ಐಎಂಎ ಎದುರು ಆಕ್ರೋಶ, ಆಕ್ರಂದನ

Team Udayavani, Jun 11, 2019, 3:10 AM IST

ಬೆಂಗಳೂರು: ಐಎಂಎ ಜ್ಯುವೆಲ್ಲರ್ಸ್‌ ಮಾಲೀಕ ಮನ್ಸೂರ್‌ ನಾಪತ್ತೆಯಾಗಿದ್ದಾನೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಸಾವಿರಾರು ಮಂದಿ ಹಣ ಕಳೆದುಕೊಂಡವರು ಶಿವಾಜಿನಗರದಲ್ಲಿರುವ ಐಎಂಎ ಕಚೇರಿ ಬಳಿ ಜಮಾವಣೆಗೊಂಡು ಭಾರೀ ಪ್ರತಿಭಟನೆ ನಡೆಸಿದರು.

ಸ್ಥಳದಲ್ಲಿದ್ದ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಹೂಡಿಕೆದಾರರು ಮನ್ಸೂರ್‌, ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಕಷ್ಟುಪಟ್ಟು ಸಂಪಾದಿಸಿದ, ಮನೆ, ನಿವೇಶನ, ಚಿನ್ನಾಭರಣ ಅಡಮಾನ ಇಟ್ಟು ಲಕ್ಷಾಂತರ ರೂ. ಹಣ ಹೂಡಿಕೆ ಮಾಡಿದ್ದೇವೆ. ನಮಗೆ ನ್ಯಾಯ ಕೊಡಿಸಿ, ಇಲ್ಲವಾದರೆ, ಮನ್ಸೂರ್‌ನನ್ನೇ ಸ್ಥಳಕ್ಕೆ ಕರೆಸುವಂತೆ ಆಗ್ರಹಿಸಿದರು. ಒಂದು ಹಂತದಲ್ಲಿ ಚಿನ್ನಾಭರಣ ಮಳಿಗೆಗೆ ನುಗ್ಗಲು ಯತ್ನಿಸಿದರು.

ಆಕ್ರೋಶ, ವಾಗ್ವಾದ: ಈ ಮಧ್ಯೆ ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಮನ್ಸೂರ್‌ ಖಾನ್‌ ನಾಪತ್ತೆಯಾಗಿದ್ದಾನೆ, ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬೆಲ್ಲ ವದಂತಿಗಳು ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ ಆತಂಕಗೊಂಡ ಸಾವಿರಾರು ಹೂಡಿಕೆದಾರರು ಲೇಡಿ ಕರ್ಜನ್‌ ರಸ್ತೆಯಲ್ಲಿರುವ ಐಎಂಎ ಜ್ಯುವೆಲ್ಲರ್ಸ್‌ (ಗ್ರೂಪ್‌ ಆಫ್ ಕಂಪನಿಸ್‌)ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿ ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸರು ಹೆಚ್ಚುವರಿ ಸಿಎಆರ್‌, ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಿಕೊಂಡು ಅಂಗಡಿ ಮುಂಭಾಗ ಬ್ಯಾರಿಕೇಡ್‌ಗಳನ್ನು ಹಾಕಿ ಭದ್ರತೆ ಕಲ್ಪಿಸಿದರು. ಪ್ರಕರಣ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಇನ್ನಷ್ಟು ಮಂದಿ ಮನ್ಸೂರ್‌ ವಿರುದ್ಧ ಘೋಷಣೆ ಕೂಗಿದರು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಸ್ಥಳೀಯ ಶಾಸಕ ರೋಷನ್‌ ಬೇಗ್‌, ಪಾಲಿಕೆ ಸದಸ್ಯರು ಆಗಮಿಸುವಂತೆ ಒತ್ತಾಯಿಸಿದರು.

