ನಿಮ್ಮ ಮನೆಯ ಕ್ಯಾನ್‌ನಲ್ಲಿರುವ ನೀರು ಎಷ್ಟು ಶುದ್ಧ?

ಸುದ್ದಿ ಸುತ್ತಾಟ

Team Udayavani, Sep 16, 2019, 3:10 AM IST

ಚಿತ್ರಗಳು: ಫ‌ಕ್ರುದ್ದೀನ್‌ ಎಚ್‌.

ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ನೀರು ಪೂರೈಸಲು ಜಲ ಮಂಡಳಿ ಹರಸಾಹಸಪಡುತ್ತಿದ್ದರೆ, ನೀರಿನ ಖಾಸಗಿ ವಿತರಕರಿಗೆ ಒಂದು ಕರೆ ಮಾಡಿದರೆ ಸಾಕು, ಮನೆ ಬಾಗಿಲಿಗೆ ನೀರಿನ ಕ್ಯಾನ್‌ ಬಂದು ಬೀಳುತ್ತದೆ! ಹಾಗಿದ್ದರೆ, ಮಂಡಳಿಗೆ ಸಿಗದ ನೀರು ವಿತರಕರಿಗೆ ಸಿಗುವುದು ಹೇಗೆ? ಆ ನೀರು ಎಷ್ಟು ಸುರಕ್ಷಿತ? ಸಾರ್ವಜನಿಕರಿಗೆ 5 ರೂ.ಗೆ 20 ಲೀ. ಸಿಗಬೇಕಾದ ನೀರು, ಈ ಖಾಸಗಿ ವಿತರಕರಿಗೆ ಹೋಗುತ್ತಿರುವುದು ಏಕೆ? ಈ ಘಟಕಗಳ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದು ಏಕೆ? ಹೀಗೆ ಗಿರಕಿ ಹೊಡೆಯೋ ಪ್ರಶ್ನೆಗಳ ಸುತ್ತ ಈ ಬಾರಿಯ ಸುದ್ದಿ ಸುತ್ತಾಟ

“ಫ್ಲೋರೈಡ್‌ ನೀರು ಹಾನಿಕರ, ಶುದ್ಧ ನೀರು ಕುಡಿದು ಆರೋಗ್ಯ ಕಾಪಾಡಿಕೊಳ್ಳಿ’ ಎಂಬ ಮಾತು ನೀರು ಕುಡಿಯುವ ಮುನ್ನ ಒಮ್ಮೆ ನೆನಪಿಗೆ ಬರುತ್ತದೆ. ಆದರೆ… “ಒಂದು ಗ್ಲಾಸ್‌ ನೀರು ಮಾರುಕಟ್ಟೆಗೆ ಬರಬೇಕಾದರೆ, ಬರೋಬ್ಬರಿ 104 ಪ್ರಕಾರಗಳ ಪರೀಕ್ಷೆಗೊಳಪಡಬೇಕು’ ಎಂದು ಭಾರತೀಯ ಮಾನಕ ಬ್ಯೂರೋ ನಿಯಮ ಹೇಳುತ್ತದೆ. ಇನ್ನು ಕರೆ ಮಾಡಿದ ಕೆಲ ಹೊತ್ತಿನಲ್ಲೇ ಮನೆ ಬಾಗಿಲಿಗೆ ಬಂದಿಳಿಯುವ ಕ್ಯಾನ್‌ ನೀರು ಈ ಎಲ್ಲಾ ಪರೀಕ್ಷೆಗಳನ್ನು ಪಾಸು ಮಾಡಿ ಮನೆ ಪ್ರವೇಶಿಸುತ್ತಿದೆಯೇ ಎಂಬುದನ್ನು ಯೋಚಿಸಬೇಕಿದೆ.

