ಗ್ರಂಥಾಲಯ ಸಿಬ್ಬಂದಿ ದಿಢೀರ್‌ ಧರಣಿ: ಲಾಠಿ ಪ್ರಹಾರ

Team Udayavani, Jun 26, 2019, 3:07 AM IST

ಬೆಂಗಳೂರು: ಕನಿಷ್ಠ ವೇತನಕ್ಕೆ ಒತ್ತಾಯಿಸಿ ಗುತ್ತಿಗೆ ಆಧಾರಿತ ಗ್ರಂಥಾಲಯ ಮೇಲ್ವಿಚಾರಕ ರೇವಣ್ಣ ಕುಮಾರ್‌ ಆತ್ಮಹತ್ಯೆ ಯತ್ನ ನಡೆಸಿದ ಬೆನ್ನಲ್ಲೇ ಮಂಗಳವಾರ ನೂರಾರು ಸಿಬ್ಬಂದಿ ವಿಧಾನಸೌಧದ ಪೂರ್ವದ್ವಾರದ ಎದುರು ದಿಢೀರ್‌ ಪ್ರತಿಭಟನೆ ನಡೆಸಿದರು.

ಅನುಮತಿ ಪಡೆಯದೇ ಏಕಾಏಕಿ ಪ್ರತಿಭಟನೆ ನಡೆಸಿದ ಕಾರಣ ವಿಧಾನಸೌಧ ಮುಂದೆ ಸ್ವಲ್ಪ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ ಕೇಂದ್ರ ವಿಭಾಗದ ಡಿಸಿಪಿ ಡಿ.ದೇವರಾಜ್‌ ಮತ್ತು ಸಿಬ್ಬಂದಿ ಲಾಠಿ ಪ್ರಹಾರ ನಡೆಸಿ, ಪ್ರತಿಭಟನಾಕಾರರನ್ನು ಚದುರಿಸಿ ಪರಿಸ್ಥಿತಿ ನಿಯಂತ್ರಿಸಿದರು. ಅಲ್ಲದೆ, 3-4 ಬಸ್‌ಗಳಲ್ಲಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಕರೆದೊಯ್ದರು.

ರಾಜ್ಯದಲ್ಲಿ ಆರೂವರೆ ಸಾವಿರಕ್ಕೂ ಹೆಚ್ಚು ಮಂದಿ ಗುತ್ತಿಗೆ ಆಧಾರಿತ ಗ್ರಂಥಾಲಯ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಸರ್ಕಾರ ಕನಿಷ್ಠ ವೇತನ ಜಾರಿ ಮಾಡಿಲ್ಲ. ಕೇವಲ ಏಳು ಸಾವಿರ ಗೌರವಧನ ನೀಡುತ್ತಿದೆ. ಇದರಲ್ಲಿ ಕುಟುಂಬ ನಿರ್ವಹಣೆ ಸಾಧ್ಯವಿಲ್ಲ. ಹೀಗಾಗಿ ನೊಂದ ಸಹೋದ್ಯೋಗಿ ವಿಧಾನಸೌಧದಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಸರ್ಕಾರ ಕನಿಷ್ಠ ವೇತನ ಜಾರಿ ಮಾಡಬೇಕು, ಇಲ್ಲವಾದರೆ ಎಲ್ಲ ಸಿಬ್ಬಂದಿ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಬೆಳಗ್ಗೆಯಷ್ಟೇ ವಿಧಾನಸೌಧ ಮುಂಭಾಗ ವಾಲ್ಮೀಕಿ ಸಮುದಾಯದವರು ಪ್ರತಿಭಟನೆ ನಡೆಸಿದ್ದರಿಂದ ಶಕ್ತಿಸೌಧದ ಎದುರು ಸಾವಿರಾರು ಮಂದಿ ಪೊಲೀಸರು ನಿಯೋಜನೆಗೊಂಡಿದ್ದರು. ಮಧ್ಯಾಹ್ನ ಒಂದು ಗಂಟೆ ವೇಳೆಗೆ ಈ ಪ್ರತಿಭಟನೆ ಮುಕ್ತಾಯಗೊಳ್ಳುತ್ತಿದ್ದಂತೆ, ಮೂರು ಗಂಟೆ ಸುಮಾರಿಗೆ ನೂರಾರು ಮಂದಿ ಗ್ರಂಥಾಲಯ ಸಿಬ್ಬಂದಿ ಏಕಾಏಕಿ ಪೂರ್ವದ್ವಾರದ ಗೇಟ್‌ ಮುಂದೆ ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಇದರಿಂದ ಒಂದು ಕ್ಷಣ ಅಚ್ಚರಿಗೊಂಡ ಪೊಲೀಸರು ಕೂಡಲೇ ಹೆಚ್ಚುವರಿ ಪೊಲೀಸ್‌ ಸಿಬ್ಬಂದಿಯನ್ನು ಕರೆಸಿಕೊಂಡು ಲಾಠಿ ಪ್ರಹಾರ ನಡೆಸಿದರು.

ಆತ್ಮಹತ್ಯೆ ಯತ್ನ – 27 ಕ್ಕೆ ಸಿಎಸ್‌ ಸಭೆ: ವಿಧಾನಸೌಧದಲ್ಲಿ ರೇವಣ ಕುಮಾರ್‌ ಎನ್ನುವವರು ಆತ್ಮಹತ್ಯೆಗೆ ಪ್ರಯತ್ನಿಸಿದ ಹಿನ್ನೆಲೆಯಲ್ಲಿ ಭದ್ರತೆ ಕುರಿತು ಚರ್ಚಿಸಲು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಜೂನ್‌ 27 ರಂದು ಸಂಬಂಧ ಪಟ್ಟ ಇಲಾಖೆಗಳ ಅಧಿಕಾರಿಗಳ ಸಭೆ ಕರೆದಿದ್ದಾರೆ.

ವಿಧಾನಸೌಧ ಭದ್ರತೆಗೆ ಸಾಕಷ್ಟು ಆದ್ಯತೆ ನೀಡಿದ್ದರೂ, ಆತ್ಮಹತ್ಯೆಯ ಪ್ರಯತ್ನ ನಡೆದಿರುವುದು ಭದ್ರತಾ ಲೋಪದ ಆರೋಪ ಕೇಳಿ ಬರುತ್ತಿದೆ. ಹೀಗಾಗಿ ಗೃಹ ಇಲಾಖೆ ಕಾರ್ಯದರ್ಶಿ, ವಿಧಾನಸಭೆ ಕಾರ್ಯದರ್ಶಿ ಹಾಗೂ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿಗಳು ಮತ್ತು ರಾಜ್ಯ ಸರ್ಕಾರದ ಮುಖ್ಯ ಸಚೇತಕರ ಸಭೆ ಕರೆದಿದ್ದಾರೆ. ಮುಂದಿನ ದಿನಗಳಲ್ಲಿ ವಿಧಾನಸೌಧಕ್ಕೆ ಸಾರ್ವಜನಿಕರ ಪ್ರವೇಶ, ತಪಾಸಣೆ ಹಾಗೂ ಭದ್ರತೆ ಕುರಿತಂತೆ ಸಭೆಯಲ್ಲಿ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