ಜನ ಸೇವೆಯೆ ನಮ್ಮ ಆದ್ಯತೆ: ಸಚಿವ ವಿ.ಸೋಮಣ್ಣ
Team Udayavani, Oct 12, 2021, 7:55 PM IST
ಬೆಂಗಳೂರು : ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಜವಾಬ್ದಾರಿ ಜನಪ್ರತಿನಿಧಿಗಳ ಮೇಲಿರುತ್ತದೆ. ನಮ್ಮ ಕೆಲಸದಲ್ಲಿ ಶ್ರದ್ದೆ ಇದ್ದರೆ ಮಾತ್ರ ಅಭಿವೃದ್ದಿ ಸಾಧ್ಯ ಎಂದು ಸಚಿವ ವಿ.ಸೋಮಣ್ಣ ಹೇಳಿದರು.
ಇಂದು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ,ಡಾ||ರಾಜ್ ಕುಮಾರ್-106ರಲ್ಲಿ ಮೇಲು ಸೇತುವೆ ಕಾಮಗಾರಿಗಳ ಪರಿಶೀಲನೆ ಮತ್ತು ಗಂಗಮ್ಮ ತಿಮ್ಮಯ್ಯ ಕಲ್ಯಾಣ ಮಂಟಪದ ಬಳಿ ಪುನಶ್ಚೇತನ ಕಾಮಗಾರಿ ಪೂಜೆ ನೆರವೇರಿಸಿ ಮಾತನಾಡಿದ ಸಚಿವರು, ಗೋವಿಂದರಾಜನಗರ, ವಿಜಯನಗರ ಸುತ್ತಮುತ್ತಲ ಪ್ರದೇಶದ ನಾಗರಿಕರ ಅನುಕೂಲಕ್ಕಾಗಿ ಮೇಲು ಸೇತುವೆ ನಿರ್ಮಿಸಲಾಗಿದೆ. ಇದ್ದರಿಂದ ವಾಹನ ದಟ್ಟಣೆ ಕಡಿಮೆಯಾಗಲಿದೆ ಎಂದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಉತ್ತಮ ರಸ್ತೆ, ಮಾದರಿ ಪುಟ್ ಪಾತ್ ಹಾಗೂ ಜನ ಸಾಮಾನ್ಯರಿಗೆ ಉತ್ತಮ ಆರೋಗ್ಯಕ್ಕಾಗಿ ದಾಸರಹಳ್ಳಿ ವಾರ್ಡ್ ನಲ್ಲಿ 200 ಬೆಡ್ ಗಳ ಹೈಟೆಕ್ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಈ ಕ್ಷೇತ್ರದಲ್ಲಿ ಹಲವು ಯೋಜನೆಗಳ ಕಾಮಗಾರಿಗಳು ನಡೆಯುತ್ತಿದ್ದು, ಮೂರು ತಿಂಗಳ ಒಳಗೆ ಕಾಮಗಾರಿಗಳನ್ನ ಮುಗಿಸಲು ಅಧಿಕಾರಿಗಳಿಗೆ ಆದೇಶ ನೀಡಿದ್ದೇನೆ ಎಂದು ಹೇಳಿದರು.