ್ರಗಳು: ಗಾಂಧೀಜಿ ಅವರ ಧ್ಯಾನ ಮಾಡುತ್ತಿದ್ದ ಸ್ಥಳದಲ್ಲಿ ಚಿತ್ರಕಲಾ ಪರಿಷತ್ತು ಬಿದಿರಿನಿಂದ ಕುಟೀರ ಒಂದನ್ನು  ವಿನ್ಯಾಸ ಪಡಿಸಿ ಗಾಂಧೀಜಿ ಅವರು ಬಳಸುತ್ತಿದ್ದ ಪರಿಕರಗಳನ್ನು ಅದರೊಳಗೆ ಇರಿಸಿತ್ತು. ಗಾಂಧಿ ಭವನದಿಂದ ತರಲಾಗಿದ್ದ ಬಾಪು ಅವರ ಬಹಳ ಅಪರೂಪದ ಛಾಯಾಚಿತ್ರಗಳು ಕುಟೀರದ ಗೋಡೆ ಅಲಂಕರಿಸಿದ್ದವು. ಇವೆಲ್ಲವೂ ಗಾಂಧೀಜಿ ಅವರ “ಜೀವನ-ಸೇವೆ’ಯ ಕುರಿತ ನೂರಾರು ಕಥೆಗಳನ್ನು ಕಟ್ಟಿಕೊಟ್ಟವು. ಗಾಂಧೀಜಿ ಅವರ ಅಂತ್ಯಕ್ರಿಯೆ ವೇಳೆ ಕ್ಲಿಕಿಸಿದ ಛಾಯಾಚಿತ್ರಗಳು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದ್ದವು.

ಸಂತೆ ಸುತ್ತಾಡಿದ ಗಾಂಧಿ: ಗಾಂಧಿ ಚಿಂತಕ ಚಾಮರಾಜಪೇಟೆಯ ವೇಮಗಲ್‌ ಸೋಮಶೇಖರ್‌ ಅವರು ಗಾಂಧೀಜಿ ಉಡುಪು ಧರಿಸಿ ಸಂತೆಯ ತುಂಬೆಲ್ಲಾ ಓಡಾಡಿದರು. ಶಾಲಾ ಮಕ್ಕಳು ಗಾಂಧೀಜಿ ಅವರ ದಂಡಿನ ಸತ್ಯಾಗ್ರಹದ ಕುರಿತ ಅಣುಕು ಪ್ರದರ್ಶನ ನೀಡಿದರು.

ಇದೇ ವೇಳೆ ಚಿತ್ರಕಲಾವಿದ ಅಕ್ಷಯ್‌ ರಂಗೋಲಿಯಲ್ಲಿ ಬಾಪೂಜಿ ಚಿತ್ರ ಬಿಡಿಸಿ ಗಮನ ಸೆಳೆದರು. ಇತ್ತೀಚಿನ ದಿನಗಳಲ್ಲಿ ಮನೆ ಮುಂದೆ ರಂಗೋಲಿ ಹಾಕುವವರ ಸಂಖ್ಯೆ ಕಡಿಮೆಯಾಗಿದ್ದು, ಜನರಿಗೆ ಜಾಗೃತಿ ಮೂಡಿಸಲು ಕಪ್ಪು ಹಾಗೂ ಬಿಳಿ ಬಣ್ಣವನ್ನು ಬಳಕೆ ಮಾಡಿ ಚಿತ್ರ ಬಿಡಿಸಿರುವುದಾಗಿ ಹೇಳಿದರು.

ವಾಹನಗಳ ಬಿಡಿಭಾಗಗಳಲ್ಲಿ ಅರಳಿದ ಕಲೆ: ಹಳೆಯ ಸೈಕಲ್‌, ಬೈಕ್‌, ಕಾರ್‌ನ ಉಪಯೋಗಕ್ಕೆ ಬಾರದ ಬಿಡಿಭಾಗಗಳನ್ನು ಜನ ಗುಜುರಿಗೆ ಹಾಕುತ್ತಾರೆ. ಆದರೆ, ಕಲಬುರಗಿಯ ಕಲಾವಿದ ಸಂಜಯ್‌ ಕುಮಾರ್‌, ಅವುಗಳಿಂದಲೇ ಏಲಿಯನ್ಸ್‌, ದೇವರ ವಿಗ್ರಹ, ರೋಬೊಟ್‌ ಹಾಗೂ ಪ್ರಾಣಿಗಳ ಕಲಾಕೃತಿ ಸಿದ್ಧಪಡಿಸಿಕೊಂಡು ಸಂತೆಯಲ್ಲಿ ಮಾರಾಟ ಮಾಡುತ್ತಿದ್ದರು.