ಸೀಲ್‌ ಮಾಡಿದ ಹಾಗೂ ಸೀಲ್‌ ಆಗಿರದ ಯಾವುದೇ ಪ್ರಕಾರದ ಕುಡಿವ ನೀರು ಮಾರಾಟ ಮಾಡಲು ಭಾರತೀಯ ಮಾನಕ ಬ್ಯೂರೋ ಪರವಾನಗಿ ಕಡ್ಡಾಯ. ಆದರೆ, ನಗರದಲ್ಲಿ ಈ ಪರವಾನಗಿ ಪಡೆದವರ ಸಂಖ್ಯೆ ಅಂದಾಜು 150ರಿಂದ 200 ಮಾತ್ರ. ಪೂರೈಕೆದಾರರ ಸಂಖ್ಯೆ ಸಾವಿರಾರು!  ಇತ್ತೀಚಿನ ದಿನಗಳಲ್ಲಿ ನೀರಿನ ವ್ಯಾಪಾರ ಒಂದು ಲಾಭದಾಯಕ ಉದ್ಯಮವಾಗಿ ನಗರದಲ್ಲಿ ಬೆಳೆಯುತ್ತಿದೆ. ಏಜೆನ್ಸಿಗಳು 5-10 ರೂ. ಖರ್ಚು ಮಾಡಿ ಪೂರೈಸುವ 20 ಲೀ. ನೀರಿನ ಕ್ಯಾನ್‌ಗಳ ಬೆಲೆ ನಿಮ್ಮ ಮನೆ ಪ್ರವೇಶಿಸುವ ಹೊತ್ತಿಗೆ 40 ರೂ. ತಲುಪುತ್ತದೆ.

ಒಂದೆಡೆ ಹೆಚ್ಚುತ್ತಿರುವ ಜನಸಂಖ್ಯೆಯ ನೀರಿನ ದಾಹ ನೀಗಿಸಲು ಜಲ ಮಂಡಳಿ ಹರಸಾಹಸ ನಡೆಸುತ್ತಿದೆ. ಆದರೆ, ಖಾಸಗಿ ಏಜೆನ್ಸಿಗಳಿಗೆ ಈ ನೀರು ಹೇಗೆ ಸಿಗುತ್ತದೆ. ನೀರನ್ನು ಪೂರೈಕೆ ಮಾಡುವವರು ಅಧಿಕೃತವಾದವರೇ. ಇದನ್ನು ಪ್ರಶ್ನಿಸುವವರಾದರೂ ಯಾರಿದ್ದಾರೆ. ಇಂತಹ ಹಲವು ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನವನ್ನು “ಉದಯವಾಣಿ’ ಮಾಡಿದೆ. ಕ್ಯಾನ್‌ಗಳಲ್ಲಿ ಪೂರೈಕೆಯಾಗುವ ನೀರಿನ ಮೂಲ ಕೊಳವೆಬಾವಿಗಳು. ಬರದಲ್ಲಿ ಹಾಗೂ ಅಂತರ್ಜಲ ಪಾತಾಳ ತಲುಪಿದ್ದರೂ ನೀರಿನ ಪೂರೈಕೆಯಲ್ಲಿ ಮಾತ್ರ ಯಾವುದೇ ವ್ಯತ್ಯಾಸ ಆಗುವುದಿಲ್ಲ (ದರದಲ್ಲಿ ವ್ಯತ್ಯಾಸ ಆಗುತ್ತದೆ). ಆದ್ದರಿಂದ ನೀರನ್ನು ಬಹುತೇಕ ಕಡೆ ಯಥಾವತ್ತಾಗಿ ಕ್ಯಾನ್‌ಗಳಿಗೆ ಸುರಿದು, ಸೀಲ್‌ ಮಾಡಿ ಗ್ರಾಹಕರಿಗೆ ನೀಡಲಾಗುತ್ತಿದೆ.

