ಐಟಿ ದಾಳಿ ಪ್ರಕರಣ: ನಟ ಪುನೀತ್ ರಾಜ್ಕುಮಾರ್ ವಿಚಾರಣೆ
Team Udayavani, Jan 10, 2019, 12:30 AM IST
ಬೆಂಗಳೂರು:ಸ್ಯಾಂಡಲ್ವುಡ್ ನಟ ಮತ್ತು ನಿರ್ಮಾಪಕರ ಮೇಲಿನ ಐಟಿ ದಾಳಿ ಪ್ರಕರಣ ಸಂಬಂಧ ಬುಧವಾರ ನಟ ಪುನೀತ್ ರಾಜ್ಕುಮಾರ್ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾದರು.
ಮಧ್ಯಾಹ್ನ 3.30ರ ಸುಮಾರಿಗೆ ಆದಾಯ ತೆರಿಗೆ ಇಲಾಖೆ ಕಚೇರಿಗೆ ಆಗಮಿಸಿದ ಪುನೀತ್ ರಾಜ್ಕುಮಾರ್ ಅವರನ್ನು ಸಂಜೆ 5.30ರವರೆಗೂ ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದರು. ದಾಳಿ ಸಂದರ್ಭದಲ್ಲಿ ಅವರ ಮನೆಯಲ್ಲಿ ಪತ್ತೆಯಾದ ಆಸ್ತಿ-ಪಾಸ್ತಿಗೆ ಸಂಬಂಧಿಸಿದ ದಾಖಲೆಗಳ ಕುರಿತು ಹತ್ತಾರು ಪ್ರಶ್ನೆಗಳನ್ನು ಕೇಳಲಾಗಿತ್ತು. ಎಲ್ಲದಕ್ಕೂ ಪುನೀತ್ ಉತ್ತರ ನೀಡಿದ್ದಾರೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ವಿಚಾರಣೆ ಮುಗಿಸಿ ಹೊರ ಬಂದು ಪ್ರತಿಕ್ರಿಯೆ ನೀಡಿದ ಪುನೀತ್ ರಾಜ್ಕುಮಾರ್, ದಾಳಿಯ ವಿಚಾರಣೆ ಐಟಿ ಮತ್ತು ನಮ್ಮ ನಡುವಿನ ವಿಚಾರ. ಅದನ್ನು ಹೊರಗಡೆ ಹೇಳುವ ಅಗತ್ಯವಿಲ್ಲ. ನಟ ಮತ್ತು ಉದ್ಯಮಿಯಾಗಿ ನಾನು ಎಲ್ಲವನ್ನು ಎದುರಿಸುತ್ತೇನೆ. ಮನೆಯಲ್ಲಿ ಏನು ಸಿಕ್ಕಿದೆ ಎಂಬುದನ್ನು ಹೇಳುವುದಕ್ಕೆ ಸಾಧ್ಯವಿಲ್ಲ. ಮತ್ತೂಮ್ಮೆ ವಿಚಾರಣೆಗೆ ಕರೆಯುವುದು ಬಿಡುವುದು ಐಟಿ ಅಧಿಕಾರಿಗಳಿಗೆ ಬಿಟ್ಟದ್ದು ಎಂದು ಹೇಳಿದರು.