ಬೆಂಗಳೂರಿನ 4,000 ಸ್ಥಳಗಳಲ್ಲಿ ಸಾರ್ವಜನಿಕರಿಗೆ ಉಚಿತ ವೈಪೈ : ಡಿಸಿಎಂ ಅಶ್ವತ್ಥನಾರಾಯಣ್
Team Udayavani, Nov 20, 2019, 2:23 PM IST
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ 4,000 ಸ್ಥಳಗಳಲ್ಲಿ ಸಾರ್ವಜನಿಕರಿಗೆ ಉಚಿತ ವೈಪೈ ಅವಳವಡಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ್ ತಿಳಿಸಿದರು.
ಬೆಂಗಳೂರು ಟೆಕ್ ಸಮ್ಮಿಟ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸಾರ್ವಜನಿಕರಿಗೆ ಉಚಿತ ವೈಫೈ ಸ್ಪಾಟ್ ಬೇಕು ಎಂಬ ಬೇಡಿಕೆ ಇತ್ತು. ಹೀಗಾಗಿ, ಆಕ್ಟ್ ಎಂಬ ಕಂಪನಿ ಜತೆ ಒಪ್ಪಂದ ಮಾಡಿಕೊಂಡು ಪ್ರತಿ ದಿನ ಒಂದು ಗಂಟೆ ಉಚಿತ ಇಂಟರ್ನೆಟ್ ಒದಗಿಸಲಾಗುತ್ತದೆ. ಒಟ್ಟಾರೆ ಯೋಜನೆಗೆ 100 ಕೋಟಿ ರೂ. ವೆಚ್ಚವಾಗಲಿದ್ದು ಸಂಪೂರ್ಣ ವೆಚ್ಚವನ್ನು ಆಕ್ಟ್ ಕಂಪನಿಯೇ ಮಾಡಲಿದೆ. ಈ ವೈಫೈ ಟವರ್ ನಲ್ಲಿ ಸಿಸಿ ಟಿವಿ ಸೇರಿದಂತೆ ನಗರಾಭಿವೃದ್ಧಿಗೆ ಹಾಗೂ ಭದ್ರತೆ ಅಗತ್ಯವಿರುವ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ತಿಳಿಸಿದರು.
ಆಕ್ಟ್ ಕಂಪನಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯವನ್ನು ಬಿಬಿಎಂಪಿ ಹಾಗೂ ಸರ್ಕಾರ ನೀಡಲಿದ್ದು, ಮುಂದಿನ ಒಂಭತ್ತು ತಿಂಗಳಲ್ಲಿ ಯೋಜನೆ ಕಾಮಗಾರಿ ಮುಕ್ತಾಯವಾಗಿ ಸಾರ್ವಜನಿಕರಿಗೆ ಉಚಿತ ವೈಫೈಸಿಗಲಿದೆ ಎಂದರು.