ಅಂದಹಾಗೆ ನಗರದಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಪ್ಯಾಕೇಜ್‌ ಕುಡಿಯುವ ನೀರಿನ ವಿತರಕರಿದ್ದು, ಇದೊಂದು ರೀತಿಯಲ್ಲಿ ಗುಡಿ ಕೈಗಾರಿಕೆಯಾಗಿ ಹರಡಿದೆ. 2-3 ಸಾವಿರ ಅಡಿ ವಿಸ್ತೀರ್ಣದಲ್ಲಿ ಒಂದು ಕುಡಿಯುವ ನೀರಿನ ಘಟಕ ನಿರ್ಮಿಸಬಹುದಾಗಿದೆ. ಘಟಕದಲ್ಲಿ ಬೋರ್‌ವೆಲ್‌, 2-3 ದೊಡ್ಡ ಸಿಂಟೆಕ್‌, ಒಂದು ಬೃಹತ್‌ ಶುದ್ಧೀಕರಣ ಯಂತ್ರ, ಕ್ಯಾನ್‌ಗಳು ಮತ್ತು ನೀರು ಸರಬರಾಜು ಮಾಡಲು ವಾಹನಗಳ ಸೌಲಭ್ಯವಿದ್ದರೆ ಸಾಕು ಎನ್ನುತ್ತಾರೆ ಉದ್ಯಮಿಗಳು.
ಕುಡಿವ ನೀರು ಪೂರೈಸುವ ಬಹುತೇಕ ಘಟಕಗಳು ಪೀಣ್ಯ, ಜಾಲಹಳ್ಳಿ, ಹೆಸರಘಟ್ಟ, ಕುಂಬಳಗೋಡು, ಕೆಂಗೇರಿ, ಕೋಣನಕುಂಟೆ ಕ್ರಾಸ್‌, ಸರ್ಜಾಪುರ, ಕಾಡುಗೋಡಿ, ಆವಲಹಳ್ಳಿ, ಯಲಹಂಕ ಸೇರಿ ಇನ್ನಿತರ ನಗರದ ಹೊರವಲಯಗಳಲ್ಲಿ ಹೆಚ್ಚಾಗಿವೆ. ಇವೆಲ್ಲವೂ ಬೋರ್‌ ವೆಲ್‌ಗ‌ಳ ನೀರನ್ನೇ ಕ್ಯಾನ್‌ಗಳಿಗೆ ತುಂಬಿಸುತ್ತಿವೆ.

ವೇಗವಾಗಿ ಬೆಳೆಯುವ ಉದ್ಯಮ: ನಗರದ ದಾಹ ನೀಗಿಸಲು ಹಲವು ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಈ ಪೈಕಿ ಶೇ.15ರಷ್ಟು ಮನೆಗಳಲ್ಲಿ ಆರ್‌ಒ ಶುದ್ಧೀಕರಣ ಘಟಕಗಳನ್ನು ಅಳವಡಿಸಿಕೊಂಡಿದ್ದಾರೆ. ಶೇ.5ರಷ್ಟು ಬ್ರಾಂಡೆಡ್‌ ಮಿನರಲ್‌ ವಾಟರ್‌ ಬಾಟಲ್‌ ಬಳಸುತ್ತಾರೆ. ಶೇ.20 ವಾರ್ಡ್‌ ಹಂತಗಳಲ್ಲಿ ನಿರ್ಮಾಣವಾಗಿರುವ ಶುದ್ಧ ನೀರಿನ ಘಟಕ ಮತ್ತು ನಲ್ಲಿಗಳ ನೀರನ್ನು ಬಳಸುತ್ತಾರೆ. ಇನ್ನುಳಿದ ಶೇ.60 ಜನ 15ರಿಂದ 20 ಲೀಟರ್‌ ಸಾಮರ್ಥ್ಯದ ಕ್ಯಾನ್‌ಗಳನ್ನು ಬಳಸುತ್ತಾರೆ.

