ಮೂರು ಗಂಟೆಗೆ ಮುನ್ನವೇ ನೆರೆ ಎಚ್ಚರಿಕೆ

Team Udayavani, Sep 18, 2017, 6:25 AM IST

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಉಂಟಾಗಬಹುದಾದ ನೆರೆಯ ಬಗ್ಗೆ ಇನ್ಮುಂದೆ ಮೂರು ತಾಸು ಮುಂಚಿತವಾಗಿಯೇ ಮಾಹಿತಿ ಲಭ್ಯವಾಗಲಿದೆ!

ರಾಜ್ಯದ ಇಂತಹದ್ದೇ ಜಾಗದಲ್ಲಿ ಮತ್ತು ಇಂತಿಷ್ಟೇ ಪ್ರಮಾಣದಲ್ಲಿ ಮಳೆ ಆಗಲಿದೆ ಎಂಬುದನ್ನು ಅತ್ಯಂತ ನಿಖರವಾದ ಮಾಹಿತಿ ಕನಿಷ್ಠ ಮೂರು ತಾಸು ಮುಂಚಿತವಾಗಿ ಮಾಹಿತಿಗಳು ಲಭ್ಯವಾಗಲಿವೆ. ಇದರಿಂದ “ದಿಢೀರ್‌ ನೆರೆ’ಯಿಂದ ಆಗಬಹುದಾದ ಅನಾಹುತಗಳನ್ನು ಬಹುಪಾಲು ತಗ್ಗಿಸಬಹುದು.

ಹೌದು, ರಾಜ್ಯದ ಬೆಂಗಳೂರು ಮತ್ತು ಮಂಗಳೂರಿನಲ್ಲಿ ರಡಾರ್‌ಗಳನ್ನು ಅಳವಡಿಸಲು ಭಾರತೀಯ ಹವಾಮಾನ ಇಲಾಖೆ ನಿರ್ಧರಿಸಿದ್ದು, ಈ ಸಂಬಂಧ ಈಗಾಗಲೇ ನಗರದ ಜಿಕೆವಿಕೆ ಮತ್ತಿತರ ಕಡೆಗಳಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಈ ವ್ಯವಸ್ಥೆ ಬರಲಿದೆ. ಇದರಿಂದ ನಿಖರವಾದ ಹವಾಮಾನ ಮುನ್ಸೂಚನೆ ಲಭ್ಯವಾಗಲಿದೆ.

ಪ್ರಸ್ತುತ ಸ್ಯಾಟಲೈಟ್‌ ಮೂಲಕ ಲಭ್ಯವಾಗುವ ಚಿತ್ರಗಳು ಹಾಗೂ ಚೆನ್ನೈ ರಡಾರ್‌ ಕಳುಹಿಸುವ ನಕ್ಷೆಗಳನ್ನು ಆಧರಿಸಿ ರಾಜ್ಯದಲ್ಲಿ ಮಳೆ ಮುನ್ಸೂಚನೆ ನೀಡಲಾಗುತ್ತಿದೆ. ಈಗ ರಾಜ್ಯದಲ್ಲೇ ಎರಡು ರಡಾರ್‌ಗಳು ಬರುತ್ತಿವೆ. ಇವೆರಡೂ ಸುತ್ತಲಿನ 300ರಿಂದ 500 ಕಿ.ಮೀ. ವ್ಯಾಪ್ತಿಯ ಮಳೆ ನಿಖರ ಮಾಹಿತಿ ನೀಡಲಿವೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

