ಖಾಸಗಿ ಬಸ್‌ ಮಾಲೀಕರಿಗೆ ಕ್ರಮದ ಎಚ್ಚರಿಕೆ

Team Udayavani, Mar 29, 2019, 11:49 AM IST

ಬೆಂಗಳೂರು: ಮತದಾನದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಬೇಕಾಬಿಟ್ಟಿಯಾಗಿ ಪ್ರಯಾಣ ದರ ಹೆಚ್ಚಳ ಮಾಡಬಾರದು ಎಂದು ಖಾಸಗಿ ಬಸ್‌ಗಳ ಮಾಲಿಕರಿಗೆ ಸೂಚನೆ ನೀಡಿರುವ ಸಾರಿಗೆ ಇಲಾಖೆ ಆಯುಕ್ತ ವಿ.ಪಿ.ಇಕ್ಕೇರಿ, ಇಂತಹ ಪ್ರಕರಣಗಳು ಗಮನಕ್ಕೆ ಬಂದಲ್ಲಿ ದಂಡದೊಂದಿಗೆ ಪರವಾನಗಿ ಅಮಾನತು ಅಥವಾ ರದ್ದು ಗೊಳಿಸುವುದಾಗಿ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಮತದಾನ ದಿನದ ಆಸುಪಾಸು ಸಾಲು ರಜೆಗಳು ಬಂದಿವೆ. ಈ ವೇಳೆ ನಗರದಲ್ಲಿ ನೆಲೆಸಿರುವ ಅನೇಕರು ಬೇರೆ ಬೇರೆ ಊರುಗಳಿಗೆ ಹೋಗುತ್ತಾರೆ. ಇದರ ಲಾಭ ಪಡೆಯಲು ಖಾಸಗಿ ಬಸ್‌ ಮಾಲಿಕರು ಬೇಕಾಬಿಟ್ಟಿ ಪ್ರಯಾಣ ದರ ಹೆಚ್ಚಳ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ.

ಈ ಹಿನ್ನೆಲೆಯಲ್ಲಿ ಈಗಾಗಲೇ ಖಾಸಗಿ ಬಸ್‌ ಮಾಲಿಕರೊಂದಿಗೆ ಚರ್ಚಿಸಿ, ಸೂಚನೆ ನೀಡಲಾಗಿದೆ. ಆದಾಗ್ಯೂ ಮನಬಂದಂತೆ ಏರಿಕೆ ಮಾಡುವುದು ಕಂಡುಬಂದರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಬ್ಬ ಅಥವಾ ವಿಶೇಷ ಸಂದರ್ಭಗಳಲ್ಲಿ ಕೆಎಸ್‌ಆರ್‌ಟಿಸಿಯು ಪ್ರಯಾಣ ದರವನ್ನು ಶೇ.20ರಷ್ಟು ಹೆಚ್ಚಿಸಿಕೊಳ್ಳಲು ನಿಯಮದಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ, ಖಾಸಗಿ ಬಸ್‌ಗಳಿಗೆ ಇಂತಹ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸರ್ಕಾರಿ ಬಸ್‌ಗಳಂತೆ ದರ ಏರಿಕೆ ಮಿತಿ ಶೇ.20 ಅನ್ನು ಮೀರದಂತೆ ನಿಗದಿಪಡಿಸಲಿ. ಅದುಬಿಟ್ಟು, ಮೂರ್‍ನಾಲ್ಕು ಪಟ್ಟು ಹೆಚ್ಚಳ ಮಾಡುವುದರಿಂದ ಪ್ರಯಾಣಿಕರ ಮೇಲೆ ಹೊರೆ ಬೀಳಲಿದೆ ಎಂದರು.

ದರ ಏರಿಕೆ ಪ್ರಸ್ತಾವನೆ: ಕೆಎಸ್‌ಆರ್‌ಟಿಸಿ ಶೇ.18ರಿಂದ 20ರಷ್ಟು ಬಸ್‌ ಪ್ರಯಾಣ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ ಬೆನ್ನಲ್ಲೇ ಖಾಸಗಿ ಬಸ್‌ ಪ್ರಯಾಣ ದರವನ್ನೂ ಶೇ.18ರಷ್ಟು ಏರಿಕೆ ಮಾಡುವಂತೆ ಮಾಲಿಕರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಅದನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ.

ಚುನಾವಣೆ ನಂತರ ಈ ಬಗ್ಗೆ ಸ್ಪಷ್ಟ ನಿರ್ಧಾರ ಹೊರಬೀಳಲಿದೆ ಎಂದು ವಿ.ಪಿ. ಇಕ್ಕೇರಿ ತಿಳಿಸಿದರು. 2014ರಿಂದ ಬಸ್‌ಗಳ ದರ ಪರಿಷ್ಕರಣೆ ಆಗಿಲ್ಲ. ಈ ಮಧ್ಯೆ ಡೀಸೆಲ್‌ ದರ ಸಾಕಷ್ಟು ಏರಿಕೆ ಆಗಿದೆ. ವಾರದಲ್ಲಿ ಎರಡು-ಮೂರು ದಿನ ಬಸ್‌ಗಳು ಕಾರ್ಯಾಚರಣೆ ಮಾಡುವುದೇ ಇಲ್ಲ.

