ಕರುನಾಡ ಯೋಗ ಪರಂಪರೆ; ಯೋಗಶಾಸ್ತ್ರ ಕರಗತ

Team Udayavani, Jun 21, 2019, 9:56 AM IST

ಯೋಗ, ಜಗತ್ತಿಗೆ ಭಾರತದ ಅನನ್ಯ ಕೊಡುಗೆ. ಯೋಗವನ್ನು ಜಗತ್ತಿನಾದ್ಯಂತ ಪಸರಿಸುವ ಕೆಲಸದಲ್ಲಿ ಕರ್ನಾಟಕವೂ ಯೋಗದಾನ ಕೊಟ್ಟಿದೆ ಎಂದು ಹೆಮ್ಮೆಯಿಂದ ಹೇಳಬಹುದು. ತತ್ತ್ವಜ್ಞಾನಿ ಜಿಡ್ಡು ಕೃಷ್ಣಮೂರ್ತಿ, ಮುತ್ಸದ್ದಿ ಜಯಪ್ರಕಾಶ ನಾರಾಯಣ, ವಯೊಲಿನ್‌ ವಾದಕ ಯೆಹುದಿ ಮೆನುಹಿನ್‌, ಗಾಯಕಿ ಮಡೋನ್ನಾ, ರಷ್ಯದ ಪ್ರಧಾನಿ ಮಾರ್ಷಲ್ ಬುಲ್ಗಾನಿನ್‌, ಲೇಖಕ ಅಲ್ಡಸ್‌ ಹಕ್ಸ್ಲಿ, ಪೋಪ್‌ ಷಷ್ಠ ಪಾಲ್, ಬೆಲ್ಜಿಯಂ ರಾಣಿ ಎಲಿಜಬೆತ್‌, ಜನರಲ್ ತಿಮ್ಮಯ್ಯ, ಭಾರತದ ಪ್ರಥಮ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್‌, ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ಮುಂತಾದವರನ್ನು ಒಳಗೊಂಡು ಜಗತ್ತಿನ ಮಹಾಮಹಿಮರಿಗೆಲ್ಲ ಯೋಗಗುರುವಾಗಿ ಹೆಸರು ಮಾಡಿದ ಬಿಕೆಎಸ್‌ ಅಯ್ಯಂಗಾರ್‌ ಮೂಲತಃ ಕರ್ನಾಟಕದವರು; ಕನ್ನಡದ ನೆಲದಲ್ಲಿ ಹುಟ್ಟಿ ಬೆಳೆದದ್ದು ಮಾತ್ರವಲ್ಲ, ಇಲ್ಲೇ ತನ್ನ ಯೋಗಾಭ್ಯಾಸವನ್ನು ಪ್ರಾರಂಭಿಸಿದವರು ಎಂಬುದು ಕನ್ನಡಿಗರಿಗೆ ಗರ್ವದ ಸಂಗತಿ.

