ಸಿಲಿಕಾನ್ ಸಿಟಿಯಲ್ಲಿ ಸ್ತ್ರೀಯರೆಷ್ಟು ಸುರಕ್ಷಿತ ?

Team Udayavani, Dec 16, 2019, 12:13 PM IST

ಸಾಂಧರ್ಬಿಕ ಚಿತ್ರ

ಹೈದರಾಬಾದ್‌ ಮತ್ತು ಉತ್ತರ ಪ್ರದೇಶದ ಉನ್ನಾವ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಗಳು ದೇಶವನ್ನು ತಲ್ಲಣಗೊಳಿಸಿವೆ.

ಮಹಾನಗರಗಳಲ್ಲಿ ಮಹಿಳೆಯರ ಸುರಕ್ಷತೆ ಪ್ರಶ್ನೆ ಪ್ರತಿಧ್ವನಿಸುತ್ತಿದೆ. ಅಂತಹ ನಗರಗಳಲ್ಲಿ ಐಟಿ ರಾಜಧಾನಿ ಬೆಂಗಳೂರು ಕೂಡ ಒಂದು. ಅದರಲ್ಲೂ ಇತರ ಕಡೆಗಳಿಗೆ ಹೋಲಿಸಿದರೆ, ಇಲ್ಲಿ ರಾತ್ರಿ ಪಾಳಿಯಲ್ಲಿ ಅತಿ ಹೆಚ್ಚು ಮಹಿಳೆಯರು ಕಾರ್ಯನಿರ್ವಹಿಸುವುದರಿಂದ ಸುರಕ್ಷತೆಯ ಪ್ರಶ್ನೆ ತುಸು ಜೋರಾಗಿ ಕೇಳಿಬರುತ್ತಿದೆ. ಈ ಕೂಗಿಗೆ ಕಾರಣವೂ ಇದೆ. ಬೆಂಗಳೂರಿನಲ್ಲಿ ದಾಖಲಾಗುತ್ತಿರುವ ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಸೇರಿದಂತೆ ಇತರೆ ಸ್ಥಳೀಯ ಸಂಸ್ಥೆಗಳು ಹಲವು ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿವೆ. ಆದರೂ ಆಗಾಗ ಬೆಳಕಿಗೆ ಬರುವ ಪ್ರಕರಣಗಳು ಬೆಚ್ಚಿಬೀಳಿಸುತ್ತಿವೆ. ಕಳೆದ ಒಂದೇ ವರ್ಷದಲ್ಲಿ ನಗರದಲ್ಲಿ ಇಂತಹ ಐದಕ್ಕೂ ಅಧಿಕ ಗಂಭೀರ ಪ್ರಕರಣಗಳು ನಡೆದಿವೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದಲ್ಲಿ ಈಚೆಗೆ ನಡೆದ ಯುವತಿಯ ಕೊಲೆ ಪ್ರಕರಣ ಕೂಡ ಅದರಲ್ಲಿ ಸೇರಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಛಾಪು ಮೂಡಿಸಿರುವ ಮೆಟ್ರೋಪಾಲಿಟನ್‌ ಸಿಟಿಯಲ್ಲಿ ಶೇ.60ರಿಂದ ಶೇ.65 ಮಹಿಳೆಯರು ಐಟಿ-ಬಿಟಿ, ಸಿದ್ಧ ಉಡುಪು ತಯಾರಿಕೆ ಕಾರ್ಖಾನೆಗಳು, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಮೆಟ್ರೋ, ಪೊಲೀಸ್‌ ಇಲಾಖೆ, ಖಾಸಗಿ ಕಂಪೆನಿಗಳು, ಕಚೇರಿಗಳು ಸೇರಿ ನಾನಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ ಶೇ. 