ಭಾರತ-ಅಮೆರಿಕ ನಡುವೆ ವಾಣಿಜ್ಯವಹಿವಾಟು 7.5 ಲಕ್ಷ ಕೋಟಿಗೇರಿಕೆ

Team Udayavani, Nov 9, 2017, 11:34 AM IST

ಬೆಂಗಳೂರು: ಭಾರತ ಮತ್ತು ಅಮೆರಿಕ ನಡುವಿನ ವಾಣಿಜ್ಯ ವಹಿವಾಟು 7.59 ಲಕ್ಷ ಕೋಟಿ ರೂ.ಗೇರಿದ್ದು, ಅಮೆರಿಕ
ಈಗ ಭಾರತದ ನಂಬರ್‌ ಒನ್‌ ವಾಣಿಜ್ಯ ಪಾಲುದಾರನಾಗಿದೆ ಎಂದು ಕಾನ್ಸುಲ್‌ ಜನರಲ್‌ ರಾಬರ್ಟ್‌ ಜಿ. ಬರ್ಗಸ್‌
ತಿಳಿಸಿದ್ದಾರೆ.

ಅಮೆರಿಕ-ಭಾರತ ವಾಣಿಜ್ಯ ಅವಕಾಶಗಳು ಎಂಬ ವಿಚಾರಗೋಷ್ಠಿಯ ಉದ್ಘಾಟನಾ ಭಾಷಣದಲ್ಲಿ ಉಭಯ
ದೇಶಗಳ ನಡುವಿನ ದ್ವಿಪಕ್ಷೀಯ ಕೊಡು ಕೊಳ್ಳುವಿಕೆಯಲ್ಲಾಗಿರುವ ಅಭಿವೃದ್ಧಿಯನ್ನು ತಿಳಿಸಿದ ಬರ್ಗಸ್‌ ಭಾರತಕ್ಕೆ ಸರಕು ಮತ್ತು ಸೇವೆಗಳ ರಫ್ತನಿಂದಾಗಿ ಅಮೆರಿಕದಲ್ಲಿ 2 ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿಯಾಗಿದೆ. 2016ರಲ್ಲಿ ದ್ವಿಪಕ್ಷೀಯ ವಾಣಿಜ್ಯ ವಹಿವಾಟು 7.59 ಲಕ್ಷ ಕೋ. ರೂ.ಗೇರಿರುವುದು ಸಾರ್ವಕಾಲಿಕ ದಾಖಲೆ ಎಂದರು.

ದ್ವಿಪಕ್ಷೀಯ ವ್ಯವಹಾರಗಳನ್ನು ಇನ್ನಷ್ಟು ಕ್ಷೇತ್ರಗಳಿಗೆ ವಿಸ್ತರಿಸಲು ಎರಡೂ ದೇಶಗಳು ಉತ್ಸುಕವಾಗಿವೆ. ದ್ವಿಪಕ್ಷೀಯ
ರಕ್ಷಣಾ ವಹಿವಾಟು ಕಳೆದ ದಶಕದಲ್ಲಿ ಶೂನ್ಯದಿಂದ 99 ಸಾವಿರ ಕೋ. ರೂ. ಗೇರಿದೆ. ಭಾರತ ಮತ್ತು ಅಮೆರಿಕ ಸಹಜ
ಮತ್ತು ಪ್ರಭಾವಿ ವಾಣಿಜ್ಯ ಪಾಲುದಾರರಾಗಿದ್ದು , ಅಭಿವೃದ್ಧಿಯನ್ನು ಮುಂದುವರಿಸಿ ಕೊಂಡು ಹೋಗಲು ಬಯಸಿವೆ. 40 ವರ್ಷಗಳ ಬಳಿಕ ಕಳೆದ ವಾರ ಮೊದಲ ಸಲ ಅಮೆರಿಕದಿಂದ ಭಾರತಕ್ಕೆ ಕಚ್ಚಾ ತೈಲ ಪೂರೈಸಲಾಗಿದೆ. ಇದರಿಂದ ವಾರ್ಷಿಕ ವಹಿವಾಟಿಗೆ ಇನ್ನೂ 13,200 ಕೋ. ರೂ. ಹೆಚ್ಚುವರಿಯಾಗಿ ಸೇರ್ಪಡೆಯಾಗಲಿದೆ ಎಂದು ಹೇಳಿದ್ದಾರೆ.

