ಪಕ್ಷದ ನಿರ್ಧಾರಕ್ಕೆ ಬದ್ಧವಾಗಿರಲು ಸೂಚನೆ

Team Udayavani, Oct 24, 2019, 3:08 AM IST

ಬೆಂಗಳೂರು: ಪಕ್ಷದ ನಿರ್ಧಾರದಂತೆ ರಾಜ್ಯದಲ್ಲಿ ಸರ್ಕಾರ ರಚನೆಯಾಗಿದೆ. ಆ ಸರ್ಕಾರವನ್ನು ಉಳಿಸಿಕೊಳ್ಳಲು ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿ ಅದರಂತೆ ನಡೆದುಕೊಳ್ಳಬೇಕು ಎಂದು ಉಪಚುನಾವಣೆ ಎದುರಾಗಿರುವ ಹಳೇ ಮೈಸೂರು ಭಾಗದ ಏಳು ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಪ್ರಮುಖರಿಗೆ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳು ಖಡಕ್‌ ಸೂಚನೆ ನೀಡಿದ್ದಾರೆ.

ಉಪಚುನಾವಣೆ ಘೋಷಣೆಯಾಗಿರುವ ಕೆ.ಆರ್‌.ಪುರ, ಶಿವಾಜಿನಗರ, ಮಹಾಲಕ್ಷ್ಮೀ ಲೇಔಟ್‌, ಹೊಸಕೋಟೆ, ಚಿಕ್ಕಬಳ್ಳಾಪುರ, ಕೆ.ಆರ್‌.ಪೇಟೆ, ಹುಣಸೂರು ಕ್ಷೇತ್ರಗಳ ಬಿಜೆಪಿ ಪ್ರಮುಖರ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಪಕ್ಷ ಕೈಗೊಳ್ಳುವ ನಿರ್ಧಾರದಂತೆ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಸೂಚಿಸಿದ್ದಾರೆ.

ಹೊಸಕೋಟೆ ಕ್ಷೇತ್ರದ ಪ್ರಮುಖರ ಸಭೆಗೆ ಟಿಕೆಟ್‌ ಆಕಾಂಕ್ಷಿ ಶರತ್‌ ಬಚ್ಚೇಗೌಡ ಗೈರಾಗಿದ್ದರು. ಇತರ ಪ್ರಮುಖರೊಂದಿಗೆ ಚರ್ಚಿಸಿದ ನಾಯಕರು, ಗೊಂದಲಗಳಿಲ್ಲದಂತೆ ಚುನಾವಣೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ನಿರ್ಧಾರದಂತ ನಡೆದುಕೊಳ್ಳಬೇಕು ಎಂದು ತಿಳಿಸಿದರು. ಕೆ.ಆರ್‌.ಪುರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ನಂದೀಶ್‌ರೆಡ್ಡಿ ಕೂಡ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ. ಕ್ಷೇತ್ರದ ಕೆಲ ಪ್ರಮುಖರು ನಂದೀಶ್‌ರೆಡ್ಡಿ ಇಲ್ಲವೇ ಬೈರತಿ ಬಸವರಾಜು ಅವರ ಬದಲಿಗೆ ಮತ್ತೂಬ್ಬರಿಗೆ ಟಿಕೆಟ್‌ ನೀಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಉಪಚುನಾವಣೆ ಗೆಲ್ಲುವ ಉದ್ದೇಶದಿಂದ ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧವಾಗಿರಬೇಕು ಎಂದು ಹಿರಿಯ ನಾಯಕರು ಸೂಚನೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ. ಮಹಾಲಕ್ಷ್ಮೀ ಲೇಔಟ್‌ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳಾದ ನೆ.ಲ. ನರೇಂದ್ರಬಾಬು, ಎಸ್‌.ಹರೀಶ್‌, ಎಂ. ನಾಗರಾಜ್‌ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಯಶವಂತಪುರ ಕ್ಷೇತ್ರದ ಪ್ರಮುಖರು ಸಹ ಪಕ್ಷದ ನಿಲುವಿಗೆ ಬದ್ಧವಾಗಿರುವ ಭರವಸೆ ನೀಡಿದರು. ಸರ್ಕಾರದ ಹಿತದೃಷ್ಟಿಯಿಂದ ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರುವಂತೆ ಹಿರಿಯ ನಾಯಕರು ಸೂಚಿಸಿದರು.

