ಚಿಕಿತ್ಸೆ ಫ‌ಲಿಸದೆ ಬಾಲಕ ನಿಖೀಲ್ ಸಾವು

Team Udayavani, May 21, 2019, 12:08 PM IST

ಬೆಂಗಳೂರು: ಮನೆಯ ಮೇಲೆ ಹಾದು ಹೋಗಿದ್ದ ಹೈ ಟೆನ್ಷನ್‌ ವಿದ್ಯುತ್‌ ವೈರ್‌ ತಗುಲಿ ಸುಟ್ಟಗಾಯಗಳಿಂದ ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ನಿಖೀಲ್ (14) ಚಿಕಿತ್ಸೆ ಫ‌ಲಿಸದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಮೇ 16ರಂದು ಮಧ್ಯಾಹ್ನ ಮತ್ತಿಕೆರೆಯ ತಮ್ಮ ಮನೆಯ ಸಮೀಪ ಸ್ನೇಹಿತರೊಂದಿಗೆ ನಿಖೀಲ್ ಕ್ರಿಕೆಟ್ ಆಟವಾಡುತ್ತಿದ್ದ. ಈ ವೇಳೆ ಸಹ ಆಟಗಾರ ಹೊಡೆದ ಚೆಂಡು, ವರು ಆಟವಾಡುತ್ತಿದ್ದ ಸ್ಥಳದ ಪಕ್ಕದಲ್ಲಿದ್ದ ಕಟ್ಟಡದ ಟೆರೇಸ್‌ ಮೇಲೆ ಬಿದ್ದಿತ್ತು. ಅದನ್ನು ತರಲು ಕಟ್ಟಡದ ಟೆರೇಸ್‌ ಮೇಲೆ ಹೋಗಿದ್ದ ನಿಖೀಲ್, ಚೆಂಡು ತೆಗೆದುಕೊಂಡು, ಅದನ್ನು ಕೆಳಗೆ ಎಸೆಯುವಾಗ ಟೆರೇಸ್‌ ಮೇಲೆಯೇ ಹಾದುಹೋಗಿದ್ದ ಹೈ ಟೆನ್ಷನ್‌ ವಿದ್ಯುತ್‌ ತಂತಿಗೆ ಆತನ ಕೈ ತಾಗಿ ಶಾಕ್‌ ಹೊಡೆದಿತ್ತು. ಕೂಡಲೇ ಆಟೋ ಚಾಲಕರೊಬ್ಬರು ಬಾಲಕನನ್ನು ರಕ್ಷಿಸಿದ್ದರು.

ಶೇ.40ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದ ನಿಖೀಲ್, ಚಿಕಿತ್ಸೆ ಫ‌ಲಿಸದೆ ಭಾನುವಾರ ತಡರಾತ್ರಿ 2 ಗಂಟೆ ಸುಮಾರಿಗೆ ಮೃತಪಟ್ಟಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಪೋಷಕರಿಗೆ ಹಸ್ತಾಂತರಿಸಲಾಯಿತು. ಹೆಬ್ಟಾಳದಲ್ಲಿ ಅಂತ್ಯಕ್ರಿಯೆ ನೆರವೇರಿದೆ ಎಂದು ಪೊಲೀಸರು ತಿಳಿಸಿದರು.

ದುರ್ಘ‌ಟನೆ ಸಂಬಂಧ ನಿಖೀಲ್ ಪೋಷಕರು ನೀಡಿರುವ ದೂರು ಆಧರಿಸಿ ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ಬೆಸ್ಕಾಂ, ಕೆಪಿಟಿಸಿಎಲ್, ಬಿಬಿಎಂಪಿ ಸೇರಿ ಮತ್ತಿತರರ ವಿರುದ್ಧ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನೋಟಿಸ್‌ ನೀಡಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದರು.

ಮತ್ತಿಕೆರೆಯ ನೇತಾಜಿ ವೃತ್ತದ ಸಮೀಪ ವಾಸವಿರುವ ಅಂಬರೀಶ್‌ ಹಾಗೂ ರಮಾದೇವಿ ದಂಪತಿಯ ಪುತ್ರ ನಿಖೀಲ್, ಎಂಟನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಈ ದುರ್ಘ‌ಟನೆ, ಬಾಲಕನ ಕುಟುಂಬಕ್ಕೆ ದೊಡ್ಡ ಆಘಾತ ನೀಡಿದ್ದು, ಶವ ಪರೀಕ್ಷೆ ನಡೆದ ವಿಕ್ಟೋರಿಯಾ ಆಸ್ಪತ್ರೆ ಎದುರು, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