ಈ ವೇಳೆ ಕೆಲವರು ಆಸ್ತಿ, ಮನೆ, ಜಮೀನು, ನಿವೇಶನಗಳು ಹಾಗೂ ಚಿನ್ನಾಭರಣಗಳನ್ನು ಅಡಮಾನ ಇಟ್ಟು ಹಣ ಹೂಡಿಕೆ ಮಾಡಿದ್ದೇವೆ. ಒಂದು ಹಂತದಲ್ಲಿ ಆಕ್ರೋಶಗೊಂಡ ಪ್ರತಿಭಟನಾಕಾರರು ಬ್ಯಾರಿಕೇಡ್‌ ತಳ್ಳಿ ಅಂಗಡಿಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರು ನಡುವೆ ವಾಗ್ವಾದ, ತಳ್ಳಾಟ, ನೂಕಾಟ ಕೂಡ ನಡೆಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಕೂಡ ನಡೆಸಿದರು.

ಡಿಸಿಪಿ ಮನವಿಗೂ ಜಗ್ಗದ ಹೂಡಿಕೆದಾರರು: ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿಸಿದ ಪೂರ್ವ ವಲಯ ಡಿಸಿಪಿ ರಾಹುಲ್‌ ಕುಮಾರ್‌ ಶಹಪುರವಾದ್‌, ಪ್ರತಿಭಟನಾಕಾರರ ಸಮಾಧಾನ ಪಡಿಸಲು ಮುಂದಾದರು. ಈ ವೇಳೆ ಕೆಲ ಪ್ರತಿಭಟನಾಕರರು, ಆರೋಪಿ ಮನ್ಸೂರ್‌ ಖಾನ್‌ನನ್ನು ಯಾಕೆ ರಕ್ಷಣೆ ಮಾಡುತ್ತಿದ್ದಾರಾ?, ಯಾಕೆ ನಮ್ಮನ್ನು ತಡೆಯುತ್ತಿದ್ದಿರಾ? ನಮ್ಮ ಹಣದಿಂದಲೇ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣದ ಅಂಗಡಿ ತೆರಿದಿದ್ದಾನೆ. ಹೀಗಾಗಿ ಅವಕಾಶ ಕೊಡಿ ಅಂಗಡಿಯಲ್ಲಿರುವ ವಸ್ತು ತೆಗೆದುಕೊಂಡು ನಮ್ಮ ಹಣ ಪಡೆದುಕೊಳ್ಳುತ್ತೇವೆ ಎಂದು ವಾದಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ,ಅವಕಾಶ ಕೊಡಲು ಸಾಧ್ಯವಿಲ್ಲ ಎಂದರು.

ನಾಲ್ಕು ತಾತ್ಕಾಲಿಕ ಕೌಂಟರ್‌: ಅನಂತರ ಧ್ವನಿವರ್ಧದ ಮೂಲಕ ಪ್ರತಿಭಟನಾಕಾರರನ್ನು ಮನವೊಲಿಸಲು ಮುಂದಾದ ಅವರು, ಅಂಗಡಿಗೆ ಪೊಲೀಸ್‌ ಭದ್ರತೆ ನೀಡಲಾಗಿದೆ. ಯಾರು ಎಷ್ಟು ಹಣ ಕಳೆದುಕೊಂಡಿದ್ದಿರಿ ಎಂಬ ಬಗ್ಗೆ ದೂರು ನೀಡಬಹುದು. ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸ್‌ ಠಾಣೆ ಅಥವಾ ಬೌರಿಂಗ್‌ ಆಸ್ಪತ್ರೆ ಮುಂಭಾಗ ನಾಲ್ಕು ತಾತ್ಕಾಲಿಕ ದೂರು ಸ್ವೀಕರಿಸುವ ಕೌಂಟರ್‌ ತೆರೆಯಲಾಗಿದೆ. ಸೂಕ್ತ ದಾಖಲೆ ಸಮೇತ ದೂರು ನೀಡಿ ಎಂದು ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿವರೆಗೆ ಎರಡು ಸಾವಿರಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.