ಬಿಕೆಎಸ್‌ ಅಯ್ಯಂಗಾರರ ಯೋಗಗುರು ಅವರ ಭಾವ ತಿರುಮಲೈ ಶ್ರೀಕೃಷ್ಣಮಾಚಾರ್ಯರು. ಆಚಾರ್ಯರು ಯೋಗ ಕಲಿತದ್ದು ತನ್ನ ತಂದೆಯಿಂದ. ನಂತರ ಯೌವನದ ದಿನಗಳಲ್ಲಿ ಕೃಷ್ಣಮಾಚಾರ್ಯರು ಬನಾರಸ್‌ ಹಿಂದೂ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದು ವ್ಯಾಸಂಗ ಮಾಡಿದರು. ಹಿಮಾಲಯದಲ್ಲಿ ನೆಲೆಸಿದ್ದ ಹಲವಾರು ಸಾಧುಸಂತರುಗಳನ್ನು ಕಂಡು ಅವರ ಮೂಲಕ ಹಠಯೋಗ ಕಲಿತರು. ಯೋಗದಲ್ಲಿ ಸಾಕಷ್ಟು ಸಾಧನೆ ಮಾಡಿದ ನಂತರ ಕೃಷ್ಣಮಾಚಾರ್ಯರು ಮರಳಿ ಬಂದು ಮೈಸೂರಲ್ಲಿ ನೆಲೆನಿಂತದ್ದು ಈ ಮಣ್ಣಿನ ಪುಣ್ಯ! ಕೃಷ್ಣಮಾಚಾರ್ಯರು ಅತ್ಯುತ್ತಮ ಯೋಗ- ದೇಹಾ ದಾಡ್ಯರ್ ಪಟುವಾಗಿದ್ದರು. ಮೈಸೂರು ಮಹಾರಾಜರು ಯೋಗಶಾಲೆ ತೆರೆಯುವುದಕ್ಕೆ ಸಕಲ ಸಹಾಯ ಮಾಡಿದ್ದ ರಿಂದ ಮೈಸೂರಲ್ಲಿ ಒಂದು ಸುಸಜ್ಜಿತ ಯೋಗಕೇಂದ್ರ ಪ್ರಾರಂಭವಾಯಿತು. ಕೃಷ್ಣಮಾಚಾರ್ಯರ ಹೆಸರನ್ನು, ಜೊತೆಗೆ ಯೋಗದ ಜನಪ್ರಿಯತೆಯನ್ನು ಜಗತ್ತಿನಾದ್ಯಂತ ಪಸರಿಸಿದ ಇಬ್ಬರು ಅದ್ಭುತ ಯೋಗಸಾಧಕರು ರೂಪುಗೊಂಡದ್ದು ಇದೇ ಯೋಗಶಾಲೆಯಲ್ಲಿ. ಒಬ್ಬರು ಶ್ರೀಕೃಷ್ಣ ಪಟ್ಟಾಭಿ ಜೋಯಿಸರು, ಇನ್ನೊಬ್ಬರು ಬಿಕೆಎಸ್‌ ಅಯ್ಯಂಗಾರರು.

ತನ್ನ ಹನ್ನೆರಡನೆಯ ವಯಸ್ಸಿನಲ್ಲಿ ಮೈಸೂರಿಗೆ ಬಂದು ಕೃಷ್ಣಮಾಚಾರ್ಯರ ಬಳಿ ಶಿಷ್ಯನಾಗಿ ಸೇರಿಕೊಂಡ ಪಟ್ಟಾಭಿ ಜೋಯಿಸರು ಯೋಗಶಾಸ್ತ್ರವನ್ನು ಕರಗತ ಮಾಡಿಕೊಂಡದ್ದಷ್ಟೇ ಅಲ್ಲ, ಮೈಸೂರಿನ ಸಂಸ್ಕೃತ ವಿದ್ಯಾಲಯದಲ್ಲಿ ಯೋಗವಿಭಾಗದ ಮೊದಲ ಶಿಕ್ಷಕನಾಗಿ ನೇಮಕಗೊಂಡು ನಾಲ್ಕು ದಶಕಗಳ ಶಿಕ್ಷಕವೃತ್ತಿಯಲ್ಲಿ ಸಾವಿರಾರು ಯೋಗಪಟುಗಳನ್ನು ತಯಾರು ಮಾಡಿದರು. ಪಟ್ಟಾಭಿ ಜೋಯಿಸರು ಯೋಗದ ಕೆಲವು ಅಂಶಗಳನ್ನು ನವೀಕರಿಸಿ ಅಷ್ಟಾಂಗ ವಿನ್ಯಾಸ ಯೋಗ ಎಂಬ ಹೆಸರಿನ ಹೊಸ ಶಾಖೆಯನ್ನೇ ತೆರೆದರು. ಜೋಯಿಸರ ಹೆಸರು ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರವಾದದ್ದು ಆಂದ್ರೆ ವಾನ್‌ ಲೀಸಬೆತ್‌ ಎಂಬ ಯೋಗಾಕಾಂಕ್ಷಿಯೊಬ್ಬ ಭಾರತಕ್ಕೆ ಬಂದು ಜೋಯಿಸರ ಶಿಷ್ಯನಾಗಿ ಯೋಗ ಕಲಿತು ಯೋಗ ‘ಸೆಲ್ಫ್ ಟಾಟ್’ ಎಂಬ ಪುಸ್ತಕ ಬರೆದಾಗ. ಆ ನಂತರ ಸ್ವತಃ ಪಟ್ಟಾಭಿ ಜೋಯಿಸರು ಕೂಡ ವಿದೇಶ ಪ್ರವಾಸ ಮಾಡಿ ಹಲವು ದೇಶಗಳಲ್ಲಿ ತನ್ನ ಯೋಗತರಗತಿಗಳನ್ನು ನಡೆಸಿದರು. ಗುರುಗಳಾದ ಕೃಷ್ಣಮಾಚಾರ್ಯರು ನೂರೊಂದು ವರ್ಷ ಬದುಕಿದರೆ ಪಟ್ಟಾಭಿ ಜೋಯಿಸರು 93 ವರ್ಷಗಳ ಕಾಲ ಆರೋಗ್ಯಪೂರ್ಣ ಜೀವನವನ್ನು ಬದುಕಿದರು. ಆ ಜೀವನದ ಏಳು ದಶಕಗಳುದ್ದಕ್ಕೂ ಅವರು ಯೋಗಶಿಕ್ಷಕರಾಗಿದ್ದರು ಎಂಬುದು ಸೋಜಿಗ.

ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ಯೋಗವನ್ನು ಜನಸಾಮಾನ್ಯರ ಹತ್ತಿರಕ್ಕೆ ತಂದವರನ್ನು ಪಟ್ಟಿ ಮಾಡುವುದಾದರೆ ಅದರಲ್ಲಿ ಮೊದಲ ಹೆಸರು ಮಲ್ಲಾಡಿಹಳ್ಳಿಯ ರಾಘವೇಂದ್ರ ಸ್ವಾಮೀಜಿಗಳದ್ದೇ. ರಾಘವೇಂದ್ರ ಸ್ವಾಮಿಗಳು ಮೂಲತಃ ಕೇರಳದವರು. ಬಾಲಕನಾಗಿದ್ದಾಗ ತಂದೆತಾಯಿಯ ಜೊತೆ ಕೊಲ್ಲೂರಿಗೆ ಹೊರಟವರು ಬಾರಕೂರಿಗೆ ಬರುವಷ್ಟರಲ್ಲಿ ತಾಯಿಯನ್ನು ಕಳೆದುಕೊಂಡರು, ತಂದೆ ಮಗನನ್ನು ಹೆರವರ ಕೈಗೊಪ್ಪಿಸಿ ದೇಶಾಂತರ ಹೋದರು. ಬಾಲ್ಯದಲ್ಲಿ ಪರ ಜನರ ಕೈಗೆ ಬಂದ ಹುಡುಗ ಮುಂದೆ ಸಾಧಕನಾಗಿ ಬೆಳೆದುನಿಂತದ್ದೇ ಅಚ್ಚರಿಯ ಅದ್ಭುತ ಯಶೋಗಾಥೆ. ಸ್ವಾಮಿ ಶಿವಾನಂದರ ಮೂಲಕ ಯೋಗ-ಧ್ಯಾನಗಳ ಲೋಕಕ್ಕೆ ಪ್ರವೇಶಿಸಿದ ರಾಘವೇಂದ್ರ ಸ್ವಾಮಿಗಳು ಪಂಡಿತ್‌ ಲಕ್ಷ್ಮಣ ಬಾಬಾರಲ್ಲಿ ಆಯುರ್ವೇದ ಕಲಿತರು. ಯೋಗ ಮತ್ತು ಆಯುರ್ವೇದಗಳನ್ನು ಪ್ರಚಾರ ಮಾಡುತ್ತ ಬದುಕಿನ ಎರಡು ದಶಕಗಳನ್ನು ಕರ್ನಾಟಕದ ಹಳ್ಳಿಹಳ್ಳಿಗಳಲ್ಲಿ ಕಳೆದರು. ಕಾಲರಾ, ಫ‌್ಲೂ, ಅಪೌಷ್ಟಿಕತೆಯ ಸಮಸ್ಯೆ ಎಲ್ಲೆಲ್ಲೂ ಕಾಣಿಸಿಕೊಂಡಿದ್ದ ಸಂದರ್ಭದಲ್ಲಿ ರಾಘವೇಂದ್ರ ಸ್ವಾಮಿಗಳು ಜನರಿಗೆ ಉಚಿತವಾಗಿ ಔಷಧ ಕೊಟ್ಟರು, ಆಹಾರ, ಸ್ವಚ್ಛತೆಗಳ ಮಹತ್ವ ತಿಳಿಸಿದರು. ಶರೀರವನ್ನು ರೋಗರುಜಿನಗಳಿಂದ ರಕ್ಷಿಸುವುದಕ್ಕೆ ಯೋಗ ಕಲಿಸಿದರು, ಯೋಗಶಾಲೆಗಳನ್ನು ತೆರೆದರು. ಹೀಗೇ ಸಂಚರಿಸುತ್ತ ಚಿತ್ರದುರ್ಗದ ಮಲ್ಲಾಡಿಹಳ್ಳಿ ಎಂಬ ಕುಗ್ರಾಮಕ್ಕೆ ಬಂದಾಗ ಅಲ್ಲಿ ಕಾಲರಾ ಮಾರಿ ನೂರಾರು ಜೀವಗಳನ್ನು ಬಲಿತೆಗೆದುಕೊಂಡಿತ್ತು. ಜನರ ಶುಶ್ರೂಷೆ ಮಾಡುತ್ತ ರಾಘವೇಂದ್ರ ಸ್ವಾಮಿಗಳು ಅಲ್ಲೇ ನೆಲೆ ನಿಂತರು. ಮಲ್ಲಾಡಿಹಳ್ಳಿಯನ್ನು ತಮ್ಮ ಕರ್ಮಭೂಮಿ ಮಾಡಿಕೊಂಡರು – ಒಂದಲ್ಲ ಎರಡಲ್ಲ, ಅಖಂಡ ಐವತ್ತೈದು ವರ್ಷಗಳ ಕಾಲ! ತನ್ನ ಹನ್ನೊಂದರ ಎಳವೆಯಲ್ಲಿ ಮಲ್ಲಾಡಿಹಳ್ಳಿಯಲ್ಲಿ ಉಳಿದುಕೊಂಡು ರಾಘವೇಂದ್ರ ಸ್ವಾಮಿಗಳ ಮೂಲಕವೇ ಯೋಗ ಕಲಿತು ಇಂದು ಜಗದ್ವಿಖ್ಯಾತಿ ಪಡೆದಿರುವವರು ಸದ್ಗುರು ಜಗ್ಗಿ ವಾಸುದೇವ್‌. ಪರಂಪರೆಯ ವೃಕ್ಷ ಹೇಗೆ ವ್ಯಾಪಿಸಿಕೊಳ್ಳುತ್ತದೆ ನೋಡಿ!