7 ನಿಮಿಷಕ್ಕೊಂದು ಚಿತ್ರ ರವಾನೆ
ಸ್ಯಾಟಲೈಟ್‌ ಚಿತ್ರಗಳು ಪ್ರತಿ ಹಲವು ಗಂಟೆಗಳಿಗೊಮ್ಮೆ ಬರುತ್ತವೆ. ಆದರೆ, ರಡಾರ್‌ ಪ್ರತಿ ಏಳು ನಿಮಿಷಕ್ಕೊಂದು ನಕ್ಷೆಯನ್ನು ಕಳುಹಿಸುತ್ತದೆ. ಅಷ್ಟೇ ಅಲ್ಲ, ರಡಾರ್‌ನಿಂದ ಇದೇ ಜಾಗದಲ್ಲಿ ಇಂತಿಷ್ಟು ಮಳೆ ಆಗುತ್ತದೆ ಎಂಬುದನ್ನು ನಿಖರವಾಗಿ ಹೇಳಬಹುದು. ಇದು ಕನಿಷ್ಠ ಮೂರು ತಾಸು ಮುಂಚಿತವಾಗಿ ಲಭ್ಯವಾಗುವುದರಿಂದ ಬೆಂಗಳೂರಿನಂತಹ ಮಹಾನಗರಗಳಲ್ಲಿ ಉಂಟಾಗುವ ದಿಢೀರ್‌ ನೆರೆಯಿಂದಾಗಬಹುದಾದ ಅನಾಹುತವನ್ನು ಸಾಧ್ಯವಾದಷ್ಟು ತಗ್ಗಿಸಬಹುದು. ರಡಾರ್‌ಗಳಿಗಾಗಿ ಸುಮಾರು ದಿನಗಳ ಹಿಂದೆಯೇ ಕೇಂದ್ರ ಭೂವಿಜ್ಞಾನ ಸಚಿವಾಲಯಕ್ಕೆ ಮನವಿ ಮಾಡಲಾಗಿತ್ತು. ಈಗ ಅದಕ್ಕೆ ಸ್ಪಂದನೆ ದೊರಕಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಸುಂದರ್‌ ಎಂ. ಮೇತ್ರಿ “ಉದಯವಾಣಿ’ಗೆ ತಿಳಿಸಿದರು.

ಸದ್ಯ ಚೆನ್ನೈನಲ್ಲಿ ರಡಾರ್‌ ಇದೆ. ಅದು 250 ಕಿ.ಮೀ. ವ್ಯಾಪ್ತಿಯ ಸುತ್ತಲಿನ ಮುನ್ಸೂಚನೆ ನೀಡುತ್ತದೆ. ಅದರಿಂದಲೇ ಈಗ ಬೆಂಗಳೂರಿನ ಮಳೆ ಮುನ್ಸೂಚನೆ ನೀಡಲಾಗುತ್ತಿದೆ. ಆದರೆ, ದೂರ ಹೋದಂತೆ ನಿಖರತೆ ಕೂಡ ತುಸು ಕಡಿಮೆ ಆಗುವ ಸಾಧ್ಯತೆಗಳಿರುತ್ತವೆ. ಅಷ್ಟಕ್ಕೂ ಬೆಂಗಳೂರು ಕೂಡ ಸಂಪೂರ್ಣವಾಗಿ ಆ ವ್ಯಾಪ್ತಿಗೆ ಒಳಪಡುವುದಿಲ್ಲ. ಹೊಸ ರಡಾರ್‌ ಅಳವಡಿಕೆಯಿಂದ ದಕ್ಷಿಣ ಒಳನಾಡಿನ 11 ಜಿಲ್ಲೆಗಳ ಮುನ್ಸೂಚನೆ ಕೊಡಬಹುದು. ಅದೇ ರೀತಿ, ಮಂಗಳೂರಿನಲ್ಲಿ ಬರಲಿರುವ ರಡಾರ್‌, ಚಂಡಮಾರುತಗಳ ಟ್ರ್ಯಾಕಿಂಗ್‌ ಜತೆಗೆ ಸುಮಾರು 500 ಕಿ.ಮೀ. ಸುತ್ತಲಿನ ಮಳೆ ಮಾಹಿತಿಯನ್ನೂ ನೀಡಲಿದೆ ಎಂದು ಮೇತ್ರಿ ಮಾಹಿತಿ ನೀಡಿದರು.