40ರಷ್ಟು ಮಹಿಳೆಯರು ರಾತ್ರಿ ಪಾಳಿಯಲ್ಲೇ ಕೆಲಸ ಮಾಡುತ್ತಿದ್ದಾರೆ. ಅಂಕಿ-ಅಂಶಗಳ ಪ್ರಕಾರ ಐಟಿ-ಬಿಟಿ ಕಂಪೆನಿಗಳಲ್ಲಿ 20 ಲಕ್ಷ ಮಂದಿ ಸಾಫ್ಟ್ವೇರ್‌ ಎಂಜಿನಿಯರ್‌ ಗಳಿದ್ದು, ಅದರಲ್ಲಿ 5-6 ಲಕ್ಷ ಮಹಿಳೆಯರು ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಜತೆಗೆ ಕಟ್ಟಡ ನಿರ್ಮಾಣ ಕಾಮಗಾರಿ, ಕಾರ್ಖಾನೆಗಳಲ್ಲೂ ಮಹಿಳೆಯರು ತಡರಾತ್ರಿವರೆಗೂ ಕೆಲಸ ಮಾಡುತ್ತಿದ್ದಾರೆ. ಹೀಗೆ ಸೇವೆ ಸಲ್ಲಿಸುವವರಲ್ಲಿ ಶೇ.10-12ರಷ್ಟು ಮಹಿಳೆಯರು ಆ್ಯಪ್‌ ಆಧಾರಿತ ಕ್ಯಾಬ್‌, ಆಟೋಗಳನ್ನು ಬಳಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಖಾಸಗಿ ಸಂಸ್ಥೆಗಳು, ಸರ್ಕಾರ ಮತ್ತು ಪೊಲೀಸ್‌ ಇಲಾಖೆ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಿದ್ದು, ಸಾಕಷ್ಟು ಸುರಕ್ಷತಾ ಕ್ರಮ ಕೈಗೊಂಡಿದೆ. ಆದಾಗ್ಯೂ ಪ್ರತಿ ವರ್ಷ ಸರಾಸರಿ ನೂರಕ್ಕೂ ಅಧಿಕ ಅತ್ಯಾಚಾರಗಳು, 300ಕ್ಕೂ ಹೆಚ್ಚು ಪೋಕ್ಸೋ ಪ್ರಕರಣಗಳು ಹಾಗೂ 800ಕ್ಕಿಂತ ಮೇಲ್ಪಟ್ಟು ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾಗುತ್ತಿವೆ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಮಹಿಳಾ ಸಂಘಟನೆಗಳ ಪ್ರಕಾರ, ಸುಶಿಕ್ಷಿತರು ಕೆಲಸ ಮಾಡುವ ಸ್ಥಳಗಳಲ್ಲಿಯೇ ಹೆಚ್ಚು ಮಹಿಳಾ ದೌರ್ಜನ್ಯಗಳು ನಡೆಯುತ್ತಿವೆ. ಗಾರ್ಮೆಂಟ್ಸ್‌, ಕಟ್ಟಡ ನಿರ್ಮಾಣ ಸ್ಥಳ, ಖಾಸಗಿ ಸಂಸ್ಥೆಗಳಲ್ಲಿ ಹಿರಿಯ ಅಧಿಕಾರಿಗಳ ಕಿರುಕುಳ ನಿರಂತರವಾಗಿ ನಡೆಯುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಈ ಪ್ರಕರಣಗಳ ಸಂಖ್ಯೆ ಏರುಮುಖವಾಗಿದೆ. ನಿರ್ಭಯಾ ಪ್ರಕರಣ ಬಳಿಕ ಮಹಿಳೆಯರ ರಕ್ಷಣೆ ಕೂಗು ಜೋರಾಗಿಯಿತು. ಈ ಹಿನ್ನೆಲೆಯಲ್ಲಿ “ಅಭಯ’ ವಾಹನಗಳು ಸಂಚರಿಸುತ್ತಿದ್ದು, ಒಬ್ಬ ಮಹಿಳಾ ಎಎಸ್‌ಐ ನೇತೃತ್ವದಲ್ಲಿ ಸಿಬ್ಬಂದಿ ನಿಯೋಜಿಸಲಾಯಿತು. ಹೊಯ್ಸಳ, ಪಿಂಕ್‌ ಹೊಯ್ಸಳ ವಾಹನ ಕೂಡ ಬಂದವು. ಇದೆಲ್ಲದರ ನಡುವೆಯೂ ಆಗಾಗ್ಗೆ ಘಟನೆಗಳು ಸಂಭವಿಸುತ್ತಿವೆ ಎಂದು ಮಹಿಳಾ ಸಂಘಟನೆಗಳು ಆತಂಕ ವ್ಯಕ್ತಪಡಿಸುತ್ತವೆ.

