ರಾಘಣ್ಣ : ಇಂದು ಡಿಸ್ಚಾರ್ಜ್ ಸಾಧ್ಯತೆ
Team Udayavani, Feb 18, 2021, 2:14 PM IST
ಬೆಂಗಳೂರು: ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ನಟ ರಾಘವೇಂದ್ರ ರಾಜ್ಕುಮಾರ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಫೆ.18 (ಇಂದು) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಫೆ.16 ರಂದು ಉಸಿರಾಟ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಘವೇಂದ್ರ ರಾಜಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಸಲಹೆ ಮೇರೆಗೆ ಎರಡು ದಿನಗಳ ಕಾಲ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ಮಾಡಲಾಗಿದ್ದು, ಸದ್ಯ ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬುಧವಾರ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜತೆಗೆ ಮಾತನಾಡಿದ ನಟ ಶಿವರಾಜ್ಕುಮಾರ್, “ಹೃದಯಕ್ಕೆ ಸಂಬಂಧಿಸಿದಂತೆ ಸಮಸ್ಯೆ ಕಂಡು ಬಂತು. ಮುನ್ನೆಚ್ಚರಿಕೆಯಿಂದ ಆಸ್ಪತ್ರೆಗೆ ದಾಖಲಿಸಿದ್ದೇವೆ. ಎಲ್ಲಾ ರೀತಿಯ ಆರೋಗ್ಯ ಪರೀಕ್ಷೆ ಆಗಿದೆ. ಏನೂ ತೊಂದರೆ ಇಲ್ಲ , ಇಂದು (ಫೆ.18) ಡಿಸ್ಚಾರ್ಜ್ ಆಗಲಿದ್ದಾರೆ’ ಎಂದು ವೈದ್ಯರು ತಿಳಿಸಿದ್ದಾರೆ ಎಂದರು.