ಫ‌ಸ್ಟ್‌ ಓಟ್‌ ಬೆಸ್ಟ್‌ ಓಟ್‌

ಮೊದಲ ಬಾರಿ ಮತದಾರರಿಗೆ ಸಿನಿಮಾ ಸ್ಟಾರ್‌ಗಳ ಸಲಹೆ

Team Udayavani, Apr 18, 2019, 3:00 AM IST

ಬೆಂಗಳೂರು: ಕರ್ನಾಟಕದಲ್ಲಿ ಇಂದು ಮೊದಲ ಹಂತದ ಮತದಾನ ನಡೆಯಲಿದೆ. ಅದೆಷ್ಟೋ ಮಂದಿ ನವ ಯುವಕ-ಯುವತಿಯರಿಗೆ ಮೊದಲ ಮತದಾನದ ಚುನಾವಣೆಯಿದು. ಮೊದಲ ಮತದಾನದ ಬಗ್ಗೆ ಅವರಿಗೂ ಸಾಕಷ್ಟು ಕುತೂಹಲ ಇರುತ್ತದೆ. ಮೊದಲ ಬಾರಿಗೆ ಮತಗಟ್ಟೆಗೆ ತೆರಳಲು ಉತ್ಸುಕರಾಗಿರುವ ಯುವ ಜನತೆಗೆ ಚಿತ್ರರಂಗದ ಮಂದಿ ಒಂದಷ್ಟು ಕಿವಿಮಾತು ಹೇಳಿದ್ದಾರೆ.

ಎಲ್ಲರೂ ತಪ್ಪದೆ ಮತ ಹಾಕಲೇಬೇಕು. ಅದರಲ್ಲೂ ಮೊದಲ ಬಾರಿ ಮತ ಹಾಕಲು ಸಜ್ಜಾಗಿರುವ ಯುವಕ, ಯುವತಿಯರು ಯಾವುದೇ ಕಾರಣಕ್ಕೂ ಮತದಾನದಿಂದ ತಪ್ಪಿಸಿಕೊಳ್ಳಬಾರದು. ಮತ ಹಾಕದಿದ್ದರೆ, ನೀವು ರಾಜಕಾರಣಿಗಳನ್ನು ಪ್ರಶ್ನಿಸಲು ಸಾಧ್ಯವೇ ಇಲ್ಲ. ಮತ ಹಾಕುವ ಮುನ್ನ ಯೋಚಿಸಬೇಕು. ದೇಶಕ್ಕೆ ಯಾರು ಸಮರ್ಥರೋ, ಯಾರು ಅಭಿವೃದ್ಧಿ ಮಾಡುತ್ತಾರೋ ಅವರನ್ನು ಗುರುತಿಸಿ ಮತ ಹಾಕಬೇಕು. ಮೊದಲ ಸಲ ಹಕ್ಕು ಚಲಾಯಿಸುವ ಎಲ್ಲರಿಗೂ ಆಲ್‌ ದಿ ಬೆಸ್ಟ್‌.
-ಗಣೇಶ್‌, ನಟ

ಏಪ್ರಿಲ್‌ 18 ಮತ್ತು 23ರಂದು ನಮ್ಮ ದೇಶದ ನಾಯಕರನ್ನು ಮತ್ತು ಸರ್ಕಾರವನ್ನು ಆರಿಸುವ ಅಧಿಕಾರ ನಮಗೆ ಸಿಗುತ್ತಿದೆ. ಅದು ಪರಿಣಾಮಕಾರಿಯಾಗಿ ಆಗಬೇಕಾದರೆ, ಪ್ರತಿಯೊಬ್ಬರೂ ಕಡ್ಡಾಯವಾಗಿ ಮತ ಹಾಕಬೇಕು. ದೇಶವನ್ನು ಮುನ್ನಡೆಸುವ ವ್ಯಕ್ತಿಗಳಿಗೆ ಅಧಿಕಾರ ಕೊಡಿ. ಮತದಾನ ನಮ್ಮೆಲ್ಲರ ಹಕ್ಕು. ನಿಮ್ಮ ಹಕ್ಕನ್ನು ಚಲಾಯಿಸಲು ಮರೆಯಬೇಡಿ.
-ತಾರಾ ಅನುರಾಧಾ, ನಟಿ