ಸಂಚಾರ ದಟ್ಟಣೆ: ಮನ್ಸೂರ್‌ ಖಾನ್‌ ನಾಪತ್ತೆಯಾಗಿದ್ದಾನೆ, ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಐಎಂಎ ಜ್ಯುವೆಲ್ಲರ್ಸ್‌ ಮುಂಭಾಗ ಸಾವಿರಾರು ಮಂದಿ ಜಮಾಯಿಸಿದರು. ಇದರಿಂದ ಲೇಡಿ ಕರ್ಜನ್‌ ರಸ್ತೆ, ಬೌರಿಂಗ್‌ ಆಸ್ಪತ್ರೆ ಮುಂಭಾಗ ಭಾರೀ ಸಂಚಾರ ದಟ್ಟಣೆ ಉಂಟಾಯಿತು. ಹೂಡಿಕೆದಾರರು ಪ್ರತಿಭಟನೆ ನಡೆಸುತ್ತಿದ್ದಂತೆ ಲೇಡಿ ಕರ್ಜನ್‌ ರಸ್ತೆಯ ಎರಡು ಬದಿಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ವಾಹನ ಸಂಚಾರ ನಿರ್ಬಂಧಿಸಲಾಯಿತು.

ಲುಕ್‌ಔಟ್‌ ನೋಟಿಸ್‌: ಪ್ರಕರಣದ ಆರೋಪಿ ಮನ್ಸೂರ್‌ ಖಾನ್‌ ವಿದೇಶಕ್ಕೆ ತೆರಳಿದ್ದಾನೆ ಎಂಬ ಬಗ್ಗೆ ಖಚಿತ ಪಡಿಸಿಕೊಳ್ಳಲು ಪೂರ್ವ ವಲಯ ಪೊಲೀಸರು ವಿದೇಶಿ ಪ್ರಾದೇಶಿಕ ನೊಂದಣಿ ಕಚೇರಿ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡರು. ಈ ನಡುವೆ ಆರೋಪಿ ಮನ್ಸೂರ್‌ ಇಬ್ಬರು ಪತ್ನಿಯರ ಜತೆ ದೇಶ ಬಿಟ್ಟಿದ್ದಾನೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಎಲ್ಲ ವಿಮಾನ ನಿಲ್ದಾಣಗಳು, ಬಂದರುಗಳು ಹಾಗೂ ರೈಲು ನಿಲ್ದಾಣಗಳಿಗೆ ಪೊಲೀಸರು ಲುಕ್‌ಔಟ್‌ ನೋಟಿಸ್‌ ರವಾನಿಸಿದ್ದಾರೆ. ಮತ್ತೂಂದೆಡೆ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಆತನಿಗಾಗಿ ಹುಡುಕಾಟ ನಡೆಯುತ್ತಿದೆ.

“ಮನ್ಸೂರ್‌ ಭಾಯ್‌ ಜಿಂದಾ ಹೈ’: ಪ್ರತಿಭಟನೆಯ ಕಾವು ಹೆಚ್ಚಾಗುತ್ತಿರುವ ಮಧ್ಯೆಯೇ ಐಎಂಎ ಜ್ಯುವೆಲ್ಲರ್ಸ್‌ನಲ್ಲಿ ಕೆಲಸ ಮಾಡುತ್ತಿರುವ ಮೊಹಮ್ಮದ್‌ ಎಂಬಾತ, “ಮನ್ಸೂರ್‌ ಭಾಯ್‌ ಜಿಂದಾ ಹೈ’ ಎಂದು ಹೇಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ. ಕೂಡಲೇ ಆತನನ್ನು ವಶಕ್ಕೆ ಪಡೆದ ಪೊಲೀಸರು ಆತನಿಂದ ಕೆಲ ಮಾಹಿತಿ ಪಡೆದುಕೊಂಡರು.

