ಅಂತೂ ಮನ್ಸೂರ್‌ ಎಸ್‌ಐಟಿ ವಶಕ್ಕೆ

Team Udayavani, Aug 4, 2019, 3:10 AM IST

ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್‌ ಖಾನ್‌ ಬಂಧನದ ಬಳಿಕ, ಕೊನೆಗೂ ಎಸ್‌ಐಟಿ, ಆತನನ್ನು ತನ್ನ ಸುಪರ್ದಿಗೆ ಪಡೆದುಕೊಂಡಿದೆ. ಆರೋಪಿಯನ್ನು ಎಸ್‌ಐಟಿ ಸುಪರ್ದಿಗೆ ನೀಡದೆ ತನ್ನ ಬಳಿಯೇ ಇರಿಸಿಕೊಂಡಿದ್ದ ಜಾರಿ ನಿರ್ದೇಶನಾಲಯ, ಬೆಂಗಳೂರು ಪೊಲೀಸರನ್ನು ಸತಾಯಿಸುತ್ತಿದೆ ಎಂಬ ಆರೋಪವೂ ಕೇಳಿಬಂದಿತ್ತು.

ಈ ಹಿನ್ನೆಲೆಯಲ್ಲಿ ಶನಿವಾರ ಮನ್ಸೂರ್‌ ಖಾನ್‌ನನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಮನ್ಸೂರ್‌ ಖಾನ್‌ ವಿಚಾರಣೆ ಮಹತ್ವ ಪಡೆದುಕೊಳ್ಳಲಿದೆ. ಜು.20ರಿಂದ ಜಾರಿ ನಿರ್ದೇಶನಾಲಯದ ವಶದಲ್ಲಿದ್ದ ಆರೋಪಿ ಮನ್ಸೂರ್‌ ಖಾನ್‌ನನ್ನು ಆ.1ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಅದರ ಬೆನ್ನಲ್ಲೇ ವಿಶೇಷ ತನಿಖಾ ತಂಡದ ಅಧಿಕಾರಿಗಳು ಬಾಡಿ ವಾರೆಂಟ್‌ ಮೂಲಕ ಆರೋಪಿಯನ್ನು ವಶಕ್ಕೆ ನೀಡುವಂತೆ ಶುಕ್ರವಾರ ಅರ್ಜಿ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಶನಿವಾರ ಮಧ್ಯಾಹ್ನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಆರೋಪಿಯನ್ನು ಬಿಗಿ ಭದ್ರತೆಯಲ್ಲಿ ಮೈಸೂರು ಬ್ಯಾಂಕ್‌ ವೃತ್ತದ ಸಮೀಪ ಇರುವ ಸೆಷನ್ಸ್‌ ಕೋರ್ಟ್‌ ಆವರಣದಲ್ಲಿರುವ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ನಂತರ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌, ಆ.16ರವರೆಗೆ ಆರೋಪಿಯನ್ನು ಎಸ್‌ಐಟಿ ವಶಕ್ಕೆ ನೀಡಿ ಆದೇಶಿಸಿದೆ. ನಂತರ ಆರೋಪಿಯನ್ನು ಸಿಐಡಿ ಕಚೇರಿ ಆವರಣದಲ್ಲಿರುವ ಎಸ್‌ಐಟಿ ಕಚೇರಿಗೆ ಕರೆದೊಯ್ಯಲಾಯಿತು.

ಅನಿವಾರ್ಯವಾಗಿದ್ದ ಖಾನ್‌: ಜೂನ್‌ 8ರಂದೇ ಮನ್ಸೂರ್‌ ಖಾನ್‌ ದೇಶ ಬಿಟ್ಟು ತೆರಳಿದ್ದ. ಈ ವಿಚಾರ ತಿಳಿದ ಸಾವಿರಾರು ಮಂದಿ ಹೂಡಿಕೆದಾರರು ಜೂನ್‌ 10ರಂದು ಶಿವಾಜಿನಗರದಲ್ಲಿರುವ ಐಎಂಎ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದರು.

ಈ ನಡುವೆ ಆರೋಪಿ ಅಜ್ಞಾತ ಸ್ಥಳದಲ್ಲಿ ಕೂತು ವಿಡಿಯೋ ಬಿಡುಗಡೆ ಮಾಡಿದ್ದ ಆತ, ಶಿವಾಜಿನಗರದ ಅನರ್ಹ ಶಾಸಕ ಆರ್‌.ರೋಷನ್‌ ಬೇಗ್‌ ಸೇರಿ ಕೆಲ ರಾಜಕೀಯ ಮುಖಂಡರು ಹಾಗೂ ಸರ್ಕಾರಿ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದ. ಈ ಸಂಬಂಧ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಜೂನ್‌ 12ರಂದು ಹಿರಿಯ ಐಪಿಎಸ್‌ ಅಧಿಕಾರಿ ಬಿ.ಆರ್‌.ರವಿಕಾಂತೇಗೌಡರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿತ್ತು.