ಮೊದಲ ಸಲ ಮತ ಹಾಕುವ ಯುವಪೀಳಿಗೆಗೆ ಹೇಳುವುದಿಷ್ಟೇ, ನಿಮ್ಮ ಬೆರಳ ತುದಿಯಲ್ಲಿ ದೇಶದ ಭವಿಷ್ಯ ಅಡಗಿದೆ. ನೀವು ಹಾಕುವ ಒಂದೇ ಒಂದು ಮತಕ್ಕೆ ದೇಶದಲ್ಲಿ ಇನ್ನಷ್ಟು ಬದಲಾವಣೆಗಳನ್ನು ತರುವ ಸಾಮರ್ಥ್ಯವಿದೆ. ಹಾಗಾಗಿ ಒಳ್ಳೆಯ ವ್ಯಕ್ತಿಗಳನ್ನು ಆಯ್ಕೆ ಮಾಡಲು ಮತ ಹಾಕಿ. ಯಾವುದೇ ಕಾರಣಕ್ಕೂ ನಿಮ್ಮ ಹಕ್ಕು ಚಲಾಯಿಸಲು ಮರೆಯಬೇಡಿ.
ದುನಿಯಾ ವಿಜಯ್‌, ನಟ

ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರೂ ಮತದಾನ ಮಾಡಲೇಬೇಕು. ಮತದಾನ ಮಾಡದಿದವರ ಅಸ್ತಿತ್ವಕ್ಕೆ ಅರ್ಥವೇ ಇಲ್ಲ. ಮತದಾನ ಅಂದ್ರೆ ನಮ್ಮ ಜವಾಬ್ದಾರಿ ಅನ್ನೋದು ನನ್ನ ಭಾವನೆ. ಎಲೆಕ್ಷನ್‌ ದಿನ ರಜೆ ಸಿಕು¤ ಅಂಥ ಟ್ರಿಪ್‌ ಹೊರಡುವ ಮೊದಲು, ನನ್ನಿಂದ ಈ ದೇಶಕ್ಕೆ ಏನಾಗಿದೆ ಅಂತ ಒಮ್ಮೆ ಯೋಚಿಸಿ.
-ವಸಿಷ್ಠ ಸಿಂಹ, ನಟ

ನಮ್ಮ ವ್ಯವಸ್ಥೆ ಸರಿ ಇಲ್ಲ ಅಂಥ ದೂರುವ ಬದಲು ಅದನ್ನು ನಾವೇ ಸರಿ ಮಾಡಲು ಯಾಕೆ ಪ್ರಯತ್ನಿಸಬಾರದು? ಎಲೆಕ್ಷನ್‌ನಲ್ಲಿ ನಮ್ಮ ಒಂದು ಓಟ್‌ ಎಲ್ಲದಕ್ಕೂ ಉತ್ತರವಾಗಬಲ್ಲದು. ಓಟಿಂಗ್‌ ಅನ್ನೋದು ನಮಗೆ ಅಪರೂಪಕ್ಕೆ ಸಿಗುವ ಜವಾಬ್ದಾರಿ ಕೆಲಸ. ನಾನಂತೂ ಮತದಾನ ಮಿಸ್‌ ಮಾಡಿಕೊಳ್ಳುವುದಿಲ್ಲ.
-ಸೋನು ಗೌಡ, ನಟಿ

ಮತದಾನ ಅನ್ನೋದು ಈ ದೇಶದಲ್ಲಿ ಹುಟ್ಟಿದ ನಮ್ಮೆಲ್ಲರ ಜನ್ಮಸಿದ್ಧ ಹಕ್ಕು. ನಮ್ಮೆಲ್ಲರ ಜವಾಬ್ದಾರಿ. ಮತದಾನ ಮಾಡಿ ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡಿ. ಯಾವ ಅಭ್ಯರ್ಥಿಯೂ ಇಷ್ಟವಾಗದಿದ್ದರೆ, ಕೊನೆಗೆ ನೋಟಾ ಆದ್ರೂ ಒತ್ತಿ. ಒಟ್ಟಿನಲ್ಲಿ ನಿಮ್ಮ ಮತವನ್ನು ಹೆಮ್ಮೆಯಿಂದ ಚಲಾಯಿಸಿ.
-ಸಿಂಪಲ್‌ ಸುನಿ, ನಿರ್ದೇಶಕ

ಮತದಾನ ನಮ್ಮ ಹಕ್ಕು ಅಲ್ಲ, ಅದು ನಮ್ಮ ಲಕ್ಕು. ಯಾಕೆಂದ್ರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಮಾಡುವ ಅಥವಾ ಮಾಡದಿರುವ ಒಂದು ಓಟ್‌ ನಿರ್ಣಾಯಕ ಸ್ಥಿತಿಯನ್ನು ನಿರ್ಮಾಣ ಮಾಡಲಿದೆ. ನಮ್ಮ ಬೆರಳತುದಿಯಲ್ಲಿನ ಒಂದು ಓಟಿಗೆ ಅಂಥ ಪವರ್‌ ಇದೆ. ಅದನ್ನು ಬಳಸಿಕೊಂಡು ಭಾರತೀಯರಾಗೋಣ.
-ಕೆ.ಕಲ್ಯಾಣ್‌, ಸಂಗೀತ ನಿರ್ದೇಶಕ ಮತ್ತು ಚಿತ್ರ ಸಾಹಿತಿ