ನೂರು ವರ್ಷಗಳ ಇತಿಹಾಸ ತೆಗೆದುಕೊಂಡರೂ ಸಾಕು, ಕರ್ನಾಟಕ ರೂಪಿಸಿದ ಮಹಾನ್‌ ಯೋಗಸಾಧಕರು, ಶಿಕ್ಷಕರು ಹಲವು ಮಂದಿ ಸಿಕ್ಕುತ್ತಾರೆ. ಇಂದು ಯೋಗವನ್ನು ಲಕ್ಷಾಂತರ ಮಂದಿಗೆ, ನೂರಾರು ದೇಶಗಳಲ್ಲಿ ಕಲಿಸುತ್ತಿರುವ ಇಬ್ಬರು ಪ್ರಮುಖ ವ್ಯಕ್ತಿಗಳು: ಸದ್ಗುರು, ರವಿಶಂಕರ್‌ ಗುರೂಜಿ ಇಬ್ಬರೂ ಕರ್ನಾಟಕದವರು. ಬಿಎನ್‌ಎಸ್‌ ಐಯ್ಯಂ ಗಾರ್‌, ವಿ. ಶೇಷಾದ್ರಿ, ಎಚ್.ಎಸ್‌. ಅರುಣ್‌, ಡಾ. ಈಶ್ವರ ಬಸವರೆಡ್ಡಿ, ರುದ್ರಗೌಡರು, ಕೃಷ್ಣ ಚೈತನ್ಯ, ಡಾ. ಓಂಕಾರ್‌, ಡಾ. ವಿಜಯ ಕುಮಾರ್‌ ಮಾಂಜ, ಬಿ. ರಾಘ ವೇಂದ್ರ ಶೆಣೈ, ಶರತ್‌ ಜೋಯಿಸ್‌, ಸರಸ್ವತಿ ಜೋಯಿಸ್‌, ಭರತ್‌ ಶೆಟ್ಟಿ, ಶರ್ಮಿಳಾ ದೇಸಾಯಿ, ಶರ್ಮಿಳಾ ಮಹೇಶ್‌, ಶಶಿಕಲಾ ಗೋವಿಂದ, ವಿಜಯ ಅರುಣ ಸೇನ್‌, ಭಗಿನಿ ವನಿತಾ – ಹೀಗೆ ಕರ್ನಾಟಕವನ್ನು ಕಾರ್ಯಕ್ಷೇತ್ರವಾಗಿ ಆರಿಸಿಕೊಂಡರೂ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಯೋಗಸಾಧಕರು ಅನೇಕ. ಯೋಗ ಸಂಸ್ಥೆಗಳೂ ಕರ್ನಾಟಕದಲ್ಲಿ ಹಲವಾರಿವೆ. ಧರ್ಮದರ್ಶಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಶಾಂತಿವನ ಟ್ರಸ್ಟ್‌ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯ – ಎರಡೂ ಕಳೆದ ಎರಡೂವರೆ ದಶಕಗಳಿಂದ ಸಾವಿರಾರು ಮಂದಿಗೆ ಯೋಗತರಬೇತಿ ಕೊಟ್ಟಿವೆ. ದೇಶದ ಅತಿ ದೊಡ್ಡ ಸ್ವಯಂಸೇವಕ ಸಂಘಟನೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಗಳಲ್ಲಿ ಯೋಗ ಶಿಕ್ಷಣ ಒಂದು ಅವಿಭಾಜ್ಯ ಅಂಗವಾಗುವಂತೆ ನೋಡಿಕೊಂಡ ಅಜಿತ್‌ ಕುಮಾರ್‌ ಕೂಡ ಕನ್ನಡಿಗರೇ ಎಂಬುದು ವಿಶೇಷ.

