ಪ್ರಜಾತಂತ್ರ ವಿರೋಧಿಸಿದರೆ ಉಳಿಗಾಲವಿಲ್ಲ

Team Udayavani, Jun 26, 2019, 3:09 AM IST

ಬೆಂಗಳೂರು: ಪ್ರಜಾತಂತ್ರಕ್ಕೆ ವಿರುದ್ಧವಾದ ಯಾವ ರಾಜಕೀಯ ಸಿದ್ದಾಂತವು ಶಾಶ್ವತವಾಗಿ ಉಳಿಯುವುದಿಲ್ಲ ಎಂಬುದಕ್ಕೆ ಕಾಂಗ್ರೆಸ್‌ನ ಇಂದಿನ ದಯನೀಯ ಸ್ಥಿತಿಯೇ ಸಾಕ್ಷಿ. ಜನ ವಿರೋಧಿ ನೀತಿ ಅನುಸರಿಸಿದ್ದರಿಂದಲೇ ಆ ಪಕ್ಷ ಶೋಚನೀಯ ಸ್ಥಿತಿಗೆ ತಲುಪಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಲೋಕತಂತ್ರ ಸೇನಾನಿ ಆ್ಯಕ್ಷನ್‌ ಕಮಿಟಿಯ ರಾಜ್ಯ ಘಟಕ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಕರಾಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ 44 ವರ್ಷಗಳ ಹಿಂದೆ ತುರ್ತು ಪರಿಸ್ಥಿತಿ ಹೇರುವ ಮೂಲಕ ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ಪ್ರಜಾತಂತ್ರ ವ್ಯವಸ್ಥೆಗೆ ದೊಡ್ಡ ಅಪಚಾರ ನಡೆಸಿದರು.

ಲೋಕನಾಯಕ ಜಯಪ್ರಕಾಶ್‌ ನಾರಾಯಣ್‌ ಅವರನ್ನು ಜೈಲಿನಲ್ಲೇ ಇಟ್ಟು ಜೀವಂತ ಕೊಂದ ಕಾಂಗ್ರೆಸ್‌ ಪಕ್ಷವನ್ನು ದೇಶದ ಜನ ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದರು. ಕಾಂಗ್ರೆಸ್‌ ನಾಯಕರು ಈಗಲೂ ಆತ್ಮಾವಲೋಕನ ಮಾಡಿಕೊಳ್ಳದೆ ಈಗಲೂ ಪ್ರಜಾತಂತ್ರ ವಿರೋಧಿ ನಡವಳಿಕೆ ತೋರುತ್ತಿದ್ದಾರೆ. ತುರ್ತು ಪರಿಸ್ಥಿತಿಯ ಕರಾಳ ನೆನಪು, ಇಂದಿರಾಗಾಂಧಿಯವರ ಸರ್ವಾಧಿಕಾರಿ ನೀತಿಯ ಪರಿಣಾಮ ಇಂದು ಕಾಂಗ್ರೆಸ್‌ ಮುಕ್ತ ಭಾರತವಾಗುತ್ತಿದೆ.

ಲೋಕಸಭಾ ಚನಾವಣೆಯಲ್ಲಿ 28ರಲ್ಲಿ ಪಕ್ಷೇತರ ಸೇರಿ 26 ಲೋಕಸಭಾ ಸ್ಥಾನ ಗೆದ್ದಿದ್ದೇವೆ. ಇದು ಸಾಮಾನ್ಯ ಗೆಲುವಲ್ಲ. ಕಾಂಗ್ರೆಸ್‌ ಬಗ್ಗೆ ಜನ ಬೇಸತ್ತಿದ್ದಾರೆ. ದೇಶ, ರಾಜ್ಯದ ಜನ ಬಿಜೆಪಿ, ಸಂಘ ಪರಿವಾರದ ಜತೆಗಿದ್ದಾರೆ. ಮತ್ತೆ ಕಾಂಗ್ರೆಸ್‌ ತಲೆ ಎತ್ತದಂತೆ ನೋಡಿಕೊಳ್ಳಬೇಕು. ಪ್ರಜಾತಂತ್ರ ವ್ಯವಸ್ಥೆ ಉಳಿಸಬೇಕು ಎಂದು ತಿಳಿಸಿದರು.