ಜಗತ್ತಿನಲ್ಲೇ ನಮ್ಮದು ಅತ್ಯಂತ ದೊಡ್ಡ ಪ್ರಜಾಪ್ರಭುತ್ವ. ದೇಶದ ಪ್ರತಿಯೊಬ್ಬರಿಗೂ ತಮ್ಮ ನಾಯಕರನ್ನು ಆಯ್ಕೆ ಮಾಡುವ ಅವಕಾಶವನ್ನು ಈ ವ್ಯವಸ್ಥೆ ಕಲ್ಪಿಸಿದೆ. ಇಂಥ ಅವಕಾಶವನ್ನು ಯಾರೂ ಮಿಸ್‌ ಮಾಡಿಕೊಳ್ಳಬೇಡಿ. ಸಮರ್ಥರನ್ನು ಆಯ್ಕೆ ಮಾಡೋಣ.
-ಪ್ರಣಿತಾ ಸುಭಾಷ್‌, ನಟಿ

ಮತದಾನದ ಬಗ್ಗೆ ಶಾಲಾ ದಿನಗಳಲ್ಲೇ ಮಕ್ಕಳಿಗೆ ಅರಿವು ಮೂಡಿಸಬೇಕು. ಇವತ್ತು ವಿದ್ಯಾವಂತರೇ ಮತದಾನದಿಂದ ದೂರ ಉಳಿಯುತ್ತಿದ್ದಾರೆ. ದೇಶದಲ್ಲಿ ಏನೇ ಬೆಳವಣಿಗೆಗಳು ಆದರೂ ಅದರಲ್ಲಿ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ನಾವು ಕೂಡ ಭಾಗಿದಾರರಾಗಿರುತ್ತೇವೆ. ಹಾಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವುದು ನಮ್ಮ ಕೈಯಲ್ಲೇ ಇದೆ. ಬನ್ನಿ ಓಟ್‌ ಮಾಡಿ ಅದನ್ನ ಇನ್ನಷ್ಟು ಗಟ್ಟಿಗೊಳಿಸೋಣ…
-ನೀತೂ ಶೆಟ್ಟಿ, ನಟಿ

ಓಟಿಂಗ್‌ ನಮ್ಮ ಫ‌ಸ್ಟ್‌ ಕಮಿಟ್ಮೆಂಟ್‌ ಆಗಿರಬೇಕು. ಆ ಕೆಲಸ ಆಗಿಲ್ಲ, ಈ ಕೆಲಸ ಆಗಿಲ್ಲ ಅಂತ ಕಂಪ್ಲೇಂಟ್‌ ಮಾಡೋದಕ್ಕೂ ಮೊದಲು ನಾವು ನಮ್ಮ ಕೆಲಸ ಮಾಡಿದ್ದೀವಾ ಅಂತ ಯೋಚಿಸಬೇಕು. ಈ ಬಾರಿಯಂತೂ ಎಲೆಕ್ಷನ್‌ ಕಮಿಷನ್‌ ಓಟಿಂಗ್‌ ಮಾಡೋದಕ್ಕೆ ಎಲ್ಲಾ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದೆ. ಎಲ್ಲರೂ ಬಂದು ಓಟ್‌ ಮಾಡಿ.
-ರೂಪಿಕಾ, ನಟಿ

ವಿದ್ಯಾವಂತರು, ಪ್ರಜ್ಞಾವಂತರಿಂದಲೇ ಮತದಾನ ಮಾಡುವಂಥ ವ್ಯವಸ್ಥೆ ಬೆಳೆದಿದೆ. ಆದರೆ ಇಂದು ವಿದ್ಯಾವಂತರೇ ಓಟ್‌ ಮಾಡುತ್ತಿಲ್ಲ ಅನ್ನೋದು, ನಿಜಕ್ಕೂ ಎಲ್ಲರೂ ತಲೆ ತಗ್ಗಿಸುವ ವಿಷಯ. ದಯಮಾಡಿ ಬುದ್ಧಿವಂತರು, ಸುಶಿಕ್ಷಿತರು ದಡ್ಡರಂತೆ ವರ್ತಿಸಬೇಡಿ. ಇದು ನಮ್ಮ ಹಕ್ಕು, ನಮ್ಮ ಜವಾಬ್ದಾರಿ, ನಮ್ಮ ಕರ್ತವ್ಯ ಬನ್ನಿ ಅದನ್ನ ಹೆಮ್ಮೆಯಿಂದ ಚಲಾಯಿಸೋಣ.
-ಸಾನ್ವಿ ಶ್ರೀವಾತ್ಸವ್‌, ನಟಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