ಆರೆಸ್ಸೆಸ್‌ನ ಅಂಗಸಂಸ್ಥೆಯಾದ ರಾಷ್ಟೋತ್ಥಾನ ಪರಿಷತ್‌ ರಾಜ್ಯದೆಲ್ಲೆಡೆ ಯೋಗಕೇಂದ್ರಗಳನ್ನು ನಡೆಸುತ್ತಿದೆ. ಇನ್ನು, ಯೋಗಶಿಕ್ಷಣ ಕೊಡುವ ಏಕೈಕ ಡೀಮ್ಡ್ ಯೂನಿವರ್ಸಿಟಿಯಾದ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ ಇರುವುದು ಬೆಂಗಳೂರಿನ ಸಮೀಪದ ಜಿಗಣಿಯಲ್ಲಿ. ಪತಂಜಲಿ ಯೋಗ ಸಂಸ್ಥೆ, ಆರ್ಟ್‌ ಆಫ್ ಲಿವಿಂಗ್‌, ಬ್ರಹ್ಮ ಕುಮಾರೀಸ್‌ ಈಶ್ವರೀಯ ವಿಶ್ವವಿದ್ಯಾಲಯ ಮುಂತಾದ ಸಂಸ್ಥೆಗಳು ಹೆಚ್ಚು ಹೆಚ್ಚು ಮಂದಿಗೆ ಯೋಗವನ್ನು ಅತ್ಯಂತ ಶುದ್ಧಕ್ರಮದಲ್ಲಿ ಕಲಿಸುವುದನ್ನು ವ್ರತದಂತೆ ಆಚರಿಸಿ ಕೊಂಡು ಬಂದಿವೆ. ಅತ್ಯುತ್ತಮವಾದ ಗುರುಪರಂಪರೆ ಮತ್ತು ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡು ಕೆಲಸ ಮಾಡುವ ನಿಷ್ಠಾವಂತ ಸಂಸ್ಥೆಗಳು – ಇವೆರಡೂ ಯೋಗದ ವಿಷಯದಲ್ಲಿ ಕರ್ನಾಟಕಕ್ಕೆ ದಕ್ಕಿರುವುದು ಒಂದು ಯೋಗಾಯೋಗವೇ ಸರಿ.