ನಮಗೆ ಸಂಘ ಪ್ರೇರಣೆ: ವಿಧಾನ ಪರಿಷತ್‌ ಮಾಜಿ ಸದಸ್ಯ ಗೋ. ಮಧುಸೂದನ್‌, ಆರ್‌ಎಸ್‌ಎಸ್‌ ಇಲ್ಲದೆ ಹೋಗಿದ್ದರೆ ಇಂದಿರಾಗಾಂಧಿಯವರು ದೇಶದ ಮೇಲೆ ಹೇರಿದ್ದ ಕರಾಳ ಶಾಸನದಿಂದ ಮುಕ್ತಿ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ದೇಶಕ್ಕಾಗಿ ಜೈಲಿಗೆ ಹೋದ 1.50 ಲಕ್ಷ ಮಂದಿ ಪೈಕಿ ಶೇ.90ರಷ್ಟು ಮಂದಿ ಸಂಘದ ಕಾರ್ಯಕರ್ತರಾಗಿದದರು. ಜೈಲಿಗೆೆ ಹೋದವರೆಲ್ಲಾ ಸಂಘದ ಕಾರ್ಯಕರ್ತರಾಗಿದ್ದೆವು. ನಮಗೆಲ್ಲಾ ಪ್ರೇರಣೆ ಸಂವಿಧಾನ, ಅಂಬೇಡ್ಕರ್‌, ವಿಧಿಗಳು ಯಾವುದೂ ಅಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಮಗೆ ಪ್ರೇರಣೆ ಸಂಘ ಹಾಗೂ “ನಮಸ್ತೆ ಸದಾ ವತ್ಸಲೆ ಮಾತೃಭೂಮೆ…’ ಎಂದು ನುಡಿದರು.

1975ರ ಜೂ. 25ರಂದು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರ ಆಘಾತದಿಂದ ಎಚ್ಚೆತ್ತುಕೊಳ್ಳಲು ಎರಡು ತಿಂಗಳು ಬೇಕಾಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯನ್ನು ನಿಷೇಧಿಸಿದ್ದರೂ ಜೈಲಿನಲ್ಲಿ ಶಾಖೆ ನಡೆದಿತ್ತು. ತುರ್ತು ಪರಿಸ್ಥಿತಿಯಿಂದಾಗಿ ದೇಶದಲ್ಲಿ ಮತ್ತೂಮ್ಮೆ ಪ್ರಜಾಪ್ರಭುತ್ವದ ಅಗತ್ಯದ ಪ್ರತಿಷ್ಠಾಪನೆಯಾಯಿತು.

ದೇಶಕ್ಕಾಗಿ ವಾಜಪೇಯಿ ಪೀಠತ್ಯಾಗ ಮಾಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಜನಸಂಘದ ಹೋರಾಟದ ಫ‌ಲವಾಗಿ ವಾಜಪೇಯಿಯವರು ಪ್ರಧಾನಿಯಾದರು. ಇಂದು ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಎರಡನೇ ಬಾರಿ ಕೇಂದ್ರ ಸರ್ಕಾರ ರಚಿಸಿದೆ ಎಂದು ತಿಳಿಸಿದರು.

ಜ.14ರಂದು ಇಂದಿರಾಗಾಂಧಿಯವರು ಮೈಸೂರಿಗೆ ಬಂದಿದ್ದರು. ಆಗ ಐದಾರು ಮಂದಿಯ ತಂಡ ಇಂದಿರಾಗಾಂಧಿಯವರ ಮುಖದತ್ತ ಕರಪತ್ರ ಎಸೆದರು. ಅವರ ಕೈಗೆ ಬಾಂಬ್‌ ಸಿಕ್ಕಿ ಅದನ್ನೇ ಎಸೆದಿದ್ದರೆ ತುರ್ತು ಪರಿಸ್ಥಿತಿ ಅಂದೇ ಮುಕ್ತಾಯವಾಗುತ್ತಿತ್ತು. ಆದರೆ ಬಾಂಬ್‌ ಹಾಕುವುದು ಸಂಘದ ಉದ್ದೇಶವಾಗಿರಲಿಲ್ಲ. ಹಿಂಸೆಯಲ್ಲಿ ನಂಬಿಕೆ ಇಟ್ಟವರಲ್ಲ ಎಂದು ಹೇಳಿದರು.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಎಚ್‌.ಡಿ.ದೇವೇಗೌಡರು ಸಂಸ್ಥಾ ಕಾಂಗ್ರೆಸ್‌ನಲ್ಲಿದ್ದರು. ತುರ್ತು ಪರಿಸ್ಥಿತಿ ವಿರುದ್ಧವೂ ಹೋರಾಡಿದ್ದರು. ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್‌ನಲ್ಲಿ ನಡೆದ ತುರ್ತು ಪರಿಸ್ಥಿತಿ ಕರಾಳ ದಿನ ಕಾರ್ಯಕ್ರಮದಲ್ಲಿ ತುರ್ತು ಪರಿಸ್ಥಿತಿಯ ಲಾಭ ಪಡೆಯದ ಸಂಘಟನೆ ಆರ್‌ಎಸ್‌ಎಸ್‌ ಎಂದಿದ್ದರು. ಆದರೆ ಇಂದು ದೇವೇಗೌಡರು ಅದೇ ಕಾಂಗ್ರೆಸ್‌ ಜೊತೆಯಲ್ಲಿದ್ದಾರೆ. ಇವರಿಗೆ ನಾಚಿಕೆ, ಮಾನ ಮರ್ಯಾದೆ ಇಲ್ಲ ಎನಿಸುತ್ತದೆ ಎಂದು ಟೀಕಿಸಿದರು.