ಅನಂತರ ಧ್ವನಿವರ್ಧಕದ ಮೂಲಕ ಆತ, “ಮನ್ಸೂರ್‌ ಭಾಯ್‌ ಜಿಂದಾ ಹೈ. ಯಾರು ಹೆದರಬೇಕಿಲ್ಲ. ಪ್ರತಿಯೊಬ್ಬರ ಹಣ ಕೊಡುತ್ತಾರೆ’ ಎಂದು ಹೇಳಿದ. ಆದರೆ, ಮನ್ಸೂರ್‌ ಎಲ್ಲಿದ್ದಾರೆ ಎಂಬ ಬಗ್ಗೆ ಮಾಹಿತಿಯಿಲ್ಲ ಎಂದು ಹೇಳುವ ಮೂಲಕ ಪ್ರತಿಭಟನಾಕರರಲ್ಲಿ ಮತ್ತಷ್ಟು ಆಕ್ರೋಶ ಹೆಚ್ಚಿಸಿದ. ಈ ಹಿನ್ನೆಲೆಯಲ್ಲಿ ಸದ್ಯ ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ವಂಚನೆಗೆ ಮಾಡಲೆಂದೇ ನಾಪತ್ತೆ?: ಮನ್ಸೂರ್‌ ಖಾನ್‌ ಹೂಡಿಕೆದಾರರಿಗೆ ವಂಚನೆ ಮಾಡಲೆಂದೇ ನಾಪತ್ತೆಯಾಗಿದ್ದಾನೆಯೇ ಎಂಬ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಚಿನ್ನಾಭರಣ ಅಂಗಡಿ ಮುಂದೆ ಹಾಕಲಾಗಿದ್ದ ಈದ್‌ ಮಿಲಾದ್‌ ಹಬ್ಬದ ಶುಭಾಶಯ ಕೋರಿದ ಫ್ಲೆಕ್ಸ್‌ನಲ್ಲಿ ಹಬ್ಬದ ಪ್ರಯುಕ್ತ ಜೂನ್‌ 5ರಿಂದ 9ರವರೆಗೆ ಅಂಗಡಿ ಮುಚ್ಚಲಾಗುತ್ತದೆ. ಜೂನ್‌ 10 ರಂದು ತೆರೆಯಲಾಗುವುದು ಎಂದು ಪ್ರಕಟಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮನ್ಸೂರ್‌ ಮೋಸ ಮಾಡಲೆಂದೇ ಅದೇ ಅವಧಿಯಲ್ಲಿ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ಶಂಕೆ ವಕ್ತಪಡಿಸಿದ್ದಾರೆ.

ಈ ಹಿಂದೆ ಐಟಿ ದಾಳಿ: ಐಎಂಎ ಗ್ರೂಪ್‌ ಆಫ್ ಕಂಪನಿಯ್ಸ ಮೇಲೆ 2017ರಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಆದಾಯ ತೆರಿಗೆ ಪಾವತಿ ಹಾಗೂ ಶೇಕಡ ಪ್ರಮಾಣದಲ್ಲಿ ಚಿನ್ನಾಭರಣ ರಿಯಾಯಿತಿ ಮಾರಾಟ ಆರೋಪದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ಪೊಲೀಸರಿಂದಲೂ ಹೂಡಿಕೆ: ವಿಪರ್ಯಾಸವೆಂದರೆ, ಐಎಂಎ ಸಂಸ್ಥೆಯ ಅಧಿಕ ಬಡ್ಡಿ ಆಮಿಷಕ್ಕೆ ಒಳಗಾಗಿ ಸಾರ್ವಜನಿಕರು ಮಾತ್ರವಲ್ಲದೆ, ಪೊಲೀಸರು ಕೂಡ ಲಕ್ಷಾಂತರ ರೂ. ಹೂಡಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇನ್‌ಸ್ಪೆಕ್ಟರ್‌ ಹಂತದ ಅಧಿಕಾರಿಗಳು ಸೇರಿ ಸುಮಾರು 260 ಮಂದಿ ಹಣ ಹೂಡಿಕೆ ಮಾಡಿ ಪೇಚಿಗೆ ಸಿಲುಕಿದ್ದಾರೆ. ಆದರೆ,ಹೂಡಿಕೆ ಮೊತ್ತ ಮಾತ್ರ ಎಷ್ಟು ಎಂಬುದು ತಿಳಿದು ಬಂದಿಲ್ಲ.

