ಕುಖ್ಯಾತ ಮನೆಗಳ್ಳನಿಗೆ ಗುಂಡೇಟು

Team Udayavani, Nov 15, 2018, 10:42 AM IST

ಬೆಂಗಳೂರು: ಮನೆಗಳವು ಮಾಡಿ ತಲೆಮರೆಸಿಕೊಂಡು ತಿರುಗಾಡುತ್ತಿದ್ದ ಆರೋಪಿಯನ್ನು ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ನೇಪಾಳ ಮೂಲದ ವ್ಯಕ್ತಿ ಮೇಲೆ ಬಾಣಸವಾಡಿ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

ನೇಪಾಳದ ಭಜಂಗ್‌ ಜಿಲ್ಲೆಯ ದಿನೇಶ್‌ ಬೋರಾ (28)ನ ಬಲಗಾಲಿಗೆ ಗುಂಡೇಟು ತಗುಲಿದೆ. ಇದೇ ವೇಳೆ ಹಲ್ಲೆಗೊಳಗಾದ ಪೇದೆ ಮೂರ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ದಿನೇಶ್‌, ಹೊರಮಾವು ಬಿಬಿಎಂಪಿ ಕಚೇರಿ ಬಳಿಯ ಶೆಡ್‌ನ‌ಲ್ಲಿ ವಾಸವಾಗಿದ್ದು, ಈತ ಕಳೆದ ಮೂರು ವರ್ಷಗಳಿಂದ ಮನೆಗಳವನ್ನು ವೃತ್ತಿಯಾಗಿಸಿಕೊಂಡಿದ್ದ. ಕೋಟ್ಯಂತರ ರೂ. ಚಿನ್ನಾಭರಣ, ನಗದು ಕಳವು ಮಾಡಿ ನೇಪಾಳದಲ್ಲಿ ತಲೆಮರೆಸಿಕೊಳ್ಳುತ್ತಿದ್ದ ಎಂದು ಪೊಲೀಸರು ಹೇಳಿದರು.

ಬಲಗಾಲಿಗೆ ಗುಂಡೇಟು: ವಾರದ ಹಿಂದಷ್ಟೇ ನಗರಕ್ಕೆ ಬಂದಿದ್ದ ದಿನೇಶ್‌. ತನಗೆ ಪರಿಚಯವಿರುವ ಸೆಕ್ಯೂರಿಟಿಗಾರ್ಡ್‌ಗಳ ಜತೆ ವಾಸವಿದ್ದ. ಮಂಗಳವಾರ ರಾತ್ರಿ ಆರೋಪಿ ಕಾಚರಕನಹಳ್ಳಿಯ ರಸ್ತೆಗಳಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ. ಮಾಹಿತಿ ಮೇರಗೆ ಬಾಣಸವಾಡಿ ಇನ್‌ಸ್ಪೆಕ್ಟರ್‌ ವಿರೂಪಾಕ್ಷ ಸ್ವಾಮಿ ನೇತೃತ್ವದ ತಂಡ ಅಲ್ಲಿಗೆ ತೆರಳಿತ್ತು. ಇವರನ್ನು ಕಂಡ ಆರೋಪಿ ತಪ್ಪಿಸಿಕೊಂಡು ಓಡಿದ್ದಾನೆ. ಬಳಿಕ ಸಿಬ್ಬಂದಿ ಧಮೇಂದ್ರ, ಮೂರ್ತಿ, ಸತೀಶ್‌ ಬೆನ್ನಟ್ಟಿದ್ದಾರೆ.

ಆರೋಪಿ ಕೆ.ಜಿ. ಹಳ್ಳಿ ಠಾಣಾ ವ್ಯಾಪ್ತಿಯ ರಾಮದೇವ್‌ ಗಾರ್ಡ್‌ನ್‌ ಬಳಿ ಮೋರಿ ದಾಟಿ ಪರಾರಿಯಾಗಲು ಯತ್ನಿಸಿದ್ದು, ಕೂಡಲೇ ಸಿಬ್ಬಂದಿ ಮೂರ್ತಿ ಆರೋಪಿಯನ್ನು ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ದಿನೇಶ್‌ ತನ್ನ ಬಳಿಯಿದ್ದ ಡ್ಯಾಗರ್‌ನಿಂದ ಪೇದೆ ಮೂರ್ತಿ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಇನ್‌ಸ್ಪೆಕ್ಟರ್‌ ವಿರೂ ಪಾಕ್ಷ ಸ್ವಾಮಿ ಪಿಸ್ತೂಲ್‌ ತೋರಿಸಿ ಶರಣಾಗುವಂತೆ ಸೂಚಿಸಿದ್ದಾರೆ.