ಬಿ.ಎಸ್‌.ಯಡಿಯೂರಪ್ಪ ಅವರು ಮತ್ತೂಮ್ಮೆ ಮುಖ್ಯಮಂತ್ರಿಯಾಗಬೇಕು. ಈ ಪಾಪಿ ಕಾಂಗ್ರೆಸ್‌ ಸರ್ಕಾರ ಕರ್ನಾಟಕದಲ್ಲಿ ಇರಬಾರದು. ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆಯವರು ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್‌ಎಸ್‌ ಪಾತ್ರವೇನು ಎಂದು ಪ್ರಶ್ನಿಸುತ್ತಾರೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅವರ ಹೋರಾಟ ಏನು ಎಂದು ಹೇಳಬೇಕು ಎಂದು ಆಗ್ರಹಿಸಿದರು.

ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಹೋರಾಟಗಾರರಿಗೆ ಕೆಲ ಸೌಲಭ್ಯ ಕಲ್ಪಿಸುವ ಪ್ರಯತ್ನ ಮಾಡಿದರೂ ಕಾರ್ಯಗತವಾಗಲಿಲ್ಲ. ಅವರು ಮತ್ತೂಮ್ಮೆ ಮುಖ್ಯಮಂತ್ರಿಯಾಗುತ್ತಾರೆ. ಆಗ ಈ ಹೋರಾಟಗಾರರಿಗೆ ಏನಾದರೂ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಲೋಕತಂತ್ರ ಸೇನಾನಿ ಆ್ಯಕ್ಷನ್‌ ಕಮಿಟಿ ರಾಜ್ಯಾಧ್ಯಕ್ಷ ಮಂಜುನಾಥ ಸ್ವಾಮಿ, ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರನ್ನು ಸ್ವತಂತ್ರ ಸೇನಾನಿ ಎಂದು ಗುರುತಿಸಿ ಇತರೆ ರಾಜ್ಯಗಳು ಸೌಲಭ್ಯ ಕಲ್ಪಿಸಿರುವ ರೀತಿಯಲ್ಲಿ ರಾಜ್ಯದಲ್ಲೂ ಹೋರಾಟಗಾರರಿಗೆ ಸೌಲಭ್ಯ ಕಲ್ಪಿಸಬೇಕು. ಹಾಗೆಯೇ ಖೀಲಾಫ‌ತ್‌ ಚಳವಳಿ, ಮೋಕ್ಲಾ ಚಳವಳಿಯಲ್ಲಿ ಭಾಗವಹಿಸಿದವರ ಮಕ್ಕಳು, ಮೊಮ್ಮಕ್ಕಳಿಗೆ ಇಂದಿಗೂ ಪಿಂಚಣಿ ನೀಡುತ್ತಿದ್ದು, ಇದನ್ನು ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯಬೇಕು ಎಂದು ಮನವಿ ಮಾಡಿದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ, ಮುಖಂಡ ಛಾಯಾಪತಿ ಇತರರು ಪಾಲ್ಗೊಂಡಿದ್ದರು.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಾನು ಸಾಗರ ಜೈಲಿನಲ್ಲಿದ್ದೆ. ಬಳಿಕ ಬಳ್ಳಾರಿ ಜೈಲಿಗೆ ಹಾಕಿದ್ದರು. ಜೈಲಿನಲ್ಲೂ ಜೀವಾವಧಿ ಶಿಕ್ಷೆಗೆ ಗುರಿಯಾದವರು ಹಾಗೂ ಜೈಲು ಅಧಿಕಾರಿಗಳು ಸೇರಿ ಕೈದಿಗಳಿಗೆ ನೀಡುವ ಊಟದಲ್ಲೂ ಕೊರತೆ ಮಾಡಿ ಲೂಟಿ ಮಾಡುತ್ತಿದ್ದರು. ನನ್ನ ಸ್ವಭಾವದಂತೆ ಅದರ ವಿರುದ್ಧ ಹೋರಾಟ ಆರಂಭಿಸಿದೆ. ಅಂದು ಒಂದು ಕ್ಷಣದಲ್ಲಿ ಬಾಗಿ ಹಾಕಿಕೊಳ್ಳದೆ ಇದ್ದರೆ ನಾನು ಜೀವಂತವಾಗಿ ಹೊರ ಬರಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಜೀವನದಲ್ಲಿ ಇದನ್ನು ಮರೆಯಲು ಸಾಧ್ಯವಿಲ್ಲ. ಅನ್ಯಾಯ, ದುರುಪಯೋಗ ಎಲ್ಲ ವಲಯದಲ್ಲೂ ಎಲ್ಲ ಸಂದರ್ಭದಲ್ಲಿ ನಡೆಯುತ್ತಿರುತ್ತದೆ ಎಂಬುದಕ್ಕೆ ಜೀವಂತ ಉದಾಹರಣೆ.
-ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ರಾಂಚಿ: ಜಾರ್ಖಂಡ್ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಜಾರಿಯಲ್ಲಿದ್ದು ನಾಲ್ಕನೇ ಹಂತದ ಮತದಾನ ಸೋಮವಾರ ನಡೆಯುತ್ತಿದೆ.  ಮತದಾನ ನಡೆಯುವ ಕ್ಷೇತ್ರಗಳಲ್ಲಿ ಬಿಗಿ...