ಮನ್ಸೂರ್‌ ಖಾನ್‌ನ ಬೃಹತ್‌ ಸಂಸ್ಥೆಗಳು: ಮನ್ಸೂರ್‌ ಐಎಂಎ ಗ್ರೂಪ್‌ ಆಫ್ ಕಂಪನಿಸ್‌ ಹೆಸರಿನಲ್ಲಿ ಐಎಂಎ ಜುವೆಲ್ಲರ್ಸ್‌, ಮೆಡಿಕಲ್‌ ಫಾರ್ಮಾಗಳು, ಫ್ರಂಟ್‌ಲೆçನ್‌ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಶಾಲೆ, ರಿಯಲ್‌ ಎಸ್ಟೇಟ್‌ ಸೇರಿ ಹಲವು ವ್ಯವಹಾರ ನಡೆಸುತ್ತಿದ್ದಾನೆ. ಔಷಧಿ ಅಂಗಡಿಯಲ್ಲಿ ಶೇ.20ರಷ್ಟು ರಿಯಾಯಿತಿಯಲ್ಲಿ ಔಷಧಿ ಮಾರಾಟ ಮಾಡುತ್ತಿದ್ದ. ನೂರಾರು ಕೋಟಿ ರೂ. ವಹಿವಾಟು ಹೊಂದಿದ್ದ ಎಂದು ಹೇಳಲಾಗಿದೆ.

ಸಿಐಡಿಗೆ ವರ್ಗಾವಣೆಯಾಗುವ ಸಾಧ್ಯತೆ: ಮನ್ಸೂರ್‌ ಖಾನ್‌ ವಿರುದ್ಧ ಆತನ ಆಪ್ತ ಹಾಗೂ ವ್ಯವಹಾರದ ಪಾಲುದಾರ ಮೊಹಮ್ಮದ್‌ ಖಾಲಿದ್‌ ಎಂಬುವರು ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸ್‌ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಐಎಂಎ ಕನ್‌ಸ್ಟ್ರಕ್ಷನ್‌ ಹಾಗೂ ಸಂಸ್ಥೆಯ ಇತರೆ ಕಂಪನಿಗೆ 1.35ಕೋಟಿ ರೂ. ಹೂಡಿಕೆ ಮಾಡಿದ್ದು, ಇದುವರೆಗೂ ವಾಪಸ್‌ ನೀಡಿಲ್ಲ ಎಂದು ಪ್ರಕರಣ ದಾಖಲಿಸಿದ್ದಾರೆ. ಈ ಮಧ್ಯೆ ಸಾವಿರಾರು ಮಂದಿ ಮನ್ಸೂರ್‌ ಖಾನ್‌ ವಿರುದ್ಧ ಸಾವಿರಾರು ಮಂದಿ ದೂರು ನೀಡುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದಿನ ವಂಚನೆ ಕಂಪನಿಗಳು: ಇದುವರೆಗೂ ವಿಕ್ರಂ ಇನ್‌ವೆಸ್ಟ್‌ಮೆಂಟ್‌, ಡ್ರಿಮ್ಡ್ ಜೆಕೆ, ಅಗ್ರೀಗೋಲ್ಡ್‌, ವಿನಿವಿಂಕ್‌,ಇನ್‌ವೆಸ್ಟೆಕ್‌, ಖಾಸನೀಸ್‌ ಸೇರಿ ಹತ್ತಾರು ಕಂಪನಿಗಳು ಹೂಡಿಕೆ ಹಣಕ್ಕೆ ಬಡ್ಡಿ ನೀಡುವುದಾಗಿ ಸಾವಿರಾರು ಮಂದಿಯಿಂದ ಹಣ ಪಡೆದು ವಂಚನೆ ಮಾಡಿದ್ದಾರೆ. ಈ ಪ್ರಕರಣಗಳು ಸಿಐಡಿ ತನಿಖೆಯಲ್ಲಿದ್ದು, ಇದುವರೆಗೂ ಹೂಡಿಕೆದಾರರಿಗೆ ಹಣ ವಾಪಸ್‌ ಬಂದಿಲ್ಲ.