ಐಟಿ-ಬಿಟಿ ಕಂಪನಿಗಳ ಸ್ಪಂದನೆ: ಐಟಿ-ಬಿಟಿ ಕಂಪನಿಗಳಲ್ಲಿ ಮಹಿಳಾ ಸಿಬ್ಬಂದಿ ಸುರಕ್ಷತೆ ಕುರಿತು ಪ್ರತಿ ಸಂಸ್ಥೆಯಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯನ್ನೊಳಗೊಂಡ ಸಮಿತಿ ರಚಿಸಿದ್ದು, ದೌರ್ಜನ್ಯಕ್ಕೊಳಗಾದ ಸಿಬ್ಬಂದಿ ನೇರವಾಗಿ ಸಮಿತಿಗೆ ದೂರು ನೀಡಬಹುದು. ಅಲ್ಲದೆ, ರಾತ್ರಿ 9ರ ನಂತರ ಮನೆಗೆ ತೆರಳುವ ಸಿಬ್ಬಂದಿಗೆ ಸಂಸ್ಥೆಗಳೇ ವಾಹನ ವ್ಯವಸ್ಥೆ ಮಾಡಿದ್ದು, ಒಬ್ಬ ಭದ್ರತಾ ಸಿಬ್ಬಂದಿಯನ್ನು ಜತೆಗೆ ಕಳಿಸುತ್ತಾರೆ ಎಂದು ದೊಮ್ಮಲೂರಿನ ಟಿ ಕಂಪನಿಯೊಂದರ ಉದ್ಯೋಗಿ ಮಾಹಿತಿ ನೀಡುತ್ತಾರೆ.

ನಿಲ್ಲದ ದೌರ್ಜನ್ಯ: ಈಗಲೂ ಗಾರ್ಮೆಂಟ್ಸ್‌ ಹಾಗೂ ಕಾರ್ಖಾನೆಗಳಲ್ಲಿ ಮಹಿಳಾ ದೌರ್ಜನ್ಯಗಳು ನಡೆಯುತ್ತಲೇ ಇವೆ. ಆದರೆ, ಮರ್ಯಾದೆಗೆ ಹೆದರಿ ಸಂತ್ರಸ್ತರು ದೂರು ನೀಡುವುದಿಲ್ಲ. ಹಿರಿಯ ಅಧಿಕಾರಿಗಳ ಜತೆ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ, ಅನಗತ್ಯ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ದನಿ ಎತ್ತಿದರೆ ಕೆಲಸದಿಂದ ವಜಾಗೊಳಿಸುತ್ತಾರೆ ಎಂದು ಗಾರ್ಮೆಂಟ್‌ ಉದ್ಯೋಗಿ ಅಲವತ್ತುಕೊಳ್ಳುತ್ತಾರೆ.

ಬಿಎಂಟಿಸಿಯ ಪಿಂಕ್‌ ಸಾರಥಿಯೂ ಸಿದ್ಧ : ತುರ್ತು ಸಂದರ್ಭಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ನೆರವಾಗಲು ಬಿಎಂಟಿಸಿ ಸಹ ಸಿದ್ಧವಾಗಿದೆ. ನಗರದಲ್ಲಿ ಬಸ್‌ಗಳ ಸಂಚಾರ ಮಾರ್ಗದಲ್ಲಿ ಸಮಸ್ಯೆಯಾದರೆ ಹಾಗೂ ಪ್ರಯಾಣಿಕರು ಟಿಕೆಟ್‌ ತೆಗೆದುಕೊಂಡು ಪ್ರಯಾಣಿಸುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ಸಾರಥಿ ವಾಹನಗಳ ಮೂಲಕ ಪರಿಶೀಲನೆ ನಡೆಸಲಾಗುತ್ತಿದೆ. ಈಗ ಇದೇ ವಾಹನಗಳ ಸಿಬ್ಬಂದಿ ಮಹಿಳಾ ಪ್ರಯಾಣಿಕರಿಗೆ ಸಮಸ್ಯೆಯಾದರೆ ನೆರವಿಗೆ ಧಾವಿಸಲಿದ್ದಾರೆ. ಮಹಿಳಾ ಪ್ರಯಾಣಿಕರಿಗೆ ಯಾವುದೇ ಆಯ್ಕೆಗಳು ಇಲ್ಲದಾಗ, ಪೊಲೀಸರು ಸಕಾಲದಲ್ಲಿ ಒಂದೊಮ್ಮೆ ಬಾರದಿದ್ದರೆ ಬಿಎಂಟಿಸಿ ಸಹಾಯವಾಣಿ 18004251663ಗೆ ಕರೆ ಮಾಡಬಹುದು ಎಂದು ಸಂಸ್ಥೆ ವಕ್ತಾರರು ತಿಳಿಸಿದರು. ಅಲ್ಲದೆ, ಇತ್ತೀಚೆಗೆ ಬಿಎಂಟಿಸಿಯ 11 ಸಾವಿರ ಸಿಬ್ಬಂದಿಗೆ ಲಿಂಗಸಂವೇದನೆಯ ಬಗ್ಗೆಯೂ ಜಾಗೃತಿ ಮೂಡಿಸಲಾಗಿದೆ. ಜನವರಿ 1ರಿಂದ ಮೆಟ್ರೋ ಮಧ್ಯರಾತ್ರಿ 12 ಗಂಟೆವರೆಗೆ ಸೇವೆ ವಿಸ್ತರಿಸುವ ಉದ್ದೇಶ ಹೊಂದಿರುವ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಬಸ್‌ ಸೇವೆ ಮತ್ತು ಸಾರಥಿ ಸಿಬ್ಬಂದಿಯನ್ನು ನಿಯೋಜಿಸಲು ಬಿಎಂಟಿಸಿ ಮುಂದಾಗಿದೆ ಎಂದೂ ಮಾಹಿತಿ ನೀಡಿದರು.

