ಪ್ರತ್ಯೇಕ ಪ್ರಕರಣದಲ್ಲಿ ಒಂಬತ್ತು ಗಾಂಜಾ ಮಾರಾಟಗಾರರ ಸೆರೆ

Team Udayavani, Jul 20, 2018, 10:10 AM IST

ಬೆಂಗಳೂರು: ನಗರದಲ್ಲಿ ಅವ್ಯಹತವಾಗಿ ಹೆಚ್ಚುತ್ತಿರುವ ಮಾದಕ ವಸ್ತು ಮಾರಾಟ ದಂಧೆ ಬಗ್ಗೆ ಖುದ್ದು ಮುಖ್ಯಮಂತ್ರಿ
ಎಚ್‌.ಡಿ.ಕುಮಾರಸ್ವಾಮಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಸೂಚನೆ ಮೇರೆಗೆ ಎಚ್ಚೆತ್ತುಕೊಂಡಿರುವ ಪೊಲೀಸರು ದಂಧೆ ಕೋರರ ಬೇಟೆ ಆರಂಭಿಸಿದ್ದಾರೆ.

ನೆರೆ ರಾಜ್ಯಗಳಿಂದ ಗಾಂಜಾ ತಂದು ವಿದ್ಯಾರ್ಥಿಗಳು, ಟೆಕ್ಕಿಗಳು, ಯುವಕರಿಗೆ ಮಾರಾಟ ಮಾಡುತ್ತಿದ್ದ 8 ಮಂದಿಯನ್ನು ಆಗ್ನೇಯ ಮತ್ತು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಗಾಂಜಾ ವ್ಯಾವಹಾರದ ಮೂಲ ಪತ್ತೆಹಚ್ಚಲು ಒಡಿಶಾ ಮತ್ತು ವಿಶಾಖಪಟ್ಟಣಂಗೆ ವಿಶೇಷ ತಂಡಗಳನ್ನು ಕಳುಹಿಸಲಾಗಿದೆ. ರಾಮನಗರದ ಇಲಿಯಾಸ್‌ ಪಾಷಾ (50), ಇರ್ಫಾನ್‌ ಪಾಷಾ (30), ಕೆಂಗೇರಿಯ ಕಬೀರ್‌ ಪಾಷಾ(20) ಮತ್ತು ಪೈಜಲ್‌ ಖಾನ್‌(22) ಎಂಬ ದಂಧೆಕೋರರನ್ನು ಬಂಧಿಸಿರುವ ದಕ್ಷಿಣ ವಿಭಾಗದ ಸುಬ್ರಹ್ಮಣ್ಯಪುರ ಪೊಲೀಸರು, ಆರೋಪಿಗಳಿಂದ 2,330 ಗ್ರಾಂ. ಗಾಂಜಾ, ಎರಡು ಮೊಬೈಲ್‌, ಒಂದು ಬೈಕ್‌, 2,270 ರೂ. ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಉತ್ತರಹಳ್ಳಿ ಬಳಿಯ ಗಣೇಶ್‌ ರಿಯಲ್‌ ಎಸ್ಟೇಟ್‌ ಸಮೀಪ ಪ್ಲಾಸ್ಟಿಕ್‌ ಕವರ್‌ಗಳಲ್ಲಿ ಗ್ರಾಂ ಲೆಕ್ಕದಲ್ಲಿ ಪ್ರತಿ ಪ್ಯಾಕೆಟ್‌ಗೆ 200 ರೂ.ನಂತೆ ವಿದಾರ್ಥಿಗಳು ಹಾಗೂ ಯುವಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದರು. ಈ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಬೊಮ್ಮನಹಳ್ಳಿಯ ಆಕ್ಸ್‌ಫ‌ರ್ಡ್‌ ಕಾಲೇಜು ಬಳಿ ಗಾಂಜಾ ಮಾರಾಟಕ್ಕೆ ಸಿದ್ದವಾಗಿದ್ದ ಒಡಿಶಾ ಹಾಗೂ ಬಿಹಾರ ಮೂಲದ ನಾಲ್ವರನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಜನಾರ್ಧನ್‌(33), ಚೇತನ್‌ ಶರ್ಮಾ (46), ಧನೇಶ್ವರ್‌ ಬೆಹರಾ (46) ಮತ್ತು ಬಿಹಾರದ ಬಿಸಂಬರ್‌ ಮಂಡಲ್‌(34) ಬಂಧಿತರು. ಆರೋಪಿಗಳಿಂದ 8.6 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಬಂಧಿತರ ಪೈಕಿ ಬಿಸಂಬರ್‌ ಮಂಡಲ್‌ ವಿರುದ್ಧ ಈ ಹಿಂದೆಯೂ ಮೈಕೋ ಲೇಔಟ್‌ ಠಾಣೆಯಲ್ಲಿ ಎನ್‌ ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಜಾಮೀನು ಪಡೆದು ಹೊರಬಂದ ಆರೋಪಿ ಮತ್ತೆ ಅದೇ ಕೃತ್ಯದಲ್ಲಿ ತೊಡಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕೆ.ಆರ್‌.ಪುರದ ಟಿ.ಸಿ.ಪಾಳ್ಯ ಬಳಿ ಕೋಕೇನ್‌ ಮಾರಾಟ ಮಾಡುತ್ತಿದ್ದ ನೈಜಿರಿಯಾ ಮೂಲದ ಜಾನ್‌ ನಾನ್ಸೋ (32) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 40 ಗ್ರಾಂ. ಕೋಕೇನ್‌, 2 ಮೊಬೈಲ್‌, 23 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ.

