ಮಳೆ ಅನಾಹುತ ತಡೆಗೆ ಅಗತ್ಯ ಕ್ರಮ

Team Udayavani, Oct 23, 2019, 8:02 AM IST

ಬೆಂಗಳೂರು: ನಗರದಲ್ಲಿ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ವಲಯವಾರು ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಕ್ಕೆ ಮೂರುದಿನ ರಜೆ ತೆಗೆದುಕೊಳ್ಳದಂತೆ ಮೇಯರ್‌ ಎಂ. ಗೌತಮ್‌ಕುಮಾರ್‌ ಸೂಚನೆ ನೀಡಿದ್ದಾರೆ.

ಮಳೆ ಅನಾಹುತ ತಡೆಯುವ ಸಂಬಂಧ ಮಂಜಾಗ್ರತಾ ಕ್ರಮಗಳ ಬಗ್ಗೆ ಮಂಗಳವಾರ ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿ ವಿಶೇಷ ಆಯುಕ್ತರು, ಅಧಿಕಾರಿಗಳೊಂದಿಗೆ ಮೇಯರ್‌ ಸಭೆ ನಡೆಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಮೇಯರ್‌, ವಲಯವಾರು ಈಗಾಗಲೇ ಪ್ರಹರಿಗಳ ಸಂಖ್ಯೆಯನ್ನು ಹೆಚ್ಚಿಸಿದ್ದು, ಅಗತ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ವಲಯಗಳ ಜಂಟಿ ಆಯುಕ್ತರು ಈ ಬಗ್ಗೆ ಹೆಚ್ಚು ಗಮನವರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಮಳೆ ಬರುವ ಮುನ್ಸೂಚನೆಯಿದ್ದರೆ ಸಹಾಯಕ ಎಂಜಿನಿಯರ್‌ಗಳು ಕಚೇರಿಯಲ್ಲೇ ಇದ್ದು ಸಿಬ್ಬಂದಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ತಿಳಿಸಿದರು. ಜಲಾವೃತಗೊಳ್ಳುವ ಪ್ರದೇಶಗಳನ್ನು ಪಟ್ಟಿಮಾಡಿ ನೀರು

ಹೊರಹಾಕುವ ಯಂತ್ರಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು. ಮಳೆ ಸುರಿಯುವ ವೇಳೆ ರಾಜಕಾಲುವೆ ಸಮೀಪದ ಪ್ರದೇಶಗಳು ಜಲಾವೃತಗೊಳ್ಳುತ್ತಿವೆ. ಈ ಸಂಬಂಧ ಗುಂಡಿಗಳನ್ನು ನಿರ್ಮಿಸಿ ಯಂತ್ರಗಳನ್ನು ಅಳವಡಿಸಿ ಜಲಾವೃತಗೊಳ್ಳದಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪಾಲಿಕೆ ವ್ಯಾಪ್ತಿಯ 8 ವಲಯಗಳಲ್ಲಿ ನಿಯಂತ್ರಣ ಕೊಠಡಿಗಳಿದ್ದು, ತಾತ್ಕಾಲಿಕವಾಗಿ 63 ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ನಿಯಂತ್ರಣ ಕೊಠಡಿಗಳ ಸಿಬ್ಬಂದಿ 24×7 ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ. ಎಂಟು ವಲಯಕ್ಕೂ ತಲಾ ಒಂದು 47ಎಚ್‌.ಪಿ ಪಂಪ್‌ ಖರೀದಿ ಮಾಡುವುದಕದೂR ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಮಳೆ ಸುರಿಯುವ ವೇಳೆ ವಲಯಗಳ ಜಂಟಿ ಆಯುಕ್ತರು, ಅಗ್ನಿಶಾಮಕ ದಳ, ಜಲಮಂಡಳಿ ಹಾಗೂ ಸಂಚಾರಿ ಪೊಲೀಸ್‌ ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿಗಳು ಸಮನ್ವಯತೆ ಸಾಧಿಸುವಂತೆ ನಿರ್ದೇಶನ ನೀಡಲಾಗಿದೆ. ಪ್ರವಾಹ ಉಂಟಾಗುವ ಮುನ್ಸೂಚನೆ ಇರುವ ಪ್ರದೇಶಗಳಲ್ಲಿರುವ ಜನರನ್ನು ಸರ್ಕಾರಿ, ಪಾಲಿಕೆ ಶಾಲೆ, ಸಮುದಾಯ ಭವನಗಳಿಗೆ ಸ್ಥಳಾಂತರಿಸುವ ಸಂಬಂಧ ವಲಯವಾರು ಶಾಲೆ ಮತ್ತು ಸಮುದಾಯ ಭವನಗಳ ಪಟ್ಟಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

ಪಾಲಿಕೆ ನಿಯಂತ್ರಣ ಕೊಠಡಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಹರಿ ವಾಹನಗಳನ್ನು ವಲಯವಾರು ಮರುಹಂಚಿಕೆ ಮಾಡಲಾಗಿದ್ದು, ರಾತ್ರಿ ಗಸ್ತು ತಿರುಗುವ ಸಮಯದಲ್ಲಿ ಅಧಿಕಾರಿಗಳು ಕೂಡ ಪ್ರಹರಿಯಲ್ಲಿದ್ದು, ಪಾಳಿಯಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು. ಪಾಲಿಕೆ ವ್ಯಾಪ್ತಿಯಲ್ಲಿ 842 ಕಿ.ಮೀ ರಾಜಕಾಲುವೆಯಿದ್ದು, ಅದರಲ್ಲಿ 440 ಕಿ.ಮೀ ತಡೆಗೋಡೆ ನಿರ್ಮಿಸಲಾಗಿದೆ. ಉಳಿದ 402 ಕಿ.ಮೀ ಕಚ್ಚಾ ರಾಜಕಾಲುವೆ ಇದ್ದು, ಕಾಲುವೆಗಳು ಕುಸಿಯುವ ಮುನ್ಸೂಚನೆ ಇರುವ ಕಡೆ ತಾತ್ಕಾಲಿಕವಾಗಿ ಮರಳು ಮೂಟೆಗಳನ್ನು ಅಳವಡಿಸಲು ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಮಳೆ ಬಂದಾಗ ಕೆಳಮಟ್ಟದ ಪ್ರದೇಶಗಳಿಗೆ ಮಳೆ ನೀರು ಹರಿಯದಂತೆ ಹಾಗೂ ಯಾವುದೇ ಅನಾಹುತಗಳು ಸಂಭವಿಸದಂತೆ ಸೂಕ್ತ ಕ್ರಮ ವಹಿಸಲು ನೆಲಮಟ್ಟದಿಂದ 4 ಅಡಿ ಎತ್ತರ ತಡೆಗೋಡೆ ನಿರ್ಮಿಸಲು ಆದೇಶಿಸಲಾಗಿದೆ ಎಂದು ತಿಳಿಸಿದರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