ಹೀಗಾಗಿ ನಿರ್ವಹಣಾ ವೆಚ್ಚವೂ ಸಂಗ್ರಹವಾಗುತ್ತಿಲ್ಲ. ದರ ಪರಿಷ್ಕರಣೆ ಮಾಡಬೇಕು ಎಂದು ಖಾಸಗಿ ಬಸ್‌ಗಳ ಮಾಲಿಕರು ಮನವಿ ಮಾಡಿದ್ದಾರೆ. ಈ ಬಗ್ಗೆ ಪರಿಶೀಲಿಸಲಾಗುವುದು. ಇದೆಲ್ಲವೂ ಮಜಲು ವಾಹನಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಹೇಳಿದರು.

ಖಾಸಗಿ ಬಸ್‌ಗಳಿಗೆ ಯಾವುದೇ ಪ್ರಯಾಣ ದರವೇ ನಿಗದಿ ಆಗಿಲ್ಲ. ಹೀಗಿರುವಾಗ, ಯಾವ ಆಧಾರದಲ್ಲಿ ದಂಡ ಅಥವಾ ಶಿಸ್ತು ಕ್ರಮ ಕೈಗೊಳ್ಳುತ್ತೀರಿ ಎಂದು ಕೇಳಿದಾಗ, “ದರ ನಿಗದಿ ಆಗಿಲ್ಲ ಎನ್ನುವುದು ನಿಜ.

ಆದರೆ, ಸಾಮಾನ್ಯ ದಿನಗಳಲ್ಲಿ ಅವರು ವಿಧಿಸುವ ಪ್ರಯಾಣ ದರ ಹಾಗೂ ವಿಶೇಷ ಸಂದರ್ಭಗಳಲ್ಲಿ ವಿಧಿಸುವ ದರ ಮತ್ತು ಸರ್ಕಾರಿ ಬಸ್‌ಗಳ ದರಗಳಿಗೆ ತಾಳೆ ಹಾಕಲಾಗುವುದು. ತುಂಬಾ ವ್ಯತ್ಯಾಸ ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಸ್ಪಷ್ಟಪಡಿಸಿದರು.

1.35 ಕೋಟಿ ರೂ. ದಂಡ ವಸೂಲಿ: ಬೇಕಾಬಿಟ್ಟಿ ಪ್ರಯಾಣದರ ಹೆಚ್ಚಳ ಮಾಡಿದವರ ವಿರುದ್ಧ 2018ರ ನವೆಂಬರ್‌ನಿಂದ 2019ರ ಫೆಬ್ರವರಿ ನಡುವಿನ ಅವಧಿಯಲ್ಲಿ ರಾಜ್ಯ ಸಾರಿಗೆ ಪ್ರಾಧಿಕಾರದಿಂದ ಕಾರ್ಯಾಚರಣೆ ನಡೆಸಿ, 1.35 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ. ಒಟ್ಟಾರೆ 842 ಪ್ರಕರಣಗಳ ತನಿಖೆ ನಡೆಸಿದ್ದು, 584 ರಹದಾರಿ ಅಮಾನತು ಮಾಡಲಾಗಿದೆ. 59 ರಹದಾರಿಗಳನ್ನು ರದ್ದು ಮಾಡಲಾಗಿದೆ ಎಂದು ವಿ.ಪಿ.ಇಕ್ಕೇರಿ ತಿಳಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ನವದೆಹಲಿ: ''ರಾಮಜನ್ಮಭೂಮಿ ಪ್ರಕರಣದ ವಿವಾದಿತ ಸ್ಥಳದಲ್ಲಿ ಶತಮಾನಗಳ ಹಿಂದೆಯೇ ಹಿಂದೂ ದೇಗುಲವಿತ್ತು. ಅದನ್ನು ಕೆಡವಿ ಮಸೀದಿಯನ್ನು ಕಟ್ಟಲಾಗಿತ್ತು. ಇದಕ್ಕೆ ಸಾಕ್ಷಿಯಾಗಿ...

  • ನವದೆಹಲಿ: ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ನಂಥ ಸಾಮಾಜಿಕ ಜಾಲತಾಣಗಳ ಬಳಕೆದಾರರಿಗೆ ತಮ್ಮ ಖಾತೆಗಳೊಂದಿಗೆ ಆಧಾರ್‌ ಸಂಖ್ಯೆ ಜೋಡಿಸುವುದನ್ನು ಕಡ್ಡಾಯ ಮಾಡುವ...

  • ದೇವರೇ, ಬೇವು ಸ್ವಲ್ಪವೇ ಕೊಡು. ಮಡಿಲ ತುಂಬಾ ಬೆಲ್ಲ ನೀಡು. ನಿನ್ನ ಮಡಿಲಲ್ಲಿ ಬೆಳೆ ಬೆಳೆದು ಸಾವಿರಾರು ಜನರಿಗೆ ಅನ್ನ ನೀಡುವ, ನಿನ್ನನ್ನೇ ನಂಬಿದ ಜನರ ಕೈಬಿಡದಿರು....

  • ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಿಂದ ಪಾಕಿಸ್ಥಾನಕ್ಕೆ ಸೆಟಲೈಟ್‌ ಕರೆ ಮಾಡಿರುವ ಕುರಿತು ರಾಷ್ಟ್ರೀಯ ತನಿಖಾ ದಳ ಮತ್ತು ರಾ ಅಧಿಕಾರಿಗಳು ಸ್ಥಳೀಯ...

  • ಸುಬ್ರಹ್ಮಣ್ಯ: ಅನಾರೋಗ್ಯ ದಿಂದ ಬಳಲುತ್ತಿರುವ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಆನೆ ಯಶಸ್ವಿಗೆ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಚಿಕಿತ್ಸೆಗೆ ಆನೆ...