ಬಾಲಕಿ ಅತ್ಯಾಚಾರಗೈದು ಕೊಂದವರಿಗೆ ಗಲ್ಲುಶಿಕ್ಷೆ ವಿಧಿಸಿ

Team Udayavani, Dec 23, 2017, 1:16 PM IST

ದೊಡ್ಡಬಳ್ಳಾಪುರ: ವಿಜಯಪುರದ ದಲಿತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಬರ್ಬರವಾಗಿ ಕೊಲೆಗೈದಿರುವ ಆರೋಪಿಗಳನ್ನು ಗಲ್ಲುಶಿಕ್ಷೆಗೆ ಗುರಿ ಮಾಡಬೇಕು. ದಲಿತರ ಮೇಲೆ ನಡೆಯುತ್ತಿರುವ ಶೋಷಣೆ ನಿಯಂತ್ರಿಸಿ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿ ಪ್ರಜಾ ವಿಮೋಚನಾ ಚಳವಳಿ (ಸ್ವಾಭಿಮಾನ) ವತಿಯಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪಿವಿಸಿ ರಾಜ್ಯಾಧ್ಯಕ್ಷ ಮುನಿಆಂಜಿನಪ್ಪ ಮಾತನಾಡಿ, ವಿಜಯಪುರದಲ್ಲಿ ದಲಿತ ವಿದ್ಯಾರ್ಥಿನಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿರುವುದು ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರವಾಗಿದೆ. ಹಾಡಹಗಲೇ ಬಾಲಕಿಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೆ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿ ಕ್ರೂರತನ ಮೆರೆಯಲಾಗಿದೆ. ಈ ಹೀನ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಯಾವುದೇ ಮುಲಾಜಿಗೂ ಒಳಗಾಗದೇ ಗಲ್ಲು ಶಿಕ್ಷೆ ವಿಧಿಸಬೇಕು ಎಂದರು. 

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸುಳ್ಳು ಭರವಸೆ ನೀಡುತ್ತಿವೆ. ಇಂದಿಗೂ ದಲಿತರು, ಶೋಷಿತರಿಗೆ ನ್ಯಾಯ ದೊರೆಯುತ್ತಿಲ್ಲ. ಕಾನೂನು ಸಡಿಲವಾಗಿರುವುದರಿಂದ ಇಂತಹ ದುಷ್ಕೃತ್ಯಗಳು ನಡೆಯುತ್ತಿವೆ. ಈ ದಿಸೆಯಲ್ಲಿ ಈ ಹೀನ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಈ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳನ್ನು
ವರ್ಗಾವಣೆ ಮಾಡಬೇಕು. ರಾಜ್ಯದಲ್ಲಿ ದಲಿತರಿಗೆ ರಕ್ಷಣೆ ಇಲ್ಲದಂತಾಗಿದ್ದು, ದಲಿತರ ಮೇಲೆ ನಡೆಯುತ್ತಿರುವ ಶೋಷಣೆ
ನಿಯಂತ್ರಿಸಿ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಪಿವಿಸಿ ಬೆಂಗಳೂರು ವಿಭಾಗೀಯ ಶಾಖೆ ಅಧ್ಯಕ್ಷ ಮುನಿಕೃಷ್ಣಪ್ಪ, ಗ್ರಾಮಾಂತರ ಜಿಲ್ಲಾ ಶಾಖೆಯ ಸಂಗ್ರಹಳ್ಳಿ ನರಸಿಂಹಯ್ಯ, ತಾಲೂಕು ಅಧ್ಯಕ್ಷ ಚೆನ್ನಪರಿಯಪ್ಪ, ನಗರ ಜಿಲ್ಲಾಧ್ಯಕ್ಷ ಅಮುಜಾ ಜಾನ್‌, ಕಾರ್ಯದರ್ಶಿ ಮುದ್ದೂರಪ್ಪ, ಮಹಿಳಾ ಘಟಕದ ನಗರಾಧ್ಯಕ್ಷೆ ರತ್ನಮ್ಮ ಇತರರು ಭಾಗವಹಿಸಿದ್ದರು.

