ಮೋಸಕ್ಕೆ ಮೈ ಎಸ್‌ಎಂಎಸ್ ಅಸ್ತ್ರ
Team Udayavani, Oct 16, 2018, 1:44 PM IST
ಬೆಂಗಳೂರು: ಸೈಬರ್ ಅಪರಾಧ ಮಾದರಿಯನ್ನೇ ಬದಲಿಸಿ, “ಮೈ ಎಸ್‌ಎಂಎಸ್’ ಆ್ಯಪ್ ಅನ್ನು ವ್ಯಾಪಾರಿಗಳ ಮೊಬೈಲ್‌ನಲ್ಲಿ ತಾವೇ ಇನ್‌ಸ್ಟಾಲ್ ಮಾಡಿ ವಂಚನೆ ಎಸಗುತ್ತಿದ್ದ ಇಬ್ಬರು ಸೈಬರ್ ವಂಚಕರು, ಪೊಲೀಸರ ಬಲೆಗೆ ಬಿದ್ದಿದ್ದಾರೆ.
ನಾಗರಬಾವಿಯ ವ್ಯಕ್ತಿಯೊಬ್ಬರು ತಮ್ಮ ಬ್ಯಾಂಕ್ ಖಾತೆಯಿಂದ 75 ಸಾವಿರ ರೂ. ಹಣ ವರ್ಗಾವಣೆ ಮಾಡಿಕೊಳ್ಳಲಾಗಿದೆ ಎಂದು ನೀಡಿದ್ದ ಪ್ರಕರಣದ ತನಿಖೆ ನಡೆಸಿ ಸೈಬರ್ ಕ್ರೈಂ ವಿಭಾಗದ ಪೊಲೀಸರು, ಆ್ಯಪ್ ಮೂಲಕ ವಂಚನೆ ಎಸಗುತ್ತಿದ್ದ ಶಿವಮೊಗ್ಗದ ರಾಘವೇಂದ್ರ (24) ಹಾಗೂ ರಾಕೇಶ್ ಕುಮಾರ್ (24) ಎಂಬುವವರನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಒಂದು ಕಾರ್ಡ್ ಸೈಪಿಂಗ್ ಯಂತ್ರ, ಒಂದು ಕಾರು, 7 ಮೊಬೈಲ್ ಪೋನ್ ಎರಡು ಸಿಮ್ ಕಾರ್ಡ್, 5 ಎಟಿಎಂ ಕಾರ್ಡ್‌ಗಳನ್ನು ಜಪ್ತಿ ಮಾಡಿಕೊಂಳ್ಳಲಾಗಿದೆ. ಲೀಡ್ ಮ್ಯಾನೇಜ್‌ಮೆಂಟ್ ಎಂಬ ಹೆಸರಿನ ಕಂಪನಿ ಪ್ರತಿನಿಧಿಗಳ ಹೆಸರಿನಲ್ಲಿ ವ್ಯಾಪಾರಿಗಳು, ಡೀಲರ್‌ಗಳ ಡೆಬಿಡ್ ಕಾರ್ಡ್, ಕ್ರೆಡಿಟ್ ಕಾರ್ಡ್‌ಗಳ ಮಾಹಿತಿಯನ್ನು ಪಡೆದ ಆರೋಪಿಗಳು, ಬಳಿಕ ತಮ್ಮ ಡಿಜಿಟಲ್ ವ್ಯಾಲೆಟ್‌ಗಳಿಗೆ ಹಣ ವರ್ಗಾವಣೆ ಮಾಡಿಕೊಂಡಿದ್ದು, ಹಲವರಿಗೆ ವಂಚಿಸಿರುವ ಸಾಧ್ಯತೆಯಿದೆ. ಈ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಂಚನೆ ಹೇಗೆ?: ಆರೋಪಿಗಳಿಬ್ಬರು ಲೀಡ್ ಮ್ಯಾನೇಜ್‌ಮೆಂಟ್ ಎಂಬ ನಕಲಿ ಕಂಪೆನಿ ದಾಖಲೆಗಳನ್ನು ಸಲ್ಲಿಸಿ ಹೊಸೂರು ರಸ್ತೆಯ ಎಸ್‌ಬಿಐನಲ್ಲಿ 2017ರಲ್ಲಿ ಬ್ಯಾಂಕ್ ಖಾತೆ ತೆರೆದಿದ್ದಾರೆ. ಬಳಿಕ ಸುಲಭವಾಗಿ ಹಣಗಳಿಸುವ ಉದ್ದೇಶದಿಂದ, ತಮ್ಮದೇ ಕಾರ್‌ನಲ್ಲಿ ಕುಳಿತು ಜಸ್ಟ್ ಡಯಲ್ ನಲ್ಲಿ ಅರ್ಥ ಮೂವರ್, ಲಾಜಿಸ್ಟಿಕ್ ಡೀಲರ್, ಸೋಲಾರ್ ಡೀಲರ್ ಗಳ ದೂರವಾಣಿ ಕರೆಗಳನ್ನು ಪಡೆದುಕೊಳ್ಳುತ್ತಿದ್ದರು.
