ಪ್ರಾಣಿಗಳ ದಾಹ ನೀಗಿಸಲು ಉಚಿತ ಕುಂಡ

Team Udayavani, Apr 16, 2019, 3:00 AM IST

ಬೆಂಗಳೂರು: ಇಲ್ಲೊಂದು ತಂಡ ಮೂಕ ಪ್ರಾಣಿಗಳ ಬಾಯಾರಿಕೆ ನೀಗಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಮಣ್ಣಿನ ಕುಂಡಗಳನ್ನು ಉಚಿತವಾಗಿ ನೀಡುತ್ತಿದೆ.

ಬಿರು ಬೇಸಿಗೆಯಲ್ಲಿ ಮೂಕ ಪ್ರಾಣಿಗಳ ದಾಹ ನೀಗಿಸಲು ನಿರ್ಧರಿಸಿರುವ ಸಮಾನ ಮನಸ್ಕರ ತಂಡ, ಐದು ವರ್ಷಗಳಿಂದ, “ವಾಟರ್‌ ಫಾರ್‌ ವಾಯ್ಸಲೆಸ್‌’ ಹೆಸರಿನಲ್ಲಿ ಈ ಕೆಲಸ ಮಾಡುತ್ತಿದೆ.

ಸ್ವಂತ ಹಣದಲ್ಲಿ ಮಣ್ಣಿನ ಕುಂಡ ಖರೀದಿಸಿ ಸಾರ್ವಜನಿಕರಿಗೆ ನೀಡುವ ಮೂಲಕ ಬೇಸಿಗೆಯಲ್ಲಿ ಮೂಕ ಪ್ರಾಣಿಗಳ ನೀರಿನ ದಾಹ ನೀಗಿಸುತ್ತಿದೆ. ಈವರೆಗೆ ಸಾವಿರಾರು ಮಣ್ಣಿನ ಕುಂಡ ನೀಡಲಾಗಿದೆ.

“ಕೆಲ ವರ್ಷಗಳ ಹಿಂದೆ ತುಮಕೂರಿನಲ್ಲಿ ಸನ್ನಿ ಲಿಯೋನ್‌ ಎಂಬವರು ಈ ಅಭಿಯಾನ ಆರಂಭಿಸಿದರು. ಪ್ರಸ್ತುತ ಇದು ಬೆಂಗಳೂರು, ಚೆನ್ನೈ ಮತ್ತು ನವದೆಹಲಿ ನಗರಗಳಿಗೂ ವ್ಯಾಪಿಸಿದೆ.

ನಾವು ಯಾವುದೇ ರಾಜಕೀಯ ಅಥವಾ ಜಾಹೀರಾತಿನ ಉದ್ದೇಶದಿಂದ ಈ ಕೆಲಸ ಮಾಡುತ್ತಿಲ್ಲ. ಇದೊಂದು ಅಪ್ಪಟ ಸಮಾಜಸೇವೆ. ನಮ್ಮೊಂದಿಗೆ ಸಾಕಷ್ಟು ಸ್ವಯಂ ಸೇವಕರು ಕೈಜೋಡಿಸಿದ್ದಾರೆ’ ಎನ್ನುತ್ತಾರೆ ತಂಡದ ಸದಸ್ಯ ಪ್ರಸಾದ್‌ .ಎಂ.

ಬೇಸಿಗೆ ಬಂದರೆ ಸಾಕು, ಪ್ರಾಣಿ-ಪಕ್ಷಿಗಳಿಗೆ ಕುಡಿಯಲು ಸರಿಯಾಗಿ ನೀರು ಸಿಗದೆ, ದಾಹ ತಾಳಲಾಗದೆ, ಕೊಳಚೆ ನೀರು ಕುಡಿಯುತ್ತವೆ. ಇದನ್ನು ತಡೆಯುವ ಉದ್ದೇಶದಿಂದ ಸಾರ್ವಜನಿಕರಿಗೆ ಒಂದು ದೊಡ್ಡ ಮತ್ತೂಂದು ಚಿಕ್ಕ ಪಾಟ್‌ ನೀಡಲಾಗುತ್ತಿದೆ. ದೊಡ್ಡ ಪಾಟ್‌ನಲ್ಲಿ ಹಸು, ದನ ಮತ್ತು ನಾಯಿಗಳಿಗೆ ಮತ್ತು ಸಣ್ಣ ಪಾಟ್‌ನಲ್ಲಿ ಪಕ್ಷಿಗಳಿಗೆ ನೀರಿಡಲು ನೀಡಲಾಗುತ್ತಿದೆ.

ನೀರಿಡಲು ಕೊಟ್ಟರೆ ಸಸಿ ನೆಟ್ಟರು!: ಇಂತಹ ಮಹತ್ವಕಾಂಕ್ಷಿ ಯೋಜನೆಯನ್ನು ಕೆಲವರು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಸಂಘಟನೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ. ನೀರಿಡಲು ಕೊಟ್ಟ ಕುಂಡಗ‌ಳನ್ನು ಕೆಲವರು ಸಸಿ ನೆಡಲು ಬಳಸಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಸಂಪರ್ಕ: 9844203467/988630821.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