“ಹೆಣ್ಣುಮಕ್ಕಳಿಗೆ ದೇಶದಲ್ಲಿ ಭದ್ರತೆಯಿಲ್ಲ’ 
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ತಾಲೂಕು ಬಹುಜನ ವಿದ್ಯಾರ್ಥಿ ಸಂಘದ ವತಿಯಿಂದ ಜಯಪುರದ ದಲಿತ ಬಾಲಕಿ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಸಂಘದ ಪದಾಧಿಕಾರಿಗಳು ಮೇಣದ ಬತ್ತಿಗಳನ್ನು ಬೆಳಗಿಸಿ, ನಗರದ ಟಿಪ್ಪು ಸುಲ್ತಾನ್‌ ಪ್ರತಿಮೆಯಿಂದ ಹೊಸ ಬಸ್‌ ನಿಲ್ದಾಣದವರೆಗೆ ಪ್ರತಿಭಟಿಸಿದರು. 

ದೇಶದಲ್ಲಿ ದಲಿತ ಹೆಣ್ಣುಮಕ್ಕಳಿಗೆ ಭದ್ರತೆ ಇಲ್ಲವಾಗಿದೆ. ರಾಜ್ಯದಲ್ಲಿ ಹೆಣ್ಣುಮಕ್ಕಳ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹೆಣ್ಣುಮಕ್ಕಳು ನಿರ್ಭಯವಾಗಿ ಸಮಾಜದಲ್ಲಿ ನಡೆದಾಡಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಪ್ರತಿಭಟನೆಯಲ್ಲಿ ಆಗ್ರಹಿಸಿದರು.

15 ನಿಮಿಷಕ್ಕೊಂದು ದೌರ್ಜನ್ಯ: ಜಿಲ್ಲಾ ಬಹುಜನ ವಿದ್ಯಾರ್ಥಿ ಸಂಘದ ಸಂಚಾಲಕ ವಕೀಲ ಮಹೇಶ್‌ ದಾಸ್‌ ಮಾತನಾಡಿ, ಮಹಿಳೆಯರ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳದಂತಹ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿವೆ. 

ದೇಶದಲ್ಲಿ ಪ್ರತಿ 15 ನಿಮಿಷಕ್ಕೆ ಒಬ್ಬರ ಮೇಲೆ ದೌರ್ಜನ್ಯಗಳು ನಿರಂತರವಾಗಿ ಸಂಭವಿಸುತ್ತಿವೆ. ದೆಹಲಿಯ ನಿರ್ಭಯ ಪ್ರಕರಣದಂತೆ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಇಂತಹ ಪ್ರಕರಣಗಳು ಮರುಕಳಿಸದಂತೆ ಹೆಚ್ಚಿನ ನಿಗಾವಹಿಸಬೇಕು.

ಸರ್ಕಾರ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಅರೋಪಿಗಳಿಗೆ ತಕ್ಕ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಲೆಕ್ಕಿಸದೇ ಸೂಕ್ತ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರದ ವೈಫ‌ಲ್ಯ: ರಾಜ್ಯ ಬಿಎಸ್‌ಪಿ ಕಾರ್ಯದರ್ಶಿ ನಂದಿಗುಂದ ಪಿ.ವೆಂಕಟೇಶ್‌ ಮಾತನಾಡಿ, ರಾಜ್ಯದಲ್ಲಿ
ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗದ ಪರಿಣಾಮ ಇಂತಹ ಘಟನೆಗಳು ಪದೇ ಪದೆ ಮರುಕಳಿಸುತ್ತಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸಂಶೋಧಕ ಎಂ.ಎಂ.ಕಲಬುರ್ಗಿ, ಸಾಮಾಜಿಕ
ಹೋರಾಟಗಾರ್ತಿ ಗೌರಿ ಲಂಕೇಶ್‌ ಹಂತಕರನ್ನು ಇದುವರೆಗೂ ಪತ್ತೆಹಚ್ಚಿಲ್ಲ, ಈಗ ವಿಜಯಪುರದ ದಲಿತ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದಿರುವುದು ದಿಗ್ಭ್ರಮೆಗೊಳಿಸಿದೆ. ಇದು ರಾಜ್ಯಸರ್ಕಾರದ ವೈಫ‌ಲ್ಯಗಳನ್ನು ಎತ್ತಿತೋರಿಸುತ್ತಿದೆ ಎಂದು ಕಿಡಿಕಾರಿದರು. 