ಬಳಿಕ ಅವರಿಗೆ ದೂರವಾಣಿ ಕರೆಮಾಡಿ ತಾವು ಕಸ್ಟಮರ್ ಲೀಡ್ ಕಂಪನಿ ನಡೆಸುತ್ತಿರುವುದಾಗಿ ಪರಿಚಯಿಸಿಕೊಂಡು ಕಮಿಷನ್ ಆಧಾರದಲ್ಲಿ ಕಸ್ಟಮರ್‌ಗಳನ್ನು ಹುಡುಕಿಕೊಡುತ್ತೆವೆ ಎಂದು ನಂಬಿಸಿ ತಮ್ಮನ್ನು ಭೇಟಿಯಾಗಬೇಕು ಎಂದು ಮನವೊಲಿಸುತ್ತಿದ್ದರು.
ಇದಾದ ಬಳಿಕ ಡೀಲರ್ಗಳ ಬಳಿ ತೆರಳು ತ್ತಿದ್ದ ಇಬ್ಬರೂ, ನಾವು ನಿಮಗೆ ಸೇವೆ ನೀಡಬೇಕಾದರೆ ಮೊದಲು 200 ರೂ.ಗಳನ್ನು ಶುಲ್ಕ ಪಾವತಿಸಬೇಕು. ಆ ಹಣವನ್ನು ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ನಲ್ಲಿಯೇ ಪಾವತಿಸಬೇಕು ಇದು ಕಂಪೆನಿಯ ನಿಯಮವಾಗಿದೆ ಎನ್ನುತ್ತಿದ್ದರು.ಬಳಿಕ ,ಅವರ ಬಳಿ ಕಾರ್ಡ್ ಪಡೆದು ತಮ್ಮದೇ ಸೈಪಿಂಗ್ ಯಂತ್ರಕ್ಕಿಟ್ಟು ಕಾರ್ಡ್‌ನ ಎರಡು ಬದಿಯನ್ನು ಫೋಟೋ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ವ್ಯಾಪಾರಿಗಳ ಗಮನ ಬೇರೆಡೆ ಸೆಳೆಯಲು ಒಂದು ಪತ್ರವನ್ನು ನೀಡಿ ವಿವರಗಳನ್ನು ತುಂಬುವಂತೆ ಹೇಳುತ್ತಿದ್ದರು.
ಗೊತ್ತಿಲ್ಲದೆ ಆ್ಯಪ್ ಡೌನ್‌ಲೌಡ್ : ಬಳಿಕ ಡೀಲರ್ಸ್, ವ್ಯಾಪಾರಿಗಳ ಬಳಿ ಮೊಬೈಲ್ ಪಡೆದು ಅವರ ಮನವೊಲಿಸಿ ” ಲೀಡ್ ಮ್ಯಾನೇಜ್ ಮೆಂಟ್ ಆಪ್‌ಡೌನ್ ಲೌಡ್ ಮಾಡಿಸುತ್ತಿದ್ದರು’ ಜತೆಗೆ, ಮೊಬೈಲ್‌ಗೆ ಬರುವ ಎಲ್ಲ ಮೆಸೇಜ್‌ಗಳನ್ನು ಓದಲು ಅನುಕೂಲವಾಗುವಂತೆ ” ಮೈ ಎಸ್‌ಎಂಎಸ್’ ಆ್ಯಪ್ ಕೂಡ ಡೌನ್‌ಲೌಡ್ ಮಾಡಿ ಅವರೇ ಒಂದು ಪಾಸ್‌ವರ್ಡ್ ನೀಡಿ ವಾಪಾಸ್ ಹೋಗುತ್ತಿದ್ದರು.ನಾಲೈದು ದಿನ ಬಿಟ್ಟು ಡೀಲರ್ಸ್‌ಗಳ ಬಳಿ ಕದ್ದು ತಂದ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿ ಬಳಸಿ ಡಿಜಿಟಲ್ ವ್ಯಾಲೆಟ್‌ನಲ್ಲಿ ಹಣ ವರ್ಗಾವಣೆ ಮಾಡಿಕೊಳ್ಳಲು ಆರಂಭಿಸುತ್ತಿದ್ದರು. ಈ ವೇಳೆ, ಬರುವ ಒಟಿಪಿ ಸಂಖ್ಯೆಯನ್ನು ಪಾಸ್ ವರ್ಡ್ ಬಳಸಿ ಓಟಿಪಿ ಸಂಖ್ಯೆ ನಮೂದಿಸಿ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದರು.
ಆರೋಪಿಗಳು ಡಿಜಿಟಲ್ ವ್ಯಾಲೆಟ್ ಖಾತೆ ತೆರೆಯಲು ನಕಲಿ ಇ- ಮೇಲ್ ಐಡಿಗಳನ್ನು ಬಳಸುತ್ತಿದ್ದರು. ಜತೆಗೆ ವ್ಯಾಲೆಟ್ ಆ್ಯಕ್ಟಿವೇಶನ್ ಮಾಡಲು ವೆಬ್‌ಸೈಟ್‌ಗಳ ಮೂಲಕ ಬೇರೆ ವ್ಯಕ್ತಿಗಳ ಪಾನ್ ಕಾರ್ಡ್ ನಂಬರ್‌ಗಳನ್ನು ಬಳಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.