5 ಸಾವಿರದಿಂದ 20 ಸಾವಿರ ಬೆಲೆಯ, 1 ಅಡಿಯಿಂದ 29 ಅಡಿ ಎತ್ತರದ ಕಲಾಕೃತಿಗಳು ಗಮನಸೆಳೆದವು. ” ಪರಿಚಿತರ ಗ್ಯಾರೇಜ್‌ನಲ್ಲಿ ವಾಹನಗಳ ಬಿಡಿ ಭಾಗಗಳು ಬಿದ್ದಿರುತ್ತಿದ್ದವು. ಅವುಗಳನ್ನು ಬಳಸಿಕೊಂಡು ಈ ಹೊಸ ಕಲಾಕೃತಿ ನಿರ್ಮಿಸಿದೆವು. ಈಗ ಬೇಡಿಕೆ ಹೆಚ್ಚಿದ್ದು, ಜನರು ಉಡುಗೊರೆ ನೀಡಲು, ಗೃಹಾಲಂಕಾರಕ್ಕೆ ನಮಗೆ ಮೊದಲೇ ಹೇಳಿ ಕಾಯ್ದಿರಿಸುತ್ತಾರೆ,’ ಎನ್ನುತ್ತಾರೆ ಸಂಜಯ್‌.  

ಅಂಗವೈಕಲ್ಯದಲ್ಲಿ ಅರಳಿದ ಸುಂದರ ಚಿತ್ರಗಳು: ಚಿತ್ರಕಲಾ ಪರಿಷತ್ತಿನ ವೇದಿಕೆ ಹಿಂಭಾಗ ವಿಕಲಚೇತನ ಕಲಾವಿದರ ಮಳಿಗೆಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ಕೈ ಸ್ವಾಧೀನ ಕಳೆದುಕೊಂಡ ಕೋಲ್ಕತಾದ ಶಿವಜ್ಯೋತಿದಾಸ್‌ ಗುಪ್ತ, ವೀಲ್‌ಚೇರ್‌ನಲ್ಲಿ ಕುಳಿತೇ ಚಿತ್ರ ಬಿಡಿಸುವ ಶ್ರಾವಣಿ ತಮ್ಮ ನೋವು ಮರೆತು ಚಿತ್ರಕಲೆಯನ್ನೇ ತಮ್ಮ ದೇಹದ ಅಂಗ, ಜೀವನದ ಭಾಗವಾಗಿಸಿಕೊಂಡಿದ್ದಾರೆ. ಶಿವಜ್ಯೋತಿದಾಸ್‌ ಗುಪ್ತಾ ನಾಲ್ಕು ವರ್ಷಗಳಿಂದ ಚಿತ್ರಸಂತೆಯಲ್ಲಿ ಭಾಗವಹಿಸುತ್ತಿದ್ದಾರೆ. ಶ್ರಾವಣಿ ಅವರಿಗೆ ಇದು ಎರಡನೇ ಚಿತ್ರಸಂತೆಯಾಗಿದ್ದು, ಈ ಬಾರಿ ಬಿಂದುಗಳಿಂದ ಮೂಡಿರುವ ಸ್ಟಿಪ್ಲಿಂಗ್‌ ಆರ್ಟ್‌ ಚಿತ್ರಗಳನ್ನು ಪ್ರದರ್ಶನಕ್ಕಿಟ್ಟಿದ್ದರು.  

ಆಕರ್ಷಿಸಿದ ಪೆಬಲ್‌ ಆರ್ಟ್‌: ನದಿಗಳು, ಹೊಳೆ, ಸಮುದ್ರದಲ್ಲಿ ಸಿಗುವ ಕಲ್ಲು, ಕಪ್ಪೆಚಿಪ್ಪು, ಶಂಖದಿಂದ ಪೆಬಲ್‌ ಆರ್ಟ್‌ ಎಂಬ ಹೆಸರಿನಲ್ಲಿ ರಚಿಸಿದ್ದ ಬೆಂಗಳೂರಿನ ಕಲಾವಿದ ರವಿಕುಮಾರ್‌ ಅವರ ವಿಶಿಷ್ಟ ಕಲಾಕೃತಿಗಳು ಆಕರ್ಷಕವಾಗಿದ್ದವು. ಇವರು ಬೆಣಚು ಹಾಗೂ ಸಾಣೆಕಲ್ಲುಗಳನ್ನು ಒಂದಕ್ಕೊಂದು ಅಂಟಿಸಿ ಗಣಪತಿ, ಗಾಳಿಪಟ ಹಾರಿಸುತ್ತಿರುವ ಮಕ್ಕಳು, ಛತ್ರಿ, ಜೋಕಾಲಿ, ಮಿಕ್ಕಿಮೌಸ್‌, ಗಿಳಿ, ನವಿಲು ಮಾಡಿದ್ದರು. ಜತೆಗೆ ಗುಲಗಂಜಿ ಹಾರ, ತೆಂಗಿನ ಕಾಯಿ ಚಿಪ್ಪಿನ ಆಭರಣಗಳ ಪೆಟ್ಟಿಗೆ, ಕಪ್ಪೆಚಿಪ್ಪು, ಶಂಖದ ಗಣೇಶನ ವಿಗ್ರಹ ಗಮನ ಸೆಳೆದವು.  