ಬಿಎಸ್‌ಪಿ ಜಿಲ್ಲಾಧ್ಯಕ್ಷ ವಕೀಲ ಮುನಿಕೃಷ್ಣಪ್ಪ, ತಾಲೂಕು ಬಹುಜನ ವಿದ್ಯಾರ್ಥಿ ಸಂಘದ ಸಂಚಾಲಕ ಕಾರಹಳ್ಳಿ ಕೇಶವ ತಾಲೂಕು ಬಹುಜನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಿಜ್ಜವಾರ ಮೂರ್ತಿ, ಜಿಲ್ಲಾ ಸಮಿತಿ ಸದಸ್ಯರಾಅದ ಆವತಿ ತ್ರಿಮೂರ್ತಿ, ಹೊಸವುಡ್ಯ ಗಂಗರಾಜು, ರಂಜಿತ್‌, ಪ್ರದೀಪ್‌, ಮೂರ್ತಿ ಮತ್ತಿತರರು ಇದ್ದರು.

“ಮರಣದಂಡನೆ ವಿಧಿಸಿ’
ದೊಡ್ಡಬಳ್ಳಾಪುರ: ವಿಜಯಪುರದ ದಲಿತ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ, ಕೊಲೆಯನ್ನು ಖಂಡಿಸಿ, ಅಪರಾಧಿಗಳಿಗೆ ಗಲ್ಲು ಶಿಕ್ಷೆ ಧಿಸಲು ಆಗ್ರಹಿಸಿ ಹಳೇ ಬಸ್‌ ನಿಲ್ದಾಣದ ಅಂಬೇಡ್ಕರ್‌ ಪ್ರತಿಮೆ ಮುಂಭಾಗದಲ್ಲಿ ಡಿವೈಎಫ್ಐ, ದಲಿತ ಹಕ್ಕುಗಳ ಸಮಿತಿ, ಜನಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. 

ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ನಳಿನಾಕ್ಷಿ, ಮಹಿಳಾ ಮುಖಂಡೆ ಸವಿತಮ್ಮ ಮಾತನಾಡಿ, ಈಚೆಗೆ ಮಹಿಳೆಯರು ಹಾಗೂ ಮಕ್ಕಳಿಗೆ ರಕ್ಷಣೆಯೇ ಇಲ್ಲ. ಅಮಾಯಕ ಬಾಲಕಿಯರು ಪುಂಡರ ಅಟ್ಟಹಾಸಕ್ಕೆ ಬಲಿಯಾಗುತ್ತಿದ್ದಾರೆ. ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕು. ಮಹಿಳೆಯರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು. ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಆರ್‌.ಚಂದ್ರತೇಜಸ್ವಿ, ಸಿಪಿಐ(ಎಂ) ತಾಲೂಕು ಅಧ್ಯಕ್ಷ ರುದ್ರಾರಾಧ್ಯ, ಡಿವೈಎಫ್ಐ ಪ್ರಧಾನ ಕಾರ್ಯದರ್ಶಿ ಪಿ.ಎ.ವೆಂಕಟೇಶ್‌, ಸಿಪಿಐ(ಎಂ) ದಲಿತ ಹಕ್ಕುಗಳ ಸಮಿತಿಯ ತಾಲೂಕು ಅಧ್ಯಕ್ಷ ಅಂಜನಾಮೂರ್ತಿ ಭಾಗವಹಿಸಿದ್ದರು.

