ಜಿಎಸ್‌ಟಿ ಗೊಂದಲದಿಂದ ರಿಯಾಲ್ಟಿ ಕ್ಷೇತ್ರಕ್ಕೆ ಹಿನ್ನೆಡೆ

Team Udayavani, May 16, 2019, 3:05 AM IST

ಬೆಂಗಳೂರು: “ರಿಯಲ್‌ ಎಸ್ಟೇಟ್‌’ ಉದ್ಯಮಕ್ಕೆ ವಿಪುಲ ಅವಕಾಶಗಳಿದ್ದು, ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಆದರೆ, ಸರ್ಕಾರದ ವಿಳಂಬ ನೀತಿಗಳು, ಜಿಎಸ್‌ಟಿ ಗೊಂದಲಗಳು, ಕಟ್ಟಡ ಸಾಮಗ್ರಿಗಳ ದರಗಳಲ್ಲಿನ ಏರಿಳಿತದಿಂದಾಗಿ ಕಳೆದ ಎರಡು ವರ್ಷಗಳಿಂದ ರಿಯಲ್‌ ಎಸ್ಟೇಟ್‌ ಕ್ಷೇತ್ರ ಹಿಮ್ಮುಖವಾಗಿ ಚಲಿಸುತ್ತಿದೆ ಎಂದು ಭಾರತೀಯ ರಿಯಲ್‌ ಎಸ್ಟೇಟ್‌ ಅಭಿವೃದ್ಧಿದಾರರ ಒಕ್ಕೂಟದ (ಕ್ರೆಡಾಯ್‌) ರಾಷ್ಟ್ರೀಯ ಉಪಾಧ್ಯಕ್ಷ ಆರ್‌. ನಾಗರಾಜ್‌ ರೆಡ್ಡಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಕಾರ್ಮಿಕ ಕಾನೂನು ಸೇರಿದಂತೆ ಇನ್ನೂ ಅನೇಕ ಕಾನೂನುಗಳು ರಿಯಲ್‌ ಎಸ್ಟೇಟ್‌ ಉದ್ದಿಮೆದಾರರಿಗೆ ಅನ್ವಯವಾಗುತ್ತವೆ. ಆದರೆ, ಈ ರಿಯಲ್‌ ಎಸ್ಟೇಟ್‌ ಕ್ಷೇತ್ರವನ್ನು ಇಲ್ಲಿವರೆಗೆ ಕೈಗಾರಿಕೋದ್ಯಮವನ್ನಾಗಿ ಪರಿಗಣಿಸದಿರುವುದು ವಿಷಾದದ ಸಂಗತಿ. ಆದ್ದರಿಂದ ಮುಂದಿನ ಎರಡು ವರ್ಷಗಳ ಕಾಲ ನಮ್ಮ ಹೋರಾಟ ಈ ದಿಸೆಯಲ್ಲಿ ನಡೆಯಲಿದೆ ಎಂದರು.

ರಿಯಲ್‌ ಎಸ್ಟೇಟ್‌ ವಲಯಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು. ಈ ನಿಟ್ಟಿನಲ್ಲಿ ಜಿಎಸ್‌ಟಿ ಗೊಂದಲಗಳನ್ನು ಬಗೆಹರಿಸಿಸಬೇಕು. ಸಿಮೆಂಟ್‌, ಕಬ್ಬಿಣ ಸೇರಿದಂತೆ ಕಟ್ಟಡ ಸಾಮಾಗ್ರಿಗಳ ಮೇಲಿನ ಜಿಎಸ್‌ಟಿ ಶೇ.18ಕ್ಕಿಂತ ಹೆಚ್ಚಿದ್ದು, ಅದನ್ನು ಇಳಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ನಮ್ಮ ಮನವಿ ಸದ್ಯ ನೆನೆಗುದಿಗೆ ಬಿದ್ದಿದ್ದು, ಮುಂದೆ ಯಾವುದೇ ಸರ್ಕಾರ ಬಂದರೂ ರಿಯಲ್‌ ಎಸ್ಟೇಟ್‌ ವಲಯದ ಸಮಸ್ಯೆಗಳನ್ನು ಪರಿಹರಿಸಲಿದೆ ಎಂಬ ವಿಶ್ವಾಸವಿದೆ ಎಂದು ರೆಡ್ಡಿ ತಿಳಿಸಿದರು.

