ಕರಗ ಕಣ್ತುಂಬಿಕೊಂಡ ರಾಜಧಾನಿ ಜನ

Team Udayavani, Apr 21, 2019, 3:00 AM IST

ಬೆಂಗಳೂರು: ಕರಗ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ನುಸುಕಿನಲ್ಲಿಯೂ ಕಿಕ್ಕಿರಿದ ಜನರು, ಕರಗ ಸಾಗುವ ಹಾದಿಯಲ್ಲಿ ನೀರಾಕಿ ಪೂಜೆ ಸಲ್ಲಿಸಿದ ಮಹಿಳೆಯರು, ಕರಗವನ್ನು ಕಣ್ತುಂಬಿಕೊಂಡ ಭಕ್ತರ ಬಾಯಲ್ಲಿ ಗೋವಿಂದ…ಗೋವಿಂದ… ನಾಮಸ್ಮರಣೆ…

ವಿಶ್ವವಿಖ್ಯಾತ ಬೆಂಗಳೂರು ಕರಗ ತಿಗಳರ ಪೇಟೆಯ ಧರ್ಮರಾಯಸ್ವಾಮಿ ದೇವಾಸ್ಥಾನದಿಂದ ಹೊರಟ ಹಾದಿಯಲ್ಲಿ ಶನಿವಾರ ನಸುಕಿನಲ್ಲಿ ಕಂಡು ಬಂದ ದೃಶ್ಯಗಳಿವು.

ಪೂರ್ವ ನಿಗದಿಯಂತೆ ಹಸಿ ಕರಗವು ಶುಕ್ರವಾರ ತಡರಾತ್ರಿ 12.30ಕ್ಕೆ ಧರ್ಮರಾಯಸ್ವಾಮಿ ದೇವಾಲಯದಿಂದ ಹೊರಡಬೇಕಿತ್ತು. ಆದರೆ, ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ಶನಿವಾರ ನುಸುಕಿನ 3ಗಂಟೆಗೆ ದೇವಾಲಯದಿಂದ ಹೊರಟು ನಗರದ ವಿವಿಧ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿತು. ಈ ವೇಳೆ ಕರಗವನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಕಾದಿದ್ದ ದೃಶ್ಯಗಳು ಕಂಡುಬಂದವು.

ಮಧ್ಯರಾತ್ರಿ ಕರಗಧಾರಿ ಮನು ಅವರು ದ್ರೌಪದಿ ಸ್ವರೂಪಿ ಮಲ್ಲಿಗೆ ಹೂವುಗಳಿಂದ ಅಲಂಕರಿಸಿದ್ದ ಕರಗವನ್ನು ತಲೆ ಮೇಲೊತ್ತು ಖಡ್ಗ ಹಿಡಿದ ವೀರಕುಮಾರರ ಶಂಖನಾದ, ಗಂಟೆಗಳ ಶಬ್ಧ ಹಾಗೂ ಗೋವಿಂದ ನಾಮಸ್ಮರಣೆ ಮೂಲಕ ದೇವಾಲಯದ ಆವರಣದಲ್ಲಿ ಪ್ರದಕ್ಷಿಣೆ ಹಾಕಿದರು. ಅಲ್ಲಿಂದ ನಿಗದಿಪಡಿಸಿದ ದೇವಾಲಯಗಳು ಹಾಗೂ ರಸ್ತೆಗಳಲ್ಲಿ ಸಾಗಿ ಪೂಜೆ ಸ್ವೀಕರಿಸಿತು.

ಕರಗ ಸಾಗುವ ಹಾದಿಯುದ್ದಕ್ಕೂ ಬಿಬಿಎಂಪಿ ವತಿಯಿಂದಿ ವಿದ್ಯುತ್‌ ಅಲಂಕಾರಿಕ ದೀಪಗಳನ್ನು ಅಳವಡಿಸಲಾಗಿತ್ತು. ಜತೆಗೆ ಭಕ್ತರ ಅನುಕೂಲಕ್ಕಾಗಿ ಕರಗ ಸಾಗುವ ಪ್ರಮುಖ ರಸ್ತೆಗಳಲ್ಲಿ ಇ-ಶೌಚಾಲಯವನ್ನು ಇರಿಸಲಾಗಿತ್ತು. ಇದರೊಂದಿಗೆ ಭದ್ರತಾ ದೃಷ್ಟಿಯಿಂದ ನೂರಾರು ಪೊಲೀಸರನ್ನು ನಿಯೋಜಿಸಲಾಗಿತ್ತು.