ಆದರೆ, ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಂತಹ ನಗರದಲ್ಲಿ ಕುಡಿಯುವ ನೀರು ಪೂರೈಕೆ ಅತೀ ವೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿದೆ. ಪ್ರತಿ ಮನೆಯಲ್ಲೂ ನೀರಿನ ಕ್ಯಾನ್‌ಗಳು ಕಾಣಿಸುತ್ತಿವೆ. ನಗರದ ಬಹುತೇಕ ಹೋಟೆಲ್‌, ಪಿಜಿ (ಪೇಯಿಂಗ್‌ ಗೆಸ್ಟ್‌), ಸರ್ಕಾರಿ-ಖಾಸಗಿ ಕಚೇರಿ, ಹಾಸ್ಟೆಲ್‌ಗ‌ಳಲ್ಲಿ ಕ್ಯಾನ್‌ಗಳ ಮೂಲಕ ಕುಡಿವ ನೀರನ್ನು ಪೂರೈಸಲಾಗುತ್ತಿದೆ. ಗುಣಮಟ್ಟದ ನೀರನ್ನು ಕುಡಿಯಲು ಬಳಸದಿರುವುದರಿಂದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಜಲ ತಜ್ಞ ಪ್ರೊ.ಸಿ.ನರಸಿಂಹಪ್ಪ ಮಾಹಿತಿ ನೀಡಿದ್ದಾರೆ.

ಘಟಕಗಳ ನೀರು ವ್ಯಾಪಾರಕ್ಕೆ!: ಜನತೆಯ ಅನುಕೂಲಕ್ಕೆ ವಾರ್ಡ್‌ ಗೊಂದರಂತೆ 198 ಘಟಕಗಳನ್ನು ಅಳವಡಿಸಲಾಗಿದೆ. ಕೇವಲ 5 ರೂ. ನಾಣ್ಯ ಹಾಕಿದರೆ, 20 ಲೀ. ನೀರು ದೊರೆಯುತ್ತದೆ. ಆದರೆ, ಈ ಘಟಕಗಳ ಪ್ರಯೋಜನವನ್ನು ಹೆಚ್ಚಾಗಿ ಪಡೆಯುತ್ತಿರುವವರು ನೀರು ಪೂರೈಸುವ ಖಾಸಗಿ ಏಜೆನ್ಸಿಗಳು. ಪ್ಯಾಕೇಜ್‌ ಕುಡಿವ ನೀರು ಪೂರೈಕೆಗೆ ಸಂಬಂಧಿಸಿದಂತೆ ಕೇಂದ್ರದಿಂದ ಪರವಾನಗಿ ಪಡೆದು, ಐಎಸ್‌ಐ ಮಾನ್ಯತೆಯನ್ನೂ ನಾವು ಹೊಂದಿದ್ದೇವೆ. ನಮ್ಮಿಂದ ನಿತ್ಯ ನಾಲ್ಕೈದು ನೀರಿನ ವಿತರಕರು 10 ರೂ.ಗೆ ಒಂದು ಕ್ಯಾನ್‌ ನಂತೆ ನೂರಾರು ಕ್ಯಾನ್‌ ನೀರನ್ನು ಖರೀದಿಸುತ್ತಾರೆ. ಆ ನೀರನ್ನು ಗ್ರಾಹಕರಿಗೆ 40 ರೂ.ಗಳಿಗೆ ಮಾರಾಟ ಮಾಡುತ್ತಾರೆ. ಇದು ಗೊತ್ತಿದ್ದೂ ಏನೂ ಮಾಡದ ಸ್ಥಿತಿ ಇದೆ.