“ಹದಿನೈದು ವರ್ಷಗಳ ಹಿಂದೆ ಜಯನಗರದಲ್ಲಿ ಸಣ್ಣದೊಂದು ಕಚೇರಿ ತೆರೆದು ಹಣಕಾಸು ವ್ಯವಹಾರ ಆರಂಭಿಸಿದ ಐಎಂಎ ಜ್ಯುವೆಲ್ಲರಿ ಮಾಲೀಕ ಮನ್ಸೂರ್‌ ಖಾನ್‌ ಇದೀಗ ಬರೋಬರಿ 500 ಕೋಟಿ ರೂ. ಒಡೆಯ’ ಮನ್ಸೂರ್‌ ಖಾನ್‌ ಬಿಡುಗಡೆ ಮಾಡಿದ್ದಾನೆ ಎನ್ನಲಾದ ಆಡಿಯೋದಲ್ಲಿ ಆತನೇ ಹೇಳಿರುವಂತೆ ತಾನು ಬೆಂಗಳೂರಿನಲ್ಲಿ 500 ಕೋಟಿ ರೂ. ಆಸ್ತಿ ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದಾನೆ.

2006ರ ಆಸುಪಾಸಿನಲ್ಲಿ ಜಯನಗರದಲ್ಲಿ ಸಣ್ಣ ಕಚೇರಿ ತೆರೆದಿದ್ದ ಮನ್ಸೂರ್‌ ಖಾನ್‌, ಅಧಿಕ ಬಡ್ಡಿ ಹಾಗೂ ಹೊಸ ಹೊಸ ಉದ್ಯಮಗಳ ಮೇಲೆ ಹೂಡಿಕೆ ಮಾಡಲು ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ. ಮಾಸಿಕ ಶೇ. 3ರಿಂದ 4ರಷ್ಟು ಬಡ್ಡಿ ನೀಡುತ್ತಿದ್ದ. ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಹೂಡಿಕೆ ಮೊತ್ತ ಕೂಡ ಅಧಿಕವಾಯಿತು. ಈ ಹಿನ್ನೆಲೆಯಲ್ಲಿ ನಾಲೈದು ವರ್ಷಗಳ ಹಿಂದೆ ಶಿವಾಜಿನಗರದ ಲೇಡಿ ಕರ್ಜನ್‌ ರಸ್ತೆಯಲ್ಲಿ ಐಎಂಎ ಗ್ರೂಪ್‌ ಆಫ್ ಕಂಪನಿಸ್‌ ಹಾಗೂ ಜ್ಯುವೆಲ್ಲರಿ ಶಾಪ್‌ ತೆರೆದು ತನ್ನ ವ್ಯವಹಾರದ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದಾನೆ.

ಆರಂಭದಲ್ಲಿ ಇಂತಿಷ್ಟು ಅವಧಿಗೆ ಹೂಡಿಕೆ ಮಾಡುವ ಆಧಾರದ ಮೇಲೆ ಲಾಭಾಂಶ ನೀಡುತ್ತಿದ್ದ. ಅಲ್ಲದೇ, ಐಎಂಎ ಹೆಸರಿನಲ್ಲಿ ಪ್ರತಿ ತಿಂಗಳು ಹೂಡಿಕೆದಾರರ ಮೊಬೈಲ್‌ಗೆ ಲಾಭಾಂಶದ ಬಗ್ಗೆ ಸಂದೇಶಗಳೂ ಬರುತ್ತಿದ್ದವು. ಅದನ್ನು ನಂಬಿದ್ದ ಸಾರ್ವಜನಿಕರು ಬೆಂಗಳೂರು ಮಾತ್ರವಲ್ಲದೆ, ನೆರೆ ಜಿಲ್ಲೆಗಳ ಸಾವಿರಾರು ಜನ ಕೂಡ ಲಕ್ಷಾಂತರ ರೂ. ಹೂಡಿಕೆ ಮಾಡಿದ್ದಾರೆ. ಆದರೆ, ನಾಲ್ಕೈದು ತಿಂಗಳಿಂದ ಇಲ್ಲದ ಸಬೂಬುಗಳನ್ನು ಹೇಳುತ್ತ ಹೂಡಿಕೆದಾರರಿಗೆ ಹಣ ಕೊಟ್ಟಿಲ್ಲ. ಹಣ ಹಿಂದಿರುಗಿಸುವಂತೆ ಒತ್ತಾಯಿಸುತ್ತಿದ್ದ ಗ್ರಾಹಕರಿಗೆ ಚುನಾವಣೆ ಮುಗಿದ ಬಳಿಕ ಕೊಡುವುದಾಗಿ ನಂಬಿಸಿದ್ದ ಎಂದು ಹೂಡಿಕೆದಾರರು ಆರೋಪಿಸಿದ್ದಾರೆ.