ಗಾಂಧೀ ಕನ್ನಡದೊಳಗಿಂದ ಸಂತೆ ಪ್ರವೇಶ: ಶಿವಾನಂದ ವೃತ್ತದ ಕಡೆಯಿಂದ ಬರುವವರಿಗೆ ಕುಮಾರಕೃಪ ರಸ್ತೆಯಲ್ಲಿ ಸುಮಾರು 15 ಅಡಿ ಎತ್ತರ 40 ಅಡಿ ಅಗಲದ ಬೃಹತ್‌ ಗಾಂಧಿ ಕನ್ನಡಕ ಮಾದರಿಯ ಕಮಾನು ನಿರ್ಮಿಸಲಾಗಿತ್ತು. ಕನ್ನಡಕದ ಒಳಗಿಂದಲೇ ಸಂತೆಯನ್ನು ಕಲಾಸಕ್ತರು ಪ್ರವೇಶಿಸಿ ಖುಷಿಪಟ್ಟರು. ಈ ಬಾರಿ ಗಾಂಧಿ ಸ್ಮರಣೆಯನ್ನಾಧರಿಸಿದ ಚಿತ್ರ ಸಂತೆ ಎಂಬುದನ್ನು ಈ ವಿಶೇಷ ಕಮಾನು ಸಾರುತ್ತಿತ್ತು.  

ಆರೋಗ್ಯ ಚೇತರಿಕೆಗೆ ಬಂದ ಅನುಷಾ!:  ಕಲಾವಿದ ಕೈಚಳಕದಲ್ಲಿ ಅರಳಿದ ಕಲಾಕೃತಿಗಳನ್ನು ಸವಿಯಲು ಲಕ್ಷಾಂತರ ಮಂದಿ ಚಿತ್ರ ಸಂತೆಗೆ ಬಂದರೆ, ಕಲಬುರಗಿ ಮೂಲದ ಅನುಷಾ ಜಿ. ಕಾಂತ ಅವರು ಡೌನ್‌ ಸಿಂಡ್ರೋಮ್‌ ಕಾಯಿಲೆಯಿಂದ ಚೇತರಿಸಿಕೊಳ್ಳಲು ಸಂತೆಗೆ ಬಂದಿದ್ದರು. ಈ ಕಾಯಿಲೆಗೆ ಮದ್ದಿಲ್ಲ. ಆಸಕ್ತ ಕ್ಷೇತ್ರದಲ್ಲಿ ಹಾಗೂ ಸಮಾಜದೊಂದಿಗೆ ಬೆರೆತಾಗ ಗುಣವಾಗುತ್ತದೆ ಎಂದು ವೈದ್ಯರು ಸೂಚಿಸಿದ್ದರಂತೆ.

ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅನುಷಾ, ತಮಗೆ ತೋಚಿದ ವಿಷಯವನ್ನು ಇಟ್ಟುಕೊಂಡು ಚಿತ್ರ ಬಿಡಿಸುತ್ತಾರೆ. ಹೀಗಾಗಿ, ತಮ್ಮ ಕಲಾಕೃತಿಗಳೊಂದಿಗೆ ಚಿತ್ರಸಂತೆಗೆ ಬಂದಿದ್ದರು. ಎಲ್ಲೇ ಚಿತ್ರ ಪ್ರದರ್ಶನ ನಡೆದರೂ ಇವಳನ್ನು ಕರೆದೊಯ್ಯುತ್ತೇವೆ. ಇವಳು ಬರೆದ ಚಿತ್ರ ಪ್ರದರ್ಶಿಸುತ್ತೇವೆ ಎಂದು ತಂದೆ ಗುರುಪಾದಪ್ಪ ಕಾಂತ ತಿಳಿಸಿದರು.  