ಮಾಪಕಗಳು ಮಳೆ ತೀವ್ರತೆ ಆಧರಿಸಿವೆ
ನಗರದ ವಿವಿಧೆಡೆ ಅಳವಡಿಸಿರುವುದು ಮಳೆ ಮಾಪಕಗಳನ್ನು. ಅವುಗಳು ಮಳೆಯ ತೀವ್ರತೆಯನ್ನು ಆಧರಿಸಿ ಸಂಬಂಧಪಟ್ಟವರಿಗೆ ಎಚ್ಚರಿಕೆ ಸಂದೇಶಗಳನ್ನು ರವಾನಿಸುತ್ತವೆ. ಆದರೆ, ರಡಾರ್‌ ಇದೆಲ್ಲಕ್ಕಿಂತ ಮುಂದುವರಿದ ತಂತ್ರಜ್ಞಾನವಾಗಿದ್ದು, ಮಳೆಯ ಬಗ್ಗೆ ಮೊದಲೇ ನಿಖರ ಮಾಹಿತಿ ನೀಡುವುದರಿಂದ ಖಂಡಿತವಾಗಿ ಅನಾಹುತಗಳನ್ನು ತಗ್ಗಿಸಬಹುದು. ಆದರೆ, ಇದಕ್ಕೆ ಜನರ ಸಹಕಾರದ ಜತೆಗೆ ಅಂತಹ ಸಂದರ್ಭಗಳಲ್ಲಿ ಎದುರಿಸಲು ಅಗತ್ಯ ಪೂರ್ವಸಿದ್ಧತೆಗಳನ್ನೂ ಮಾಡಿಕೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ವಿಜ್ಞಾನಿ ಡಾ.ಸಿ.ಎನ್‌. ಪ್ರಭು ತಿಳಿಸುತ್ತಾರೆ.

ರಡಾರ್‌ ಕಾರ್ಯವೈಖರಿ ಹೀಗೆ…
ರಡಾರ್‌ ವಾತಾವರಣದಲ್ಲಿ ಸಂಕೇತಗಳನ್ನು ರವಾನಿಸುತ್ತದೆ. ಅದು ಪ್ರತಿಫ‌ಲನಗೊಂಡು ಹಿಂತಿರುಗುವ ಸಂಕೇತಗಳಲ್ಲಿನ ಮಾಹಿತಿಯನ್ನು ಆಧರಿಸಿ ಹವಾಮಾನ ಮುನ್ಸೂಚನೆ ನೀಡಲಾಗುತ್ತದೆ.
ಹೀಗೆ ಪ್ರತಿಫ‌ಲನಗೊಂಡು ಹಿಂತಿರುಗುವ ಸಂಕೇತಗಳಲ್ಲಿ ಮೋಡಗಳ ಸಮಗ್ರ ಮಾಹಿತಿ ಇರುತ್ತದೆ. ಮೋಡಗಳ ಸ್ಥಿತಿಗತಿ, ಆ ಮೋಡದ ಗಾತ್ರ, ಅದರಲ್ಲಿರುವ ಸಾಂದ್ರತೆ, ತೇವಾಂಶ ಒಳಗೊಂಡಂತೆ ಎಲ್ಲವೂ ತಿಳಿಯುತ್ತದೆ. ಇದು ಪ್ರತಿ 7ರಿಂದ 10 ನಿಮಿಷಕ್ಕೊಂದು ನಕ್ಷೆಯನ್ನು ರವಾನಿಸುತ್ತದೆ. ಅದನ್ನು ಆಧರಿಸಿ ವಿಜ್ಞಾನಿಗಳು ಮುನ್ಸೂಚನೆ ನೀಡುತ್ತಾರೆ.