ನನ್ನ ಬಾಡಿಗೆ ಮನೆಯನ್ನು ಭೋಗ್ಯಕ್ಕೆ ಹಾಕಿ ಎಂಟು ಲಕ್ಷ ರೂ. ತಂದು ಹಣ ಹೂಡಿಕೆ ಮಾಡಿದ್ದೇನೆ. ಮೂರು ತಿಂಗಳಿಂದ ಹಣ ಕೊಡುತ್ತಿಲ್ಲ. ಕೇಳಿದರೆ ಚುನಾವಣೆ ನಂತರ ಕೊಡುವುದಾಗಿ ಹೇಳುತ್ತಿದ್ದ. ದಯವಿಟ್ಟು ನನಗೆ ನ್ಯಾಯ ಕೊಡಿಸಿ.
-ಅಶ್ರಫ್ ಉನ್ನಿಸಾ, ಶಿವಾಜಿನಗರ ನಿವಾಸಿ

ಹದಿನೈದು ಲಕ್ಷ ರೂ. ಹೂಡಿಕೆ ಮಾಡಿದ್ದೇನೆ. ಇದೀಗ ನನ್ನ ಮಗನಿಗೆ ಮುಖ್ಯವಾದ ಶಸ್ತ್ರಚಿಕಿತ್ಸೆ ಆಗಬೇಕಿದೆ. ಹೀಗಾಗಿ ಹಣ ವಾಪಸ್‌ ಕೊಡುವಂತೆ ಕೇಳಿದರೆ, ವ್ಯವಹಾರದಲ್ಲಿ ಸ್ವಲ್ಪ ನಷ್ಟವಾಗಿದೆ ಎಂದು ಸಬೂಬು ಹೇಳುತ್ತಿದ್ದ.
-ಅಬ್ದುಲ್‌ ಫಾರೂಕ್‌, ಹೂಡಿಕೆದಾರ

“ಜಯನಗರದಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದೇನೆ. ಈ ವೇಳೆ ಮನ್ಸೂರ್‌ ಪರಿಚಯವಾಗಿ ಹಣ ಹೂಡಿಕೆ ಮಾಡುವಂತೆ ಹೇಳಿದ. ಮೂರು ವರ್ಷಗಳ ಹಿಂದೆ 17 ಲಕ್ಷ ರೂ. ಹೂಡಿಕೆ ಮಾಡಿದ್ದೇನೆ. ಆರಂಭದಲ್ಲಿ ನಿಗದಿತ ಸಮಯಕ್ಕೆ ನೇರವಾಗಿ ನಮ್ಮ ಖಾತೆಗೆ ಹಣ ಜಮಾ ಮಾಡುತ್ತಿದ್ದ. ಮೂರು ತಿಂಗಳಿಂದ ಹಣ ಕೊಟ್ಟಿಲ್ಲ.
-ಮೊಹಮ್ಮದ್‌ ಸೈಯದ್‌, ಹೂಡಿಕೆದಾರ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