ಕರಗ ಸಾಗಿದ ಹಾದಿ: ತಿಗಳರ ಪೇಟೆಯ ಧರ್ಮರಾಯಸ್ವಾಮಿ ದೇವಾಲಯದಿಂದ ಹೊರಟ ಕರಗವು ಮೊದಲಿಗೆ ಅಲಸೂರುಪೇಟೆ ಆಂಜನೇಯಸ್ವಾಮಿ, ಶ್ರೀರಾಮ ದೇವಾಲಯ ಮತ್ತು ಪ್ರಸನ್ನ ಗಂಗಾಧರೇಶ್ವರ ದೇವಾಲಯಗಳಲ್ಲಿ ಪೂಜಾ ಕಾರ್ಯ ನೆರವೇರಿಸಿ, ನಗರ್ತಪೇಟೆ ವೇಣುಗೋಪಾಲಸ್ವಾಮಿ ದೇವಾಲಯ ಸಿದ್ದಣ್ಣ ಗಲ್ಲಿ, ಬೈರೇದೇವರ ದೇವಾಲಯ, ಕಬ್ಬನ್‌ ಪೇಟೆಯ 14ನೇ ಅಡ್ಡರಸ್ತೆ ಶ್ರೀರಾಮ ಸೇವಾ ಮಂದಿರ, 15ನೇ ಅಡ್ಡರಸ್ತೆ ಮತ್ತು ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು.

ಅಲ್ಲಿಂದ ಮಕ್ಕಳ ಬಸವಣ್ಣಗುಡಿ, ಗಾಣಿಗರಪೇಟೆ, ಚನ್ನರಾಯಸ್ವಾಮಿ ದೇವಸ್ಥಾನ, ಚಾಮುಂಡೇಶ್ವರಿ ದೇವಸ್ಥಾನದಿಂದ ಅವೆನ್ಯೂ ರಸ್ತೆಯ ಈಶ್ವರ ದೇವಾಲಯದಲ್ಲಿ ಪೂಜಾ ಕಾರ್ಯ ನಡೆಸಿದ ಬಳಿಕ ದೊಡ್ಡಪೇಟೆ ಮೂಲಕ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸ್ವೀಕರಿಸಿ, ಕೆ.ಆರ್‌.ಮಾರುಕಟ್ಟೆ ಸಮೀಪದ ಉದ್ಭವ ಗಣಪತಿ ದೇವಾಲಯ, ಪೊಲೀಸ್‌ ರಸ್ತೆ ಮೂಲಕ ಮುರಹರಿಸ್ವಾಮಿ ಮಠ, ಬೀರೇದೇವರ ಗುಡಿ, ಅರಳೆಪೇಟೆ ಮುಖ್ಯರಸ್ತೆಯಲ್ಲಿ ಸಾಗಿತ್ತು. ಜತೆಗೆ ಮಸ್ತಾನ್‌ ಸಾಹೇಬರ ದರ್ಗಾದಲ್ಲಿ ಪೂಜೆ ಸ್ವೀಕರಿಸಿ ಬಳೆಪೇಟೆ, ಬಳೆ ಗರಡಿಗೆ ಆಗಮಿಸಿತು.

ಬಳಿಕ ಅಣ್ಣಮ್ಮ ದೇವಾಲಯ, ಕಿಲಾರಿ ರಸ್ತೆಯ ಶ್ರೀ ಧರ್ಮರಾಯಸ್ವಾಮಿ ದೇವಾಲಯ, ಯಲಹಂಕ ಗೇಟ್‌ ಆಂಜನೇಯಸ್ವಾಮಿ ದೇವಸ್ಥಾನ, ತುಪ್ಪದಾಂಜನೇಯಸ್ವಾಮಿ ಗುಡಿ, ಶ್ರೀರಂಗನಾಥಸ್ವಾಮಿ, ಚೌಡೇಶ್ವರಿ ಗುಡಿಯಲ್ಲಿ ಪೂಜೆ ನೆರವೇರಿಸಿತು. ಆನಂತರ ಕುಂಬಾರಪೇಟೆ ಮುಖ್ಯರಸ್ತೆ ಪ್ರವೇಶಿಸಿ, ಗೊಲ್ಲರಪೇಟೆ, ತಿಗಳರಪೇಟೆ, ಕುಲಬಾಂಧವರ ಮನೆಗಳಲ್ಲಿ ಪೂಜೆ ಸ್ವೀಕರಿಸಿ, ಹಾಲುಬೀದಿ, ಕಬ್ಬನ್‌ಪೇಟೆ ಮೂಲಕ ಸುಣಕಲ್‌ಪೇಟೆ ಮಾರ್ಗವಾಗಿ ಪುರೋಹಿತರ ಮನೆಗಳಲ್ಲಿ ಪೂಜೆ ಸ್ವೀಕರಿತು. ಕೊನೆಗೆ ನರಸಿಂಹ ಜೋಹಿಸ್‌ ಗಲ್ಲಿಯಲ್ಲಿ ಸಾಗಿ ಬೆಳಗಿನ ಬೆಳಗ್ಗೆ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಮರಳಿತು.