ಏಕೆಂದರೆ, ಮಾರುಕಟ್ಟೆಯಲ್ಲಿ ತುಂಬಾ ಸ್ಪರ್ಧೆ ಇದೆ. ಇದನ್ನು ಪ್ರಶ್ನಿಸುವವರು ಯಾರೂ ಇಲ್ಲವಾಗಿದ್ದಾರೆಂದು ಲಾಲ್‌ಬಾಗ್‌ ಬಳಿಯ ಸಿದ್ದಾಪುರದ ಶುದ್ಧ ಕುಡಿವ ನೀರು ಘಟಕದ ಉಸ್ತುವಾರಿ ವಿಷ್ಣುಕುಮಾರ್‌ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. “ಪ್ಯಾಕೇಜ್‌ ಡ್ರಿಂಕಿಂಗ್‌ ವಾಟರ್‌ ತಯಾರಕರ ಕೆಲಸ ನೀರನ್ನು ಶುದ್ಧೀಕರಿಸಿ ಸಾರ್ವಜನಿಕರಿಗೆ ವಿತರಿಸುವುದಾಗಿದೆ. ಇದಕ್ಕಾಗಿ ಪರವಾನಗಿ ಪಡೆದಿರಬೇಕು. ಪರವಾನಗಿ ಶುಲ್ಕ ಒಂದೂವರೆ ಲಕ್ಷ ರೂ. ಇದಲ್ಲದೆ, ವರ್ಷಕ್ಕೆ 13 ಲಕ್ಷ ರೂ.ಘಟಕ ನಿರ್ವಹಣೆಗೆ ಖರ್ಚಾಗುತ್ತದೆ. ಆದರೆ, ನಗರದಲ್ಲಿ ಈ ರೀತಿ ಲೈಸನ್ಸ್‌ ಪಡೆದು ನಡೆಸುತ್ತಿರುವವರು 150ಕ್ಕೂ ಕಡಿಮೆ ಮಂದಿ ಇದ್ದಾರೆ.

ಕ್ಯಾನ್‌ ವಿತರಕರು ಬಣ್ಣ ಬಣ್ಣದ ಮಾತುಗಳಿಂದ ಗ್ರಾಹಕರನ್ನು ಮರಳು ಮಾಡಿ, ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಾರೆ’ ಎಂದು ತಿಳಿಸಿದರು. ಪ್ರತಿ ಘಟಕದಲ್ಲಿ ನಿತ್ಯ ಸರಾಸರಿ 500 ರಿಂದ 600 ಕ್ಯಾನ್‌ ನೀರು ಪೂರೈಕೆ ಮಾಡಲಾಗುತ್ತಿದೆ. ಇದರಿಂದ 1.2ಲಕ್ಷ ಕ್ಯಾನ್‌, ಅಂದರೆ 24ರಿಂದ 25ಲಕ್ಷ ಲೀಟರ್‌ ನೀರು ಪೂರೈಕೆಯಾಗುತ್ತಿದೆ. ಘಟಕ ಅಳವಡಿಕೆಗೆ ಬಿಬಿಎಂಪಿ ಸ್ಥಳ ನೀಡಿದ್ದು, ಘಟಕ ಸ್ಥಾಪಿಸಿದ ಕಂಪನಿಯೇ ಮೊದಲ ವರ್ಷದ ಘಟಕ ನಿರ್ವಹಣೆ ಮಾಡಲಿದೆ. ನಂತರ ನಿರ್ವಹಣೆಗೆ ಅಗತ್ಯವಿರುವ ವೆಚ್ಚವನ್ನು ಬಿಬಿಎಂಪಿ ನೀಡಲಿದೆ. ಈ ಘಟಕಗಳ ಜಲಮೂಲ ಕೂಡ ಕೊಳವೆಬಾವಿಗಳು.

ಕಡಿವಾಣ ಹಾಕುವುದು ಹೇಗೆ?: ಮೂಲಗಳ ಪ್ರಕಾರ ಅನಧಿಕೃತ ಶುದ್ಧ ನೀರು ತಯಾರಕರ ವಿರುದ್ಧ ಭಾರತೀಯ ಮಾನಕ ಬ್ಯೂರೋ (ಬಿಐಎಸ್‌) ನೇರವಾಗಿ ಕ್ರಮ ಕೈಗೊಳ್ಳಲು ಬರುವುದಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರದ ಭಾರತೀಯ ಆಹಾರ ಸುರಕ್ಷತೆ ಮತ್ತು ಭದ್ರತೆ ಪ್ರಾಧಿಕಾರಕ್ಕೆ ಸೂಚಿಸಬಹುದು. ಇನ್ನು ಬೆಸ್ಕಾಂ, ಬಿಬಿಎಂಪಿ ಮತ್ತಿತರ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳು, ಕಡಿವಾಣ ಹಾಕಬೇಕಿದೆ. ಜತೆಗೆ ಈ ವಿಚಾರದಲ್ಲಿ ಜನರ ಅರಿವು ಕೂಡ ಬಹುಮುಖ್ಯ.