ವಿದೇಶಾಂಗ ಸಚಿವ ರೆಕ್ಸ್‌ ಟಿಲ್ಲರ್‌ ಸನ್‌ ಅವರ ಅ. 24ರ ಭಾರತ ಪ್ರವಾಸ ಪ್ರಸಕ್ತ ಸರಕಾರಗಳ ಅವಧಿಯಲ್ಲಿ ಮಾತ್ರ
ವಲ್ಲದೆ ಮುಂದಿನ 100 ವರ್ಷಗಳಲ್ಲಿ ದ್ವಿಪಕ್ಷೀಯ ಸಂಬಂಧವನ್ನು ಹೊಸ ಎತ್ತರಕ್ಕೇರಿಸಲು ಮುನ್ನುಡಿ ಬರೆದಿದೆ.
ಸುಮಾರು 40 ಲಕ್ಷ ಭಾರತೀಯ ಸಂಜಾತರು ಈಗ ಅಮೆರಿಕದ ಪ್ರಜೆಗಳಾಗಿದ್ದಾರೆ. ಅಂತೆಯೇ 600ಕ್ಕೂ ಹೆಚ್ಚು ಅಮೆರಿಕದ ಕಂಪೆನಿಗಳು ಬೆಂಗಳೂರು ಸೇರಿದಂತೆ ಭಾರತದ ವಿವಿಧ ನಗರಗಳಲ್ಲಿ ವ್ಯವಹಾರ ನಡೆಸುತ್ತಿವೆ ಎಂದು ಬರ್ಗಸ್‌ ಉಭಯ ದೇಶಗಳ ನಡುವಿನ ಸಂಬಂಧವನ್ನು ವಿವರಿಸುತ್ತಾ ತಿಳಿಸಿದರು.

ಬೆಂಗಳೂರು ಮತ್ತು ಸಿಲಿಕಾನ್‌ ವ್ಯಾಲಿ ನಡುವೆ ನಡೆಯುತ್ತಿರುವ ಚಿಂತನೆಗಳ ಮತ್ತು ತಂತ್ರಜ್ಞಾನಗಳ
ವಿನಿಮಯದಿಂದ ಜಗತ್ತು ಬದಲಾಗುತ್ತಿದೆ ಎಂದಿರುವ ಟಿಲ್ಲರ್‌ಸನ್‌ ಹೇಳಿಕೆಯನ್ನು ಈ ಸಂದರ್ಭದಲ್ಲಿ ಉಲ್ಲೇಖೀಸಿದ
ಬರ್ಗಸ್‌ ಭದ್ರತೆಗಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಒದಗಿಸಲು ಅಮೆರಿಕ ತಯಾರಿದೆ ಎಂದು ಟಿಲ್ಲರಸನ್‌ ಭರವಸೆ ನೀಡಿದ್ದಾರೆ ಎಂದರು.

ನ.28ರಿಂದ 30ರ ತನಕ ಹೈದರಾಬಾದ್‌ನಲ್ಲಿ ಭಾರತ ಮತ್ತು ಅಮೆರಿಕದ ಸಹ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಜಾಗತಿಕ ಉದ್ಯಮಶೀಲತಾ ಶೃಂಗಕ್ಕೆ ಪೂರ್ವಭಾವಿಯಾಗಿ ಚೆನ್ನೈಯಲ್ಲಿ ನ. 7 ಮತ್ತು 8ರಂದು ಉಭಯ ದೇಶಗಳ ನಡುವೆ ವಾಣಿಜ್ಯ ವ್ಯವಹಾರಗಳ ಕುರಿತು ವಿಚಾರಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಉದ್ಯಮ ಶೀಲತಾ ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಧ್ಯಕ್ಷ ಟ್ರಂಪ್‌, ಇವಾಂಕ ಟ್ರಂಪ್‌ ಭಾಗವಹಿಸಲಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