ಒಡಿಶಾ, ವಿಶಾಖಪಟ್ಟಣಂಗೆ ವಿಶೇಷ ತಂಡ : ರಾಜ್ಯಕ್ಕೆ ಆಂಧ್ರಪ್ರದೇಶ, ಒಡಿಶಾ, ವಿಶಾಖಪಟ್ಟಂನಿಂದ ರೈಲು ಮತ್ತು ಬಸ್‌ ಮಾರ್ಗದ ಮೂಲಕ ಗಾಂಜಾ ಬರುತ್ತಿದೆ. ಅದನ್ನು ನಗರದ ಮಧ್ಯವರ್ತಿಗಳು ಸಣ್ಣ ಪ್ಯಾಕೆಟ್‌ ಮಾಡಿ ಮಾರಾಟ ಮಾಡುತ್ತಿದ್ದಾರೆ. ಜಾಲದ ಮೂಲ ಬೇರು ಪತ್ತೆಗೆ ನಗರದಿಂದ ವಿಶೇಷ ತಂಡಗಳು ವಿಶಾಖಪಟ್ಟಣಂ ಹಾಗೂ ಒಡಿಶಾಗೆ ತೆರಳಿದ್ದು, ಅಲ್ಲಿನ ಪೊಲೀಸರೊಂದಿಗೆ ಚರ್ಚಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ರಾಜ್ಯಸಭೆಯಲ್ಲಿ ಗಾಂಜಾ ವಿಷಯ ಚರ್ಚಿಸಿದ ರಾಜೀವ್‌ ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಮಾದಕ ಜಾಲ ವ್ಯಾಪಿಸುತ್ತಿರುವ ಕುರಿತು ರಾಜ್ಯಸಭೆ ಸದಸ್ಯ ರಾಜೀವ್‌ ಚಂದ್ರಶೇಖರ್‌ ಅವರುಗುರುವಾರ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ದಕ್ಷಿಣ ಭಾರತದಿಂದಲೇ ಹೆಚ್ಚು ಮಾದಕ ವಸ್ತುಗಳು ಬೆಂಗಳೂರಿಗೆ ಬರುತ್ತಿದ್ದು, ಸ್ಲಂ ನಿವಾಸಿಗಳು, ಚಿಂದಿ ಆಯುವವರು, ರೌಡಿಗಳು ಪೆಡ್ಲರ್‌ಗಳಾಗಿದ್ದಾರೆ.

ಚಿಕ್ಕ ಮಕ್ಕಳು ಕೂಡ ಮಾದಕ ವಸ್ತು ವ್ಯಸನಿಗಳಾಗುತ್ತಿರುವ ಕುರಿತು ಹಲವು ವರ್ಷಗಳಿಂದ ಇಂದಿರಾಗಾಂಧಿ ಇನ್‌ ಸ್ಟಿಟ್ಯೂಟ್‌ ಆಫ್ ಚೈಲ್ಡ್‌ ಹೆಲ್ತ್‌ ಮತ್ತು ನಿಮ್ಹಾನ್ಸ್‌ ಸಂಸ್ಥೆಗಳು ಎಚ್ಚರಿಕೆ ನೀಡುತ್ತಿವೆ. ಆದರೂ ಯಾವುದೇ ಕಠಿಣ ಕ್ರಮ ಜಾರಿಯಾಗುತ್ತಿಲ್ಲ. ಅಲ್ಲದೆ, ಕಳೆದೆರಡು ವರ್ಷಗಳಲ್ಲಿ ಎನ್‌ ಸಿಬಿ ಅಧಿಕಾರಿಗಳು ಹುಣಸಮಾರನಹಳ್ಳಿ ಬಸ್‌ ನಿಲ್ದಾಣದಲ್ಲಿ 36.6 ಕೆ.ಜಿ. ಮಾರಿಜುನಾ ಮತ್ತು ಮೈಲಸಂದ್ರದ ಬಸ್‌ ನಿಲ್ದಾಣ, ಮೈಸೂರು ರಸ್ತೆಯಲ್ಲಿ 28.26 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಮಾದಕ ವಸ್ತು ನಿಯಂತ್ರಣ ಕುರಿತು ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. 

ಕ್ಯಾನ್ಸರ್‌ ಬರಲ್ಲ ಎಂಬ ಸುಳ್ಳು!
ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್‌ ಬರುತ್ತದೆ. ಆದರೆ, ಗಾಂಜಾ ಸೇವನೆಯಿಂದ ಕ್ಯಾನ್ಸರ್‌ ಬರುವುದಿಲ್ಲ! ಪೊಲೀಸರು ಮಾದಕ ವಸ್ತು ಮಾರಾಟದ ಮೇಲೆ ನಡೆಸಿದ ದಾಳಿ ವೇಳೆ ಸಿಕ್ಕ ವಿದ್ಯಾರ್ಥಿಗಳುಹೇಳಿದ ಮಾತುಗಳಿವು. ದಾಳಿ ಸಂದರ್ಭದಲ್ಲಿ ಪೊಲೀಸರು ಕೆಲವು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಸಿಗರೇಟು ಸೇರಿದಂತೆ ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್‌ ಬರುತ್ತದೆ. ಆದರೆ, ಗಾಂಜಾ ಸೇವಿಸಿದರೆ ಯಾವುದೇ ರೋಗ ಬರುವುದಿಲ್ಲ. ದೇಹ ಕೂಡ ಉಲ್ಲಾಸ ದಾಯಕವಾಗಿರುತ್ತದೆ. ಹೀಗಾಗಿ ಸೇವನೆ ಮಾಡುತ್ತೇವೆ ಎಂದು ಹೇಳಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