ಈ ಎರಡೂ ಕ್ಷೇತ್ರಗಳ ಪ್ರಮುಖರು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರುವ ವಾಗ್ಧಾನ ನೀಡಿದರು ಎನ್ನಲಾಗಿದೆ. ಹುಣಸೂರು, ಕೆ.ಆರ್‌.ಪೇಟೆ ಕ್ಷೇತ್ರದ ಪ್ರಮುಖರಿಗೂ ಇದೇ ಸೂಚನೆ ನೀಡಿ ಉಪಚುನಾವಣೆಗೆ ಸಜ್ಜಾಗುವಂತೆ ಸೂಚನೆ ನೀಡಿದರು ಎಂದು ತಿಳಿಸಿವೆ. ಚಿಕ್ಕಬಳ್ಳಾಪುರ ಕ್ಷೇತ್ರದ ಪ್ರಮುಖರ ಸಭೆ ಬುಧವಾರ ನಡೆಯಲಿಲ್ಲ. ಮತ್ತೂಂದು ದಿನ ಆ ಕ್ಷೇತ್ರದ ಪ್ರಮುಖರ ಅಭಿಪ್ರಾಯ ಸಂಗ್ರಹಿಸಲು ಪ್ರಮುಖರು ನಿರ್ಧರಿಸಿದ್ದಾರೆ. ಶಿವಾಜಿನಗರ ಕ್ಷೇತ್ರದ ಅಭ್ಯರ್ಥಿ ಕುರಿತು ತುಸು ಅಪಸ್ವರ ವ್ಯಕ್ತವಾದರೂ ಪಕ್ಷದ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಕ್ಷೇತ್ರದ ಪ್ರಮುಖರು ಹೇಳಿದರು.

ರಾಜರಾಜೇಶ್ವರಿನಗರ ಕ್ಷೇತ್ರ ಕುರಿತು ಚರ್ಚೆ: ಸದ್ಯ ರಾಜರಾಜೇಶ್ವರಿನಗರ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿಲ್ಲ. ಅನರ್ಹತೆಗೊಂಡ ಶಾಸಕ ಮುನಿರತ್ನ ಗೆಲುವು ಪ್ರಶ್ನಿಸಿ ಪರಾಜಿತ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜುಗೌಡ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದು, ವಿಚಾರಣೆ ನಡೆದಿದೆ. ಈ ಪ್ರಕರಣ ಹಿಂಪಡೆದು ಉಪಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ನೀಡುವಂತೆ ಮುನಿರತ್ನ ಬಿಜೆಪಿ ನಾಯಕರಿಗೆ ಮನವಿ ಮಾಡುತ್ತಿದ್ದಾರೆ. ಈ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಯಿತು. ಮುನಿರತ್ನ ಸ್ಪರ್ಧೆಗೆ ಅವಕಾಶ ನೀಡಬೇಕೆ, ಬೇಡವೇ ಎಂಬ ಕುರಿತೂ ಹಲವು ಅಭಿಪ್ರಾಯಗಳು ವ್ಯಕ್ತವಾದವು.

ಅಂತಿಮವಾಗಿ ಅನರ್ಹತೆಗೊಂಡ ಶಾಸಕರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ದೊರೆತರೆ ಎಲ್ಲರಿಗೂ ಪಕ್ಷದ ವತಿಯಿಂದ ಸ್ಪರ್ಧಿಸಲು ಟಿಕೆಟ್‌ ನೀಡುವುದಾಗಿ ಭರವಸೆ ನೀಡಲಾಗಿದ್ದು, ಆ ಮಾತು ಉಳಿಸಿಕೊಳ್ಳಬೇಕಿದ್ದು, ಎಲ್ಲರೂ ಇದಕ್ಕೆ ಸಹಕರಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು ಎನ್ನಲಾಗಿದೆ. ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಅರವಿಂದ ಲಿಂಬಾವಳಿ, ಅರುಣ್‌ ಕುಮಾರ್‌ (ಸಂಘಟನೆ), ಎನ್‌.ರವಿಕುಮಾರ್‌, ಸಂಸದ ಪಿ.ಸಿ.ಮೋಹನ್‌, ಶಾಸಕ ಎಸ್‌.ರಘು ಇತರರು ಉಪಸ್ಥಿತರಿದ್ದರು.

ದಿಢೀರ್‌ ಬುಲಾವ್‌ – ಅಸಮಾಧಾನ: ರಾಜ್ಯದಲ್ಲಿ ಮತ್ತೆ ಹಲವೆಡೆ ನೆರೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಬುಧವಾರ ಬೆಳಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪಾಲ್ಗೊಂಡಿದ್ದರು. ಸಭೆ ಆರಂಭವಾದ ಕೆಲವೇ ಹೊತ್ತಿನಲ್ಲಿ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದಿರುವ ಸಭೆಯಲ್ಲಿ ಪಾಲ್ಗೊಳ್ಳುವಂತೆ ಪಕ್ಷದಿಂದ ಕರೆ ಬಂತು. ಇದರಿಂದ ಕೋಪಗೊಂಡ ಯಡಿಯೂರಪ್ಪ ಅವರು ಬೇಸರದಿಂದಲೇ ವಿಡಿಯೋ ಸಂವಾದ ಮೊಟಕುಗೊಳಿಸಿ ಬಿಜೆಪಿ ಕಚೇರಿಯತ್ತ ತೆರಳಿದರು.