ಆದರೂ, ಆರೋಪಿ ಕಾನ್‌ಸ್ಟೆಬಲ್‌ ಮೂರ್ತಿ ಅವರ ಕೈಗೆ ಡ್ರ್ಯಾಗರ್‌ನಿಂದ ಇರಿದಿದ್ದು, ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಇನ್ಸ್‌ಪೆಕ್ಟರ್‌, ದಿನೇಶ್‌ ಬೋರಾ ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಿದರು ಎಂದು ಪೊಲೀಸರು ಹೇಳಿದರು.

ಬೆರಳಚ್ಚು ಕೊಟ್ಟ ಸುಳಿವು: ಈತನ ಬಂಧನದಿಂದ ಬಾಣಸವಾಡಿ ಠಾಣೆ 3, ಜೆ.ಸಿ.ನಗರ ಠಾಣೆ 2, ಇಂದಿರಾನಗರ ಠಾಣೆ 1, ಹೆಣ್ಣೂರು ಠಾಣೆ 1, ಕೆ.ಎಸ್‌.ಲೇಔಟ್‌ನ 1, ಬಸವೇಶ್ವರನಗರ ಠಾಣೆಯ 1 ಮನೆಗಳ್ಳ ಪ್ರಕರಣ ಸೇರಿಂದಂತೆ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 10ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಈತನನ್ನು ಈ ಹಿಂದೆ ಘಟನಾ ಸ್ಥಳದಲ್ಲಿ ದೊರೆತ ಬೆರಳಚ್ಚು ಸಹಾಯದಿಂದ ಬಂಧಿಸಲಾಗಿತ್ತು. ಜಾಮೀನನ ಬಳಿಕ ಆರೋಪಿ ಕೃತ್ಯದಲ್ಲಿ ತೊಡಗಿದ್ದ.

ಕೃತ್ಯ ಹೇಗೆ?: 2015ರಲ್ಲಿ ಲಿಂಗಾರಾಜಪುರದಲ್ಲಿ ವಾಸವಾಗಿದ್ದ ಆರೋಪಿ, ಬಂಧಿತನಾದ ಬಳಿಕ ಮತ್ತೆ ಮನೆ ಮಾಡಿಲ್ಲ. ಕೃತ್ಯ ವೆಸಗಿ ನೇಪಾಳಕ್ಕೆ ತೆರಳುತ್ತಿದ್ದ. ನಗರಕ್ಕೆ ಬಂದಾಗ ಆರೋಪಿ ನೇಪಾಳ ಮೂಲದ ಭದ್ರತಾ ಸಿಬ್ಬಂದಿ ಸ್ನೇಹ ಬೆಳೆಸಿ ಅತನೊಂದಿಗಿದ್ದ. ಅಲ್ಲದೆ ಆತನಿಗೆ ಮದ್ಯ ಸೇವನೆ ಮಾಡಿಸಿ ಅನೇಕ ಮನೆ, ಕಚೇರಿಗಳ ಮಾಹಿತಿ ಪಡೆಯುತ್ತಿದ್ದ. ಮಾಹಿತಿ ಖಚಿತವಾದ ಬಳಿಕ ಕಳವಿಗೆ ಇಳಿಯುತ್ತಿದ್ದ.

ಮತ್ತೂಂದೆಡೆ ಹಗಲು ವೇಳೆ ಮನೆ ಮುಂದೆ ಕಸ, ದಿನಪತ್ರಿಕೆ ಇರುವುದನ್ನು ಗಮನಿಸಿ ರಾತ್ರಿ ಕಳವು ಮಾಡಲು ಮುಂದಾಗುತ್ತಿದ್ದ. ಈ ಹಿಂದೆ ಒಂದು ಮನೆಯಲ್ಲಿ 75 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು. ಮತ್ತೂಂದು ಮನೆಯಲ್ಲಿ 1.25 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಿ ನೇಪಾಳಕ್ಕೆ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದರು. 

