ಅ.5ರೊಳಗೆ ಮಾನದಂಡ ರೂಪಿಸಲು ಸಚಿವರ ಸೂಚನೆ
Team Udayavani, Sep 29, 2018, 12:27 PM IST
ಬೆಂಗಳೂರು: ಮೃತ ರೈತರ ಒಂದು ಲಕ್ಷ ರೂ.ವರೆಗಿನ ಸಾಲ ಮನ್ನಾಗೆ ಸಂಬಂಧಿಸಿದಂತೆ ರಾಜ್ಯ ಅಪೆಕ್ಸ್ ಬ್ಯಾಂಕ್ ಮತ್ತು ಎಲ್ಲ ಡಿಸಿಸಿ ಬ್ಯಾಂಕ್‌ಗಳು ಅ.5ರ ಒಳಗೆ ಮಾನದಂಡಗಳನ್ನು ರೂಪಿಸಿ, ಯೋಜನೆ ಜಾರಿಗೊಳಿಸಬೇಕು ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಸೂಚಿಸಿದರು.
ವಿಕಾಸಸೌಧದಲ್ಲಿ ಶುಕ್ರವಾರ ನಡೆದ ಸಹಕಾರ ಇಲಾಖೆ ಉನ್ನತ ಅಧಿಕಾರಿಗಳು ಮತ್ತು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರು ಹಾಗೂ ಎಲ್ಲ ಡಿಸಿಸಿ ಬ್ಯಾಂಕ್‌ಗಳ ಅಧ್ಯಕ್ಷರೊಂದಿಗಿನ ಸಭೆಯಲ್ಲಿ ಸಚಿವರು ಈ ಸೂಚನೆ ನೀಡಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಬೆಳೆ ಸಾಲ ಪಡೆದು, ಮೃತಪಟ್ಟ ರೈತರ ಒಂದು ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡಲು ಸಮ್ಮಿಶ್ರ ಸರ್ಕಾರ ನಿರ್ಧರಿಸಿದೆ. ಅದರಂತೆ 2018-19ನೇ ಸಾಲಿನ ಸಾಲ ಮನ್ನಾ ಯೋಜನೆಯಲ್ಲಿ ಮೃತ ರೈತರ ಕುಟುಂಬಕ್ಕೆ ಸೌಲಭ್ಯ ಕಲ್ಪಿಸಲು ಆದೇಶಿಸಲಾಗಿದೆ. ಈ ಸಂಬಂಧ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಬರುವ ಅಕ್ಟೋಬರ್ 5ರ ಒಳಗೆ ಈ ಸಂಬಂಧ ಅಪೆಕ್ಸ್ ಬ್ಯಾಂಕ್ ಮತ್ತು ಡಿಸಿಸಿ ಬ್ಯಾಂಕ್‌ಗಳು ತಮ್ಮ ಹಂತದಲ್ಲೇ ಮಾನದಂಡಗಳನ್ನು ರೂಪಿಸಿ, ಯೋಜನೆ ಜಾರಿಗೊಳಿಸಬೇಕು ಎಂದರು. ಸಭೆಯಲ್ಲಿ ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ, ಸಹಕಾರ ಇಲಾಖೆ ನಿಬಂಧಕ ಎಂ.ಕೆ. ಅಯ್ಯಪ್ಪ, ವಿವಿಧ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಭಾಗವಹಿಸಿದ್ದರು.