2 ಪ್ರಕಾರ
ಇನ್ನು ರಡಾರ್‌ನಲ್ಲಿ ಎಕ್ಸ್‌-ಬ್ಯಾಂಡ್‌ ಮತ್ತು ಸಿ-ಬ್ಯಾಂಡ್‌ ಎಂಬ ಎರಡು ಪ್ರಕಾರಗಳಿವೆ. ಎಕ್ಸ್‌-ಬ್ಯಾಂಡ್‌ 100 ಕಿ.ಮೀ.ಗಿಂತ ಕಡಿಮೆ ಸುತ್ತಲಿನ ವ್ಯಾಪ್ತಿಯ ಮಾಹಿತಿ ನೀಡಿದರೆ, ಸಿ-ಬ್ಯಾಂಡ್‌ ವಿಸ್ತಾರ 250ರಿಂದ 300 ಕಿ.ಮೀ. ಆಗಿದೆ. ಇದರಲ್ಲಿ ಚಂಡಮಾರುತಗಳ ಪತ್ತೆ ಹಾಗೂ ಹವಾಮಾನ ಮುನ್ಸೂಚನೆ ನೀಡುವ ಮತ್ತು ಕೇವಲ ಹವಾಮಾನ ಮುನ್ಸೂಚನೆ ಕೊಡುವ ರಡಾರ್‌ಗಳಿವೆ. ರಾಜ್ಯದಲ್ಲಿ ಸಿ-ಬ್ಯಾಂಡ್‌ ರಡಾರ್‌ ಅಳವಡಿಸಲು ಉದ್ದೇಶಿಸಲಾಗಿದೆ.
ದೇಶದಲ್ಲಿ ಪ್ರಸ್ತುತ 15ರಿಂದ 16 ರಡಾರ್‌ಗಳು ವಿವಿಧ ರಾಜ್ಯಗಳಲ್ಲಿ ಇವೆ. ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ರಡಾರ್‌ಗಳ ಅಳವಡಿಕೆ ಮಾಡಲಾಗುತ್ತಿದೆ. ರಡಾರ್‌ಗಳ ಅಳವಡಿಕೆಗೆ ಸುಮಾರು 10ರಿಂದ 15 ಕೋಟಿ ರೂ. ವೆಚ್ಚ ಆಗುತ್ತದೆ.

ಮೋಡಬಿತ್ತನೆಗೂ ಸಹಕಾರಿ
ದೇಶದಲ್ಲಿ ಅತಿ ಹೆಚ್ಚು ಖುಷ್ಕಿ ಜಮೀನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮಳೆಯಾಶ್ರಿತ ಬೆಳೆಗಳು ಸಂಕಷ್ಟದಲ್ಲಿದ್ದಾಗ ಈ ರಡಾರ್‌ಗಳ ಸೂಚನೆಗಳನ್ನು ಆಧರಿಸಿ ಮೋಡಬಿತ್ತನೆ ಮೂಲಕ ಮಳೆ ಸುರಿಸಲಿಕ್ಕೂ ಇದು ಅನುಕೂಲ ಆಗಲಿದೆ.

ಈಚೆಗೆ ರಾಜ್ಯದಲ್ಲಿ ಮೋಡಬಿತ್ತನೆಗೆ ಅಮೆರಿಕದಿಂದ ರಡಾರ್‌ ತರಿಸಲಾಗಿತ್ತು. ಇದು ತಾತ್ಕಾಲಿಕವಾಗಿದ್ದು, ವೆಚ್ಚ ಕೂಡ ಅಧಿಕ.

ನಮ್ಮಲ್ಲಿಯೇ ಶಾಶ್ವತ ರಡಾರ್‌ಗಳಿದ್ದರೆ, ಕುಡಿಯುವ ನೀರು ಅಥವಾ ಬೆಳೆಗಳು ಸಂಕಷ್ಟದಲ್ಲಿದ್ದಾಗ ಶೇ. 20ಕ್ಕಿಂತ ಹೆಚ್ಚು ಪ್ರತಿಫ‌ಲನ ಸಾಮರ್ಥ್ಯ ಇರುವ ಮೋಡಗಳನ್ನು ಗುರುತಿಸಿ, ಅಲ್ಲಿಯೇ ಮೋಡಬಿತ್ತನೆ ಮಾಡಿ ಮಳೆ ಸುರಿಸಲು ಅನುಕೂಲ ಆಗುತ್ತದೆ. ಅದರಿಂದ ನೀರು ಸಂಗ್ರಹ ಮಾಡಿಟ್ಟುಕೊಳ್ಳಬಹುದು ಎಂದು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ವಿಶ್ರಾಂತ ಕುಲಸಚಿವ ಹಾಗೂ ಹವಾಮಾನ ತಜ್ಞ ಡಾ.ಎಂ.ಬಿ. ರಾಜೇಗೌಡ ತಿಳಿಸುತ್ತಾರೆ.

– ವಿಜಯಕುಮಾರ್‌ ಚಂದರಗಿ
 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