ತನಿಖೆ ಸೋರಿಕೆಯಾಗದಂತೆ ನೋಡಿಕೊಳ್ಳಿ: ಸಿದ್ದರಾಮಯ್ಯ
Team Udayavani, Sep 17, 2017, 11:20 AM IST
ಬೆಂಗಳೂರು: “ಮಹತ್ವದ ಪ್ರಕರಣಗಳ ತನಿಖೆ ನಡೆಯುತ್ತಿರುವಾಗಲೇ ಮಾಧ್ಯಮಗಳಿಗೆ ಮಾಹಿತಿ ಸೋರಿಕೆಯಾಗುವುದರಿಂದ ತನಿಖೆಯ ದಿಕ್ಕು ತಪ್ಪುತ್ತದೆ. ಆದ್ದರಿಂದ ತನಿಖೆಯ ಮಾಹಿತಿ ಸೋರಿಕೆಯಾಗದಂತೆ ನೋಡಿಕೊಳ್ಳಿ’ ಎಂದು ಸಿಎಂ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಗಳಿಗೆ ಕಿವಿ ಮಾತು ಹೇಳಿದ್ದಾರೆ.
ರಾಷ್ಟ್ರಪತಿ ಪದಕ ವಿಜೇತ ಪೊಲೀಸ್ ಅಧಿಕಾರಿಗಳ ಪದಕ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ರಾಜ್ಯ ಸರ್ಕಾರ ಪೊಲೀಸರಿಗೆ ಅಗತ್ಯ ಸೌಲಭ್ಯಗಳನ್ನು ನೀಡಿದ್ದು, 4 ವರ್ಷದಲ್ಲಿ ಮನೆ ನಿರ್ಮಿಸಿ ಕೊಡಲಾಗಿದೆ. ಇಲಾಖೆಯಲ್ಲಿ 18 ವರ್ಷ ಸೇವೆ ಸಲ್ಲಿಸಿದವರಿಗೆ ಬಡ್ತಿ ನೀಡಲಾಗಿದೆ. ಈಗಾಗಲೇ 11 ಸಾವಿರ ಪೊಲೀಸರು ಬಡ್ತಿ ಹೊಂದಿದ್ದಾರೆ. ಪೊಲೀಸರು ಮಾನಸಿಕ ಒತ್ತಡದ ಸಂದರ್ಭದಲ್ಲಿಯೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಗೃಹ ಇಲಾಖೆ ಪ್ರತಿ ವರ್ಷವೂ ಆಯಾ ವರ್ಷದ ಪದಕ ಪ್ರದಾನ ಮಾಡಬೇಕು’ ಎಂದು ಸಲಹೆ ನೀಡಿದರು.
ಪದಕ ಪ್ರದಾನ ಮಾಡಿ ಮಾತನಾಡಿದ ರಾಜ್ಯಪಾಲ ವಿ.ಆರ್.ವಾಲಾ, “ದಕ್ಷ ಅಧಿಕಾರಿಗಳಿಂದ ರಾಜ್ಯಕ್ಕೆ ಹೆಮ್ಮೆ ಬಂದಿದೆ. ಪ್ರಶಸ್ತಿ ಪುರಸ್ಕೃತರಿಂದ ಇನ್ನುಳಿದ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಪ್ರೇರಣೆಯಾಗುತ್ತದೆ. ಯಾವುದೇ ಸರ್ಕಾರದ ಕನಸುಗಳನ್ನು ನನಸು ಮಾಡುವವರು ಅಧಿಕಾರಿಗಳು. ಪೊಲೀಸ್ ಅಧಿಕಾರಿಗಳು ಭದ್ರವಾಗಿದ್ದರೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಭದ್ರವಾಗಿರುತ್ತದೆ’ ಎಂದು ಹೇಳಿದರು.