ಸರಿಯಾಗಿ ಶುದ್ಧೀಕರಿಸದ ನೀರನ್ನು ಕುಡಿದರೆ ಗಂಟಲು ನೋವು, ಕಫ‌, ಶ್ವಾಸಕೋಶ ಮತ್ತು ಜಠರ ಸೋಂಕಿನಂತಹ ಕಾಯಿಲೆಗಳು ಬರುತ್ತವೆ. ಡೆಂ à, ಮಲೇರಿಯಾದಂತಹ ಕಾಯಿಲೆಗಳು ನೀರಿನಿಂದ ಉತ್ಪತ್ತಿಯಾಗುವ ಸೊಳ್ಳೆಗಳಿಂದ ಹರಡುವ ಕಾರಣ ಎಚ್ಚರಿಕೆಯಿಂದ ನೀರು ಬಳಸಬೇಕು.
-ಮೋಹನ್‌ ರಾಜಣ್ಣ, ಕೆ.ಸಿ.ಜನರಲ್‌ ಆಸ್ಪತ್ರೆ ನಿವಾಸಿ ವೈದ್ಯಾಧಿಕಾರಿ

ನಾವು ಪ್ರಾಮಾಣಿಕವಾಗಿ ಕುಡಿಯುವ ನೀರನ್ನು ಶುದ್ಧೀಕರಿಸಿ ಪೂರೈಕೆ ಮಾಡುತ್ತಿದ್ದೇವೆ. ನಿತ್ಯ ಶುದ್ಧೀಕರಣ ಘಟಕದ ತಪಾಸಣೆ ಮಾಡಲಾಗುತ್ತದೆ. ಘಟಕದ ಆವರಣವನ್ನೂ ಸ್ವತ್ಛವಾಗಿರಿಸಿದ್ದೇವೆ.
-ಪ್ರಕಾಶ್‌, ರಿಫ್ರೆಶ್‌ ವಾಟರ್‌ ಸಪ್ಲೈ ಮಾಲೀಕ

ಬಿಬಿಎಂಪಿಯಿಂದ ಪ್ರತಿ ವಾರ್ಡ್‌ ಹಂತದಲ್ಲಿ ಶುದ್ಧ ಕುಡಿವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಘಟಕ ಸ್ಥಾಪಿಸಿದ ಮೊದಲ ವರ್ಷ ಕಂಪನಿಯಿಂದ ಉಚಿತವಾಗಿ ನಿರ್ವಹಣೆ ಸೌಲಭ್ಯ ಸಿಗಲಿದೆ. ನಂತರ ಪ್ರತಿ ವರ್ಷದ ನಿರ್ವಹಣೆಗೆ ವಿಶೇಷ ಅನುದಾನ ಮೀಸಲಿಡಲಾಗುವುದು.
-ಗಂಗಾಂಬಿಕೆ, ಮೇಯರ್‌

ಜೀವನಕ್ಕೆ ಅತ್ಯವಶ್ಯಕವಾಗಿರುವ ಕುಡಿವ ನೀರಿನ ಉದ್ಯಮ ನಗರಗಳಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವುದು ಅತೀ ಕೆಟ್ಟ ಬೆಳವಣಿಗೆಯಾಗಿದೆ. ಶುದ್ಧೀಕರಣ ಘಟಕದ ಮಾಲಿಕರು ತಮ್ಮಿಷ್ಟದ ಬೆಲೆಗಳನ್ನು ನಿಗದಿಪಡಿಸುತ್ತಿದ್ದಾರೆ. ಘಟಕಗಳು ಪರವಾನಗಿ ಪಡೆಯದೆ ಉದ್ಯಮ ನಡೆಸುತ್ತಿವೆ. ಅಂತಹವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು.
-ನರಸಿಂಹಪ್ಪ, ಜಲ ತಜ್ಞ

* ಲೋಕೇಶ್‌ ರಾಮ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