ಈ ಬಗ್ಗೆ ಪಕ್ಷದ ಸಭೆಯಲ್ಲಿ ಯಡಿಯೂರಪ್ಪ ಅಸಮಾಧಾನ ಹೊರಹಾಕಿದರು ಎನ್ನಲಾಗಿದೆ. ಹಳೆ ಮೈಸೂರು ಭಾಗದ ಎಂಟು ಕ್ಷೇತ್ರಗಳ ಉಪಚುನಾವಣೆಗೆ ಸಂಬಂಧಪಟ್ಟಂತೆ ಕ್ಷೇತ್ರ ಪ್ರಮುಖರ ಸಭೆ ಬುಧವಾರ ನಿಗದಿಯಾಗಿತ್ತು. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿ ಸಮಯ ನಿಗದಿಪಡಿಸಲಾಗಿತ್ತು. ಆದರೆ ಸಂವಹನ ಕೊರತೆಯಿಂದ ಮುಖ್ಯಮಂತ್ರಿಗಳ ಕಾರ್ಯಕಲಾಪ ಪಟ್ಟಿಯಲ್ಲಿ ಸೇರ್ಪಡೆಯಾಗಿರಲಿಲ್ಲ ಎಂದು ಮೂಲಗಳು ಹೇಳಿವೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ರಾಜಧಾನಿಯ ಜಿದ್ದಾಜಿದ್ದಿ ಕ್ಷೇತ್ರಗಳಲ್ಲಿ ಸೋಮವಾರ ಉಪ ಚುನಾವಣೆ ನಾಮಪತ್ರ ಸಲ್ಲಿಕೆ ಹಾಗೂ ರೋಡ್‌ ಶೋ ಭರಾಟೆ ಜೋರಾಗಿಯೇ ಇತ್ತು. ಯಶವಂತಪುರ, ಮಹಾಲಕ್ಷ್ಮಿ...

  • ಬೆಂಗಳೂರು: ತಾಮ್ರದ ತಂಬಿಗೆ, ಜರತಾರಿ ಬಟ್ಟೆ, ರಾಸಾಯನಿಕ ವಸ್ತುಗಳು, ಬಾಹ್ಯಕಾಶ ವಿಜ್ಞಾನಿಯ ಧಿರಿಸು ಇಷ್ಟನ್ನೇ ಬಳಸಿ "ರೈಸ್‌ ಪುಲ್ಲಿಂಗ್‌' ಹೆಸರಲ್ಲಿ ಕೋಟ್ಯಂತರ...

  • ಬೆಂಗಳೂರು: ಅಲ್ಲಿ ತಂತ್ರಜ್ಞಾನಗಳು ಮಾತನಾಡುತ್ತಿದ್ದವು. ಬಂದ ಅತಿಥಿಗಳಿಗೆ ಯಂತ್ರಗಳೇ ಆತಿಥ್ಯ ನೀಡುತ್ತಿದ್ದವು. ಅದೇ ಯಂತ್ರಗಳು ಕೆಲ ಮಳಿಗೆಗಳಲ್ಲಿ ವ್ಯವಹಾರವನ್ನೂ...

  • ಸುಮಾರು ಎರಡೂವರೆ ಶತಮಾನದಿಂದ ದೇಶದ ಸೇವೆ ಸಲ್ಲಿಸುತ್ತಿರುವ ಸೈನಿಕರ ತಂಡವೊಂದು ನಗರದ ಹೃದಯಭಾಗದಲ್ಲಿದೆ. ಅದು ಹಿಮಾಲಯದ ತುತ್ತ ತುದಿಯಲ್ಲಿ, ಕುಲು ಮನಾಲಿಯಂತಹ...

  • ಬೆಂಗಳೂರು: ಸರ್ಕಾರ ಬೆಂಗಳೂರಿನಲ್ಲಿಯೇ ಫಿಲ್ಮ್ ಸಿಟಿ ನಿರ್ಮಾಣ ಮಾಡಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಭರವಸೆ ನೀಡಿದ್ದಾರೆ. ಈ...

ಹೊಸ ಸೇರ್ಪಡೆ