  • ಕೋಲ್ಕತಾ: ಭಾರತ್‌ ಅರ್ಥ್ ಮೂವರ್ಸ್‌ ಲಿಮಿಟೆಡ್‌ (ಬಿಇಎಂಎಲ್‌)ನಲ್ಲಿ ಕೇಂದ್ರ ಸರಕಾರ ತಾನು ಹೊಂದಿರುವ ಶೇ.28ರಷ್ಟು ಷೇರುಗಳನ್ನು ಮಾರುವ ಸಾಧ್ಯತೆ ಇದೆ. ಉಳಿದಿರುವ...

  • ಹೊಸದಿಲ್ಲಿ: ಉನ್ನಾವ್‌ನಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದಿಲ್ಲಿಯ ಸ್ಥಳೀಯ ಕೋರ್ಟ್‌ ಸೋಮವಾರ (ಡಿ.16) ತೀರ್ಪು ಪ್ರಕಟಿಸಲಿದೆ. ಬಿಜೆಪಿಯ...

  • "ನನ್ನ 38 ವರ್ಷಗಳ ಸಿನಿಮಾ ಜರ್ನಿ ಸಾರ್ಥಕವೆನಿಸಿದೆ. ಸಿನಿಮಾರಂಗದಲ್ಲಿ ನೆಮ್ಮದಿ ಸಿಕ್ಕಾಗಿದೆ. ಇನ್ನು ಸಾಕು ಅಂದುಕೊಂಡಿದ್ದೆ. ಆದರೆ, ಕವಿರಾಜ್‌, ನೀವು ಸುಮ್ಮನೆ...

  • ದರ್ಶನ್‌ ಅಭಿನಯದ "ಒಡೆಯ' ಚಿತ್ರದ ಆರ್ಭಟ ಜೋರಾಗಿದೆ. ಅದರಲ್ಲೂ ದರ್ಶನ್‌ ಅಭಿಮಾನಿಗಳಷ್ಟೇ ಅಲ್ಲ, ಎಲ್ಲಾ ವರ್ಗದವರಿಗೂ ಇಷ್ಟವಾಗುವ ಅಂಶಗಳು "ಒಡೆಯ'ದಲ್ಲಿರುವುದರಿಂದ...