 

● ರೋಹಿತ್‌ ಚಕ್ರತೀರ್ಥ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: "ನನ್ನ ಸಾವಿಗೆ ಪತಿ ಹಾಗೂ ಆತನ ದೊಡ್ಡಮ್ಮ ಕಾರಣ' ಕಾರಣ ಎಂದು ಸಹೋದರನ ಮೊಬೈಲ್‌ಗೆ ಸಂದೇಶ ಕಳುಹಿಸಿ ಹಿನ್ನೆಲೆ ಗಾಯಕಿ ಸುಶ್ಮಿತಾ (26) ಭಾನುವಾರ ತಡರಾತ್ರಿ...

  • ಬೆಂಗಳೂರು: ವಿಶ್ವದಾದ್ಯಂತ ಚೀನಾದ ಕೊರೊನಾ ವೈರಸ್‌ ಸದ್ದು ಮಾಡುತ್ತಿದೆ. ಇದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ, ಅಷ್ಟೇ ಅಪಾಯಕಾರಿ ರೇಬಿಸ್‌ ಬಗ್ಗೆ...

  • ಬೆಂಗಳೂರು: ಯಕ್ಷಗಾನ ಹಾಗೂ ಮೂಡಲಪಾಯ ಕಲೆಯನ್ನು ಉಳಿಸಿ-ಬೆಳೆಸಿದವರು ಹಳ್ಳಿಗಾಡು ಪ್ರದೇಶಗಳಲ್ಲಿ ಬಹಳಷ್ಟು ಮಂದಿ ಇದ್ದಾರೆ. ಅಂತಹವರ ಸೇವೆಯನ್ನು ನೆನೆಯುವ ಕಾರ್ಯಕ್ಕೆ...

  • ಬೆಂಗಳೂರು: ಚಲಿಸುತ್ತಿದ್ದ ಬಸ್‌ನಲ್ಲಿಯೇ ಮಹಿಳಾ ಪ್ರಯಾಣಿಕರೊಬ್ಬರ ಜತೆ ಅನುಚಿತವಾಗಿ ವರ್ತಿಸಿದ ಕೆಎಸ್‌ಆರ್‌ಟಿಸಿ ಬಸ್‌ ನಿರ್ವಾಹಕನನ್ನು ಸಂತ್ರಸ್ತೆಯ ಸಂಬಂಧಿಕರೇ...

  • ಬೆಂಗಳೂರು: ಆನಂದ ರಾವ್‌ ವೃತ್ತದಲ್ಲಿರುವ ವಿದ್ಯುತ್‌ ವಿತರಣಾ ಕೇಂದ್ರದ ಆವರಣದಲ್ಲೇ ಆಕಸ್ಮಿಕ ಬೆಂಕಿಯಿಂದ 20 ಎಂವಿಎ ಸಾಮರ್ಥ್ಯದ ಎರಡು ಟ್ರಾನ್ಸ್‌ಫಾರ್ಮರ್‌ಗಳು...

ಹೊಸ ಸೇರ್ಪಡೆ