ಪೊಲೀಸ್‌ ಇಲಾಖೆಯಿಂದ ಕ್ರಮ: 2017ರಲ್ಲಿ ಹಿರಿಯ ಐಪಿಎಸ್‌ ಅಧಿಕಾರಿ ಪ್ರವೀಣ್‌ ಸೂದ್‌ ಅವರು ನಗರ ಪೊಲೀಸ್‌ ಆಯುಕ್ತರಾಗಿದ್ದ ಅವಧಿಯಲ್ಲಿ ಸುರಕ್ಷಾ ಆ್ಯಪ್‌ ಹಾಗೂ ಹೆಚ್ಚುವರಿ 250ಕ್ಕೂ ಅಧಿಕ ಪಿಂಕ್‌ ಹೊಯ್ಸಳ ವಾಹನಗಳನ್ನು ಬಿಡುಗಡೆ ಮಾಡಿ, ಚಾಲಕ, ಇಬ್ಬರು ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಈ ಮೂಲಕ ಕೇವಲ 8-10 ನಿಮಿಷಗಳಲ್ಲೇ ಸಂತ್ರಸ್ತೆಯ ಸಮಸ್ಯೆಗೆ ಸ್ಪಂದಿಸುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಜತೆಗೆ ಸಹಾಯವಾಣಿ ಕೇಂದ್ರಕ್ಕೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಲಾಯಿತು. ಇದೀಗ ಹೈದ್ರಾಬಾದ್‌ ಹಾಗೂ ಉನ್ನಾವ್‌ ಪ್ರಕರಣಗಳು ಹೆಚ್ಚು ಚರ್ಚೆಗೆ ಗ್ರಾಸವಾದರಿಂದ ಇದೀಗ ಮತ್ತೆ ಸುರಕ್ಷಾ ಆ್ಯಪ್‌ ಬಗ್ಗೆ ಪೊಲೀಸರು, ಸಾಮಾಜಿಕ ಜಾಲತಾಣಗಳು, ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ನಗರದ ಎಂಟು ಕಾನೂನು ಸುವ್ಯವಸ್ಥೆ ಮತ್ತು ಮೂರು ಸಂಚಾರ ವಿಭಾಗ ಡಿಸಿಪಿಗಳು ಶಾಲಾ-ಕಾಲೇಜು, ಬಸ್‌ ನಿಲ್ದಾಣ, ವಸತಿ ಗೃಹಗಳು, ಪಿ.ಜಿ.ಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುರಕ್ಷಾ ಆ್ಯಪ್‌ ಬಳಕೆ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಈ ಸಂಬಂಧ ಇದುವರೆಗೂ ನಗರದಲ್ಲಿ 2.20 ಲಕ್ಷ ಮಂದಿ ಆ್ಯಪ್‌ ಬಳಕೆ ಮಾಡಿಕೊಂಡಿದ್ದಾರೆ.