ಅದರ ಬೆನ್ನಲ್ಲೇ ಎಸ್‌ಐಟಿ ಏಳು ಮಂದಿ ಸಂಸ್ಥೆಯ ನಿರ್ದೇಶಕರು, ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ, ಬಿಬಿಎಂಪಿ ನಾಮನಿರ್ದೇಶಿತ ಸದಸ್ಯರು, ಮೌಲ್ವಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿತ್ತು. ಆದರೂ ಮನ್ಸೂರ್‌ ಖಾನ್‌ ಸುಳಿವು ಸಿಕ್ಕಿರಲಿಲ್ಲ. ಆದರೆ, ಆರೋಪಿ ರಾಜಕೀಯ ದಿಗ್ಗಜರ ಹೆಸರು ಪ್ರಸ್ತಾಪಿಸಿದ್ದರಿಂದ ಅಚ್ಚರಿಗೊಂಡಿದ್ದ ಎಸ್‌ಐಟಿಗೆ ಆರೋಪಿಯ ಬಂಧನ ಅನಿವಾರ್ಯವಾಗಿತ್ತು.

ಹೀಗಾಗಿ ಹಲವು ಆಯಾಮಗಳಲ್ಲಿ ಕಾರ್ಯಾಚರಣೆ ಕೈಗೊಂಡಿದ್ದ ಎಸ್‌ಐಟಿ ಬ್ಲೂಕಾರ್ನರ್‌ ನೋಟಿಸ್‌ ಸಹ ಹೊರಡಿಸಿತ್ತು. ಈ ಮಧ್ಯೆ ಕೆಲ ದಿನಗಳ ಹಿಂದೆ ಮನ್ಸೂರ್‌ ಖಾನ್‌ ವಿಡಿಯೋ ಬಿಡುಗಡೆ ಮಾಡಿ ಪೊಲೀಸ್‌ ಭದ್ರತೆ ಕೊಟ್ಟರೆ, ಭಾರತಕ್ಕೆ ಮರಳುವುದಾಗಿ ಹೇಳಿಕೊಂಡಿದ್ದ. ಮತ್ತೂಂದೆಡೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತೆರೆಮರೆಯಲ್ಲೇ ಆರೋಪಿಯ ಆರೋಪಿಯ ಚಲವಲನಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದ ಜಾರಿ ನಿರ್ದೇಶನಾಲಯ ಆರೋಪಿ ವಿರುದ್ಧ ಸ್ವಯಂ ಪ್ರೇರಿತವಾಗಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ-2002 (ಪಿಎಂಎಲ್‌ಎ)ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗಿಳಿದಿತ್ತು.

ಫ‌ಲಿಸದ ಎಸ್‌ಐಟಿ ಶ್ರಮ: ಆರೋಪಿಯ ಚಲನವಲನಗಳ ಮಾಹಿತಿ ಪಡೆದುಕೊಂಡಿದ್ದ ಎಸ್‌ಐಟಿಯ ಇಬ್ಬರು ಡಿವೈಎಸ್‌ಪಿ ನೇತೃತ್ವದ ಅಧಿಕಾರಿಗಳು ತಂಡ ಕೆಲ ನಿಯಮಗಳನ್ನು ಉಲ್ಲಂಘಿಸಿ ದುಬೈಗೆ ತೆರಳಿ ಆರೋಪಿಯನ್ನು ಮನವೊಲಿಸಿ ಮೊದಲು ವಶಕ್ಕೆ ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಅಲ್ಲದೆ, ಆರೋಪಿ ವಾಪಸ್‌ ಬರುತ್ತಿದ್ದ ವಿಮಾನದಲ್ಲೇ ಪೊಲೀಸ್‌ ಅಧಿಕಾರಿಗಳು ಬರುತ್ತಿದ್ದು, ದೆಹಲಿ ಅಥವಾ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಲು ಸಿದ್ಧತೆ ನಡೆಸಿದ್ದರು. ಅಷ್ಟರಲ್ಲಿ ವಲಸೆ ಅಧಿಕಾರಿಗಳಿಂದ ಮಾಹಿತಿ ಪಡೆದ ಇಡಿ ಅಧಿಕಾರಿಗಳನ್ನು ಆರೋಪಿಯನ್ನು ವಶಕ್ಕೆ ಪಡೆದುಕೊಂಡು, ಮಾಜಿ ಸಚಿವ ಜಮೀರ್‌ ಅಹ್ಮದ್‌ ಹಾಗೂ ಕೆಲ ವ್ಯಕ್ತಿಗಳನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದೆ.

ನಂತರ ಆರೋಪಿಯನ್ನು ವಶಕ್ಕೆ ಪಡೆಯಲು ಕೋರ್ಟ್‌ ಮೂಲಕವೂ ಯತ್ನಿಸಲಾಗಿತ್ತು. ಆದರೆ, ಸಾಧ್ಯವಾಗಲಿಲ್ಲ. ಮತ್ತೂಂದೆಡೆ ಎಸ್‌ಐಟಿಯ ನಿಯಮ ಉಲ್ಲಂಘನೆಗಳೇ ಅದಕ್ಕೆ ಮುಳುವಾಗಿತ್ತು. ಹೀಗಾಗಿ ಅಂತಿಮ ಹಂತದವರೆಗೆ ಕಾಯುತ್ತಿದ್ದ ಎಸ್‌ಐಟಿ ಆ.1ರಂದು ಇಡಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಿದ್ದಂತೆ ಬಾಡಿ ವಾರೆಂಟ್‌ ಅರ್ಜಿ ಸಲ್ಲಿಸಿ ಇದೀಗ 14 ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