ಮಹಾನಗರ ಪಾಲಿಕೆ ಅಧಿಕಾರವೂ ಬಿಜೆಪಿಗೆ!

Team Udayavani, Jul 9, 2019, 3:08 AM IST

ಬೆಂಗಳೂರು: ರಾಜ್ಯ ರಾಜಕೀಯದಲ್ಲಿನ “ರಾಜೀನಾಮೆ ಪರ್ವ’ ಬಿಬಿಎಂಪಿಯ ಮುಂದಿನ ಮೇಯರ್‌ ಚುನಾವಣೆ ಮೇಲೆ ಪರಿಣಾಮ ಬೀರುವ ಎಲ್ಲ ಸಾಧ್ಯತೆ ಕಾಣಿಸುತ್ತಿದೆ. ಕಾಂಗ್ರೆಸ್‌ನ ನಾಲ್ವರು ಶಾಸಕರು (ರಾಮಲಿಂಗಾ ರೆಡ್ಡಿ, ಮುನಿರತ್ನ, ಎಸ್‌.ಟಿ.ಸೋಮಶೇಖರ್‌ ಮತ್ತು ಬೈರತಿ ಬಸವರಾಜು) ಪಾಲಿಕೆಯಲ್ಲಿ ಮೈತ್ರಿ ಸರ್ಕಾರ ಅಧಿಕಾರ ನಡೆಸಲು ಆಧಾರವಾಗಿದ್ದರು.

ಅಷ್ಟೇ ಅಲ್ಲ, ಎಸ್‌.ಟಿ.ಸೋಮಶೇಖರ್‌, ಬೈರತಿ ಬಸವರಾಜು ಮತ್ತು ಮುನಿರತ್ನ ಅವರನ್ನು ತ್ರಿಮೂರ್ತಿಗಳು ಎಂದೇ ಕರೆಯಲಾಗುತ್ತಿತ್ತು. ಈಗ ಈ ನಾಯಕರು ರಾಜೀನಾಮೆ ನೀಡಿದ್ದು, ಇವರ ಜತೆಗೆ ಜೆಡಿಎಸ್‌ನ ಶಾಸಕ ಗೋಪಾಲಯ್ಯ ಅವರೂ ರಾಜೀನಾಮೆ ನೀಡಿರುವುದು ಪಾಲಿಕೆಯ ಮೈತ್ರಿ ಸರ್ಕಾರದ ಮೇಲೂ ಮಂಕುಕವಿದಿದೆ.

ಸೆ.28ರಂದು ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಅವರ ಆಡಳಿತಾವಧಿ ಮುಕ್ತಾಯವಾಗಲಿದೆ. ಒಂದೊಮ್ಮೆ ಶಾಸಕರ ರಾಜೀನಾಮೆ ಅಂಗೀಕಾರವಾಗಿ ಇವರ ನಿಲುವುಗಳು ಬದಲಾದರೆ, ಒಂದುವರೆ ತಿಂಗಳಲ್ಲಿ ನಡೆಯಲಿರು ಮೇಯರ್‌ ಚುನಾವಣೆಯ ನೇರ ಲಾಭ ಬಿಜೆಪಿಗೆ ಆಗಲಿದೆ. ಇದರೊಂದಿಗೆ ಶಾಸಕರ ಆಪ್ತರೂ ಸಹ ಮೇಯರ್‌ ಚುನಾವಣೆಯಲ್ಲಿ ಮೈತ್ರಿಗೆ ವಿರುದ್ಧವಾಗಿ ಮತ ಚಲಾಯಿಸುವ ಅಪಾಯವಿರುವುದು ಪಾಲಿಕೆ ಮೈತ್ರಿ ಸದಸ್ಯರ ನಿದ್ದೆಗೆಡಿಸಿದೆ.

ಈ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಒಟ್ಟು 45 ವಾರ್ಡ್‌ಗಳಿವೆ. ಎಲ್ಲರೂ ಆಯಾ ಶಾಸಕರ ಬೆಂಬಲಿಗರೇ ಆಗಿರುವುದು ಸಹಜವಾಗೇ ಬಿಜಿಪಿಗೆ ಲಾಭ ತಂದುಕೊಡಲಿದೆ ಎಂದು ಹೇಳಲಾಗುತ್ತಿದೆ. ಇದರ ಜತೆಗೆ ರಾಜ್ಯದಲ್ಲಿ ಮೈತ್ರಿ ಸರ್ಕಾರವಿಲ್ಲದಿದ್ದರೆ ಪಾಲಿಕೆಯಲ್ಲೂ ಮೈತ್ರಿ ಸರ್ಕಾರ ಮುಂದುವರಿಸಿಕೊಂಡು ಹೋಗುವುದು ಸವಾಲಿನ ಕೆಲಸ ಎಂದು ಕೆಲವು ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.