ಜತೆಗೆ ರಾತ್ರಿ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಪಿಂಕ್‌ ಹೊಯ್ಸಳ, ಹಿರಿಯ ಪೊಲೀಸ್‌ ಅಧಿಕಾರಿಗಳು ಗಸ್ತು ತಿರುಗಬೇಕು. ಆ್ಯಪ್‌ ಮೂಲಕ ಬರುವ ಪ್ರತಿ ದೂರಿಗೆ ಸ್ಪಂದಿಸಬೇಕು. ಸಹಾಯವಾಣಿ ಕೇಂದ್ರದ ಸಿಬ್ಬಂದಿ ಕೂಡ ದೂರುದಾರರ ಜತೆ ಸೌಜನ್ಯದಿಂದ ವರ್ತಿಸಬೇಕು. ಕರೆ ಬಂದ ಕನಿಷ್ಠ 8 ನಿಮಿಷಗಳ ಅಂತರದಲ್ಲಿ ಸಂತ್ರಸ್ತೆಯ ಸ್ಥಳ ತಲುಪಬೇಕು. ಈ ಮಧ್ಯೆ ಆ್ಯಪ್‌ ಆಧಾರಿತ ಕ್ಯಾಬ್‌ಗಳು ಕಡ್ಡಾಯವಾಗಿ ಒಳಭಾಗದಲ್ಲಿ ಸಿಸಿಕ್ಯಾಮೆರಾ ಅಳವಡಿಸಿಕೊಳ್ಳಬೇಕು ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಯಾ ಡಿಸಿಪಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ದೂರುಗಳಿಗೆ ಸಿಬ್ಬಂದಿ ಸ್ಪಂದಿಸುತ್ತಿದ್ದಾರೆಯೇ? ಇಲ್ಲವೇ ಎಂದು ಖುದ್ದು ಪರಿಶೀಲಿಸುತ್ತಿದ್ದಾರೆ. ಜತೆಗೆ ಬೀಟ್‌ ವ್ಯವಸ್ಥೆ ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲಾಗಿದೆ.

ಅತ್ಯಾಚಾರ ತಡೆಯುವುದಕ್ಕೆ ಇರುವ ಮಾರ್ಗಗಳ ಬಗ್ಗೆ ಮಹಿಳೆಯರಿಗೆ ಜಾಗೃತಿ ಮೂಡಿಸಿದರೆ ಸಾಲದು. ಈ ಬಗ್ಗೆ ಪುರುಷರಿಗೂ ನೈತಿಕ ಬೋಧನೆ ಮಾಡಬೇಕು.ನಜೀರ್‌ ಚಿಕ್ಕನೇರಳೆ, ವೈದ್ಯ ವಿದ್ಯಾರ್ಥಿನಿ

ಬೆಂಗಳೂರಿನಲ್ಲಿ 90ರ ದಶಕದಲ್ಲಿ ನಮ್ಮ ಜನ, ಊರು ಎನ್ನುವ ಕಲ್ಪನೆ ಇತ್ತು. ಈಗ ವಾತಾವರಣ ಬದಲಾಗಿದೆ. ಹೀಗಾಗಿ, ಜನರಲ್ಲಿ ಸಮುದಾಯ ಪ್ರಜ್ಞೆ ಮೂಡಬೇಕು. ಅತ್ಯಾಚಾರ ಪ್ರಕರಣಗಳು ನಿಲ್ಲಬೇಕಾದರೆ ಆಂದೋಲನಗಳು ಪ್ರಾರಂಭವಾಗಬೇಕು. –ಪ್ರೀತಿ ನಾಗರಾಜ್‌, ಲೇಖಕಿ