ಪಾರ್ಕಿಂಗ್‌ ವ್ಯವಸ್ಥೆ: ಕರಗ ನೋಡಲು ಬರುವ ಭಕ್ತರ ಅನುಕೂಲಕ್ಕಾಗಿ ಜೆ.ಸಿ.ರಸ್ತೆಯ ಮಹಾನಗರ ಪಾಲಿಕೆಯ ಪಾರ್ಕಿಂಗ್‌ ತಾಣದಲ್ಲಿ ವಾಹನಗಳ ನಿಲುಗಡೆ ಅವಕಾಶ ಕಲ್ಪಿಸಲಾಗಿತ್ತು. ಜತೆಗೆ ಕೆ.ಜಿ.ರಸ್ತೆಯ ಕೆಂಪೇಗೌಡ ಮಹಾರಾಜ ಕಾಂಪ್ಲೆಕ್ಸ್‌, ಮಾಮೂಲ್‌ ಪೇಟೆ ಮುಖ್ಯರಸ್ತೆಯಲ್ಲಿ ಹಾಗೂ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಲಾಗಿತ್ತು.


ಈ ವಿಭಾಗದಿಂದ ಇನ್ನಷ್ಟು

  • ದೊಡ್ಡಬಳ್ಳಾಪುರ: ಬ್ಯಾಂಕಿಂಗ್‌ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಬರೆಯಲು ಅವಕಾಶ ನೀಡದಿರುವ ಪರಿಣಾಮ ಇಂದು ಉದ್ಯೋಗಗಳು ಅನ್ಯ ರಾಜ್ಯದವರ ಪಾಲಾಗುತ್ತಿದೆ. ಸಂವಿಧಾನದಲ್ಲಿ...

  • ಯಲಹಂಕ: ವಹ್ನಿಕುಲ ಕ್ಷತ್ರಿಯರ ಆರಾಧ್ಯ ದೈವ, ಇತಿಹಾಸ ಪ್ರಸಿದ್ಧ ಶ್ರೀ ಮಹೇಶ್ವರಮ್ಮ ದೇವಿಯ ಕರಗ ಮಹೋತ್ಸವ ಬುಧವಾರ (ಮೇ 22) ರಾತ್ರಿ ನೆರವೇರಲಿದೆ. ದೇವಿಯ ಹಸಿ...

  • ಬೆಂಗಳೂರು: ನಗರ ಜಿಲ್ಲೆ ವ್ಯಾಪ್ತಿಯ ಮೂರು ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯಕ್ಕೆ ಬಿಬಿಎಂಪಿ, ಜಿಲ್ಲಾಡಳಿತ ಹಾಗೂ ನಗರ ಪೊಲೀಸರು ಸಕಲ ಸಿದ್ಧತೆ ಮಾಡಿಕೊಂಡಿದ್ದು,...

  • ಬೆಂಗಳೂರು: ಕನ್ನಡ ಸಾಹಿತ್ಯವನ್ನು ಸೀಮಿತ ಚರಿತ್ರೆಯ ಚೌಕಟ್ಟಿನೊಳಗಿಟ್ಟು ನೋಡುವುದು ಸರಿಯಲ್ಲ ಎಂದು ಹಿರಿಯ ವಿಮರ್ಶಕ ಡಾ.ಕೆ.ವೈ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು. ಕನ್ನಡ...

  • ಬೆಂಗಳೂರು: ಸಮಾಜದಲ್ಲಿ ಶಾಂತಿ, ಸಮಾನತೆ, ಜ್ಯಾತ್ಯತೀತತೆ ಬಯಸದ ಬಿಜೆಪಿ ನಾಯಕರಿಗೆ ಗೋಡ್ಸೆ ಚಿಂತನೆಗಳು ಮಾದರಿಯಾಗಿವೆ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್‌.ದೊರೆಸ್ವಾಮಿ...

ಹೊಸ ಸೇರ್ಪಡೆ