ಮುದ್ರಾಂಕ ಶುಲ್ಕ ಇಳಿಸಿ: ಯೋಜನಾ ಮಂಜೂರಾತಿಗೆ ಕರ್ನಾಟಕದಲ್ಲಿ ಮುದ್ರಾಂಕ ಶುಲ್ಕ ಶೇ.6.6 ಇದೆ. ಅದನ್ನು ತೆಲಂಗಾಣ ಮಾದರಿಯಲ್ಲಿ ಮುದ್ರಾಂಕ ಶುಲ್ಕವನ್ನು ಶೇ.1ಕ್ಕೆ ಇಳಿಸಬೇಕು. ಪರವಾನಿಗೆ ಶುಲ್ಕ ಮತ್ತು ಯೋಜನಾ ಮಂಜೂರಾತಿ ಶುಲ್ಕ ಸೇರಿದಂತೆ ಕರ್ನಾಟಕದಲ್ಲಿ ಪ್ರತಿ ಚದರ ಅಡಿ ಜಾಗಕ್ಕೆ 80 ರೂ. ಪಾವತಿಸಬೇಕಾಗಿದೆ.

ಇದನ್ನು 20 ರೂ.ಗೆ ಇಳಿಸಲು ಮೆಟ್ರೋ ಯೋಜನೆಯಿಂದ ಹೊಸೂರು ರಸ್ತೆ, ಸರ್ಜಾಪುರ ರಸ್ತೆ, ಮೈಸೂರು ರಸ್ತೆಯಿಂದ ಬಿಡದಿವರೆಗೆ ಹೊರ ವಲಯದಲ್ಲಿ ಕೈಗೆಟುಕುವ ವಸತಿಗೆ ಹೆಚ್ಚಿನ ಬೇಡಿಕೆ ಇದೆ. ಬೆಂಗಳೂರಿನಲ್ಲಿ ಪ್ರತಿ ವರ್ಷ 45 ರಿಂದ 65 ಸಾವಿರ ಫ್ಲ್ಯಾಟ್‌ಗಳನ್ನು ಮಾರಾಟ ಮಾಡುವ ಸಾಮರ್ಥಯ ಕ್ರೆಡಾಯ್‌ ಹೊಂದಿದೆ.

ಆದರೆ, ನಮ್ಮ ನಿರ್ಮಾಣ ಸಾಮರ್ಥ್ಯ ಅದಕ್ಕಿಂತ ಕಡಿಮೆ ಇದೆ ಎಂದು ರೆಡ್ಡಿ ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕ್ರೆಡಾಯ್‌ ರಾಜ್ಯಾಧ್ಯಕ್ಷ ಆಸ್ಟಿನ್‌ ರೂಚ್‌, ಬೆಂಗಳೂರು ಅಧ್ಯಕ್ಷ ಕಿಶೋರ್‌ ಜೈನ್‌ ಮತ್ತಿತರರು ಇದ್ದರು.

ಕೈಗೆಟುಕುವ ವಸತಿಗೆ “ಬೂಮ್‌’: ಬೆಂಗಳೂರಲ್ಲಿ “ಕೈಗೆಟುಕುವ ವಸತಿ’ಗೆ 2020ರ ವೇಳೆ ಇನ್ನಷ್ಟು “ಬೂಮ್‌’ ಸಿಗಲಿದೆ. ಆ ಹಿನ್ನೆಲೆಯಲ್ಲಿ “ಈಸ್‌ ಆಫ್ ಡುಯಿಂಗ್‌ ಬ್ಯುಸ್‌ನೆಸ್‌’ ಅಡಿ ನಿಯಮಗಳನ್ನು ಸರಳೀಕರಣಗೊಳಿಸಬೇಕು ಎಂದು ನಾಗರಾಜ್‌ ರೆಡ್ಡಿ ಇದೇ ವೇಳೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

ರಾಜ್ಯ ಸರ್ಕಾರದ ವಿಳಂಬ ನೀತಿಗಳು, ದೀರ್ಘ‌ಕಾಲಿಕ ಪ್ರಕ್ರಿಯೆಗಳಿಂದಾಗಿ ಕೈಗೆಟುಕುವ ವಸತಿ ಒದಗಿಸುವ ಕ್ರೆಡಾಯ್‌ ಆಶಯಕ್ಕೆ ಹಿನ್ನಡೆ ಉಂಟಾಗುತ್ತಿದೆ. 2020ರವರೆಗೆ ಪ್ರತಿಯೊಬ್ಬರಿಗೂ ಸೂರು ಒದಗಿಸುವ ಗುರಿಯನ್ನು ಸರ್ಕಾರ ಇಟ್ಟುಕೊಂಡಿದೆ.

ಸರ್ಕಾರದ ಗುರಿ ಸಾಧನೆಗೆ ಕೈಜೋಡಿಸಲು ಕ್ರೆಡಾಯ್‌ ಸಿದ್ಧವಿದೆ. ಹಾಗಾಗಿ ಕೈಗೆಟುಕುವ ವಸತಿ ಸರ್ಕಾರದ ಆದ್ಯತೆಯಾಗಿದ್ದಲ್ಲಿ, ರಿಯಲ್‌ ಎಸ್ಟೇಟ್‌ ವಲಯದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