“ನಾಗರಿಕ ಸಮಾಜವೇತಲೆ ತಗ್ಗಿಸುವ ಕೃತ್ಯ’

ದೇವನಹಳ್ಳಿ: ವಿಜಯಪುರದಲ್ಲಿ ವಿದ್ಯಾರ್ಥಿನಿ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ತಾಲೂಕು ಐಎನ್‌ಟಿಸಿಯು ಕಾಂಗ್ರೆಸ್‌ ಮತ್ತು ಎನ್‌ಎಸ್‌ಯುಐ ಕಾಂಗ್ರೆಸ್‌ ವತಿಯಿಂದ ಪ್ರವಾಸಿ ಮಂದಿರದಿಂದ ಮಿನಿ ವಿಧಾನಸೌಧದವರೆಗೆ ಮೌನ ಮೆರವಣಿಗೆಯ ಮೂಲಕ ಪ್ರತಿಭಟನೆ ನಡೆಸಲಾಯಿತು.

ವಿದ್ಯಾರ್ಥಿನಿಯನ್ನು ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿರುವುದು ಮಾನವ ಕುಲವೇ ತಲೆ ತಗ್ಗಿಸುವಂತೆ ಮಾಡಿದ್ದಾರೆ. ಇಂತಹವರನ್ನು ಗಲ್ಲಿಗೆ ಏರಿಸಬೇಕು ಎಂದು ಪ್ರತಿಭಟನೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಐಎನ್‌ಟಿಯು ಕಾಂಗ್ರೆಸ್‌ ತಾಲೂಕು ಅಧ್ಯಕ್ಷ ಯು. ಎಂ.ಮಿಥುನ್‌ ಮಾತನಾಡಿ, ಅತ್ಯಾಚಾರಿಗಳನ್ನು ಕೂಡಲೇ ಬಂಧಿಸಿ, ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಮತ್ತೆ ಇಂತಹ ಅಮಾನವೀಯ ಪ್ರಕರಣಗಳು ಮರುಕಳಿಸದಂತೆ ತಕ್ಕಪಾಠ ಕಲಿಸಬೇಕು. ಇಂತಹ ನೀಚ ಕೃತ್ಯಗಳನ್ನು ಎಸಗಿದವರ ಮೇಲೆ ಕಾನೂನಿನ ದೃಷ್ಟಿಯಲ್ಲಿ ಹಿಡಿತ ಸಾಧಿಸಬೇಕು ಎಂದು ಹೇಳಿದರು.

ಕುಟುಂಬಕ್ಕೆ ಸಹಾಯ ಮಾಡಿ: ಎನ್‌ಎಸ್‌ಯುಐ ತಾಲೂಕು ಅಧ್ಯಕ್ಷ ಬಿ.ಎಂ.ಭಾರ್ಗವ್‌ ಮಾತನಾಡಿ, ವಿಜಯಪುರದಲ್ಲಿ ನಡೆದಿರುವ ಘಟನೆ ಅಮಾನವೀಯ ಕೃತ್ಯ. ದಲಿತ ಹೆಣ್ಣು ಮಗಳ ಮೇಲೆ ದೌರ್ಜನ್ಯ ಎಸಗಿದವರ ಮೇಲೆ ಕಠಿಣ ಶಿಕ್ಷೆ ಕ್ರಮ ವಹಿಸಬೇಕು. ವಿದ್ಯಾರ್ಥಿನಿ ಕುಟುಂಬಕ್ಕೆ ಸೂಕ್ತ ನ್ಯಾಯ ದೊರಕಿಸಬೇಕು ಎಂದು ಆಗ್ರಹಿಸಿದರು.