ಎಚ್ಚೆತ್ತುಕೊಳ್ಳದ ಅಗ್ರಿಗೇಟರ್ : ಆ್ಯಪ್‌ ಕ್ಯಾಬ್‌ ಚಾಲಕರಿಂದ ಮಹಿಳಾ ದೌರ್ಜನ್ಯ ಪ್ರಕರಣಗಳು ನಿರಂತರವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಓಲಾ ಮತ್ತು ಊಬರ್‌ ಸಂಸ್ಥೆಗಳಿಗೆ ಪೊಲೀಸ್‌ ಇಲಾಖೆ ಮಹಿಳಾ ಸುರಕ್ಷತೆ ಬಗ್ಗೆ ಕ್ರಮಕೈಗೊಳ್ಳುವಂತೆ ಮೂರು ವರ್ಷಗಳ ಹಿಂದೆಯೇ ಸ್ಪಷ್ಟ ಸೂಚನೆ ನೀಡಿತ್ತು. ಜಿಪಿಎಸ್‌, ಪ್ಯಾನಿಕ್‌ ಬಟನ್‌, ಟ್ರ್ಯಾಕಿಂಗ್‌ ಸಿಸ್ಟಂ, ಸಹಾಯವಾಣಿ ಕೇಂದ್ರದಲ್ಲಿ 24 ಗಂಟೆ ಸಿಬ್ಬಂದಿ ನಿಯೋಜಿಸಿ ಸ್ಪಂದಿಸಬೇಕು. ನೇಮಕ ವೇಳೆಯಲ್ಲಿ ಚಾಲಕನ ಪೂರ್ವಾಪರ ವಿಚಾರಿಸಬೇಕು ಎಂದು ಸೂಚಿಸಲಾಗಿತ್ತು. ಆದರೆ, ಇದ್ಯಾವುದನ್ನು ಸಂಸ್ಥೆಗಳು ಅನುಸರಿಸುತ್ತಿಲ್ಲ. ಮತ್ತೂಂದೆಡೆ ಪೊಲೀಸ್‌ ಇಲಾಖೆ ಕೂಡ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಒಂದು ವೇಳೆ ಯಾವುದಾದರೂ ದೌರ್ಜನ್ಯ ನಡೆದಾಗ ಮಾತ್ರ ಎಚ್ಚೆತ್ತುಕೊಳ್ಳುವ ಪೊಲೀಸ್‌ ಇಲಾಖೆ ನಾಮ್‌ಕೆವಾಸ್ತೆ ಲಿಖೀತ ರೂಪದಲ್ಲಿ ಸೂಚಿಸಿ, ಸುಮ್ಮನಾಗುತ್ತಾರೆ ಎಂಬ ಆರೋಪವೂ ಇದೆ.

 

-ಮೋಹನ್‌ ಭದ್ರಾವತಿ

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಬೀದಿ ಬದಿ ವ್ಯಾಪಾರಿಗಳ ಹಿತ ಕಾಯುವ ದೃಷ್ಟಿಯಿಂದ ರಾಜ್ಯ ಸರ್ಕಾರ ಆರಂಭಿಸಿದ್ದ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆ "ಬಡವರ ಬಂಧು' ಈಗ ಕಷ್ಟದಲ್ಲಿರುವ...

  • ಬೆಂಗಳೂರು: ರಾಜ್ಯದಲ್ಲಿ ಪ್ರಸಕ್ತ ವರ್ಷದ ಅಬಕಾರಿ ಆದಾಯದಲ್ಲಿ ನೆರೆಯ ಆಂಧ್ರಪ್ರದೇಶದ ಗ್ರಾಹಕರ ಪಾಲು ಸೇರಿದೆ. ಹೌದು, ಆಂಧ್ರಪ್ರದೇಶದಲ್ಲಿ ಮದ್ಯದ ಬೆಲೆ ಶೇ.20...

  • ಬೆಂಗಳೂರು: ಹಲಸೂರಿನ ಮುಖ್ಯರಸ್ತೆಗಳಲ್ಲಿ ಅಡಿಗಡಿಗೂ ಶಾಲೆಗಳಿವೆ. ಮುಖ್ಯರಸ್ತೆಯಲ್ಲೇ ಇರುವ ನರ್ಸರಿ, ಪ್ರೈಮರಿ, ಪ್ರೌಢ ಶಾಲೆ ಹಾಗೂ ಕಾಲೇಜುಗಳಲ್ಲಿ ಸಾವಿರಾರು...

  • ಬೆಂಗಳೂರು: ಪೊಲೀಸ್‌ ಇಲಾಖೆಯಲ್ಲಿ ಜಾರಿಯಲ್ಲಿರುವ ಬೀಟ್‌ ವ್ಯವಸ್ಥೆಯಲ್ಲಿ ಇನ್ನಷ್ಟು ಪಾರದರ್ಶಕತೆ ತರುವ ಹಾಗೂ ಜನಸ್ನೇಹಿ ಮಾಡುವ ಉದ್ದೇಶದಿಂದ ಆಗ್ನೇಯ ವಿಭಾಗದ...

  • ಬೆಂಗಳೂರು: ಮಕರ ಸಂಕ್ರಾಂತಿಯ ದಿನವಾದ ಬುಧವಾರ ಇತಿಹಾಸ ಪ್ರಸಿದ್ಧ ಗವಿ ಗಂಗಾಧರೇಶ್ವರ ಸ್ವಾಮಿ ದೇವಾಲಯದಲ್ಲಿ ಸೂರ್ಯನ ರಶ್ಮಿಯು ಗರ್ಭಗುಡಿಯಲ್ಲಿರುವ ಶಿವಲಿಂಗವನ್ನು...

ಹೊಸ ಸೇರ್ಪಡೆ