ಇಂದಿರಾ ಕ್ಯಾಂಟೀನ್‌ ವಿಷಯ ಪ್ರಸ್ತಾಪ: ಇತ್ತೀಚೆಗೆ ನಡೆದ ಕೌನ್ಸಿಲ್‌ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್‌ನ ಜನಪ್ರಿಯ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್‌ನ ಟೆಂಡರ್‌ ಕುರಿತು ಶಾಸಕ ಮುನಿರತ್ನ ಪ್ರಸ್ತಾಪಿಸಿದ್ದರು. ಪ್ರಸ್ತುತ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಗೂ, ಅಂದು ಶಾಸಕರು ಪ್ರಸ್ತಾಪಿಸಿದ ವಿಷಯಕ್ಕೂ ನಂಟಿದೆ ಎನ್ನಲಾಗಿದ್ದು, ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ್ದ ಮುನಿರತ್ನ “ಇಂದಿರಾ ಕ್ಯಾಂಟೀನ್‌ನಲ್ಲಿ 100 ಜನ ಸಹ ಊಟ ಮಾಡುತ್ತಿಲ್ಲ. ಇದರ ಟೆಂಡರ್‌ ಬದಲಾಯಿಸಿ’ ಎಂದು ಮನವಿ ಮಾಡಿದ್ದರು. ಅದಕ್ಕೆ ಪಾಲಿಕೆಯ ವಿರೋಧ ಪಕ್ಷದ ನಾಯಕರೂ ಧ್ವನಿ ಗೂಡಿಸಿದ್ದರು. ಸಾಮಾನ್ಯ ಸಭೆಯಿಂದ ಹೊರನಡೆಯುವ ಮುನ್ನ 20 ನಿಮಿಷಕ್ಕೂ ಹೆಚ್ಚು ಹೊತ್ತು ಪಾಲಿಕೆ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಅವರ ಪಕ್ಕದಲ್ಲೇ ಕುಳಿತಿದ್ದ ಶಾಸಕ ಮುನಿರತ್ನ, ಸುದೀರ್ಘ‌ ಚರ್ಚೆಯಲ್ಲಿ ತೊಡಗಿದ್ದರು.

ರೆಡ್ಡಿ ಬಂದರೆ ನಾನು ಬರುತ್ತೇನೆ ಎಂದಿದ್ದರು: ರಾಮಲಿಂಗಾರೆಡ್ಡಿ ಅವರು ರಾಜೀನಾಮೆ ನೀಡಿದರೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಮುನಿರತ್ನ ಅವರು ತಮ್ಮ ಆಪ್ತ ವಲಯದಲ್ಲಿ ಹೇಳಿಕೊಂಡಿದ್ದರು ಎನ್ನಲಾಗಿದೆ. ಆದರೆ, ರಾಮಲಿಂಗಾರೆಡ್ಡಿ ಅವರು ರಾಜೀನಾಮೆ ನೀಡುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ಮೈತ್ರಿ ಸರ್ಕಾರಕಷ್ಟೇ ಅಲ್ಲ, ಖುದ್ದು ಪಾಲಿಕೆಯ ಬಿಜೆಪಿ ಸದಸ್ಯರಿಗೂ ಅಚ್ಚರಿ ಮೂಡಿಸಿದೆ.