ತಹಶೀಲ್ದಾರ್‌ ನರಸಿಂಹಮೂರ್ತಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಐಎನ್‌ಟಿಯು ಕಾಂಗ್ರೆಸ್‌ ತಾಲೂಕು ಕಾರ್ಯಾಧ್ಯಕ್ಷ ರಾಜೇಶ್‌, ಉಪಾಧ್ಯಕ್ಷ ಮಹೇಂದ್ರ, ರಮೇಶ್‌, ಪ್ರಧಾನ ಕಾರ್ಯದರ್ಶಿ ವೆಂಕಟೇಶ್‌, ಕಾರ್ಯದರ್ಶಿ ಸುದರ್ಶನ್‌, ಮನೋಜ್‌, ಮಂಜುನಾಥ್‌, ವೇಣು, ಎನ್‌ಎಸ್‌ಯುಐ ತಾಲೂಕು ಉಪಾಧ್ಯಕ್ಷ ಪ್ರೇಮ್‌, ಕಾರ್ಯಾಧ್ಯಕ್ಷ ಚರಣ್‌, ಪ್ರಧಾನ ಕಾರ್ಯದರ್ಶಿ ಮುನಿಶಾಮೇಗೌಡ, ಮುಖಂಡ ಹರೀಶ್‌, ವೆಂಕಟೇಶ್‌, ಚೇತನ್‌, ಸೋಮೇಶ್‌ ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ನಗರದಲ್ಲಿ ರಸ್ತೆಗಳ ವಿಸ್ತರಣೆಗೆ ಸ್ವಾಧೀನಪಡಿಸಿಕೊಂಡ ಜಾಗಕ್ಕೆ ಪರ್ಯಾಯವಾಗಿ ಬಿಬಿಎಂಪಿ ನೀಡಿರುವ "ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳು'...

  • ಬೆಂಗಳೂರು: ಕಾವೇರಿ ಜಲಾನಯನ ಪ್ರದೇಶದಲ್ಲಿ ಗಿಡ ನೆಡುವ ಅಭಿಯಾನದ ಮೂಲಕ ಕಾವೇರಿ ನದಿ ನೀರಿನ ಮಟ್ಟ ಹೆಚ್ಚಿಸಲು ಇಶಾ ಫೌಂಡೇಷನ್‌ "ಕಾವೇರಿ ಕೂಗು' ಯೋಜನೆಯನ್ನು ಹಮ್ಮಿಕೊಂಡಿದೆ...

  • ಬೆಂಗಳೂರು: "ಸುಧೀರ್‌ ಅವರ ಕನಸಿನ ಕಲಾ ಸಂಘವನ್ನು ಉಳಿಸಿಕೊಳ್ಳಲು ಸಲುವಾಗಿಯೇ ನಾನು ನನ್ನ ಮನೆ, ಸೈಟು ಹಾಗೂ ಕೈಯಲ್ಲಿದ್ದ ಒಂದಿಷ್ಟು ಹಣ ಕಳೆದುಕೊಂಡೆ. ಆದರೂ...

  • ಬೆಂಗಳೂರು: ಶ್ರೇಷ್ಠರೆಲ್ಲಾ ಜನಪ್ರಿಯರಲ್ಲ, ಜನಪ್ರಿಯರೆಲ್ಲಾ ಶ್ರೇಷ್ಠರಾಗಿರುವುದಿಲ್ಲ. ಜನಪ್ರಿಯತೆ ಅಗ್ಗದ ಪ್ರಚಾರದಿಂದಲೂ ಬರಬಹುದು. ಆದರೆ, ಶ್ರೇಷ್ಠತೆ ಬರುವುದಿಲ್ಲ...

  • ಬೆಂಗಳೂರು: ನಗರದಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧ, ಕಸ ವಿಂಗಡಣೆ, ಪಿಒಪಿ ಗಣೇಶ ಮೂರ್ತಿ ಬದಲು ಮಣ್ಣಿನ ಗಣೇಶ ಮೂರ್ತಿಗಳನ್ನು ಉಪಯೋಗಿಸುವುದು, ನೀರು ಮಿತಬಳಕೆ ಹಾಗೂ...

ಹೊಸ ಸೇರ್ಪಡೆ