ಚುನಾವಣಾ ಆಯೋಗದಿಂದ ಜಾಗೃತಿ ಕಲಾಚಿತ್ರಗಳು: ಭಾರತೀಯ ಚುನಾವಣಾ ಆಯೋಗವು ಚಿತ್ರಸಂತೆಯಲ್ಲಿ ಮತದಾನದ ನೋಂದಣಿ, ಜಾಗೃತಿ ಆಂದೋಲನ ನಡೆಸಿತು. ಬೆಂಗಳೂರಿನಲ್ಲಿ ಮತದಾನ ಮಾಡುವವರ ಸಂಖ್ಯೆ ಕಡಿಮೆಯಾಗಿದ್ದು, ಜನರಲ್ಲಿ ಜಾಗೃತಿ ಮೂಡಿಸಲು ವಿವಿಧ ಘೋಷವಾಕ್ಯ, ಮಾಹಿತಿ ಫ‌ಲಕಗಳನ್ನು 20 ಜನರ ತಂಡ ಚಿತ್ರಕಲೆ ಪ್ರದರ್ಶಿಸುತ್ತಿದ್ದೇವೆ. 18 ವರ್ಷ ಮೇಲ್ಪಟ್ಟವರು ಮತದಾನ ನೋಂದಣಿ, ಮತದಾನದ ಗುರುತಿನ ಚೀಟಿಯಲ್ಲಿ ಏನಾದರೂ ಲೋಪದೋಷವಿದ್ದಲ್ಲಿ ಅದನ್ನು ಸರಿಪಡಿಸಲು ಅರ್ಜಿ ವಿತರಿಸಲಾಗುತ್ತಿದೆ ಎಂದು ಚುನಾವಣಾ ಆಯೋಗದ ಸಿಬ್ಬಂದಿಯೊಬ್ಬರು ತಿಳಿಸಿದರು.  

ಸಂತೆ ತುಂಬೆಲ್ಲ ಸೆಲ್ಫಿಗರು: ಪ್ರತಿಬಾರಿಯಂತೆ ಈ ಬಾರಿಯೂ ಸಂತೆಯಲ್ಲಿ ಸೆಲ್ಫಿ ಕ್ರೇಜ್‌ ಹೆಚ್ಚಿತ್ತು. ಸಂತೆ ಪ್ರವೇಶದಿಂದ ಹಿಡಿದು, ಹೊರಬರುವವರೆಗೂ ಎಲ್ಲರ ಮೊಬೈಲ್‌ಗ‌ಳು ಕೈಯಲ್ಲಿರುತ್ತಿದ್ದವು. ಅದರಿಂದ ಫೋಟೋಗಳು ಕ್ಲಿಕ್ಕಾಗುತ್ತಿದ್ದವು. ಕಲಾ ರಸಿಕರು ತಮಗಿಷ್ಟವಾದ ಚಿತ್ರಗಳನ್ನು ಸೆರೆಹಿಡಿಯುತ್ತಿದ್ದರೆ, ಯುವಕ ಯುವತಿಯರು ಕುಮಾರಕೃಪ ರಸ್ತೆ ಬದಿ ನಿಲ್ಲಿಸಿದ್ದ ಗಾಂಧಿ ಪ್ರತಿಮೆ,

ಅತಿಥಿ ಗೃಹ ಮುಂಭಾಗ ಇಟ್ಟಿದ್ದ ಬುದ್ಧನ ಪ್ರತಿಮೆ, ಬೃಹತ್‌ ಗಾಂಧಿ ಕನ್ನಡಕ, ಚರಕ ಬಳಿ ಹಾಗೂ ಸಂತೆಯಲ್ಲಿ ಜನದಟ್ಟಣೆ ಕಾಣುವಂತ ಕಡೆಗಳಲ್ಲಿ ಮೊಬೈಲ್‌ ಹಿಡಿದು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬೀಳುತ್ತಿದ್ದರು. ಚಿತ್ರ ಸಂತೆ ಬೆಳಗ್ಗೆ ಆರಂಭವಾದಾಗಿನಿಂದ ಸಂಜೆ ಮುಕ್ತಾಯವಾಗುವವರೆಗೂ ಈ ಸೆಲ್ಫಿ ಪ್ರಿಯರ ಕಾರುಬಾರು ಜೋರಾಗಿತ್ತು.  

