ಪಿಲ್ಲರ್‌ ಪರಿಶೀಲನೆಗೆ ಮೇಯರ್‌ ಪತ್ರ

Team Udayavani, Apr 26, 2019, 12:26 PM IST

ಬೆಂಗಳೂರು: ನಿತ್ಯ ಲಕ್ಷಾಂತರ ಜನ ಸಂಚರಿಸುವ ನಮ್ಮ ಮೆಟ್ರೋ ಕಂಬಗಳಲ್ಲಿ ಇತ್ತೀಚೆಗೆ ಬಿರುಕುಗಳು ಕಾಣಿಸಿ ಕೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ನಮ್ಮ ಮೆಟ್ರೋದ ಕಂಬಗಳ ಸದೃಢತೆಯ ಬಗ್ಗೆ ಅನುಮಾನ ಮೂಡಿಸಿದೆ.
ಕೆಲವು ದಿನಗಳ ಹಿಂದೆ ಟ್ರೀನಿಟಿ ವೃತ್ತದ ಬಳಿಯ ಕಂಬದಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೆಟ್ರೋ ಪ್ರಯಾಣಿಕರಲ್ಲಿ ತೀವ್ರ ಆತಂಕ ಮೂಡಿತ್ತು. ಇದೀಗ ಜಯನಗರ ಬಳಿ ಮತ್ತೂಂದು ಕಂಬದಲ್ಲಿ ಬಿರುಕು ಕಾಣಿಸಿಕೊಂಡಿರುವುದರಿಂದ ಜನರು ಮೆಟ್ರೋ ಪ್ರಯಾಣಕ್ಕೆ ಹೆದರುವಂತಹ ವಾತಾವರಣ ನಿರ್ಮಾಣವಾಗಿದೆ.
ನಗರದಲ್ಲಿ ಮೆಟ್ರೋಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ. ಪ್ರತಿನಿತ್ಯ ಬೆಳಗ್ಗೆಯಿಂದ ರಾತ್ರಿ 11 ಗಂಟೆಯವರೆಗೆ ಮೆಟ್ರೋದಲ್ಲಿ ಲಕ್ಷಾಂತರ ಮಂದಿ ಪ್ರಯಾಣಿಸುತ್ತಾರೆ. ಆದರೆ, ಮೆಟ್ರೋ ನಿಗಮ ಮಾತ್ರ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸದಿರುವ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿವೆ.
ಹೀಗಾಗಿ, ಮೆಟ್ರೋ ಕಂಬಗಳಲ್ಲಿ ಬಿರುಕು ಕಾಣಿಸಿಕೊಳ್ಳುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ ಮೇಯರ್‌ ಗಂಗಾಂಬಿಕೆ, ಮೆಟ್ರೋ ಮಾರ್ಗದ ಎಲ್ಲ ಕಂಬಗಳನ್ನು ಪರಿಶೀಲಿಸಿ ಬಿರುಕು ಕಾಣಿಸಿಕೊಂಡಿರುವ ಕಂಬಗಳ ತ್ವರಿತ ದುರಸ್ತಿಪಡಿಸುವಂತೆ ಬಿಎಂಆರ್‌ಸಿಎಲ್‌ಗೆ ಪತ್ರ ಬರೆದಿದ್ದಾರೆ. ಈ ಹಿಂದೆ ಟ್ರೀನಿಟಿ ವೃತ್ತದ ಬಳಿ ಬಿರುಕು ಕಾಣಿಸಿಕೊಂಡು ನಗರದ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಕೆಲ ದಿನಗಳ ಕಾಲ ಆ ಮಾರ್ಗದ ಮೇಟ್ರೋ ಓಡಾಟ ನಿಲ್ಲಿಸಿ ಬಿರುಕು ಸರಿಪಡಿಸಲಾಗಿತ್ತು.
ಇದೀಗ ಮತ್ತೆ ಹಸಿರು ಮಾರ್ಗದ ಸೌತ್‌ ಎಂಡ್‌ ಸರ್ಕಲ್‌ ಬಳಿಯ ಎರಡು ಪಿಲ್ಲರ್‌ಗಲ್ಲಿ ಬಿರುಕು ಕಾಣಿಸಿಕೊಂಡಿದೆ.
ಸೌತ್‌ ಎಂಡ್‌ ಸರ್ಕಲ್‌ ಮೆಟ್ರೋ ಪಿಲ್ಲರ್‌ ಸಂಖ್ಯೆ 66 ಮತ್ತು 67ರಲ್ಲಿ ಬಿರುಕು ಬಿಟ್ಟಿದ್ದು, ನಿಗಮದ ಅಧಿಕಾರಿಗಳು ಪಿಲ್ಲರ್‌ಗಳನ್ನು ಸರಿಪಡಿಸಿದ್ದಾರೆ. ಪದೇ ಪದೆ ಇಂತಹ ಘಟನೆಗಳು ನಡೆದರೆ ಪ್ರಯಾಣಿಕರಲ್ಲಿ ಆತಂಕ ಹೆಚ್ಚಲಿದ್ದು, ನಿಗಮವು ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ತಿಳಿಸಿದ್ದಾರೆ.
ಮೆಟ್ರೋ ನಿಗಮವು ಕೂಡಲೇ ನುರಿತ ತಜ್ಞರನ್ನು ನಿಯೋಜಿಸಿಕೊಂಡು ಎಲ್ಲ ಕಂಬಗಳ ತಪಾಸಣೆ ನಡೆಸಿ
ತೊಂದರೆಯಿರುವ ಕಂಬಗಳನ್ನು ದುರಸ್ತಿಪಡಿಸಬೇಕು. ಜತೆಗೆ ಮೆಟ್ರೋ ನಿಲ್ದಾಣಗಳ ಕಟ್ಟಡದಲ್ಲಿ ಎಲ್ಲಾದರು ಬಿರುಕು ಬಿಟ್ಟಿದೆಯೇ ಎಂಬುದನ್ನು ಪರಿಶೀಲಿಸಿ ಸರಿಪಡಿಸಲು ಮುಂದಾಗ ಬೇಕು ಎಂದು ಪತ್ರದಲ್ಲಿ ಹೇಳಿದ್ದಾರೆ.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