ಆಸ್ತಿ ಸಂಪಾದನೆ ಆರೋಪಿ ದಿನೇಶ್‌ ಬೋರಾ ಕಳವು ಮಾಡಿದ ವಸ್ತುಗಳನ್ನು ನೇಪಾಳದಲ್ಲಿ ಮಾರಾಟ ಮಾಡಿ ಬಂದ ಹಣದಲ್ಲಿ ಮನೆ ಹಾಗೂ ಆಸ್ತಿ ಸಂಪಾದಿಸಿದ್ದಾನೆ ಎಂಬ ಮಾಹಿತಿಯಿದೆ. ಆದರೆ, ಇದು ಖಚಿತವಾಗುತ್ತಿಲ್ಲ. ಈತ ಮೋಜಿನ ಜೀವನ ನಡೆಸುತ್ತಿದ್ದ ಎಂಬುದು ಖಾತ್ರಿಯಾಗಿದೆ ಎಂದು ಪೊಲೀಸರು ಹೇಳಿದರು.

ಜನವರಿಯಿಂದ ಈವರೆಗೆ ನಡೆದ ಶೂಟೌಟ್‌ಗಳ ವಿವರ 
„ ಜ.28: ರೌಡಿಶೀಟರ್‌ ದಿವ್ಯತೇಜ್‌ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಕೆ.ಪಿ.ಅಗ್ರಹಾರ ಪೊಲೀಸರು.
„ ಫೆ.2: ಮಧ್ಯಪ್ರದೇಶದ “ಭಿಲ್‌ ಗ್ಯಾಂಗ್‌’ನ ಐವರು ಸದಸ್ಯರ ಮೇಲೆ ಗುಂಡು ಹಾರಿಸಿ ಬಂಧಿಸಿದ್ದ ಈಶಾನ್ಯ ವಿಭಾಗದ ಪೊಲೀಸರು.
„ ಮಾ. 26 : ತಮಿಳುನಾಡಿನ ಧರ್ಮಪುರಿಯ ಶಂಕರ್‌,ಸೆಲ್ವಕುಮಾರ್‌ನ ಬಂಧಿಸಿದ್ದ ವೈಟ್‌ಫಿಲ್ಡ್‌
ಪೊಲೀಸರು 
„ ಮಾ. 28:ರೌಡಿಶೀಟರ್‌ ರೂಪೇಶ್‌ ಅಲಿಯಾಸ್‌ ನಿರ್ಮಲ್‌(29) ಎಡಗಾಲಿಗೆ ಗುಂಡೇಟು ನೀಡಿ ಚಾಮರಾಜಪೇಟೆ ಪೊಲೀಸರಿಂದ ಬಂಧನ.
„ ಏ. 1 : ಕೆಂಬತ್ತಹಳ್ಳಿ ಪರಮೇಶ್‌ ಅಲಿಯಾಸ್‌ ಪರ್ಮಿ ಹಾಗೂ ಸಂತೋಷ್‌ ಮೇಲೆ ಗುಂಡು ಹಾರಿಸಿದ್ದ ತಲ್ಲಘಟ್ಟಪುರ ಪೊಲೀಸರು.
„ ಏ. 5 : ಚರಣ್‌ ರಾಜ್‌ ಎಂಬಾತನ ಮೇಲೆ ಮಹದೇವಪುರ ಠಾಣೆ ಪೊಲೀಸರಿಂದ ಗುಂಡು ಹಾರಿಸಿ ಬಂಧನ.
„ ಏ. 11: ಬಾವಾರಿಯಾ ಗ್ಯಾಂಗ್‌ನ ರಾಮ್‌ಸಿಂಗ್‌ ಮೇಲೆ ಗುಂಡು ಹಾರಿಸಿ ಬಂಧಿಸಿದ್ದ ಉತ್ತರ ವಿಭಾಗದ ಪೊಲೀಸರ ಗುಂಡೇಟು. 
„ ಜೂ. 5 : ಬ್ಯಾಡರಹಳ್ಳಿಯ ಶರವಣ ಅಲಿಯಾಸ್‌ ತರುಣ್‌ ಬಂಧಿಸಿದ್ದ ವಿಜಯನಗರ ಠಾಣೆ ಪೊಲೀಸರು.
„ ಜೂ. 18 : ಮೋಸ್ಟ್‌ ವಾಂಟೆಡ್‌ ಸರಗಳ್ಳ ಅಚ್ಯುತ್‌ ಕುಮಾರ್‌ ಬಂಧಿಸಿದ್ದ ಕೆಂಗೇರಿ ಪೊಲೀಸರು.
„ ಜೂ. 20: ರೌಡಿಶೀಟರ್‌ಗಳಾದ ಬಸವೇಶ್ವರ ನಗರದ ರಫಿಕ್‌, ಸುಧಾಕರ್‌,ಬಂಧಿಸಿದ್ದ ರಾಜಗೋಪಾಲನಗರ ಠಾಣೆ ಪೊಲೀಸರು.