ಪರಮೇಶ್ವರ್‌ ಬಗ್ಗೆ ಅಸಮಾಧಾನ?: ನಗರಾಭಿವೃದ್ಧಿ ಸಚಿವರಾಗಿರುವ ಡಾ.ಜಿ.ಪರಮೇಶ್ವರ್‌ ಅವರು ಬೆಂಗಳೂರಿನ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳವಲ್ಲಿ ವಿಫ‌ಲರಾದರು ಎಂಬ ಆರೋಪ ಕೇಳಿಬಂದಿದೆ. ಬೆಂಗಳೂರಿನ ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ಈ ಹಿಂದೆ ರಾಮಲಿಂಗಾರೆಡ್ಡಿ ಅವರ ಅಭಿಪ್ರಾಯ ಕೇಳಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಪರಮೇಶ್ವರ್‌ ಅವರು ಮುನ್ನಡೆ ಸಾಧಿಸಿತ್ತಿದ್ದದ್ದು ಕೂಡ ರೆಡ್ಡಿ ಅವರ ಅಸಮಾಧಾನಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.

ಬೆಂಗಳೂರಿನ ಪ್ರತಿ ಗಲ್ಲಿಯೂ ನನಗೆ ಗೊತ್ತು: ಪರಮೇಶ್ವರ್‌
ಬೆಂಗಳೂರಿನ ಪ್ರತಿಯೊಂದು ಗಲ್ಲಿಯೂ ನನಗೆ ಗೊತ್ತು ಎಂದು ತಮ್ಮ ವಿರುದ್ಧ ಅಸಮಾಧಾನ ಹೊರ ಹಾಕಿರುವ ಅತೃಪ್ತ ಶಾಸಕರಿಗೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ತಿರುಗೇಟು ನೀಡಿದ್ದು, ಜನಪ್ರತಿನಿಧಿ ಯಾವ ಜಿಲ್ಲೆಯವರಾದರೇನು ಅವರಿಗೆ ಸಾಮರ್ಥ್ಯ ಮುಖ್ಯ ಎಂದು ಹೇಳಿದ್ದಾರೆ.

ಬೆಂಗಳೂರಿನ ಶಾಸಕರು ತಮ್ಮ ವಿರುದ್ಧ ಅಸಮಾಧಾನ ಹೊರ ಹಾಕಿ ಬೆಂಗಳೂರು ಉಸ್ತುವಾರಿ ಜವಾಬ್ದಾರಿ ಹಿಂಪಡೆಯಬೇಕೆಂದು ಒತ್ತಡ ಹೇರುತ್ತಿದ್ದಾರೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, “ನಾನು 1971 ರಲ್ಲೇ ಬೆಂಗಳೂರಿಗೆ ಬಂದಿದ್ದೇನೆ. ಬೆಂಗಳೂರಿನ ಪ್ರತಿ ಗಲ್ಲಿಯೂ ನನಗೆ ಗೊತ್ತು. ಜನಪ್ರತಿನಿಧಿ ಆದವರಿಗೆ ಯಾವುದೋ ಒಂದು ಜಿಲ್ಲೆಯಿಂದ ಬರುತ್ತಾರೆ ಎನ್ನುವ ಮಾನದಂಡ ಏಕೆ?. ಜನಪ್ರತಿನಿಧಿ ಆದವರಿಗೆ ಯಾವ ಜಿಲ್ಲೆಯಾದರೇನು?. ಹಲವು ಬಾರಿ ಬೆಂಗಳೂರಿನ ಶಾಸಕರ ಸಭೆ ನಡೆಸಿದ್ದೇನೆ.

ಸಭೆಗೆ ಯಾರ್ಯಾರು ಶಾಸಕರು ಬಂದಿದ್ದರು ಎನ್ನುವ ಮಾಹಿತಿ ನನ್ನ ಬಳಿ ಇದೆ. ಬೆಂಗಳೂರಿಗೆ 11 ಸಾವಿರ ಕೋಟಿ ರೂಪಾಯಿ ನೀಡಲಾಗಿದೆ. ಕಳೆದ ಬಾರಿಗಿಂತಲೂ ಈ ಬಾರಿ ಶಾಸಕರಿಗೆ ಹೆಚ್ಚು ಅನುದಾನ ನೀಡಲಾಗಿದೆ’ ಎಂದು ಅತೃಪ್ತರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಇದೇ ವೇಳೆ, ಅತೃಪ್ತ ಶಾಸಕರನ್ನು ಮುಂಬೈಗೆ ಕಳುಹಿಸಲು ರಾಜ್ಯಪಾಲರು ಪೊಲೀಸ್‌ ಭದ್ರತೆ ಒದಗಿಸಲು ಸೂಚಿಸಿರುವ ಬಗ್ಗೆಯೂ ಪರಮೇಶ್ವರ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