ದಾಖಲೆ ಪ್ರಮಾಣದ ವಹಿವಾಟು: ಈ ಬಾರಿಯ ಚಿತ್ರಸಂತೆಯುಲ್ಲಿ ದಾಖಲೆಯ 3 ಕೋಟಿ ರೂ. ಗಿಂತ ಹೆಚ್ಚು ವಹಿವಾಟು ನಡೆದಿದೆ. ಕಳೆದ ವರ್ಷ 2 ಲಕ್ಷ ಮಂದಿ ಭೇಟಿ ನೀಡಿ, 2 ಕೋಟಿ ರೂ. ವಹಿವಾಟು ನಡೆದಿತ್ತು. ಆದರೆ ಈ ವರ್ಷ ವಹಿವಾಟು 3 ಕೋಟಿ ದಾಟಿದೆ. ಬೆಳಗ್ಗೆಯಿಂದ ರಾತ್ರಿ 9 ಗಂಟೆವರೆಗೂ ಉತ್ತಮ ವಹಿವಾಟು ನಡೆದಿದೆ ಎಂದು ಕರ್ನಾಟಕ ಚಿತ್ರಕಲಾ ಪರಿಷತ್‌ನ ಸಹಾಯಕ ಕಾರ್ಯದರ್ಶಿ ಪ್ರೊ. ಅಪ್ಪಾಜಯ್ಯ ತಿಳಿಸಿದ್ದಾರೆ.  

ನಮ್ಮಲ್ಲಿ ಉದ್ಯಾನವನ, ಮೈದಾನಗಳಲ್ಲಿ ಪ್ರದರ್ಶನ ನಡೆಯುತ್ತದೆ. ಆದರೆ, ಇಲ್ಲಿ ಸಂತೆ ಹಾಗೂ ಜಾತ್ರೆ ರೀತಿ ನಡೆಯುತ್ತಿರುವುದು ಅಪರೂಪ. ಎರಡನೇ ಬಾರಿ ಅವಕಾಶ ಸಿಕ್ಕಿರುವುದು ಖುಷಿ ತಂದಿದೆ.
-ಆ್ಯಲೆನ್‌, ಅಮೆರಿಕ ಪ್ರಜೆ  

ಕಳೆದ ಐದು ವರ್ಷಗಳಿಂದ ಸಂತೆಗೆ ಬರುತ್ತಿದ್ದೇನೆ. ಬಹಳ ಉತ್ತಮ ಕಲಾಕೃತಿಗಳು ಇಲ್ಲಿ ಸಿಗಯತ್ತವೆ. ಈ ಬಾರಿ ನಾಲ್ಕು ಚಿತ್ರಗಳನ್ನು ಕೊಂಡುಕೊಂಡಿದ್ದೇನೆ ಖುಷಿಯಾಯಿತು.
-ಶೀಲಿ, ಜರ್ಮನಿ ಪ್ರಜೆ  

13 ವರ್ಷಗಳಿಂದ ಸಂತೆಗೆ ಬರುತ್ತಿದ್ದು, ಪ್ರತಿ ವರ್ಷ ಜನ ಹೆಚ್ಚಾಗುತ್ತಿದ್ದಾರೆ. ಈ ಬಾರಿ ಸ್ವತ್ಛತೆಗೆ ಆದ್ಯತೆ ನೀಡಿರುವುದು ಹಾಗೂ ಮೂಲ ಸೌಕರ್ಯ ಕಲ್ಪಿಸಿ ಸಂತೆಯನ್ನು ಇನ್ನಷ್ಟು ಮೆರಗುಗೊಳಿಸಿದ್ದಾರೆ.
-ರಮಣ್ಣಪ್ಪ ಮಲ್ಲೇಶ್ವರ ನಿವಾಸಿ  

ಕಲಾವಿದರಿಗಾಗಿ ಚಿತ್ರಕಲಾ ಪರಿಷತ್‌ ವತಿಯಿಂದ ಜಾಗ ನೀಡಿ, ಊಟ ನೀರು ಸೇರಿ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಕಳೆದ ಬಾರಿಗಿಂತ ಹೆಚ್ಚು ಜನ ಸಂತೆಗೆ ಬಂದಿದ್ದು, ವ್ಯಾಪಾರವೂ ಹೆಚ್ಚಾಗಿದೆ.
-ಭಾಸ್ಕರ್‌ ಚೌದರಿ, ಕೋಲ್ಕತಾ ಕಲಾವಿದ

ಟಾಪ್ ನ್ಯೂಸ್

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

4-bng

Bengaluru: 290 ರೌಡಿಶೀಟರ್‌ಮನೆಗಳ ಮೇಲೆ ದಾಳಿ 

3-crime

Bengaluru: ಸ್ನೇಹಿತರಿಂದಲೇ ಸುಪಾರಿ ಕಿಲ್ಲರ್‌ನ ಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

1-aaa

Ex-IPS officer ಸಂಜೀವ್ ಭಟ್‌ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.