„ ಜೂ. 22: ರೌಡಿಶೀಟರ್‌ ಚರಣ್‌ ರಾಜ್‌ ಮೇಲೆ ಗುಂಡು ಹಾರಿಸಿದ್ದ ಕೆಆರ್‌ಪುರ ಪೊಲೀಸರು.
„ ಜೂ. 27: ಕುಖ್ಯಾತ ರೌಡಿಶೀಟರ್‌ ಸೈಕಲ್‌ ರವಿ ಕಾಲಿಗೆ ಗುಂಡು ಹಾರಿಸಿ ಸಿಸಿಬಿ ಪೊಲೀಸರು ಬಂಧಿಸಿದ್ದರು.
„ ಜು. 28: ಮೈಸೂರು ಮೂಲದ ರೌಡಿ ಕಿರಣ್‌ ಅಲಿಯಾಸ್‌ ಕಿರ್ಬನ ಬಂಧಿಸಿದ್ದ ಕೆ.ಪಿ ಅಗ್ರಹಾರ ಪೊಲೀಸರಿಂದ ಬಂಧನ
„ ಆ. 23: ಮಾರತ್‌ಹಳ್ಳಿ ಪೊಲೀಸರು ಮಾದಕ ವಸ್ತು ಮಾರಾಟ ಆರೋಪಿಗಳಾದ ಸೈಯದ್‌ ಫ‌ರೂಕ್‌ ಮತ್ತು ಷರೀಫ್ ಮೇಲೆ ಗುಂಡಿ ದಾಳಿ ನಡೆಸಿದ್ದರು.
„ ಸೆ.2: ಸರಚೋರ ಸೈಯದ್‌ ಸುಹೇಲ್‌ಗೆ (22) ಬಾಣಸವಾಡಿ ಪೊಲೀಸರಿಂದ ಗುಂಡೇಟಿನ ರುಚಿ, ಬಂಧನ
„ ಸೆ.26: ಯಲಹಂಕ ಬ್ಲಾಕ್‌ ಯುವ ಕಾಂಗ್ರೆಸ್‌ ಅಧ್ಯಕ್ಷ ಅರುಣ್‌ಕುಮಾರ್‌ ಕೊಲೆಪ್ರಕರಣದ ಆರೋಪಿ ಮನೋಜ್‌ ಅಲಿಯಾಸ್‌ ಕೆಂಚನ ಕಾಲಿಗೆ ಗುಂಡೇಟು, ಯಲಹಂಕ ಪೊಲೀಸರಿಂದ ಬಂಧನ 
„ ಅ.3: ಸಿಸಿಬಿ ಪೊಲೀಸರಿಂದ ಚಾಮರಾಜಪೇಟೆಯ ರೌಡಿಶೀಟರ್‌ ಜಾರ್ಜ್‌ ಮೇಲೆ ಗುಂಡಿನ ದಾಳಿ
„ ಅ.13: ಬಂಧಿಸಲು ಹೋದ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಸರಗಳ್ಳ
ಉತ್ತರಪ್ರದೇಶದ ಮುಜಾಫ‌ರ್‌ ನಗರದ ಶಾಕೀರ್‌ (22) ಮೇಲೆ ಚಂದ್ರಲೇಔಟ್‌ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. 
„ ಅ.14: ಶಾಲಾ ಪ್ರಾಂಶುಪಾಲ ರಂಗನಾಥ್‌ ಅವರನ್ನು ಹತ್ಯೆಗೈದಿದ್ದ ಆರೋಪಿಗಳ ಪೈಕಿ ರೌಡಿಶೀಟರ್‌ ಪೈಕಿ ಬಬ್ಲಿ ಅಲಿಯಾಸ್‌ ಮುನಿರಾಜುನನ್ನು ಮಾಗಡಿ ರಸ್ತೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದರು. 
„ ನ.11: ರಂದು ಕೆಆರ್‌ಪುರ ಕಾರ್ಪೊರೇಟರ್‌ ಪತಿ ಸಿರಪುರ್‌ ಶ್ರೀನಿವಾಸ್‌ ಕೊಲೆ ಆರೋಪಿ ನವೀನ್‌ ಅಲಿಯಾಸ್‌ ಅಪ್ಪುನ ಮೇಲೆ ಕೆಆರ್‌ಪುರ ಪೊಲೀಸರು ಗುಂಡು ಹಾರಿಸಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